ಅರಳುವ ಮುನ್ನವೇ ಬಾಡುವ ಹೂಗಳು: ಹೆಚ್ಚುತ್ತಿರುವ ಮಕ್ಕಳ ಆತ್ಮಹತ್ಯೆ, ಇದು ಎಚ್ಚರಿಕೆಯ ಗಂಟೆ...

ನಗುವ ವಯಸ್ಸಿನಲ್ಲೇ ಸಾವಿನ ಕಡೆಗೆ ಸಾಗುವ ಈ ತವಕಕ್ಕೆ ಕಾರಣವೇನು? ಎಳೆಯ ಮನಸ್ಸುಗಳಲ್ಲಿ ಆತ್ಮಹತ್ಯೆಯಂತಹ ಕಠೋರ ಯೋಚನೆಗಳು ಮೂಡುವುದಾದರೂ ಏಕೆ? ಎಂಬುದರ ಬಗ್ಗೆ ಪರಿಣತ ವೈದ್ಯರು ತಮ್ಮ ಒಳನೋಟಗಳನ್ನು 'ದ ಫೆಡರಲ್ ಕರ್ನಾಟಕ'ದ ಹಂಚಿಕೊಂಡಿದ್ದಾರೆ.;

Update: 2025-08-05 14:38 GMT

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರಿನಲ್ಲಿ ಏಳು ವರ್ಷದ ಪುಟ್ಟ ಬಾಲಕನೊಬ್ಬ, ತನ್ನೆಲ್ಲಾ ನೋವನ್ನು ಅಕ್ಷರ ರೂಪಕ್ಕಿಳಿಸಿ ಸಾವಿಗೆ ಶರಣಾದ ಘಟನೆ, ಕೇವಲ ಒಂದು ಕುಟುಂಬವನ್ನಷ್ಟೇ ಅಲ್ಲ, ಇಡೀ ಸಮಾಜವನ್ನೇ ತಲ್ಲಣಗೊಳಿಸಿದೆ. ನಗುವ ವಯಸ್ಸಿನಲ್ಲೇ ಸಾವಿನ ಕಡೆಗೆ ಸಾಗುವ ಈ ತವಕಕ್ಕೆ ಕಾರಣವೇನು? ಎಳೆಯ ಮನಸ್ಸುಗಳಲ್ಲಿ ಆತ್ಮಹತ್ಯೆಯಂತಹ ಕಠೋರ ಯೋಚನೆಗಳು ಮೂಡುವುದಾದರೂ ಏಕೆ? ಈ ಘಟನೆಯು ಮಕ್ಕಳ ಮಾನಸಿಕ ಆರೋಗ್ಯದ ಕುರಿತು ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಅದೇ ರೀತಿ ಪೋಷಕರು ಮತ್ತು ಸಮಾಜ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯನ್ನು ಎತ್ತಿ ತೋರಿಸಿದೆ.

ಮಕ್ಕಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿರುವುದು ತೀವ್ರ ಆತಂಕಕಾರಿ ಬೆಳವಣಿಗೆ. ಮೊಬೈಲ್ ಗೀಳು, ಪೋಷಕರ ವರ್ತನೆ, ಶೈಕ್ಷಣಿಕ ಒತ್ತಡ ಮತ್ತು ಸಾಮಾಜಿಕ ಸನ್ನಿವೇಶಗಳು ಮಕ್ಕಳ ಕೋಮಲ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತಿವೆ ಎಂದು ಹೇಳಲಾಗುತ್ತಿದೆ.ವ ಇದು ಮಕ್ಕಳಲ್ಲಿ ಖಿನ್ನತೆ, ಉದ್ವೇಗ, ಮತ್ತು ತೀವ್ರ ಒತ್ತಡದಂತಹ ಮನೋದೌರ್ಬಲ್ಯಗಳಿಗೆ ಕಾರಣವಾಗುತ್ತಿದೆ ಎಂದು ತಜ್ಞರು ಕೂಡ ಅಭಿಪ್ರಾಯಪಡುತ್ತಾರೆ. 

ನರ-ಮನೋವೈದ್ಯ ಹಾಗೂ ವ್ಯಸನ ನಿವಾರಣಾ ತಜ್ಞರಾದ ಡಾ. ವಿಕ್ರಮ್ ಜಡ್ ಅವರು 'ದ ಫೆಡರಲ್​ ಕರ್ನಾಟಕ'ದ ಜತೆ ಮಾತನಾಡಿ, ಮಕ್ಕಳಲ್ಲಿನ ಕಡಿಮೆ ಸ್ವಯಂ-ನಿಯಂತ್ರಣವೇ ಆತ್ಮಹತ್ಯೆಯ ಯೋಚನೆಗಳಿಗೆ ಮೂಲ ಕಾರಣ ಎಂದು ಹೇಳುತ್ತಾರೆ. ''ಪೋಷಕರು ಕೇವಲ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಮಾತ್ರ ಅತಿಯಾದ ಗಮನ ಹರಿಸುವುದು, ಅವರು ಉತ್ತಮ ಅಂಕಗಳನ್ನು ಪಡೆದರೆ ಮಾತ್ರ ಪ್ರೋತ್ಸಾಹಿಸಿ, ಇಲ್ಲವಾದರೆ ಶಿಕ್ಷಿಸುವುದು, ಅವರ ಮನಸ್ಸಿನ ಮೇಲೆ ತೀವ್ರವಾದ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ,'' ಎಂದು ಅವರು ಹೇಳುತ್ತಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಆತ್ಮಹತ್ಯೆಯ ಸುದ್ದಿಗಳು ಮತ್ತು ದೃಶ್ಯಗಳು ಮಕ್ಕಳ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿ, ಅವರನ್ನು ಅನುಕರಣೆಯತ್ತ ಪ್ರೇರೇಪಿಸಬಹುದು ಎಂದು ವಿಕ್ರಮ್​ ಅವರು ಎಚ್ಚರಿಸಿದ್ದಾರೆ.

ಮಕ್ಕಳಿಗೂ ಖಿನ್ನತೆ ಬರುತ್ತದೆ

ಹೆಚ್ಚಿನವರು ಮಕ್ಕಳಿಗೆ ಖಿನ್ನತೆ ಬರುವುದಿಲ್ಲ ಎಂದು ಭಾವಿಸುತ್ತಾರೆ, "ಇದು ಸಂಪೂರ್ಣ ತಪ್ಪು ಕಲ್ಪನೆ. ಮಕ್ಕಳು ಏಕಾಂಗಿತನ, ಆಸಕ್ತಿ ಇಲ್ಲದಿರುವುದು, ನಿರಂತರ ಭಯ ಮತ್ತು ಮುಜುಗರದಿಂದ ಬಳಲುತ್ತಿದ್ದರೆ, ಅವರ ಮೆದುಳಿನಲ್ಲಿ ರಾಸಾಯನಿಕ ಬದಲಾವಣೆಗಳಾಗಿ ಖಿನ್ನತೆಗೆ ಒಳಗಾಗಬಹುದು. ಈ ಖಿನ್ನತೆಯೇ ಆತ್ಮಹತ್ಯೆಯಂತಹ ದುರಂತಕ್ಕೆ ಪ್ರಮುಖ ಪ್ರಚೋದನೆಯಾಗುತ್ತದೆ,'' ಎಂದು ಡಾ. ವಿಕ್ರಮ್ ವಿವರಿಸುತ್ತಾರೆ. ಆತ್ಮಹತ್ಯೆಯಲ್ಲಿ ಎರಡು ವಿಧಗಳಿದ್ದು, ಒಂದು ದುಡುಕಿನಿಂದ ತೆಗೆದುಕೊಳ್ಳುವ ನಿರ್ಧಾರವಾದರೆ, ಇನ್ನೊಂದು ದೀರ್ಘಕಾಲದಿಂದ ಯೋಜನೆ ಹಾಕಿ ಮಾಡುವ ಆತ್ಮಹತ್ಯೆಯಾಗಿದೆ. ಆನುವಂಶಿಕ ಕಾರಣಗಳು, ಬಾಲ್ಯದ ಮಾನಸಿಕ ಒತ್ತಡಗಳು ಹಾಗೂ ಪೋಷಕರು ತಮ್ಮ ಕೆಲಸಗಳಲ್ಲಿ ಹೆಚ್ಚು ನಿರತರಾಗಿರುವುದರಿಂದ ಮಕ್ಕಳು ಅನುಭವಿಸುವ ಒಂಟಿತನವೂ ಈ ದುರಂತಕ್ಕೆ ದಾರಿ ಮಾಡಿಕೊಡಬಹುದು ಎಂದು ವಿಕ್ರಮ್ ಹೇಳುತ್ತಾರೆ.

ಸ್ಕ್ರೀನ್​ ಟೈಮ್ ಹೆಚ್ಚಳದ ಸಮಸ್ಯೆ

ಕೋಲಾರ ಜಿಲ್ಲಾ ಆಸ್ಪತ್ರೆಯ ಆಪ್ತಸಮಾಲೋಚಕ ಬಿ.ಎಂ. ಶ್ರೀನಾಥ್ ಅವರು 'ದ ಫೆಡರಲ್​ ಕರ್ನಾಟಕ'ದ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಲ್ಯಾಪ್​​ಟಾಪ್​​ಗಳ ಅತಿಯಾದ ಬಳಕೆಯು ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲಗೊಳಿಸುತ್ತಿದೆ ಎಂದು ಅಭಿಪ್ರಾಯಪಡುತ್ತಾರೆ. 

ಡಿಜಿಟಲ್ ಗೀಳಿನಿಂದಾಗಿ ಮಕ್ಕಳು ಸಾಮಾಜಿಕವಾಗಿ ಬೆರೆಯಲು, ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಲಿಯುತ್ತಿಲ್ಲ. ಇದರಿಂದಾಗಿ ಅವರು ಶೈಕ್ಷಣಿಕ ಪ್ರಗತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ ಮತ್ತು ಸಣ್ಣಪುಟ್ಟ ಸವಾಲುಗಳಿಗೂ ಕುಸಿದುಹೋಗುತ್ತಾರೆ, ಇದು ಕೆಲವೊಮ್ಮೆ ಆತ್ಮಹತ್ಯೆಯಂತಹ ದುರಂತದಲ್ಲಿ ಕೊನೆಗೊಳ್ಳುತ್ತದೆ ಎಂದು ಮುಂದುವರಿದ ಅವರು ಹೇಳಿದ್ದಾರೆ.

ಪೋಷಕರ ಜವಾಬ್ದಾರಿ ದೊಡ್ಡದು

ಮಕ್ಕಳಲ್ಲಿನ ಖಿನ್ನತೆಯ ಲಕ್ಷಣಗಳನ್ನು ಗುರುತಿಸುವುದು ಪೋಷಕರ ಪ್ರಮುಖ ಜವಾಬ್ದಾರಿ ಎಂದು ಸಮಾಲೋಚಕರು ಅಭಿಪ್ರಾಯಪಡುತ್ತಾರೆ. ನಿರಂತರ ದುಃಖ, ಇಷ್ಟಪಡುತ್ತಿದ್ದ ಆಟ-ಪಾಠಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಹೆಚ್ಚಾಗಿ ಒಬ್ಬರೇ ಇರಲು ಇಷ್ಟಪಡುವುದು, ಸುಸ್ತು ಮತ್ತು ನಿಶ್ಯಕ್ತಿಯಿಂದ ಬಳಲುವುದು, ಸರಿಯಾಗಿ ಊಟ ಮಾಡದಿರುವುದು ಅಥವಾ ನಿದ್ರಾಹೀನತೆಯಂತಹ ಲಕ್ಷಣಗಳು ಖಿನ್ನತೆಯ ಸಂಕೇತಗಳಾಗಿರಬಹುದು. ಕೆಲವೊಮ್ಮೆ ಮಕ್ಕಳು ಅಸ್ವಸ್ಥರಂತೆ ನಟಿಸುವುದು, ಶಾಲೆಗೆ ಹೋಗಲು ನಿರಾಕರಿಸುವುದು ಅಥವಾ ಪೋಷಕರು ಸತ್ತುಹೋಗುತ್ತಾರೆ ಎಂದು ಅತಿಯಾಗಿ ಚಿಂತಿಸುವುದು ಕೂಡ ಗಂಭೀರ ಲಕ್ಷಣಗಳಾಗಿವೆ.

ಪೋಷಕರು ಮಕ್ಕಳಲ್ಲಿ ಇಂತಹ ಯಾವುದೇ ಲಕ್ಷಣಗಳನ್ನು ಕಂಡಾಗ, ಅದನ್ನು ನಿರ್ಲಕ್ಷಿಸದೆ ತಕ್ಷಣವೇ ವೈದ್ಯರನ್ನು ಅಥವಾ ಆಪ್ತಸಮಾಲೋಚಕರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಮಕ್ಕಳನ್ನು ಕೇವಲ ಅಂಕಗಳ ಯಂತ್ರಗಳಾಗಿ ನೋಡದೆ, ಅವರ ಭಾವನೆಗಳಿಗೆ ಸ್ಪಂದಿಸುವ, ಅವರ ಮಾತುಗಳನ್ನು ಆಲಿಸುವ ಸ್ನೇಹಿತರಾಗಬೇಕಿದೆ. ಪ್ರೀತಿ, ಸಂವಾದ ಮತ್ತು ಸಮಯೋಚಿತ ಸಹಾಯವೇ ಇಂತಹ ದುರಂತಗಳನ್ನು ತಡೆಯಬಲ್ಲ ಸಂಜೀವಿನಿಯಾಗಿದೆ ಎಂದು ತಜ್ಱರು ಅಭಿಪ್ರಾಯಪಡುತ್ತಾರೆ. 

ಸಹಾಯವಾಣಿಯನ್ನು ಸಂಪರ್ಕಿಸಿ

ಮಾನಸಿಕ ಒತ್ತಡ ಅಥವಾ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ಕರ್ನಾಟಕದಲ್ಲಿ ಕೆಲವು ಸಹಾಯವಾಣಿಗಳು ಲಭ್ಯವಿವೆ. ಆರೋಗ್ಯ ಸಹಾಯವಾಣಿ (ಆರೋಗ್ಯ ಕವಚ - 104) ಗೆ ಕರೆ ಮಾಡಿ ಮನೋವೈದ್ಯರು ಮತ್ತು ತರಬೇತಿ ಪಡೆದ ಸಲಹೆಗಾರರನ್ನು ಸಂಪರ್ಕಿಸಬಹುದು. ಅದೇ ರೀತಿ, ನಿಮ್ಹಾನ್ಸ್ (NIMHANS) ಸಂಸ್ಥೆಯ 'ಸ್ವಸ್ಥ' ಕಾರ್ಯಕ್ರಮದಡಿಯಲ್ಲಿ 080-26995697 ಸಂಖ್ಯೆಗೆ ಕರೆ ಮಾಡಿ ವೃತ್ತಿಪರರಿಂದ ಮಾರ್ಗದರ್ಶನ ಪಡೆಯಬಹುದು. ಅಲ್ಲದೆ, ಮಕ್ಕಳ ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಬೆಂಗಳೂರಿನ ಪರಿಹಾರ್ ಸಂಸ್ಥೆಯು 080-22949700 ಮೂಲಕ ಬೆಂಬಲ ನೀಡುತ್ತದೆ.  

Tags:    

Similar News