ರಾಹುಲ್ ಪ್ರತಿಭಟನೆಗಾಗಿ ಫ್ರೀಡಂ ಪಾರ್ಕ್ನಲ್ಲಿ ಮರಗಳ ಹನನ; ಗೋಡೆ ಧ್ವಂಸ: ಬಿಜೆಪಿಯಿಂದ ದೂರು
ಮರಗಳನ್ನು ಕಡಿಯಲು ಹಾಗೂ ತಡೆಗೋಡೆ ನೆಲಸಮ ಮಾಡಲು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ರೀತಿಯ ಅನುಮತಿಯನ್ನು ಪಡೆದಿಲ್ಲ. ಇದು ಕಾನೂನು ಬಾಹಿರ ಕೃತ್ಯ ಎಂದು ಬಿಜೆಪಿ ಮುಖಂಡ ಸಪ್ತಗಿರಿ ಗೌಡ ದೂರಿನಲ್ಲಿ ತಿಳಿಸಿದ್ದಾರೆ.;
ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಆಯೋಜಿಸಿದ್ದ ಪ್ರತಿಭಟನೆಗಾಗಿ, ಪಾರ್ಕ್ನಲ್ಲಿದ್ದ ಪ್ರಾಚೀನ ಮರಗಳನ್ನು ಕಡಿದು, ತಡೆಗೋಡೆಯನ್ನು ನೆಲಸಮಗೊಳಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಸಪ್ತಗಿರಿ ಗೌಡ ಅವರು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಪ್ರಮುಖಾಂಶಗಳು
ತಮ್ಮ ದೂರಿನಲ್ಲಿ, "ಪ್ರತಿಭಟನೆಯ ಸಿದ್ಧತೆಗಾಗಿ ಆಡಳಿತ ಪಕ್ಷದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಸಂಬಂಧಪಟ್ಟ ಇಲಾಖೆಗಳಿಂದ ಯಾವುದೇ ಅನುಮತಿ ಪಡೆಯದೆ, ಅನೇಕ ವರ್ಷಗಳಿಂದ ಬೆಳೆದು ನಿಂತಿದ್ದ ಮರಗಳನ್ನು ಕಡಿದು, ತಡೆಗೋಡೆಯನ್ನು ನೆಲಸಮ ಮಾಡಲಾಗಿದೆ. ಅಲ್ಲದೆ, ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಕಾಂಕ್ರೀಟ್ ರಸ್ತೆ ನಿರ್ಮಿಸಿರುವುದು ಕಾನೂನುಬಾಹಿರ. ಇದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದರ ಜೊತೆಗೆ, ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟುಮಾಡಿದೆ. ಆದ್ದರಿಂದ, ಈ ಕಾನೂನುಬಾಹಿರ ಕೃತ್ಯ ಎಸಗಿದ ಪ್ರತಿಭಟನೆಯ ಆಯೋಜಕರು ಮತ್ತು ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಸಪ್ತಗಿರಿ ಗೌಡ ಆಗ್ರಹಿಸಿದ್ದಾರೆ.
ಪ್ರತಿಭಟನೆ ಮುಂದೂಡಿಕೆ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ಹಾಗೂ ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತಕಳವು ನಡೆದಿದೆ ಎಂದು ಆರೋಪಿಸಿ, ರಾಹುಲ್ ಗಾಂಧಿ ಅವರು ಆಗಸ್ಟ್ 5 ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ, ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹಾಗೂ ಜೆಎಂಎಂ ಸಂಸ್ಥಾಪಕ ಶಿಬು ಸೊರೇನ್ ಅವರ ನಿಧನದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ.