ಕನ್ನಡ ಸಾಹಿತ್ಯ ಪರಿಷತ್ ಬೈಲಾಗೆ ತಿದ್ದುಪಡಿ ತರುತ್ತಿರುವುದು ಯಾರ ಹಿತಕ್ಕಾಗಿ? ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಆರೋಪಗಳೇಕೆ?
ಕಸಾಪ ಮೂಲ ಆಶಯಗಳಿಗೆ ಧಕ್ಕೆ ಬರಬಾರದು, ಅಧಿಕಾರ ಕೇಂದ್ರೀಕರಣ ಆಗಬಾರದು ಎನ್ನುವ ಕೂಗು ಒಂದು ಕಡೆ. ಪರಿಷತ್ತಿನ ನಿಬಂಧನೆಗಳಿಗೆ (ಬೈಲಾ) ತಿದ್ದುಪಡಿ ತರಬೇಕಿದೆ ಎನ್ನುವ ವಾದ ಮತ್ತೊಂದು ಕಡೆ.;
ಶತಮಾನಗಳ ಶ್ರೀಮಂತ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಆಶಯಗಳಿಗೆ ಧಕ್ಕೆ ಬರಬಾರದು, ಅಧಿಕಾರ ಕೇಂದ್ರೀಕರಣ ಆಗಬಾರದು ಎನ್ನುವ ಕೂಗು ಒಂದು ಕಡೆ. ಪರಿಷತ್ತಿನ ಘನತೆ, ಗೌರವ ಎತ್ತಿ ಹಿಡಿಯಬೇಕಿದೆ, ಇದೇ ಕಾರಣಕ್ಕೆ ಈಗ ಇರುವ ನಿಬಂಧನೆಗಳಿಗೆ (ಬೈಲಾ) ತಿದ್ದುಪಡಿ ತರಬೇಕಿದೆ ಎನ್ನುವ ವಾದ ಮತ್ತೊಂದು ಕಡೆ.
ಇವೆರಡರ ಸುಳಿಯಲ್ಲಿ ಪರಿಷತ್ತು ಬಡವಾಗುತ್ತಿದೆಯೇ..? ಕನ್ನಡಿಗರ ಅಸ್ಮಿತೆಯಾಗಿರುವ ಸಂಸ್ಥೆಯ ಒಳಗೆ ಕೊಳಕು ರಾಜಕಾರಣ ಆವರಿಸಿಕೊಳ್ಳುತ್ತಿದೆಯೇ ಎನ್ನುವ ಆತಂಕ ಈಗ ಎದುರಾಗಿದೆ.
2016ರಲ್ಲಿ ಹಿರಿಯ ಕೆಎಎಸ್ ಅಧಿಕಾರಿಯಾಗಿದ್ದ, ಸಾಹಿತ್ಯ ಕೃಷಿ ಮಾಡಿದ್ದ ಮನು ಬಳಿಗಾರ್ ತಮ್ಮ ಅಧಿಕಾರಾವಧಿ ಮುಗಿಯುವ ಹೊತ್ತಿಗೆ ಪರಿಷತ್ತಿನ ಬೈಲಾಗೆ ತಿದ್ದುಪಡಿ ತಂದು ಮೂರು ವರ್ಷ ಇದ್ದ ರಾಜ್ಯಾಧ್ಯಕ್ಷರ ಅಧಿಕಾರವಧಿಯನ್ನು ಐದು ವರ್ಷಕ್ಕೆ ವಿಸ್ತರಣೆ ಮಾಡಿ ಐದು ವರ್ಷ ಅಧಿಕಾರ ನಡೆಸಿದರು. ಇವರ ನಂತರ 2021ರಲ್ಲಿ ಮಹೇಶ್ ಜೋಶಿ ಅವರು ಪರಿಷತ್ತಿನ ಚುಕ್ಕಾಣಿ ಹಿಡಿದರು, ಪ್ರಾರಂಭದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಚಿವ ಸಂಪುಟ ದರ್ಜೆ ಸ್ಥಾನಮಾನ ಪಡೆದುಕೊಂಡಿದ್ದು ಹಲವಾರು ಕನ್ನಡ ಮನಸ್ಸುಗಳನ್ನು ಕೆರಳಿಸಿತು. ಹಾವೇರಿ, ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಅಪಸ್ವರವೂ ಕೇಳಿ ಬಂದಿತು, ಇದೀಗ ಬೈಲಾಗೆ ಮತ್ತೆ ತಿದ್ದುಪಡಿ ತರಲು ಹೊರಟಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿ, ಅವರು ರಾಜೀನಾಮೆ ನೀಡಬೇಕು ಎನ್ನುವ ಪಟ್ಟು ಬಿಗಿಯಾಗುತ್ತಿದೆ.
ಮೈಸೂರು, ಮಂಡ್ಯದಲ್ಲಿ ಹೆಚ್ಚಿದ ಕಾವು…
2024ರ ಡಿಸೆಂಬರ್ ನಲ್ಲಿ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತಾಗಿ ಲೆಕ್ಕಪತ್ರ ಸಲ್ಲಿಕೆ, ಸ್ಮರಣ ಸಂಚಿಕೆ ಬಿಡುಗಡೆಯಲ್ಲಿ ಆಗಿರುವ ವಿಳಂಬದ ಬಗ್ಗೆ ಹಂಪನಾ, ಪ್ರೊ.ಜಯಪ್ರಕಾಶ್ ಗೌಡ, ಕಾಳೇಗೌಡ ನಾಗವಾರ, ವಸುಂಧರಾ ಭೂಪತಿ, ಎಸ್.ಜಿ.ಸಿದ್ದರಾಮಯ್ಯ, ಆರ್.ಜಿ. ಹಳ್ಳಿ ನಾಗರಾಜ ಸೇರಿ ಹಲವು ಮಂದಿ ಪ್ರಶ್ನೆ ಮಾಡಿದ್ದಾರೆ. ಸಮ್ಮೇಳನ ಆಯೋಜನೆಯಲ್ಲಿ ಅಕ್ರಮದ ವಾಸನೆ ಬರುತ್ತಿದೆ, ಸರ್ಕಾರ ನೀಡಿದ ಕೋಟ್ಯಾಂತರ ರೂಪಾಯಿ ಅನುದಾನ ಕೆಲವರ ಜೇಬು ಸೇರಿದ ಎನ್ನುವ ಗಂಭೀರ ಆರೋಪವೂ ಕೇಳಿ ಬರುತ್ತಿದೆ.
ಇದರ ಮಧ್ಯ ಈಗ ಬೈಲಾಗೆ ತಿದ್ದುಪಡಿ ತರಲು ಮುಂದಾಗಿರುವುದು ಮೈಸೂರು ಮತ್ತು ಮಂಡ್ಯದಲ್ಲಿ ಚರ್ಚೆಯಾಗುತ್ತಿದ್ದು, ವಿರೋಧವೂ ವ್ಯಕ್ತವಾಗುತ್ತಿದೆ. ಈ ಸಂಬಂಧ ಮೇ 17ರಂದು ಮಂಡ್ಯದಲ್ಲಿ ಕನ್ನಡ ನಾಡು-ನುಡಿ ಜಾಗೃತ ಸಮಿತಿ ವತಿಯಿಂದ ಸಭೆ ಮಾಡಿ, ಮಹೇಶ್ ಜೋಶಿ ಅವರ ರಾಜೀನಾಮೆಗೆ ಆಗ್ರಹ ಮಾಡಲಾಗಿದೆ.
ಬೈಲಾ ತಿದ್ದುಪಡಿಗೆ ವಿರೋಧವೇಕೆ..?
ಪರಿಷತ್ತಿನ ಬೈಲಾದ 9ನೇ ಅಂಶದಲ್ಲಿ ಕೇಂದ್ರ ಪರಿಷತ್ತಿನ ಅಧ್ಯಕ್ಷರ ಅಧಿಕಾರ ವ್ಯಾಪ್ತಿಯನ್ನು ವಿಸ್ತಾರ ಮಾಡಿಕೊಳ್ಳುವ ಅಂಶಗಳನ್ನು ಸೇರ್ಪಡೆ ಮಾಡಲಾಗುತ್ತಿದೆ ಎನ್ನುವ ಆರೋಪ ಪ್ರಮುಖವಾಗಿ ಕೇಳಿ ಬರುತ್ತಿದೆ. ಜೊತೆಗೆ ಕೇಂದ್ರ ಪರಿಷತ್ತಿನ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಮಾತನಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನೂ ಪಡೆದುಕೊಳ್ಳಲಾಗುತ್ತಿದೆ, ಇದು ಅಧಿಕಾರ ಕೇಂದ್ರೀಕರಣ ಮತ್ತು ಪ್ರಶ್ನೆ ಮಾಡುವವರ ಬಾಯಿ ಮುಚ್ಚಿಸುವ ತಂತ್ರವಾಗಿ ಎಂದು ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶ್ ಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ಜಿಲ್ಲಾಧ್ಯಕ್ಷರ ಸ್ಥಾನ ತೆರವಾದಾಗ ಸಮಿತಿಯ ಸದಸ್ಯರೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಅಧಿಕಾರ ಕೇಂದ್ರ ಪರಿಷತ್ತಿನ ಅಧ್ಯಕ್ಷರಿಗೆ ಇರಲಿದೆ. ತಾಲ್ಲೂಕು, ಹೋಬಳಿ ಮಟ್ಟದ ಅಧ್ಯಕ್ಷರ ಸ್ಥಾನ ತೆರವಾದಾಗ ಜಿಲ್ಲಾಧ್ಯಕ್ಷರು ಕೇಂದ್ರ ಪರಿಷತ್ತಿನ ಅಧ್ಯಕ್ಷರ ಒಪ್ಪಿಗೆ ಪಡೆದು ನೇಮಕ ಮಾಡಬೇಕು ಎನ್ನುವ ಅಂಶ ಸೇರ್ಪಡೆ ಮಾಡಲಾಗುತ್ತಿದೆ. ಹೀಗಿದ್ದರೆ ಸದಸ್ಯರಿಂದ ಚುನಾವಣೆ ಮೂಲಕ ಆಯ್ಕೆಯಾದ ಜಿಲ್ಲಾಧ್ಯಕ್ಷರ ಅಧಿಕಾರ ಕಿತ್ತುಕೊಂಡ ಹಾಗೆ ಅಲ್ಲವೇ..? ಇದು ಅಧಿಕಾರ ಕೇಂದ್ರೀಕರಣವಲ್ಲವೇ ಎಂದು ಪ್ರಶ್ನೆ ಮಾಡುತ್ತಾರೆ.
ಅಧ್ಯಕ್ಷರ ವಿರುದ್ಧ ಯಾರಾದರೂ ಪ್ರಶ್ನೆ ಮಾಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಂಬಂಧ ಬೈಲಾಗೆ ತಿದ್ದುಪಡಿ ತರಲು ಮುಂದಾಗಿದ್ದಾರೆ. ಹಾಗಾದರೆ ಯಾರೂ ಪ್ರಶ್ನೆ ಮಾಡಲೇಬಾರದಾ..? ಶಿವಮೊಗ್ಗ ಜಿಲ್ಲಾಧ್ಯಕ್ಷರು ಪ್ರಶ್ನೆ ಮಾಡಿದ್ದಕ್ಕೆ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಇದು ಎಷ್ಟು ಸರಿ..? ಬೈಲಾಗೆ ತಿದ್ದುಪಡಿ ತರಲು ಹೊರಟಿರುವುದು ಕನ್ನಡವನ್ನು ಕಟ್ಟುವುದಕ್ಕಾಗಿ ಅಲ್ಲ, ಅಧ್ಯಕ್ಷರ ಅಧಿಕಾರವನ್ನು ಗಟ್ಟಿ ಮಾಡಿಕೊಳ್ಳುವುದಕ್ಕೆ ಎನ್ನುತ್ತಾರೆ ಅವರು.
ಮಹೇಶ್ ಜೋಶಿ ಅವರು ನಾವು ಮಾಡುತ್ತಿರುವ ಆರೋಪಗಳಿಗೆ ಮೊದಲು ಸ್ಪಷ್ಟನೆ ನೀಡಲಿ. ನಮ್ಮ ಆರೋಪಗಳು ಸುಳ್ಳು ಎಂದು ಸಾಭೀತಾದಲ್ಲಿ ಬಹಿರಂಗವಾಗಿ ನಾವು ಕ್ಷಮೆ ಕೇಳಲು ಸಿದ್ಧರಿದ್ದೇವೆ. ಹೀಗೆ ಪ್ರಶ್ನೆ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎನ್ನುವ ಮನಸ್ಥಿತಿ ಇರುವ ವ್ಯಕ್ತಿಯಿಂದ ಕನ್ನಡ ಕಟ್ಟುವ ಕೆಲಸ ಹೇಗೆ ತಾನೆ ಸಾಧ್ಯ ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಮಹೇಶ್ ಜೋಶಿ ಶಿಸ್ತಿನ ಮನುಷ್ಯ
ಮಹೇಶ್ ಜೋಶಿ ತುಂಬಾ ಶಿಸ್ತಿನ ವ್ಯಕ್ತಿ. ಅವರಿಗೆ ಅಚ್ಚುಕಟ್ಟಾಗಿ ಕನ್ನಡ ಕಟ್ಟಬೇಕು ಎನ್ನುವ ಹಂಬಲ ಇದೆ. ಅದಕ್ಕೆ ಪೂರಕವಾಗಿ ಈ ಎಲ್ಲ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೈಲಾಗೆ ತಿದ್ದುಪಡಿ ತರುವುದರಲ್ಲಿ ತಪ್ಪೇನಿದೆ ಎಂದು ಕೇಳುತ್ತಾರೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಗೆರೆ ಗೋಪಾಲ್ ಅವರು.
ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ಸಂಸ್ಥೆಯಲ್ಲಿ ಈಗೀಗ ಶಿಸ್ತು ಇರಲಿಲ್ಲ. ಅದನ್ನು ಸರಿ ಮಾಡುವ ನಿಟ್ಟಿನಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ಅವರ ಸಲಹೆ, ವರದಿ ಆಧರಿಸಿ ಬೈಲಾಗೆ ತಿದ್ದುಪಡಿ ಮಾಡಲಾಗುವುದು. ಸಂಸ್ಥೆಯ ಘನತೆಗೆ ಧಕ್ಕೆ ತಂದಾಗ ಏನು ಕ್ರಮ ಕೈಗೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆಗಳು ಆಗುತ್ತಿವೆ. ಈ ಬಗ್ಗೆ ಕಾರ್ಯಕಾರಿ ಸಮಿತಿ ಸಭೆ ಕರೆದು, ಅಲ್ಲಿಯೇ ಚರ್ಚೆ ಮಾಡಿದ್ದಾರೆ. ಇನ್ನು ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಭ್ರಷ್ಟಾಚಾರ ಆಗಿದೆ ಎನ್ನುವ ಆರೋಪದಲ್ಲಿ ಹುರುಳಿಲ್ಲ. ಕಾರ್ಯಕಾರಿ ಸಮಿತಿಯಿಂದ ನಮಗೆ 2023-24ರ ಲೆಕ್ಕ ಪರಿಶೋಧನಾ ವರದಿಯನ್ನು ಕಳಿಸಿದ್ದಾರೆ. ಅದರಲ್ಲಿ ಯಾವುದೇ ಅಕ್ರಮ ಆಗಿರುವ ಮಾಹಿತಿ ಇಲ್ಲ. ಈಗ ಆರೋಪ ಮಾಡುತ್ತಿರುವವರು ಸೂಕ್ತ ದಾಖಲೆ ಕೊಟ್ಟು, ಸರಿಯಾದ ಮಾರ್ಗದಲ್ಲಿ ಆರೋಪ ಮಾಡಿದರೆ ಆ ಬಗ್ಗೆ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ.
ಸರ್ಕಾರದ ಸವಲತ್ತು ಕೇಳಿ ಪಡೆದುಕೊಂಡಿದ್ದೇ ತಪ್ಪು?
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಸರ್ಕಾರ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದೇ ಸರಿಯಲ್ಲ. ಇವರು ಮನವಿ ಮಾಡಿ ಆ ಸವಲತ್ತುಗಳನ್ನು ಪಡೆದುಕೊಂಡಿದ್ದೂ ಸರಿಯಲ್ಲ ಎನ್ನುವ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷರಾದ ವೈ.ಕೆ.ಮುದ್ದುಕೃಷ್ಣ ಅವರು, ಮಹೇಶ್ ಜೋಶಿ ಅವರಿಗೆ ಎಲ್ಲವೂ ನನ್ನ ಹಿಡಿತದಲ್ಲಿಯೇ ನಡೆಯಬೇಕು ಎನ್ನುವ ಸರ್ವಾಧಿಕಾರಿ ಧೊರಣೆ ಇದೆ ಎಂದು ಆರೋಪಿಸುತ್ತಾರೆ.
ಈ ಸಂಬಂಧ ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ನಾನು ಹೇಳಿದ್ದೇ ಆಗಬೇಕು ಎನ್ನುವ ಧೋರಣೆ ಸರಿಯಲ್ಲ. ಕಾರ್ಯಕಾರಿ ಸಮಿತಿ ಸದಸ್ಯರು, ಜಿಲ್ಲಾಧ್ಯಕ್ಷರು, ಹಿಂದಿನ ಅಧ್ಯಕ್ಷರ ಅಭಿಪ್ರಾಯ ತೆಗೆದುಕೊಳ್ಳಬೇಕು. ಬೈಲಾಗೆ ತಿದ್ದುಪಡಿ ತರುತ್ತಿರುವುದು ಯಾವ ಉದ್ದೇಶಕ್ಕೆ..? ತಮ್ಮ ಅಧಿಕಾರವನ್ನು ಗಟ್ಟಿ ಮಾಡಿಕೊಳ್ಳಲು, ತಾನು ಹೇಳಿದ ಹಾಗೆಯೇ ಎಲ್ಲವೂ ನಡೆಯಬೇಕು ಎನ್ನುವ ಕಾರಣಕ್ಕೆ ಈ ತಿದ್ದುಪಡಿ ತರಲು ಮುಂದಾಗಿದ್ದಾರೆ. ತಿದ್ದುಪಡಿಯಿಂದ ಕನ್ನಡಕ್ಕೆ ಏನು ಅನುಕೂಲ ಆಗುತ್ತದೆ ಎನ್ನುವುದನ್ನು ಹೇಳಲಿ. ಈಗ ವಿರೋಧ ಮಾಡುತ್ತಿರುವವರನ್ನು ಕರೆದು ಮಾತುಕತೆ ಮಾಡುವ ಪ್ರಯತ್ನವನ್ನೂ ಅವರು ಮಾಡಿಲ್ಲ. ಇದು ಯಾವ ರೀತಿಯ ಧೋರಣೆ,,? ಬಿಎಂಶ್ರೀ ಅವರು 1911ರಲ್ಲೇ ಕನ್ನಡದ ಸೇವೆಯನ್ನು ಮಾಡುವ ಪರಿಚಾರಕರೇ ಹೊರತು ಸರ್ವಾಧಿಕಾರಿಗಳಲ್ಲ ಎಂದು ಹೇಳಿದ್ದಾರೆ. ಆದರೆ ಈಗ ಆಗುತ್ತಿರುವುದು ಏನು..? ಈಗಿನ ಅಧ್ಯಕ್ಷರಿಗೆ ಸಾವಧಾನದಿಂದ ಕೇಳಿಸಿಕೊಳ್ಳುವ ಕಿವಿಯೇ ಇಲ್ಲ ಎನ್ನುತ್ತಾರೆ ಮುದ್ದುಕೃಷ್ಣ.
ತಿದ್ದುಪಡಿ ಬಗ್ಗೆ ಮಹೇಶ್ ಜೋಶಿ ಹೇಳುವುದೇನು..?
ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ, ಗೌರವ ಎತ್ತಿ ಹಿಡಿಯುವ ಜೊತೆಗೆ ಸಮಕಾಲೀನ ಸವಾಲುಗಳಿಗೆ ಸ್ಪಂದಿಸುವ ಉದ್ದೇಶದಿಂದ ಪರಿಷತ್ತಿನ ಹಾಲಿ ನಿಂಬಂಧನೆಗಳಿಗೆ ತಿದ್ದುಪಡಿ ತರುವ ಅಗತ್ಯ ಇದೆ. ಇದಕ್ಕಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್.ಪಚ್ಚಾಪುರೆ ನೇತೃತ್ವದಲ್ಲಿ ಬೈಲಾ ತಿದ್ದುಪಡಿ ಸಲಹಾ ಉಪ ಸಮಿತಿ ರಚನೆ ಮಾಡಲಾಗಿದೆ. 12 ಸದಸ್ಯರು 4 ಮಂದಿ ವಿಶೇಷ ಆಹ್ವಾನಿತರನ್ನು ಒಳಗೊಂಡ ಸಮಿತಿ ಇದಾಗಿದ್ದು, ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡಿರುವುದಾಗಿ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಭ್ರಷ್ಟಾಚಾರ ವಿರುದ್ಧ ತನಿಖೆಗೆ ಆಗ್ರಹ
ಕನ್ನಡ ಭಾಷೆಯ ಅಭಿವೃದ್ಧಿ, ಪರಿಣಾಮಕಾರಿಯಾಗಿ ಸಾಹಿತ್ಯ ಚಟುವಟಿಕೆಗಳು ನಡೆಯಲಿ ಎನ್ನುವ ಕಾರಣಕ್ಕಾಗಿ ಸರ್ಕಾರಗಳು ಕಾಲ ಕಾಲಕ್ಕೆ ಕೋಟಿ ರೂಪಾಯಿಗಳ ಲೆಕ್ಕದಲ್ಲಿ ಅನುದಾನ ನೀಡುತ್ತಾ ಬಂದಿವೆ. ಹೀಗೆ ಅನುದಾನ ಹೆಚ್ಚಿದಷ್ಟೂ ಅಕ್ರಮಗಳೂ ಹೆಚ್ಚಾಗುತ್ತಿವೆ. ಯಾವುದೇ ಕ್ರಿಯಾ ಯೋಜನೆ ನೀಡದೇ ಇದ್ದರೂ ಸರ್ಕಾರ ದೊಡ್ಡ ಮೊತ್ತದ ಅನುದಾನವನ್ನು ಹೇಗೆ ಬಿಡುಗಡೆ ಮಾಡುತ್ತಿದೆ, ಕೊಟ್ಟ ಅನುದಾನಕ್ಕೆ ಸರಿಯಾದ ರೀತಿಯಲ್ಲಿ ಲೆಕ್ಕವನ್ನೇಕೆ ಪಡೆದುಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆಗಳೂ ಸಾಹಿತಿಗಳ ವಲಯದಿಂದ ಕೇಳಿ ಬರುತ್ತಿದೆ.
ಅಲ್ಲದೇ ಸಮ್ಮೇಳನಗಳು ಅರ್ಥ ಕಳೆದುಕೊಳ್ಳುತ್ತಿವೆ. ನೂರು ವರ್ಷ ಪೂರೈಸಿರುವ ಸಂಸ್ಥೆಗೆ 2021ರ ವರೆಗೆ ಮೂರು ಬಾರಿ ಮಾತ್ರ ಬೈಲಾ ತಿದ್ದುಪಡಿಯಾಗಿದ್ದರೆ ಮಹೇಶ್ ಜೋಶಿ ಅಧಿಕಾರ ವಹಿಸಿಕೊಂಡ ಮೂರು ವರ್ಷದಲ್ಲೇ ಮೂರು ಬಾರಿ ತಿದ್ದುಪಡಿಯಾಗುತ್ತಿದೆ ಎನ್ನುವ ಆಕ್ಷೇಪಗಳೂ ಕೇಳಿ ಬರುತ್ತಿವೆ. ಅಲ್ಲದೇ ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಘನತೆ, ಅಸ್ಥಿತ್ವ ಉಳಿಯಬೇಕು ಎನ್ನುವ ಆಗ್ರಹಗಳೂ ಸಾಹಿತಿಗಳ ವಲಯದಿಂದ ಕೇಳಿ ಬರುತ್ತಿದೆ.
ಹಣದ ಹರಿವು, ಅಧಿಕಾರದ ದಾಹ? ಕಸಾಪ ಭವಿಷ್ಯವೇನು..?
2024-25ರ ಕಸಾಪ ವಾರ್ಷಿಕ ಲೆಕ್ಕಪತ್ರದಲ್ಲಿ ಉಲ್ಲೇಖಿತ ಅಂಶಗಳ ಪ್ರಕಾರ ಅಧ್ಯಕ್ಷರಾದ ಮಹೇಶ್ ಜೋಶಿ ಅವರು 4,20,000 ರೂ. ವೇತನ ಪಡೆದುಕೊಂಡಿದ್ದಾರೆ. 7,62,329 ರೂ. ದಿನಭತ್ಯೆ, 6,70,267 ರೂ. ಪ್ರಯಾಣ ಭತ್ಯೆ, 93,319 ರೂ. ವಾಹನ ನಿರ್ವಹಣೆಗೆ, 33,419 ರೂ. ದಿನಪತ್ರಿಕೆಗಳ ಬಿಲ್, 43,519 ರೂ. ದೂರವಾಣಿ ವೆಚ್ಚ, 18,310 ಇಂಧನ ವೆಚ್ಚ. ಹೀಗೆ ಮಹೇಶ್ ಜೋಶಿ ಅವರು ವಾರ್ಷಿಕವಾಗಿ ಪರಿಷತ್ತಿನಿಂದ ಎರಡು ಕೋಟಿ ರೂಪಾಯಿಗೂ ಹೆಚ್ಚಿನ ಸವಲತ್ತು ಪಡೆದುಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಇದೆ.
ಹೀಗೆ ಹಣದ ಹರಿವು ಯಥೇಚ್ಚವಾಗಿ ಇದ್ದಾಗ, ಕಸಾಪದ ಮುಂದಿನ ದಿನಗಳು ಹೇಗಿರಲಿವೆ ಎನ್ನುವ ಆತಂಕ ಎದುರಾಗುತ್ತದೆ. ಹಿಂದೆ ಕನ್ನಡದ ಉಳಿವಿಗಾಗಿ, ಸಮೃದ್ಧ ಬೆಳವಣಿಗೆಗಾಗಿ ಪೈಪೋಟಿ ಏರ್ಪಟ್ಟಿದ್ದರೆ ಈಗ ಅಧಿಕಾರಕ್ಕಾಗಿ ಮಹತ್ವದ ಹುದ್ದೆ ಬಳಕೆಯಾಗುತ್ತಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ದ ಫೆಡರಲ್ ಕರ್ನಾಟಕ ಕಸಾಪ ರಾಜ್ಯಾಧ್ಯಕ್ಷರಾದ ಮಹೇಶ್ ಜೋಶಿ ಅವರನ್ನು ಸಂಪರ್ಕಿಸಿತು. ನಾನು ಈಗ ಈ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿ ಅವರು ಸುಮ್ಮನಾದರು.