ಹಾಲಿ– ಮಾಜಿ ಮುಖ್ಯಮಂತ್ರಿಗಳ ನಡುವೆ ಚೀಟಿ ವಿನಿಮಯ!

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನಡುವೆ ಚೀಟಿ ವಿನಿಮಯದ ದೃಶ್ಯ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚೀಟಿಯ ಬಗ್ಗೆ ಇಬ್ಬರು ನಾಯಕರು ಚರ್ಚೆ ಸಹ ಮಾಡಿದ್ದಾರೆ.;

Update: 2024-05-11 15:05 GMT
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನಡುವೆ ಚೀಟಿ ವಿನಿಮಯದ ದೃಶ್ಯ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಇಬ್ಬರು ನಾಯಕರು ಸಹ ಅಕ್ಕಪಕ್ಕದ ಕುರ್ಚಿಯಲ್ಲಿ ಕುಳಿತಿದ್ದರು. ಕಾರ್ಯಕ್ರಮ ಪ್ರಾರಂಭವಾದ ಕೆಲವು ನಿಮಿಷಗಳ ವರೆಗೆ ಇಬ್ಬರು ನಾಯಕರು ಪರಸ್ಪರ ಮಾತನಾಡಿಕೊಳ್ಳಲಿಲ್ಲ. ಕೆಲವು ಸಮಯದ ನಂತರ ಬಿ.ಎಸ್ ಯಡಿಯೂರಪ್ಪ ಅವರು ಸಣ್ಣ ಚೀಟಿಯನ್ನು ಸಿ.ಎಂ ಸಿದ್ದರಾಮಯ್ಯ ಅವರ ಕೈಗೆ ಕೊಟ್ಟರು. ಆ ಚೀಟಿಯನ್ನು ಓದಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡಿ, ತಮ್ಮ ಶರ್ಟಿನ ಜೇಬಿನ ಒಳಗೆ ಇಟ್ಟುಕೊಂಡರು.

ಮೈಸೂರಿನ ಮಾನಂದವಾಡಿ ರಸ್ತೆಯ ರೇಷ್ಮೆ ಕಾರ್ಖಾನೆ ಎದುರು ಶನಿವಾರ ಡಾ.ಬಿ.ಆರ್. ಅಂಬೇಡ್ಕರ್ ಶಿಕ್ಷಣ ಹಾಗೂ ಸಾಂಸ್ಕೃತಿಕ ಟ್ರಸ್ಟ್, ಸಮಾನತೆ-ಸ್ವಾಭಿಮಾನ-ಸ್ವಾವಲಂಬನೆ ಪ್ರತಿಷ್ಠಾನ ಹಾಗೂ ಸಮಾನತೆ ಪ್ರಕಾಶನದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ʻಸ್ವಾಭಿಮಾನಿಗೆ ಸಾವಿರದ ನುಡಿನಮನʼ ಎಂಬ ವಿ.ಶ್ರೀನಿವಾಸ ಪ್ರಸಾದ್ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಈ ಸ್ವಾರಸ್ಯಕರ ಘಟನೆ ನಡೆಯಿತು.

ಸಿ.ಎಂ ಕಾಲಿಗೆ ಬಿದ್ದ ಸಿಂಹ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದ ಘಟನೆಗೂ ಕಾರ್ಯಕ್ರಮ ಸಾಕ್ಷಿಯಾಯಿತು. ಸದಾ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರದ ಬಗ್ಗೆ ಟೀಕೆ ಮಾಡುತ್ತಿದ್ದ ಸಂಸದರು ಈ ರೀತಿ ಸಾರ್ವಜನಿಕವಾಗಿ ಸಿ.ಎಂ ಕಾಲಿಗೆ ಬಿದ್ದದ್ದು ಸಭಿಕರ ಅಚ್ಚರಿಗೆ ಕಾರಣವಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಂಸದ ಪ್ರತಾಪ ಸಿಂಹ, ಶಾಸಕರಾದ ಟಿ.ಎಸ್.ಶ್ರೀವತ್ಸ, ಎ.ಆರ್.ಕೃಷ್ಣಮೂರ್ತಿ, ದರ್ಶನ್ ಧ್ರುವನಾರಾಯಣ, ಶ್ರೀನಿವಾಸ ಪ್ರಸಾದ್ ಪತ್ನಿ ಭಾಗ್ಯಲಕ್ಷ್ಮಿ, ಸಿ.ಎಸ್. ದ್ವಾರಕನಾಥ್, ಪಿಜಿಆರ್ ಸಿಂಧ್ಯಾ ಸೇರಿದಂತೆ ಹಲವರು ಹಾಜರಿದ್ದರು.

Tags:    

Similar News