ಬೆಂಗಳೂರು ನಿರ್ವಹಣೆ | ಜು.27ಕ್ಕೆ ಜನಪ್ರತಿನಿಧಿಗಳ ಸಭೆ: ಡಿ.ಕೆ.ಶಿವಕುಮಾರ್

“ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ ಎಸ್ ಬಿ, ಬೆಸ್ಕಾಂ ಸೇರಿದಂತೆ ಬೆಂಗಳೂರು ಅಭಿವೃದ್ದಿಗೆ ಇರುವ ಪ್ರತಿ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸುವ ವಿಚಾರವಾಗಿ ಬೆಂಗಳೂರು ವ್ಯಾಪ್ತಿಯ ಶಾಸಕರು, ಸಂಸದರ ಸಭೆಯನ್ನು ಜು.27 ರಂದು ಕರೆಯಲಾಗಿದೆ” ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ತಿಳಿಸಿದ್ದಾರೆ.;

Update: 2024-07-16 14:10 GMT
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌

“ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ ಎಸ್ ಬಿ, ಬೆಸ್ಕಾಂ ಸೇರಿದಂತೆ ಬೆಂಗಳೂರು ಅಭಿವೃದ್ದಿಗೆ ಇರುವ ಪ್ರತಿ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸುವ ವಿಚಾರವಾಗಿ ಜು.27 ರಂದು ಬೆಂಗಳೂರು ವ್ಯಾಪ್ತಿಯ ಶಾಸಕರು, ಸಂಸದರ ಸಭೆ ಕರೆಯಲಾಗಿದೆ” ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ತಿಳಿಸಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶಾಸಕರಾದ ಎಸ್. ಸುರೇಶ್ ಕುಮಾರ್, ರಾಮಮೂರ್ತಿ ಅವರ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯ ಪ್ರಸ್ತಾಪಿಸಿದರು.

“ಅಶೋಕ್, ಸುರೇಶ್ ಕುಮಾರ್ ಹಾಗೂ ರಾಮಮೂರ್ತಿ ಅವರ ಮಾತಿಗೆ ನನ್ನ ಸಹಮತವಿದೆ. ಕಳೆದ ಒಂದು ವರ್ಷದಿಂದ ಸಮನ್ವಯತೆ ಸಾಧಿಸಲು ನಾನೇ ಸಾಕಷ್ಟು ಕಸರತ್ತು ನಡೆಸಿದ್ದೇನೆ. ಇದರಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ಆದರೆ ಒಂದು ಹಂತಕ್ಕೆ ಸಮಸ್ಯೆ ನಿವಾರಣೆ ಮಾಡಿದ್ದೇನೆ. ಆದರೆ ಪ್ರಯತ್ನ ಮುಂದುವರಿಸಿದ್ದೇನೆ. ಪ್ರತಿಪಕ್ಷದವರು ಸಹಕಾರ ನೀಡಿದರೆ ಕಸ ವಿಲೇವಾರಿ, ಕುಡಿಯುವ ನೀರು, ಸಂಚಾರ ದಟ್ಟಣೆ, ಬೀದಿ ದೀಪ, ತೆರಿಗೆ ಸಂಗ್ರಹ, ಹಸಿರೀಕರಣ - ಹೀಗೆ ಅನೇಕ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಬಹುದು” ಎಂದು ತಿಳಿಸಿದರು.

“ನನ್ನ ಬಳಿ ಎರಡು ಆಯ್ಕೆಗಳಿದ್ದು, ಸ್ಪೀಕರ್ ಅವರು ಅವಕಾಶ ನೀಡಿದರೆ ಸದನದಲ್ಲೇ ಚರ್ಚೆ ನಡೆಸಬಹುದು ಅಥವಾ ಸದನ ಮುಗಿದ ಮಾರನೇ ದಿನವೇ ನೀವು ತಿಳಿಸಿದ ಜಾಗದಲ್ಲಿ ಇದೇ ವಿಚಾರವಾಗಿ ಇಡೀ ದಿನ ಚರ್ಚೆ ನಡೆಸೋಣ” ಎಂದರು. ಆಗ ʼಎರಡನೇ ಆಯ್ಕೆಯೇ ಉತ್ತಮʼ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಹೇಳಿದರು.

ನೀವು ವಿಧಾನಸಭೆ ಕಲಾಪವನ್ನು ಯಾವಾಗ ಮುಗಿಸುತ್ತೀರಾ ಎಂದು ಸ್ಪೀಕರ್ ಅವರನ್ನು ಶಿವಕುಮಾರ್ ಅವರು ಪ್ರಶ್ನಿಸಿದಾಗ “26ಕ್ಕೆ ಮುಗಿಸುತ್ತೇವೆ. ನಿಮ್ಮ ಉತ್ತರ ಹಾಗೂ ಅವರ ಸಲಹೆ ಎರಡೂ ಸರಿಯಿದೆ. ಚರ್ಚೆ ಇಲ್ಲಿ ಬೇಡ, ಸದನದ ಹೊರಗೆ ಇಟ್ಟುಕೊಳ್ಳಿ” ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು. “ಹಾಗದರೆ ಈ ಸಭೆಯನ್ನು ಇದೇ 27 ರಂದು ನಡೆಸೋಣ”‌ ಎಂದು ಡಿಸಿಎಂ ಹೇಳಿದರು.

ಕಾವೇರಿ ಜಲಾನಯನ ನೀರು ಹರಿವು ಮಾಹಿತಿ

ಕಾವೇರಿ ಕೊಳ್ಳದ ವಿವಿಧ ಜಲಾಶಯಗಳ ಮೂಲಕ ಕೆಆರ್‌ಎಸ್‌ ಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದ ಕುರಿತು ವಿಧಾನಸಭೆಗೆ ಮಾಹಿತಿ ನೀಡಿದ ಜಲಸಂಪನ್ಮೂಲ ಖಾತೆಯ ಹೊಣೆ ಹೊತ್ತಿರುವ ಡಿ ಕೆ ಶಿವಕುಮಾರ್‌ ಅವರು, ಹಾರಂಗಿ ಜಲಾಶಯಕ್ಕೆ 12,827 ಕ್ಯೂಸೆಕ್, ಹೇಮಾವತಿ 14,027, ಕೆ.ಆರ್ ಎಸ್ 25,933, ಕಬಿನಿಗೆ 28,840 ಸೇರಿ ಒಟ್ಟು 56, 626 ಕ್ಯೂಸೆಕ್‌ ನೀರಿನ ಒಳಹರಿವಿದೆ ಎಂದರು.

"ಕಾನೂನಿನ ಪ್ರಕಾರ 40 ಟಿಎಂಸಿ ನೀರು ಹೋಗಬೇಕಾಗಿತ್ತು. ಬಿಳಿಗುಂಡ್ಲುವಿನಲ್ಲಿ ದಾಖಲೆ ಪ್ರಕಾರ 6 ಟಿಎಂಸಿ ನೀರು ಹೋಗಿದೆ. ಅಂದರೆ ಪ್ರತಿ ದಿನ ನೀರಿನ ಹರಿವಿನ ಪ್ರಮಾಣ 1.5 ಟಿಎಂಸಿ ಮುಟ್ಟಿದೆ. ಏಕೆಂದರೆ 250 ಕಿ.ಮೀ ನಷ್ಟು ನೀರು ಹರಿಯಬೇಕಿದೆ. ಇದೇ ರೀತಿ ಮಳೆ ಬಂದು ನೀರು ಹರಿದರೆ ತೊಂದರೆಯಾಗುವುದಿಲ್ಲ ಎಂಬುದು ನನ್ನ ಭಾವನೆ" ಎಂದರು.

Tags:    

Similar News