ಗೌರಿ ಲಂಕೇಶ್‌ ಹಂತಕರಿಗೆ ಸನ್ಮಾನ| ಕಠಿಣ ಕ್ರಮಕ್ಕೆ ಪ್ರಗತಿಪರರ ಆಗ್ರಹ; ಅ.22 ರಂದು ರಾಜ್ಯವ್ಯಾಪಿ ಪ್ರತಿಭಟನೆ

ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳನ್ನು ಹಿಂದೂ ಸಂಘಟನೆಗಳ ಮುಖಂಡರು ಸನ್ಮಾನಿಸಿರುವುದು ವಿವಾದದ ಸ್ವರೂಪ ಪಡೆದಿದೆ. ಬಲಪಂಥೀಯರ ಧೋರಣೆ ಖಂಡಿಸಿ ಪ್ರಗತಿಪರರು, ವಿಚಾರವಾದಿಗಳು ಅ.22 ರಂದು ರಾಜ್ಯವ್ಯಾಪಿ ಪ್ರತಿಭಟನೆಗೆ ತೀರ್ಮಾನಿಸಿದ್ದಾರೆ.;

Update: 2024-10-20 12:30 GMT

ಎಡಪಂಥೀಯ ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಆರೋಪಿಗಳಿಗೆ ಹಿಂದೂಪರ ಸಂಘಟನೆಗಳು ಸನ್ಮಾನ ಮಾಡಿರುವ ಪ್ರಕರಣ ತೀವ್ರ ಟೀಕೆಗೆ ಗುರಿಯಾಗಿ, ಪ್ರಗತಿಪರರು, ಬುದ್ದಿಜೀವಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈಚೆಗೆ ಜಾಮೀನು ಮೇಲೆ ಬಿಡುಗಡೆಯಾದ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳನ್ನು ಕೆಲ ಹಿಂದೂ ಸಂಘಟನೆಗಳ ಮುಖಂಡರು ವಿಜಯಪುರದಲ್ಲಿ ಶಾಲು ಹೊದಿಸಿ ಸನ್ಮಾನಿಸಿದ್ದರು. ಈ ಘಟನೆ ಈಗ ವಿವಾದದ ಸ್ವರೂಪ ಪಡೆದಿದೆ. ಬಲಪಂಥೀಯರ ಧೋರಣೆ ಖಂಡಿಸಿ ಪ್ರಗತಿಪರರು, ವಿಚಾರವಾದಿಗಳು ಅ.22 ರಂದು ರಾಜ್ಯವ್ಯಾಪಿ ಪ್ರತಿಭಟನೆಗೆ ತೀರ್ಮಾನಿಸಿದ್ದಾರೆ.

ಗೌರಿ ಲಂಕೇಶ್‌ ಹಂತಕರನ್ನು ಸನ್ಮಾನಿಸಿರುವುದು ಆಶ್ಚರ್ಯವಾಗಿದೆ. ಅತ್ಯಾಚಾರಿಗಳು, ಕೊಲೆಗಡುಕರಿಗೆ ಗುಜರಾತ್‌, ಉತ್ತರ ಪ್ರದೇಶದಲ್ಲಿ ಸನ್ಮಾನ ಮಾಡುವುದನ್ನು ಕಾಣುತ್ತಿದ್ದೆವು. ಆದರೆ, ಇಂತಹ ಪರಂಪರೆ ಕರ್ನಾಟಕಕ್ಕೂ ಬಂದಿರುವುದು ಆತಂಕಕಾರಿ ಬೆಳವಣಿಗೆ. ಮಾನವೀಯ ಮೌಲ್ಯಗಳಿಗೆ ದೊಡ್ಡ ಕಳಂಕ. ಗೃಹ ಇಲಾಖೆ ಕಂಡೂ ಕಾಣದಂತೆ ಇರುವುದನ್ನು ಮನಸ್ಸಿಗೆ ಬಹಳ ಬೇಸರ ತಯರಿಸಿದೆ ಎಂದು ಪ್ರಗತಿಪರರು ಆರೋಪಿಸಿದ್ದಾರೆ.

ಹಂತಕರನ್ನು ಸನ್ಮಾನಿಸಿ ಅಪರಾಧಕ್ಕೆ ಸಾಮಾಜಿಕ ಮನ್ನಣೆ ನೀಡುವುದು ಸರಿಯಲ್ಲ. ಕೊಲೆಪಾತಕರಿಗೆ ಸನ್ಮಾನ ಮಾಡುವುದು ಕೊಲೆಗೆ ಪ್ರಚೋದನೆ ನೀಡಿದಷ್ಟೇ ಗಂಭೀರ ಅಪರಾಧ. ಕರ್ನಾಟಕದ ಪ್ರಜ್ಞಾವಂತ ಜನರೆಲ್ಲರೂ ಈ ಪ್ರಚೋದನಕಾರಿ ನಡತೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಹಂತಕರಿಗೆ ಸನ್ಮಾನ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಗೌರಿ ಹಂತಕರಿಗೆ ಸನ್ಮಾನ ಮಾಡಿದವರ ಮೇಲೆ ಕೊಲೆ ಪ್ರಚೋದನೆಯಡಿ ಪ್ರಕರಣ ದಾಖಲಿಸಬೇಕು. ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಬೇಕು. ಗೌರಿ ಕೊಲೆ ವಿಚಾರಣೆಯನ್ನು ತ್ವರಿತಗೊಳಿಸಿ ಪೂರ್ಣಗೊಳಿಸಿ, ಹಂತಕರಿಗೆ ಶೀಘ್ರವೇ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಪ್ರಗತಿಪರರು ಹಕ್ಕೊತ್ತಾಯ ಮಾಡಿದ್ದಾರೆ.

ಘಟನೆ ಕುರಿತು ಸರ್ಕಾರ ಮತ್ತು ಸಮಾಜದ ಗಮನ ಸೆಳೆಯಲು ಅ. 22 ರಂದು ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸರ್ಕಾರ ನಾಗರಿಕರ ಒತ್ತಾಯಕ್ಕೆ ಕೂಡಲೇ ಸ್ಪಂದಿಸಬೇಕು ಎಂದು ಗೌರಿ ಬಳಗದ ಪರವಾಗಿ ಕವಿತಾ ಲಂಕೇಶ್‌, ಇಂದಿರಾ ಲಂಕೇಶ್‌, ತೀಸ್ತಾ ಸೆಟಲ್ವಾದ್‌, ಗಣೇಶ್‌ ದೇವಿ, ವಿ.ಎಸ್.‌ ಶ್ರೀಧರ್‌, ಫಾದರ್‌ ಜೆರಾಲ್ಡ್, ಚುಕ್ಕಿ ನಂಜುಂಡಸ್ವಾಮಿ, ಡಾ.ಸಬೀಹಾ, ಡಾ. ಭೂಮೀಗೌಡ ಸೇರಿದಂತೆ ಹಲವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಏನಿದು ಘಟನೆ?

ಗೌರಿ ಲಂಕೇಶ ಹತ್ಯೆ ಪ್ರಕರಣದ ಆರೋಪಿಗಳಾದ ಪರಶುರಾಮ್ ವಾಗ್ಮೋಡೆ, ಮನೋಹರ್ ಯಡವೆಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಅ.9 ರಂದು ಜಾಮೀನು ನೀಡಿತ್ತು. ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿ ಬಂದ ಇವರನ್ನು ಅ.12 ರಂದು ಹಿಂದೂಪರ ಸಂಘಟನೆಗಳ ಸದಸ್ಯರು ಅದ್ದೂರಿ ಸ್ವಾಗತ ಕೋರಿದರಲ್ಲದೆ, ಸನ್ಮಾನ ಕೂಡ ಮಾಡಿದ್ದರು.

ಆರೋಪಿಗಳನ್ನು ವಿಜಯಪುರ ನಗರದ ಕಾಳಿಕಾದೇವಿ ಮಂದಿರಕ್ಕೆ ಕರೆದೋಯ್ದು ಪೂಜೆ ನೆರವೇರಿಸಿ, ಶಿವಾಜಿ ಮೂರ್ತಿಗೆ ಹೂಮಾಲೆ ಹಾಕಿಸಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು.

ಗೌರಿ ಲಂಕೇಶ ಅವರನ್ನು 2017 ಸೆ.5 ರಂದು ತಮ್ಮ ಬೆಂಗಳೂರಿನ ನಿವಾಸದ ಮುಂದೆ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆಗೆ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ ಸಿಂದಗಿ ಪಟ್ಟಣದ ವಾಘ್ಮೋರೆ ಮತ್ತು ರತ್ನಾಪುರ ಗ್ರಾಮದ ಯಡವೆಯನ್ನು 2018ರಲ್ಲಿ ಬಂಧಿಸಿತ್ತು.

ಮಹಾರಾಷ್ಟ್ರದಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರ್, ಎಡಪಂಥೀಯ ಚಿಂತಕ ಗೋವಿಂದ ಪಾನ್ಸಾರೆ ಮತ್ತು ಕರ್ನಾಟಕದ ಚಿಂತಕ ಎಂ.ಎಂ. ಕಲಬುರ್ಗಿ ಹತ್ಯೆಗಳಲ್ಲಿಯೂ ಭಾಗಿಯಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.

ಆರೋಪಿಗಳಿಗೆ ಸನ್ಮಾನ ಹೇಯ ಕೃತ್ಯ: ಎಂಬಿಪಿ

ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಸಚಿವ ಎಂ.ಬಿ. ಪಾಟೀಲ ಅವರು, ಹತ್ಯೆ ಆರೋಪಿಗಳಿಗೆ ಸನ್ಮಾನಿಸಿರುವುದು ಹೇಸಿಗೆ, ಅಸಹ್ಯಕರ ಕೃತ್ಯ. ಈ ಕುರಿತು ಪ್ರಕರಣ ದಾಖಲಿಸಲು ಸೂಚಿಸಲಾಗುವುದು ಎಂದು ಹೇಳಿದ್ದರು.

ಇನ್ನು ಘಟನೆ ಕುರಿತು ಮಾತನಾಡಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಅವರು, ಆರೋಪಿಗಳನ್ನು ಸನ್ಮಾನಿಸಿದ್ದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ವಾಘ್ಮೋಡೆ ಹಾಗೂ ಯಡವೆ ಇನ್ನೂ ಆರೋಪಿಗಳು, ಅಪರಾಧಿಗಳಲ್ಲ. ಕಾನೂನು ತನ್ನ ಕೆಲಸ ಮಾಡಲಿದೆ. ಅವರನ್ನು ಹಿಂದೂ ಸಂಘಟನೆಯವರು ಸನ್ಮಾನಿಸಿರುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದರು.

ಸಮಾಜ ತಲೆತಗ್ಗಿಸುವ ಘಟನೆ: ಮಹೇಶ್‌ ಪತ್ತಾರ

ಗೌರಿ ಹಂತಕರನ್ನು ಸ್ವಾಗತಿಸಿ, ಸನ್ಮಾನಿಸಿರುವ ಘಟನೆ ಸಮಾಜ ತಲೆತಗ್ಗಿಸುವಂತದ್ದು. ಹತ್ಯೆಯ ಆರೋಪಿಗಳನ್ನು ಹಿರೋಗಳನ್ನಾಗಿ ಮಾಡಲಾಗಿದೆ. ಇದರಿಂದ ಸಮಾಜಕ್ಕೆ ಯಾವ ಸಂದೇಶ ನೀಡಿದಂತಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸರ್ಕಾರ ಈ ಘಟನೆಯ ಬಗ್ಗೆ ತನಿಖೆ ನಡೆಸಬೇಕು. ವಿಕೃತ ಮನಸ್ಸುಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಒತ್ತಾಯಿಸಿದ್ದರು.

ಜಾಮೀನು ಷರತ್ತು ಉಲ್ಲಂಘಿಸಿದರೆ ಕ್ರಮ: ಎಸ್ಪಿ

ಆರೋಪಿಗಳಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಇಬ್ಬರು ಆರೋಪಿಗಳನ್ನು ಸನ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಇಬ್ಬರು ಚಲನವಲನಗಳ ಮೇಲೆ ನಿಗಾ ಇಡಲಾಗಿದ್ದು, ಇತ್ತೀಚಿನ ಈ ಘಟನೆಯಲ್ಲಿ ಜಾಮೀನಿನ ಷರತ್ತು ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸುತ್ತೇವೆ. ಒಂದು ವೇಳೆ ಉಲ್ಲಂಘನೆಯಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಹಷಿಕೇಶ್‌ ಸೋನಾವಣೆ ತಿಳಿಸಿದ್ದಾರೆ.

Tags:    

Similar News