ಪರಪ್ಪನ ಅಗ್ರಹಾರ ಜೈಲಿನಿಂದ ಉಗ್ರ ನಾಸೀರ್ ಪರಾರಿಗೆ ಯತ್ನ: ಎನ್‌ಐಎ ತನಿಖೆಯಲ್ಲಿ ಬಯಲು?

ನಾಸೀರ್‌ನನ್ನು ಯಾವ ರೀತಿಯಲ್ಲಾದರೂ ಜೈಲಿನಿಂದ ಹೊರಗೆ ತರಲೇ ಬೇಕು ಎಂದು ಹಠಕ್ಕೆ ಬಿದ್ದು ಸಂಚು ರೂಪಿಸಲಾಗಿತ್ತು. ಕೆಲವು ಮುಸ್ಲಿಂ ಯುವಕರಿಂದ ಸಂಚು ರೂಪಿಸಲಾಗಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.;

Update: 2025-07-11 14:32 GMT

ರಾಷ್ಟ್ರೀಯ ತನಿಖಾ ದಳ (NIA) ಐವರು ಶಂಕಿತರನ್ನು ಬಂಧಿಸಿದ ಬೆನ್ನಲ್ಲೇ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ಟಿ. ನಾಸೀರ್‌ನನ್ನು ಜೈಲಿನಿಂದ ತಪ್ಪಿಸಲು ವಿದೇಶದಿಂದಲೇ ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ಸಂಚಿನಲ್ಲಿ ಜೈಲಿನ ಸಿಬ್ಬಂದಿ, ವೈದ್ಯರು ಮತ್ತು ಹೊರಗಿನವರು ಶಾಮೀಲಾಗಿರುವುದು ಎನ್‌ಐಎ ತನಿಖೆಯಿಂದ ಬಯಲಾಗಿದೆ.

ನಾಸೀರ್‌ನನ್ನು ಯಾವ ರೀತಿಯಲ್ಲಾದರೂ ಜೈಲಿನಿಂದ ಹೊರತರಲೇಬೇಕೆಂದು ಹಠಕ್ಕೆ ಬಿದ್ದ ವಿದೇಶಿ ಮೂಲದ ಸಂಚುಕೋರರು, ಎಎಸ್‌ಐ ಚಾಂದ್ ಪಾಷಾ ಸೇರಿದಂತೆ ಹಲವರನ್ನು ಬಳಸಿಕೊಂಡು ಆಸಕ್ತ ಮುಸ್ಲಿಂ ಯುವಕರ ತಂಡವನ್ನು ಕಟ್ಟಲು ಸೂಚಿಸಿದ್ದರು. ಅಷ್ಟೇ ಅಲ್ಲ, ಅದಕ್ಕೆ ಬೇಕಾದ ಆರ್ಥಿಕ ನೆರವನ್ನು ವಿದೇಶದಿಂದಲೇ ಒದಗಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ಎನ್‌ಐಎ ಬಲೆಗೆ ಬಿದ್ದ ಶಂಕಿತರು ಮತ್ತು ಆರೋಪಗಳು

ಶಂಕಿತರು ರೂಪಿಸಿದ ಸಂಚು ಕಾರ್ಯರೂಪಕ್ಕೆ ಬರುವ ಮುನ್ನವೇ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಇನ್ನೂ ಕೆಲವು ಶಂಕಿತರು ನಾಪತ್ತೆಯಾಗಿದ್ದಾರೆ ಎಂದು ಸಹ ಹೇಳಲಾಗಿದೆ. ಜೈಲಿನಲ್ಲಿರುವ ನಾಸೀರ್‌ನ ಬಹುತೇಕ ಸಹಚರರು ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾರೆ. ಹೀಗಾಗಿ, ಜೈಲಿನ ಸಿಬ್ಬಂದಿಯನ್ನೇ ಬಳಸಿಕೊಂಡು ಪರಾರಿಯಾಗಲು ಸಂಚು ರೂಪಿಸಲಾಗಿತ್ತು. ಜೊತೆಗೆ, ಹೊಸ ಯುವಕರನ್ನು ಒಟ್ಟುಗೂಡಿಸಿ ಹೊಸ ಸಂಚುಗಳನ್ನು ರೂಪಿಸಲು ಸಹ ಮುಂದಾಗಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.

ಬಂಧನಕ್ಕೊಳಗಾಗಿರುವವರಲ್ಲಿ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ಡಾ. ನಾಗರಾಜ್, ಸಶಸ್ತ್ರ ಪಡೆಯ ಎಎಸ್‌ಐ ಚಾಂದ್ ಪಾಷಾ ಮತ್ತು ಉಗ್ರ ಜುನೈದ್‌ನ ತಾಯಿ ಫಾತಿಮಾ ಸೇರಿದ್ದಾರೆ. ಇವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ಹಲವು ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ. ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಂಧಿತರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರಿಗೆ ಮೊಬೈಲ್ ಮತ್ತು ಇತರ ವಸ್ತುಗಳನ್ನು ಪೂರೈಸುತ್ತಿದ್ದ ಆರೋಪದಲ್ಲಿ ಡಾ. ನಾಗರಾಜ್ ಅವರನ್ನು ಬಂಧಿಸಲಾಗಿದೆ. ಚಾಂದ್ ಪಾಷಾ, ಉಗ್ರ ಟಿ. ನಾಸೀರ್‌ಗೆ ಜೈಲಿನಿಂದ ಹೊರಗಿನ ಮಾಹಿತಿ ಮತ್ತು ಹಣಕಾಸಿನ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಫಾತಿಮಾ, ಪರಾರಿಯಾದ ಉಗ್ರ ಜುನೈದ್‌ನ ತಾಯಿಯಾಗಿದ್ದು, ಟಿ. ನಾಸೀರ್‌ಗೆ ಮಾಹಿತಿ ರವಾನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಎಎಸ್‌ಐ ಚಾಂದ್ ಪಾಷಾ ವಿರುದ್ಧ ಇಲಾಖಾ ತನಿಖೆ

ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಸಶಸ್ತ್ರ ಪಡೆಯ ಎಎಸ್‌ಐ ಚಾಂದ್ ಪಾಷಾ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಸರ್ಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ದೇಶದ್ರೋಹಿಗಳಿಗೆ ಅಗತ್ಯ ಸೌಲಭ್ಯ, ಸಹಕಾರ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ದೇಶದ್ರೋಹಿಯಂತಹ ಕೃತ್ಯದಲ್ಲಿ ಪೊಲೀಸ್ ಅಧಿಕಾರಿಯೇ ಭಾಗಿಯಾಗಿದ್ದಾರೆ. ಸಾಮಾನ್ಯ ಆರೋಪಗಳು ಕೇಳಿಬಂದಾಗ ಅಧಿಕಾರಿಗಳನ್ನು ಅಮಾನತು ಮಾಡಲಾಗುತ್ತದೆ. ಆದರೆ, ಚಾಂದ್ ಪಾಷಾ ವಿಚಾರದಲ್ಲಿ ಇದು ಗಂಭೀರ ಕೃತ್ಯವಾಗಿದೆ. ಎನ್‌ಐಎ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅವರ ತನಿಖೆ ಮುಕ್ತಾಯಗೊಂಡ ಬಳಿಕ ಇಲಾಖೆಯ ಆಂತರಿಕ ತನಿಖೆ ನಡೆಯಲಿದೆ. ಆ ತನಿಖೆ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Tags:    

Similar News