
ಓಂ ಪ್ರಕಾಶ್
Om Prakash Murder Case |ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ; ಪತ್ನಿ ಪಲ್ಲವಿ ಪರಪ್ಪನ ಅಗ್ರಹಾರಕ್ಕೆ, ಮಗಳು ನಿಮ್ಹಾನ್ಸ್ಗೆ
ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅವರ ಪತ್ನಿ ಪಲ್ಲವಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ 39ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಮಗಳು ಕೃತಿಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ರಾಜ್ಯದಲ್ಲಿ ಸಂಚಲನ ಮೂಡಿಸಿರುವ ರಾಜ್ಯದ ನಿವೃತ್ತ ಡಿಜಿ, ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪಲ್ಲವಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ 39ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಸದ್ಯ ಆರೋಪಿ ಪಲ್ಲವಿ ಅವರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದ್ದು, ಮಗಳು ಕೃತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಓಂ ಪ್ರಕಾಶ್ ಅವರನ್ನು ಪತ್ನಿ ಪಲ್ಲವಿ ಅವರೇ ಇರಿದು ಹತ್ಯೆ ಮಾಡಿದ್ದು, ಮಗಳು ಕೃತಿ ಕೂಡ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಹೀಗಾಗಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಂತೆಯೇ ಪುತ್ರಿ ಕೃತಿ ವಿಚಾರಣೆ ವೇಳೆ ರಂಪಾಟ ನಡೆಸಿದ್ದು, ಮಹಿಳಾ ಸಬ್ ಇನ್ಸ್ಪೆಕ್ಟರ್ ಒಬ್ಬರಿಗೆ ಪರಚಿದ್ದಾರೆ ಎಂದು ಹೇಳಲಾಗುತ್ತಿದೆ. ಅವರಿಬ್ಬರೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ಪತ್ನಿ ಮತ್ತು ಮಗಳಿಗೆ ಯಾವ ಮಾನಸಿಕ ಕಾಯಿಲೆ?
ಓಂ ಪ್ರಕಾಶ್ ಪತ್ನಿ ಪಲ್ಲವಿ ಕಳೆದ 12 ವರ್ಷಗಳಿಂದ ಸ್ಕಿಜೋಫ್ರೇನಿಯಾ(ಭ್ರಮೆ) ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಅವರು ಆಗಾಗ ತಮ್ಮನ್ನು ಕೊಲೆ ಮಾಡಲು ಪತಿ ಮುಂದಾಗುತ್ತಿದ್ದಾರೆ ಎಂದು ಆತ್ಮೀಯರಲ್ಲಿ ದೂರುತ್ತಿದ್ದರು. ಪುತ್ರಿ ಸಹ ಹಲವು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳುತ್ತಿದ್ದಾರೆ. ಅದಕ್ಕಾಗಿ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಸಹ ಪಡೆಯುತ್ತಿದ್ದಾರೆ ಎನ್ನಲಾಗಿದೆ. ತಾಯಿ-ಮಗಳು ಇಬ್ಬರೂ ಒಂದೇ ಮಾದರಿಯ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರಿಗೆ ಇರುವ ಮಾನಸಿಕ ಕಾಯಿಲೆ ಯಾವುದು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಪತಿಯ ವಿರುದ್ಧ ವಾಟ್ಸಾಪ್ ಗ್ರೂಪ್‌ಗಳಿಗೆ ಸಾಲು ಸಾಲು ಸಂದೇಶ
ನನ್ನ ಪತಿ ಓಂ ಪ್ರಕಾಶ್ ಅವರ ಕೌಟುಂಬಿಕ ದೌರ್ಜನ್ಯಕ್ಕೆ ನಾನು ಮತ್ತು ನನ್ನ ಮಗಳು ಬಲಿಯಾಗುತ್ತಿದ್ದೇವೆ. ತಿನ್ನುವ ಆಹಾರ, ಕುಡಿಯುವ ನೀರು ವಿಷವಾಗಿದೆ. ನಾನು ಮತ್ತು ನನ್ನ ಮಗಳು ದಿನವೂ ಸಾಯುತ್ತಿದ್ದೇವೆ. ನನ್ನ ಮಗಳ ಲ್ಯಾಪ್‌ಟಾಪ್, ಮೊಬೈಲ್ ಸೇರಿ ಎಲ್ಲ ಡಿವೈಸ್‌ಗಳು ಹ್ಯಾಕ್ ಆಗಿವೆ. ಪತಿ ಓಂ ಪ್ರಕಾಶ್‌ನಿಂದ ನನಗೆ ಮತ್ತು ನನ್ನ ಮಗಳ ಜೀವಕ್ಕೆ ಅಪಾಯವಿದೆ. ನನ್ನ ಪತಿಗೆ ಉಗ್ರಗಾಮಿಗಳ ಸಂಪರ್ಕವಿದೆ. ಕೂಡಲೇ ಸುಮೋಟೋ ಕೇಸ್ ದಾಖಲಿಸಿ. ರಾಷ್ಟ್ರಪತಿ, ಪ್ರಧಾನಮಂತ್ರಿ, ಎನ್‌ಐಎ ಮುಖ್ಯಸ್ಥ, ಅಜಿತ್ ದೋವಲ್ ನಮಗೆ ಸಹಾಯ ಮಾಡಬೇಕು ಎಂದು ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಮೆಸೇಜ್ ಹಾಕುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.
ಪ್ರಕರಣವನ್ನು ಮಂಗಳವಾರ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ಕೊಲೆ ಮಾಡಿರುವುದಾಗಿ ಆರೋಪಿ ಪಲ್ಲವಿ ಹೇಳಿಕೊಂಡಿದ್ದರೂ, ತಮ್ಮ ಕ್ರೌರ್ಯದ ನೈಜ ಮಾಹಿತಿಯನ್ನು ಇನ್ನೂ ಹೇಳಿಕೆಗಳನ್ನು ನೀಡಿಲ್ಲ. ಬೆಂಗಳೂರು ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸರ್ಕಾರಿ ಗೌರವದೊಂದಿಗೆ ನಿವೃತ್ತ ಪೊಲೀಸ್ ಅಧಿಕಾರಿಯ ಅಂತ್ಯಕ್ರಿಯೆ ನೆರವೇರಿದೆ. ಮಗ ಕಾರ್ತಿಕೇಶ್ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ತಪ್ಪೊಪ್ಪಿಕೊಂಡಿದ್ದರು.