ಬೆಳಗಾವಿ ʼಗಾಂಧಿ ಭಾರತʼ | ಮಹಾತ್ಮರ ನೆನಪಿನ ಶತಮಾನೋತ್ಸವ ಸಂಭ್ರಮಕ್ಕೆ ಚಾಲನೆ
ಮಹಾತ್ಮಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನದ ಸವಿನೆನಪಿನಲ್ಲಿ ರಾಜ್ಯ ಸರ್ಕಾರ ಆಯೋಜಿಸಿರುವ ʼಗಾಂಧಿ ಭಾರತʼ ಕಾರ್ಯಕ್ರಮಕ್ಕೆ ಗುರುವಾರ ಬೆಳಿಗ್ಗೆ ವಿದ್ಯುಕ್ತ ಚಾಲನೆ ದೊರೆತಿದೆ.
ಬೆಳಗಾವಿಯಲ್ಲಿ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿಸಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮ ಅನುರಣಿಸುತ್ತಿದೆ. ಮಹಾತ್ಮಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನದ ಸವಿನೆನಪಿನಲ್ಲಿ ರಾಜ್ಯ ಸರ್ಕಾರ ಆಯೋಜಿಸಿರುವ ʼಗಾಂಧಿ ಭಾರತʼ ಕಾರ್ಯಕ್ರಮಕ್ಕೆ ಗುರುವಾರ ಬೆಳಿಗ್ಗೆ ವಿದ್ಯುಕ್ತ ಚಾಲನೆ ದೊರೆತಿದೆ.
ಕಾಂಗ್ರೆಸ್ ಅಧಿವೇಶನ ನಡೆದ ವಿಜಯನಗರ(ಈಗಿನ ಟಿಳಕವಾಡಿ) ವೀರಸೌಧದಲ್ಲಿ ಮಹಾತ್ಮ ಗಾಂಧೀಜಿ ಅವರ ನೂತನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣ್ಯರು ಅನಾವರಣಗೊಳಿಸಿದರು.
1924 ರಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಪ್ರಮುಖ ರೂವಾರಿಯಾಗಿದ್ದ ಕರ್ನಾಟಕದ ಸಿಂಹ ಎಂದೇ ಖ್ಯಾತರಾದ ಗಂಗಾಧರರಾವ್ ದೇಶಪಾಂಡೆ ಅವರ ಸ್ಮಾರಕ ಭವನವನ್ನು ಬೆಳಗಾವಿಯ ರಾಮತೀರ್ಥ ನಗರದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಅಂದಾಜು 15 ಗುಂಟೆ ಜಾಗದಲ್ಲಿ 1.58 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ಭವನ, ಗಂಗಾಧರ್ ರಾವ್ ದೇಶಪಾಂಡೆ ಪುತ್ಥಳಿ ಹಾಗೂ ಫೋಟೊ ಗ್ಯಾಲರಿ ನಿರ್ಮಿಸಲಾಗಿದೆ. ಇನ್ನು ಇಡೀ ಬೆಳಗಾವಿ ನಗರ ಕಾರ್ಯಕ್ರಮದ ಅಂಗವಾಗಿ ವಿದ್ಯುದ್ದೀಪಾಲಂಕಾರ, ಗಣ್ಯರ ಕಟೌಟ್ಗಳಿಂದ ರಾರಾಜಿಸುತ್ತಿದೆ.
ʼಗಾಂಧಿ ಭಾರತʼ ಕಾರ್ಯಕ್ರಮದ ಅಂಗವಾಗಿ ವಿವಿಧೆಡೆ ಖಾದಿ ಉತ್ಪನ್ನಗಳ ಪ್ರದರ್ಶನ, ಮಾರಾಟ ಮೇಳ, ಗುಡಿ ಕೈಗಾಡಿಕೆಗಳ ಪ್ರದರ್ಶನ, ಮಹಿಳಾ ಸ್ವಸಹಾಯ ಸಂಸ್ಥೆಗಳ ಉತ್ಪನ್ನಗಳ ಪ್ರದರ್ಶನ ಮೇಳಗಳನ್ನು ಆಯೋಜಿಸಲಾಗಿದೆ.
ಕಾಂಗ್ರೆಸ್ ಅಧಿವೇಶನ ನಡೆದ ವೀರಸೌಧದ ಸಮೀಪ ಕಾರ್ಯಕ್ರಮದ ಬೃಹತ್ ವೇದಿಕೆ ನಿರ್ಮಿಸಲಾಗಿದೆ.
ಕಾಂಗ್ರೆಸ್ ವರಿಷ್ಠರ ಆಗಮನ
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸ್ವಾಗತಿಸಿದರು.
ಸುವರ್ಣ ವಿಧಾನಸೌಧದ ಎದುರು ನಿರ್ಮಿಸಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಗಣ್ಯರು ಉದ್ಘಾಟಿಸಲಿದ್ದಾರೆ. ಈಗಾಗಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬುಧವಾರ ರಾತ್ರಿಯೇ ಬೆಳಗಾವಿಗೆ ಆಗಮಿಸಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಕಾರ್ಯಕಾರಿ ಸಮಿತಿಗೆ 400 ಜನರಿಗೆ ಆಹ್ವಾನ ನೀಡಲಾಗಿದೆ. ಈ ಸಭೆಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.
ಕಾಂಗ್ರೆಸ್ ಪಕ್ಷದ ನೀತಿ ನಿಲುವುಗಳ ಕುರಿತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ರಾಷ್ಟ್ರ ರಾಜಕಾರಣ ಮತ್ತು ರಾಜ್ಯದ ಪಕ್ಷದ ಆಡಳಿತದ ಹಿನ್ನೆಲೆಯಲ್ಲಿ ಈ ಕಾರ್ಯಕಾರಣಿ ಹೆಚ್ಚು ಮಹತ್ವ ಪಡೆದುಕೊಂಡಿದೆ.