ಆಳಂದಕ್ಕೂ ಮೊದಲು ಮಾಲೂರು ಬಗ್ಗೆ ಕಾಂಗ್ರೆಸ್‌ ಮಾತಾಡಲಿ: ಆರ್‌. ಅಶೋಕ್‌

ಬಿಹಾರದಲ್ಲಿ ಸೋಲುತ್ತೇವೆ ಎಂದು ಕಾಂಗ್ರೆಸ್‌ ನಾಯಕರಿಗೆ ಭ್ರಮನಿರಸನವಾಗಿದೆ. ಅದಕ್ಕಾಗಿ ಮೊದಲೇ ಆರೋಪ ಮಾಡುತ್ತಿದ್ದಾರೆ. ಚುನಾವಣಾ ಆಯೋಗದ 45 ದಿನ ಗಡುವು ನೀಡಿತ್ತು. ಆ ಸಮಯದಲ್ಲಿ ಇವರು ಏನು ಮಾಡುತ್ತಿದ್ದರು ಎಂದು ಆರ್‌. ಅಶೋಕ್‌ ಪ್ರಶ್ನಿಸಿದ್ದಾರೆ.

Update: 2025-09-18 14:46 GMT

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌

Click the Play button to listen to article

ಮಹದೇವಪುರ ಕ್ಷೇತ್ರದಲ್ಲಿಯೂ ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದರು. ಅದು ಸುಳ್ಳು ಎಂದು ಸಾಬೀತಾಗಿದೆ. ಈಗ ಆಳಂದ ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ತಿಳಿಸಿದರು.

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮ್ಮ ಮಾತಿನಿಂದಲೇ ಹೆಚ್ಚು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಚುನಾವಣಾ ಅಕ್ರಮದ ಬಗ್ಗೆ ಕಾಂಗ್ರೆಸ್‌ ನಾಯಕರು ದಾಖಲೆ ರಹಿತ ಆರೋಪ ಮಾಡುತ್ತಿದ್ದಾರೆ. ಎಲ್ಲದಕ್ಕಿಂತ ಮೊದಲು ಮಾಲೂರು ವಿಧಾನಸಭಾ ಕ್ಷೇತ್ರದ ಕುರಿತು ಪ್ರತಿಕ್ರಿಯೆ ನೀಡಲಿ ಎಂದು ಎಂದರು.

ಮಾಲೂರು ಕ್ಷೇತ್ರದಲ್ಲಿ ಮತ ಕಳ್ಳತನ ನಡೆದಿದೆ ಎಂದು ಸಾಬೀತಾಗಿದ್ದು, ಕಾಂಗ್ರೆಸ್‌ ಶಾಸಕರ ಸದಸ್ಯತ್ವವೇ ರದ್ದಾಗಿದೆ. ಇಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಪ್ರಮಾಣಪತ್ರ ನೀಡಿದ್ದರು. ಕೋಲಾರ ಜಿಲ್ಲಾಧಿಕಾರಿ ತಪ್ಪು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಬಗ್ಗೆ ಕಾಂಗ್ರೆಸ್‌ ಶಾಸಕರು ಏಕೆ ಮಾತಾಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಬಿಹಾರದಲ್ಲಿ ಸೋಲುತ್ತೇವೆ ಎಂದು ಕಾಂಗ್ರೆಸ್‌ ನಾಯಕರಿಗೆ ಭ್ರಮನಿರಸನವಾಗಿದೆ. ಅದಕ್ಕಾಗಿ ಮೊದಲೇ ಆರೋಪ ಮಾಡುತ್ತಿದ್ದಾರೆ. ಚುನಾವಣಾ ಆಯೋಗದ 45 ದಿನ ಗಡುವು ನೀಡಿತ್ತು. ಆ ಸಮಯದಲ್ಲಿ ಇವರು ಏನು ಮಾಡುತ್ತಿದ್ದರು. ದಾಖಲೆ ಇದ್ದರೆ ಆಗಲೇ ಕೋರ್ಟ್‌ಗೆ ಹೋಗಬೇಕಿತ್ತು ಎಂದು ಹೇಳಿದರು.

ʼಇಂಡಿʼ ಕೂಟ ಮುಳುಗುವ ಹಡಗು

ಹಿಟ್‌ ಆಂಡ್‌ ರನ್‌ ರೀತಿಯಲ್ಲಿ ಆರೋಪ ಮಾಡುವುದು ಕಾಂಗ್ರೆಸ್‌ನ ಜಾಯಮಾನ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಂಸತ್ತಿನಲ್ಲೇ ಈ ಬಗ್ಗೆ ಮಾತನಾಡಬೇಕಿತ್ತು. ದಾಖಲೆ ಇದ್ದರೆ ಚುನಾವಣಾ ಆಯೋಗಕ್ಕೆ ನೀಡಬೇಕಿತ್ತು. ಆಯೋಗವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಈ ರೀತಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್‌ ಸರಿಯಾಗಿ ಉಳಿದಿದೆ. ತೆಲಂಗಾಣದಲ್ಲಿ ಮುಖ್ಯಮಂತ್ರಿಯೇ ಪಾಪರ್‌ ಆಗಿದ್ದೇವೆಂದು ಹೇಳಿದ್ದಾರೆ. ತಮಿಳುನಾಡಿನಲ್ಲೂ ಸಮೀಕರಣ ಬದಲಾಗಿದ್ದು, ʼಇಂಡಿʼ ಕೂಟ ಮುಳುಗುತ್ತಿರುವ ಹಡಗಾಗಿದೆ ಎಂದರು.

ಕಾಂಗ್ರೆಸ್‌ಗೆ ಮತ ಬ್ಯಾಂಕ್‌ ಮುಖ್ಯ

ಬಾಂಗ್ಲಾದಿಂದ ಬಂದು ಇಲ್ಲಿ ಮತದಾನ ಮಾಡುತ್ತಾರೆ. ಅಂತವರಿಗೆ ಮತದಾನ ಗುರುತಿನ ಚೀಟಿ ನೀಡಿದವರು ಯಾರು? ದೇಶದ ಭದ್ರತೆಯ ದೃಷ್ಟಿಯಿಂದ ಅಂತವರನ್ನು ವಾಪಸ್‌ ಕಳಿಸಬೇಕು. ಆದರೆ ಕಾಂಗ್ರೆಸ್‌ಗೆ ದೇಶದ ಭದ್ರತೆಗಿಂತ ಹೆಚ್ಚಾಗಿ ಮತಬ್ಯಾಂಕ್‌ ಮುಖ್ಯ. ಪಾಕಿಸ್ತಾನ, ಬಾಂಗ್ಲಾದವರು ಆ ದೇಶದಲ್ಲೂ ಮತ ಹಾಕಿ, ಇಲ್ಲೂ ಬಂದು ಮತ ಚಲಾಯಿಸುತ್ತಾರೆ. ಆದ್ದರಿಂದಲೇ ಒಬ್ಬರಿಗೆ ಒಂದೇ ಓಟು ಎಂಬ ಕ್ರಮವನ್ನು ಕೇಂದ್ರ ಸರ್ಕಾರ ಜಾರಿ ಮಾಡುತ್ತಿದೆ ಎಂದು ತಿಳಿಸಿದರು.

ಸಿಲಿಕಾನ್‌ ವ್ಯಾಲಿಯಲ್ಲ, ಗುಂಡಿಗಳ ವ್ಯಾಲಿ

ಡಿಸಿಎಂ ಡಿ.ಕೆ. ಶಿವಕುಮಾರ್‌ ರಸ್ತೆ ಗುಂಡಿ ಮುಚ್ಚುತ್ತೇವೆ ಎಂದು ಹಲವು ಬಾರಿ ಹೇಳಿದ್ದಾರೆ. ಹಣ ಇಲ್ಲದೆ ಗುಂಡಿ ಮುಚ್ಚಿ ಎಂದರೆ ಯಾರೂ ಮುಚ್ಚುವುದಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ 8,000 ಕೋಟಿ ರೂ. ಅನುದಾನವನ್ನು ಬಿಬಿಎಂಪಿಗೆ ನೀಡಿತ್ತು. ಬಿಡಿಎಯಿಂದ ವಿಶೇಷವಾಗಿ 6,000 ಕೋಟಿ ರೂ. ನೀಡಲಾಗಿತ್ತು. ಎರಡೂವರೆ ವರ್ಷದಲ್ಲಿ ಅನುದಾನ ಬಿಡುಗಡೆ ಮಾಡದೆ ರಸ್ತೆಗಳು ಗುಂಡಿ ಬಿದ್ದಿವೆ. ಎಲ್ಲಾ ಗುಂಡಿಗಳನ್ನು ನವೆಂಬರ್‌ ಒಳಗೆ ಮುಚ್ಚುತ್ತೇವೆ ಎಂದು ಡಿಸಿಎಂ ಹೇಳಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಇದು ಸಿಲಿಕಾನ್‌ ವ್ಯಾಲಿ ಅಲ್ಲ, ಗುಂಡಿಗಳ ವ್ಯಾಲಿ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:    

Similar News