ವಂಚನೆ ಪ್ರಕರಣ | ಗೋಪಾಲ್‌ ಜೋಶಿ ವಿರುದ್ಧದ ಪ್ರಕರಣ ಹಿಂಪಡೆದ ದೂರುದಾರೆ

ನನಗೆ ವಂಚನೆಯಾಗಿದ್ದರಿಂದ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಯಿತು. ಈಗ ಪ್ರಕರಣ ಬಗೆಹರಿದಿದೆ. ಹಾಗಾಗಿ ಪ್ರಕರಣ ವಾಪಸ್ ಪಡೆಯುತ್ತೇನೆ ಎಂದು ಗೋಪಾಲ್‌ ಜೋಶಿ ವಿರುದ್ಧ ದೂರು ದಾಖಲಿಸಿದ್ದ ಸುನೀತಾ ಚವ್ಹಾಣ್‌ ಹೇಳಿದ್ದಾರೆ

Update: 2024-10-21 12:12 GMT

ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರ ಸಹೋದರ ಗೋಪಾಲ್‌ ಜೋಶಿ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣವನ್ನು ದೂರುದಾರರಾದ ಸುನೀತಾ ಚವ್ಹಾಣ್‌ ಹಿಂಪಡೆದಿದ್ದಾರೆ.

ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಿಸುವ ಆಮಿಷ ತೋರಿ 2 ಕೋಟಿ ರೂ. ಪಡೆದು ವಂಚಿದ್ದ ಬಗ್ಗೆ ನಾಗಠಾಣ ಮಾಜಿ ಶಾಸಕ ದೇವಾನಂದ್‌ ಫೂಲ್‌ ಸಿಂಗ್‌ ಚವ್ಹಾಣ್‌ ಅವರ ಪತ್ನಿ ಸುನೀತಾ ಚವ್ಹಾಣ್ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನನ್ವಯ ಆರೋಪಿ ಗೋಪಾಲ್ ಜೋಶಿ, ಅವರ ಪುತ್ರ ಅಜಯ್ ಜೋಶಿ, ಸೋದರಿ ವಿಜಯಲಕ್ಷ್ಮಿ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಕಾಂಗ್ರೆಸ್‌ಗೆ ಅಸ್ತ್ರವಾಗಿ ಪರಿಣಮಿಸಿತ್ತು. ಆದರೆ, ಇದೀಗ ಸುನೀತಾ ಚವ್ಹಾಣ್‌ ದಿಢೀರನೇ ಪ್ರಕರಣ ವಾಪಸ್‌ ಪಡೆದಿರುವುದು ಕುತೂಹಲ ಮೂಡಿಸಿದೆ. ಈ ಕುರಿತು ʼದ ಫೆಡರಲ್‌ ಕರ್ನಾಟಕʼ ಸುನೀತಾ ಚವ್ಹಾಣ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಕರೆ ಸ್ವೀಕರಿಸಲಿಲ್ಲ.

ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಸುನೀತಾ ಚವ್ಹಾಣ್‌ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಷಿ ತುಂಬಾ ಒಳ್ಳೆಯವರು. ಅವರ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ. ದ್ವೇಷವೂ ಇಲ್ಲ. ನನಗೆ ವಂಚನೆಯಾಗಿದ್ದರಿಂದ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಯಿತು. ಈಗ ಪ್ರಕರಣ ಬಗೆಹರಿದಿದೆ. ಹಾಗಾಗಿ ಪ್ರಕರಣ ವಾಪಸ್ ಪಡೆಯುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಬಸವೇಶ್ವರ ನಗರ ಪೊಲೀಸರು ಈಗಾಗಲೇ ವಂಚನೆ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ದೂರುದಾರರು ನ್ಯಾಯಾಲಯದಲ್ಲಿ ರಾಜಿ ಅರ್ಜಿ ಸಲ್ಲಿಸಿ ದೂರು ಹಿಂಪಡೆಯಲು ಅವಕಾಶವಿದೆ. ಸೆಕ್ಷನ್ 164 CrPC ಅಡಿಯಲ್ಲಿ ಆಕೆಯ ಹೇಳಿಕೆ ದಾಖಲಿಸಿಕೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ಬಳಿಕ ಪ್ರಲ್ಹಾದ ಜೋಶಿ ಅವರಿಂದ ಬಿಜೆಪಿ ವರಿಷ್ಠರು ವಿವರಣೆ ಕೇಳಿದ್ದರು. ಇದಕ್ಕೆ ಸ್ಪಷ್ಟೀಕರಣ ನೀಡಿದ್ದ ಜೋಶಿ ಅವರು ನನಗೆ ಸಹೋದರಿಯೇ ಇಲ್ಲ. ಗೋಪಾಲ್‌ ಜೋಶಿ ಅವರೊಂದಿಗೆ ಸಂಬಂಧ ಕಡಿದುಕೊಂಡು 32 ವರ್ಷಗಳಾಗಿದೆ. ಅವರಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಅನಗತ್ಯವಾಗಿ ನನ್ನ ಹೆಸರನ್ನು ಅವರೊಂದಿಗೆ ಥಳಕು ಹಾಕಲಾಗುತ್ತಿದೆ ಎಂದು ಹೇಳಿದ್ದರು.

Tags:    

Similar News