ರೈತರು ಸಂಕಷ್ಟದಲ್ಲಿರುವಾಗ ದಸರಾ ಸಂತೋಷ ಕೂಟ ಬೇಕಿತ್ತಾ?; ಸಿಎಂ ವಿರುದ್ಧ ಅಶೋಕ್‌ ವಾಗ್ದಾಳಿ

ನೆರೆ ಪರಿಸ್ಥಿತಿಯಲ್ಲಿ ಎಷ್ಟು ಮನೆಗಳು ಬಿದ್ದಿವೆ ಎಂಬುದು ಮುಖ್ಯಮಂತ್ರಿ ಬಾಯಲ್ಲಿ ಬರುತ್ತಿಲ್ಲ. ಮಳೆ ಪೀಡಿತ ಪ್ರದೇಶಗಳ ರೈತರು ಹಬ್ಬ ಆಚರಿಸದೇ ಬೀದಿಯಲ್ಲಿದ್ದರೆ ಸಿಎಂ ಸಂತೋಷಕೂಟದಲ್ಲಿ ಭಾಗಿಯಾಗಿರುವುದು ಎಷ್ಟು ಸರಿ ಎಂದು ಆರ್‌. ಅಶೋಕ್‌ ಪ್ರಶ್ನಿಸಿದ್ದಾರೆ.

Update: 2025-10-03 09:23 GMT
ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌
Click the Play button to listen to article

ಕಲ್ಯಾಣ ಕರ್ನಾಟಕದಲ್ಲಿ ರೈತರು ಅತಿವೃಷ್ಟಿಯಿಂದಾಗಿ ಸಂಕಷ್ಟದಲ್ಲಿದ್ದರೆ, ಸಿಎಂ ಸಿದ್ದರಾಮಯ್ಯ ಅವರು ದಸರಾ ಸಂತೋಷ ಕೂಟದಲ್ಲಿ ಭಾಗಿಯಾಗಿರುವುದು ನಾಚಿಕೆಗೇಡು. ಅವರಿಗೆ ರೈತರ ಕಷ್ಟ ಕಾಣಿಸುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶುಕ್ರವಾರ ಬೆಳಗಾವಿಯ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಸಿಎಂ ಹಾಗೂ ಸಚಿವರು ಕೇವಲ ಅಧಿಕಾರ ಕಿತ್ತಾಟದಲ್ಲಿ ತೊಡಗಿದ್ದಾರೆ. ಎರಡೂವರೆ ವರ್ಷದಲ್ಲಿ ನಿರಂತರವಾಗಿ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲೇ ಕಚ್ಚಾಟ ನಡೆಯುತ್ತಿದೆ.  ಡಿ.ಕೆ. ಶಿವಕುಮಾರ್, ಡಾ.ಜಿ. ಪರಮೇಶ್ವರ್ ಹಾಗೂ ಸತೀಶ್‌ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾನ್ಯ ಜ್ಞಾನ ಮತ್ತು ಜವಾಬ್ದಾರಿ ಇದ್ದಿದ್ದರೆ ಮೊದಲು ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳಿಗೆ ತೆರಳಬೇಕಿತ್ತು, ಜನರ ಕಷ್ಟಗಳನ್ನು ಆಲಿಸಬೇಕಾಗಿತ್ತು ಎಂದು ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರಿಗೆ ಜವಾಬ್ದಾರಿ ಇಲ್ಲ. ಜನರ ಪಾಲಿಗೆ ರಾಜ್ಯ ಸರ್ಕಾರ ಇದ್ದು ಇಲ್ಲದಂತಾಗಿದೆ. ಮಳೆಗೆ ಎಷ್ಟು ಮನೆಗಳು ಬಿದ್ದಿವೆ ಎಂಬುದು ಮುಖ್ಯಮಂತ್ರಿ ಬಾಯಲ್ಲಿ ಬರುತ್ತಿಲ್ಲ. ಅತಿವೃಷ್ಟಿ ಪೀಡಿತ ಪ್ರದೇಶಗಳ ರೈತರು ಹಬ್ಬ ಆಚರಿಸದೇ ಬೀದಿಯಲ್ಲಿದ್ದಾರೆ. ಆದರೆ, ಸರ್ಕಾರಕ್ಕೆ ಇದರ ಬಗ್ಗೆ ಕಾಳಜಿ ಇಲ್ಲ. ಬಿಜೆಪಿ ಸರ್ಕಾರದ ಮೇಲೆ ಮಾಡಿದ್ದ ಶೇ 40 ಕಮಿಷನ್ ಆರೋಪ ಸಾಬೀತಾಗಿಲ್ಲ. ಶೇ.40 ಕ್ಕಿಂತ ದುಪ್ಪಟ್ಟು ಕಮಿಷನ್ ಪಡೆಯುವ ಸರ್ಕಾರ ಇದಾಗಿದೆ ಎಂದು ಗುತ್ತಿಗೆದಾರರೇ ಆರೋಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಡಿಕೆಶಿಗೆ ಸಿಎಂ ಆಗುವ ಅರ್ಹತೆ ಇದೆ

ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ. ಕಳೆದ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಅವರ ಶ್ರಮವೂ ಇದೆ ಎಂದು ಅವರದ್ದೇ ಪಕ್ಷದ ಶಾಸಕ ಡಾ.ರಂಗನಾಥ್, ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದಾರೆ. ಯಾವಾಗ ಅಧಿಕಾರ ಹಸ್ತಾಂತರ ಮಾಡುತ್ತೀರಿ ಎಂಬ ಪ್ರಶ್ನೆಯನ್ನೂ ಕೇಳುತ್ತಿದ್ದಾರೆ ಎಂದರು. 

ಜಂಟಿ ಸಮೀಕ್ಷೆ ನಂತರ ಬೆಳೆ ಪರಿಹಾರ

ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ರಾಜ್ಯದಲ್ಲಿ ಸುಮಾರು 10ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ. ರೈತರಿಗೆ ಸಮೀಕ್ಷೆ ನಡೆಸಿ ಬೆಳೆ ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಕಲಬುರಗಿಯಲ್ಲಿ ವೈಮಾನಿಕ ಸಮೀಕ್ಷೆ ವೇಳೆ ತಿಳಿಸಿದ್ದರು.

ಎನ್ ಡಿಆರ್‌ಎಫ್ ಮಾರ್ಗಸೂಚಿ ದರದಂತೆ ರಾಜ್ಯ ಸರ್ಕಾರ ಖುಷ್ಕಿ ಜಮೀನಿಗೆ ತಲಾ ಹೆಕ್ಟೇರ್ ಗೆ 17,000 ರೂ, ನೀರಾವರಿ ಜಮೀನಿಗೆ 17,500 ರೂ. ಮತ್ತು ಬಹುಬೆಳೆ ಬೆಳೆಯುವ ಜಮೀನಿಗೆ 31ಸಾವಿರ ರೂ. ಗಳ ಪರಿಹಾರ ನೀಡಲಾಗುವುದು. ಆದರೆ, ಹೆಚ್ಚಿನ ಮಳೆಯಿರುವುದರಿಂದ ಈಗ ಬೆಳೆಹಾನಿಯ ಜಂಟಿ ಸಮೀಕ್ಷೆ ಸಾಧ್ಯವಾಗುತ್ತಿಲ್ಲ. ಸಮೀಕ್ಷೆ ನಡೆಸಿದ ನಂತರ ಬೆಳೆಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್‌ಗೂ ಪರಿಹಾರ ನೀಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದರು.

ವೈಮಾನಿಕ ಸಮೀಕ್ಷೆ ನಡೆಸಿದ್ದ ಸಿಎಂ

ಇತ್ತೀಚೆಗೆ ಭಾರೀ ಮಳೆಯ ಪರಿಣಾಮವಾಗಿ ಭೀಮಾ ಮತ್ತು ಕೃಷ್ಣಾ ನದಿಗಳು ಉಕ್ಕಿ ಹರಿದ ಪರಿಣಾಮ ಕಲ್ಯಾಣ ಕರ್ನಾಟಕದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.30ರಂದು ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು.

ಕಲಬುರ್ಗಿ ವಿಮಾನ ನಿಲ್ದಾಣದಲ್ಲೇ ಕಲಬುರ್ಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ ಅಧಿಕಾರಿಗಳ ಜೊತೆ ಪ್ರಾಥಮಿಕ ಸಭೆ ನಡೆಸಿದ್ದ ಸಿಎಂ, ಪ್ರವಾಹದಿಂದ ಉಂಟಾದ ಹಾನಿ ಹಾಗೂ ತುರ್ತು ಕ್ರಮಗಳ ಕುರಿತು ವಿವರವಾದ ಮಾಹಿತಿ ಪಡೆದುಕೊಂಡಿದ್ದರು.

Tags:    

Similar News