ಡಿಸಿಸಿ ಬ್ಯಾಂಕ್‌ ಚುನಾವಣೆ | ಸತೀಶ್‌ ಜಾರಕಿಹೊಳಿಗೆ ಬೆಂಬಲ;  ಸಚಿವರ ಎದುರೇ ಪತಿಗೆ ಕಪಾಳಮೋಕ್ಷ ಮಾಡಿದ ಪತ್ನಿ
x

ಡಿಸಿಸಿ ಬ್ಯಾಂಕ್‌ ಚುನಾವಣೆ | ಸತೀಶ್‌ ಜಾರಕಿಹೊಳಿಗೆ ಬೆಂಬಲ; ಸಚಿವರ ಎದುರೇ ಪತಿಗೆ ಕಪಾಳಮೋಕ್ಷ ಮಾಡಿದ ಪತ್ನಿ

ಮದಿಹಳ್ಳಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದಲ್ಲಿ ಮಾರುತಿ ಸನದಿ ಸದಸ್ಯರು. ಕಳೆದ ಒಂದು ವಾರದಿಂದ ದಿಢೀರ್‌ ನಾಪತ್ತೆಯಾಗಿದ್ದರು. ಸೋಮವಾರ ಸಚಿವ ಸತೀಶ್‌ ಜಾರಕಿಹೊಳಿ ಅವರು ಆಯೋಜಿಸಿದ್ದ ಸಭೆಗೆ ದಿಢೀರ್‌ ಆಗಮಿಸಿದ್ದರು.


ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಬಣವನ್ನು ಬೆಂಬಲಿಸಿದ್ದಕ್ಕೆ ಸಿಟ್ಟಿಗೆದ್ದ ಮಹಿಳೆಯೊಬ್ಬರು ಸಚಿವರ ಎದುರಲ್ಲೇ ತನ್ನ ಪತಿಯ ಕೊರಳಪಟ್ಟಿ ಹಿಡಿದು ಕಪಾಳ ಮೋಕ್ಷ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಆಯ್ಕೆಗೆ ಮತ ಚಲಾಯಿಸುವ ಹಕ್ಕು ಪಿಕೆಪಿಎಸ್‌ ಸದಸ್ಯರಿಗಿದೆ. ಸದಸ್ಯರ ಬೆಂಬಲ ಪಡೆಯುವ ಸಲುವಾಗಿ ಗ್ರಾಮದಲ್ಲಿ ಸತೀಶ್‌ ಜಾರಕಿಹೊಳಿ ಅವರು ಸಭೆ ಆಯೋಜಿಸಿದ್ದರು. ಈ ವೇಳೆ ಪತಿ-ಪತ್ನಿ ನಡುವಿನ ಗಲಾಟೆ ರಾಜಕೀಯ ಸ್ವರೂಪ ಪಡೆದು, ಚರ್ಚೆಗೆ ಕಾರಣವಾಗಿದೆ.

ಘಟನೆ ಹಿನ್ನೆಲೆ ಏನು?

ಮದಿಹಳ್ಳಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದಲ್ಲಿ ಮಾರುತಿ ಸನದಿ ಸದಸ್ಯರು. ಕಳೆದ ಒಂದು ವಾರದಿಂದ ದಿಢೀರ್‌ ನಾಪತ್ತೆಯಾಗಿದ್ದರು. ಸೋಮವಾರ ಸಚಿವ ಸತೀಶ್‌ ಜಾರಕಿಹೊಳಿ ಅವರು ಆಯೋಜಿಸಿದ್ದ ಸಭೆಗೆ ದಿಢೀರ್‌ ಆಗಮಿಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪತ್ನಿಯು ತನ್ನ ಗಂಡನ ಕೊರಳಪಟ್ಟಿ ಹಿಡಿದು ಎಳೆದಾಡಿದ್ದಾರೆ. ದಿಢೀರ್‌ ನಡೆದ ಘಟನೆಯಿಂದ ಸಚಿವ ಸತೀಶ್ ಜಾರಕಿಹೊಳಿ ಅವರೇ ಕೆಲ ಕಾಲ ಕಕ್ಕಾಬಿಕ್ಕಿಯಾದರು.

ಬಳಿಕ ಸ್ಥಳೀಯರು ಜಗಳ ಬಿಡಿಸಿದರು. ಮತ್ತೆ ಮಾರುತಿ ಸನದಿ ಅವರನ್ನು ಜಾರಕಿಹೊಳಿ ಬೆಂಬಲಿಗರು ತಮ್ಮೊಂದಿಗೆ ಕರೆದೋಯ್ದರು. ತಮ್ಮ ಪತಿಯನ್ನು ಅಪಹರಣ ಮಾಡಿದ್ದಾರೆ ಎಂದು ಮಾರುತಿ ಸನದಿ ಪತ್ನಿ ಆರೋಪಿಸಿದ ಹಿನ್ನೆಲೆಯಲ್ಲಿ ಎರಡು ರಾಜಕೀಯ ಗುಂಪುಗಳ ಮಧ್ಯೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿತ್ತು.

ಕತ್ತಿ ವಸರ್ಸ್‌ ಜಾರಕಿಹೊಳಿ ಕುಟುಂಬ

ಹುಕ್ಕೇರಿ ತಾಲೂಕಿನಲ್ಲಿ ಸ್ಥಳೀಯ ಆಡಳಿತದಿಂದ ಹಿಡಿದು ಲೋಕಸಭೆ ಚುನಾವಣೆವರೆಗೂ ದಿವಂಗತ ಉಮೇಶ್‌ ಕತ್ತಿ ಹಾಗೂ ಜಾರಕಿಹೊಳಿ ಕುಟುಂಬದ ನಡುವೆ ತೀವ್ರ ಪೈಫೋಟಿ ನಡೆಯುತ್ತಿದೆ.

ಕತ್ತಿ ಕುಟುಂಬದ ಬೆಂಬಲದಿಂದ ಪಿಕೆಪಿಎಸ್‌ ಆಯ್ಕೆಯಾದ ಮಾರುತಿ ಸನದಿಯನ್ನು ಸತೀಶ್‌ ಜಾರಕಿಹೊಳಿ ಬೆಂಬಲಿಗರು ಅಪಹರಿಸಿ, ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದಾರೆ ಎಂಬುದು ಗಲಾಟೆಗೆ ಕಾರಣವಾಗಿದೆ.

ಮದಿಹಳ್ಳಿ ಗ್ರಾಮದ ಗಲಾಟೆಯ ವಿಷಯ ತಿಳಿಯುತ್ತಿದ್ದಂತೆ ದೌಡಾಯಿಸಿದ ಮಾಜಿ ಸಂಸದ ರಮೇಶ್ ಕತ್ತಿ ಅವರು ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ತೀವ್ರಗೊಂಡು ಎರಡೂ ಗುಂಪುಗಳು ಪರಸ್ಪರ ಘೋಷಣೆ ಕೂಗಿದಾಗ ವಾಗ್ವಾದ ನಡೆಯಿತು. ಆಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಗಲಾಟೆ ಹಿನ್ನೆಲೆಯಲ್ಲಿ ಸಭೆ ಮುಂದೂಡಲಾಯಿತು.

ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಡಿಎಆರ್ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

Read More
Next Story