
ದಸರಾ ಉತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಪಾಲ್ಗೊಂಡಿದ್ದರು.
ಜನರ ಆಶೀರ್ವಾದದಿಂದ ಸಿಎಂ ಆಗಿ 8ನೇ ಬಾರಿ ದಸರಾದಲ್ಲಿ ಭಾಗಿ: ಸಿದ್ದರಾಮಯ್ಯ
ಉತ್ಸವ ಯಾವುದೇ ಅಡಚಣೆಗಳಿಲ್ಲದೇ ಯಶಸ್ವಿಯಾಗಿ ನಡೆದಿರುವುದು ಸಂತಸ ತಂದಿದೆ. ಇದಕ್ಕಾಗಿ ಶ್ರಮಿಸಿದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದು ಸಿಎಂ ತಿಳಿಸಿದರು.
ದಸರಾ ಜನರ ಹಬ್ಬವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದಾಗ ಮಾತ್ರ ದಸರಾ ಆಯೋಜನೆ ಯಶಸ್ವಿಯಾಗುತ್ತದೆ. ಈ ನಾಡಹಬ್ಬಕ್ಕೆ ಪ್ರವಾಸಿಗರನ್ನು ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ದಸರಾ ಹಬ್ಬವು ಹನ್ನೊಂದು ದಿನಗಳ ಕಾಲ ನಡೆದಿದ್ದು, ನಾಡಿನ ಜನತೆಗೆ ದಸರಾ ಮಹೋತ್ಸವದ ಶುಭಾಶಯಗಳನ್ನು ಕೋರುತ್ತೇನೆ. ಮೈಸೂರು ದಸರಾ ವಿಶ್ವವಿಖ್ಯಾತವಾಗಿದ್ದು, ಹೆಚ್ಚಿನ ಪ್ರವಾಸಿಗರನ್ನು ಸ್ವಾಗತಿಸುತ್ತೇನೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ , ಎಲ್ಲ ದಸರಾ ಉತ್ಸವಗಳಲ್ಲಿ ಭಾಗಿಯಾಗಿದ್ದೇನೆ. ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ 8 ಬಾರಿ ದಸರಾದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿದ್ದು, ಅತ್ಯಂತ ಸಂತೋಷವನ್ನು ತಂದಿದೆ ಎಂದರು.
ದಸರಾ ಯಶಸ್ವೀ ಆಯೋಜನೆ
ದಸರಾ ಜನರ ಹಬ್ಬ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದಾಗ ಮಾತ್ರ ದಸರಾ ಆಯೋಜನೆ ಯಶಸ್ವಿಯಾಗುತ್ತದೆ. ಉತ್ಸವವನ್ನು ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಅಭಿನಂದಿಸುತ್ತೇನೆ, ಉತ್ಸವ ಯಾವುದೇ ಅಡಚಣೆಗಳಿಲ್ಲದೇ ಯಶಸ್ವಿಯಾಗಿ ನಡೆದಿರುವುದು ಸಂತಸ ತಂದಿದೆ. ಇದಕ್ಕಾಗಿ ಶ್ರಮಿಸಿದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು.
ಜಂಟಿ ಸಮೀಕ್ಷೆ ನಂತರ ಬೆಳೆಪರಿಹಾರ
ಈ ವರ್ಷ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿದ್ದು, ಎಲ್ಲಾ ಜಲಾಶಯಗಳು ತುಂಬಿ, ಉತ್ತಮ ಬೆಳೆಯೂ ಆಗುತ್ತಿದೆ. ಆದರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದ ರಾಜ್ಯದಲ್ಲಿ ಸುಮಾರು 10ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ. ರೈತರಿಗೆ ಸಮೀಕ್ಷೆ ನಡೆಸಿ ಬೆಳೆಪರಿಹಾರ ನೀಡುವುದಾಗಿ ಕಲಬುರಗಿಯ ಭೇಟಿ ಸಂದರ್ಭದಲ್ಲಿ ತಿಳಿಸಲಾಗಿದ್ದು, ಸರ್ಕಾರ ಮತ್ತು ಎನ್ ಡಿಆರ್‌ಎಫ್ ಸೇರಿದಂತೆ ಖುಷ್ಕಿ ಜಮೀನಿನ ತಲಾ ಹೆಕ್ಟೇರ್ ಗೆ 17,000 ರೂ, ನೀರಾವರಿ ಜಮೀನಿಗೆ 17,500 ರೂ. ಮತ್ತು ಬಹುಬೆಳೆ ಬೆಳೆಯುವ ಜಮೀನಿಗೆ 31ಸಾವಿರ ರೂ. ಗಳ ಪರಿಹಾರ ನೀಡಲಾಗುವುದು. ಆದರೆ ಹೆಚ್ಚಿನ ಮಳೆಯಿರುವುದರಿಂದ ಬೆಳೆಹಾನಿಯ ಜಂಟಿಸಮೀಕ್ಷೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸಮೀಕ್ಷೆಯ ನಂತರ ಬೆಳೆಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್‌ಗೂ ಪರಿಹಾರ ನೀಡಲಾಗುವುದು ಎಂದರು.
ವೈಮಾನಿಕ ಸಮೀಕ್ಷೆ ನಡೆಸಿದ್ದ ಸಿಎಂ
ಇತ್ತೀಚೆಗೆ ಭಾರೀ ಮಳೆಯ ಪರಿಣಾಮವಾಗಿ ಭೀಮಾ ಮತ್ತು ಕೃಷ್ಣಾ ನದಿಗಳು ಉಕ್ಕಿ ಹರಿದ ಪರಿಣಾಮ ಕಲ್ಯಾಣ ಕರ್ನಾಟಕದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.30ರಂದು ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು.
ಕಲಬುರ್ಗಿ ವಿಮಾನ ನಿಲ್ದಾಣದಲ್ಲೇ ಕಲಬುರ್ಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ ಅಧಿಕಾರಿಗಳ ಜೊತೆ ಪ್ರಾಥಮಿಕ ಸಭೆ ನಡೆಸಿದ್ದ ಸಿಎಂ, ಪ್ರವಾಹದಿಂದ ಉಂಟಾದ ಹಾನಿ ಹಾಗೂ ತುರ್ತು ಕ್ರಮಗಳ ಕುರಿತು ವಿವರವಾದ ಮಾಹಿತಿ ಪಡೆದುಕೊಂಡಿದ್ದರು.