
ಸಾಂದರ್ಭಿಕ ಚಿತ್ರ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ: ಜನಸಾಗರದ ನಡುವೆ ನೂಕಾಟ, ಮಹಿಳೆ ಅಸ್ವಸ್ಥ
ಘಟನಾ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಸಿಬ್ಬಂದಿ ಕೂಡಲೇ ಸ್ಥಳೀಯ ಆ್ಯಂಬುಲೆನ್ಸ್ ಮೂಲಕ ಅಸ್ವಸ್ಥ ಮಹಿಳೆಯರನ್ನು ಆಸ್ಪತ್ರೆಗೆ ಸಾಗಿಸಿದ್ದು, ಕೆಲವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯು ಗುರುವಾರ (ಅ. 2) ಲಕ್ಷಾಂತರ ಜನರ ಸಮ್ಮುಖದಲ್ಲಿ ವೈಭವದಿಂದ ಜರುಗಿತು. ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯುವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿತ್ತು. ಆದರೆ, ಈ ಸಂಭ್ರಮದ ನಡುವೆ ಸಯ್ಯಾಜಿರಾವ್ ರಸ್ತೆಯಲ್ಲಿ ನಡೆದ ತೀವ್ರ ನೂಕಾಟದಲ್ಲಿ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಕುಸಿದುಬಿದ್ದ ಘಟನೆ ನಡೆದಿದೆ.
ಮೆರವಣಿಗೆಯು ಸಯ್ಯಾಜಿರಾವ್ ರಸ್ತೆಯ ಬಳಿ ಸಮೀಪಿಸುತ್ತಿದ್ದಂತೆ, ಅಂಬಾರಿಯನ್ನು ಹತ್ತಿರದಿಂದ ನೋಡುವ ಕಾತರದಲ್ಲಿ ಜನರು ಮುಂದೆ ನುಗ್ಗಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಉಂಟಾದ ತೀವ್ರ ನೂಕಾಟದಿಂದಾಗಿ, ಉಸಿರಾಟದ ತೊಂದರೆಯಿಂದ ಬಳಲಿದ ಮಹಿಳೆ ಸ್ಥಳದಲ್ಲೇ ಕುಸಿದುಬಿದ್ದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಸಿಬ್ಬಂದಿ, ಅಸ್ವಸ್ಥಗೊಂಡ ಮಹಿಳೆಯನ್ನು ಸ್ಥಳೀಯ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು. ಇನ್ನು ಕೆಲವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಈ ಘಟನೆಯಿಂದಾಗಿ ಮೆರವಣಿಗೆಯು ಕೆಲಕಾಲ ಸ್ಥಗಿತಗೊಂಡು, ವಾಹನ ಸಂಚಾರಕ್ಕೂ ಅಡಚಣೆಯುಂಟಾಗಿತ್ತು.
ಮೈಸೂರು ದಸರಾ ಜಂಬೂಸವಾರಿಯ ಭದ್ರತೆಗಾಗಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದ್ದು, ಸಿಸಿಟಿವಿಗಳ ಮೂಲಕ ನಿಗಾ ವಹಿಸಲಾಗಿತ್ತು. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ವೈದ್ಯಕೀಯ ತಂಡಗಳನ್ನೂ ಸನ್ನದ್ಧ ಸ್ಥಿತಿಯಲ್ಲಿಡಲಾಗಿತ್ತು. ಆದರೂ, ನಿರೀಕ್ಷೆಗೂ ಮೀರಿದ ಜನಸಮೂಹದಿಂದಾಗಿ ಕೆಲವು ಕಡೆಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸುವುದು ಕಷ್ಟಕರವಾಯಿತು. ಈ ಘಟನೆಯ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು, ಸಾರ್ವಜನಿಕರು ಶಾಂತಿಯನ್ನು ಕಾಪಾಡಿಕೊಂಡು, ನಿಯಮಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದೆ.