ಬಳ್ಳಾರಿ ಬಾಣಂತಿಯರ ಸಾವು | ಇಂದು ಸಿಎಂ ಸಭೆ; ನಿರ್ಲಕ್ಷ್ಯ ವಹಿಸಿದವರ ತಲೆದಂಡ?

ಇಂಟ್ರಾವೀನಸ್ ಫ್ಲೂಯಿಡ್ (ಐವಿ) ರಿಂಗರ್ಲ್ಯಾಕ್ಟೇಟ್ ಸಲ್ಯೂಷನ್ ಬಳಸದಂತೆ ಜಿಲ್ಲಾ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿದ್ದರೂ ಬಳ್ಳಾರಿ ಆಸ್ಪತ್ರೆಯಲ್ಲಿ ಈ ದ್ರಾವಣ ಬಳಸಿರುವುದರಿಂದ ಗರ್ಭಿಣಿಯರು ಮೃತಪಟ್ಟಿದ್ದಾರೆ ಎಂದು ತಜ್ಞರ ಸಮಿತಿಯ ವರದಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.;

Update: 2024-11-30 09:07 GMT

ಬಳ್ಳಾರಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ (ವಿಮ್ಸ್‌) 15 ದಿನಗಳ ಅಂತರದಲ್ಲಿ ನಾಲ್ವರು ಬಾಣಂತಿಯರ ಸಾವಿನ ಪ್ರಕರಣ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಪ್ರತಿಪಕ್ಷಗಳ ಟೀಕೆ, ಸಾರ್ವಜನಿಕರ ಆಕ್ರೋಶದಿಂದ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಇಂದು (ನ.30) ಸಂಜೆ ತಮ್ಮ ಅಧಿಕೃತ ನಿವಾಸ ಕೃಷ್ಣಾದಲ್ಲಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ತಜ್ಞರ ಸಮಿತಿ ವರದಿ ಕುರಿತಂತೆ ಚರ್ಚೆ ನಡೆಯಲಿದೆ. ಜೊತೆಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ. 

ನಿಷೇಧಿತ ದ್ರಾವಣ ಬಳಕೆಯಿಂದ ಸಾವು?

ಗರ್ಭಿಣಿಯರ ಸಾವಿನ ಕುರಿತು ತನಿಖೆ ನಡೆಸಿರುವ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಗರ್ಭಿಣಿಯರ ಶಸ್ತ್ರಚಿಕಿತ್ಸೆ (ಸಿಸೇರಿಯನ್) ವೇಳೆ ನಿಷೇಧಿತ ಇಂಟ್ರಾವೀನಸ್ ಫ್ಲೂಯಿಡ್ (ಐವಿ) ರಿಂಗರ್ಲ್ಯಾಕ್ಟೇಟ್ ಸಲ್ಯೂಷನ್ ಬಳಸಿರುವುದು ಸಾವಿಗೆ ಕಾರಣ ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ಕಳೆದ ನವೆಂಬರ್ 16 ರಂದು ಇಂಟ್ರಾವೀನಸ್ ಫ್ಲೂಯಿಡ್ (ಐವಿ) ರಿಂಗರ್ಲ್ಯಾಕ್ಟೇಟ್ ಸಲ್ಯೂಷನ್ ಬಳಸದಂತೆ ಜಿಲ್ಲಾ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿದ್ದರೂ ಬಳ್ಳಾರಿ ಆಸ್ಪತ್ರೆಯಲ್ಲಿ ಈ ದ್ರಾವಣ ಬಳಸಿರುವುದರಿಂದ ಗರ್ಭಿಣಿಯರು ಮೃತಪಟ್ಟಿದ್ದಾರೆ ಎಂದು ತಜ್ಞರ ಸಮಿತಿ ವರದಿಯಲ್ಲಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಆದರೆ. ರಾಜ್ಯ ಸರ್ಕಾರ ವರದಿಯನ್ನು ಗೌಪ್ಯವಾಗಿಟ್ಟಿದೆ ಎಂಬ ಆರೋಪಗಳು ಕೂಡ ಕೇಳಿಬಂದಿವೆ.

ಗರ್ಭಿಣಿಯರ ಸಾವಿನ ಕುರಿತು ತನಿಖೆ ನಡೆಸಲು ನ. 14 ರಂದು ಡಾ.ಸವಿತಾ, ಡಾ. ಬಿ.ಭಾಸ್ಕರ್, ಡಾ.ಟಿ.ಆರ್. ಹರ್ಷಾ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಈ ತಂಡವು ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಬಾಣಂತಿಯರಿಗೆ ನೀಡಿದ ಚಿಕಿತ್ಸಾ ವರದಿ ಪಡೆದಿತ್ತು. ಔಷಧದ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.

ಗ್ಲೊಕೋಸ್ ಸಹಿತ ಇಂಟ್ರಾವೀನಸ್ (ಐವಿ) ದ್ರಾವಣವು ಅಡ್ಡಪರಿಣಾಮ ಬೀರಿದ ಕಾರಣ ಬಹು ಅಂಗಾಂಗ ವೈಫಲ್ಯದಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ ಎನ್ನಲಾಗಿದೆ.

ನ. 9 ರಂದು ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಏಳು ಮಂದಿ ಗರ್ಭಿಣಿಯರಲ್ಲಿ ನಾಲ್ವರು ಮೃತಪಟ್ಟಿದ್ದು, ಮೂವರಲ್ಲಿ ಇಲಿ ಜ್ವರ ಕೂಡ ಪತ್ತೆಯಾಗಿದೆ. ಇಬ್ಬರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಒಬ್ಬರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ಗಂಗಾಧರ್ ಗೌಡ ತಿಳಿಸಿದ್ದಾರೆ.


ಏನಿದು ನಿಷೇಧಿತ ಐವಿ ದ್ರಾವಣ?

ದೇಹದಲ್ಲಿ ನಿಶ್ಯಕ್ತಿ ಉಂಟಾದಾಗ ನೀರು, ಸಕ್ಕರೆ ಮತ್ತು ಕ್ಷಾರ ಅಂಶದಲ್ಲಿ ಸಮತೋಲನ ಕಾಪಾಡಲು ರಕ್ತನಾಳದ ಮೂಲಕ ದೇಹಕ್ಕೆ ಸೇರಿಸುವ ಫ್ಲ್ಯೂಯೆಡ್. ನಿರ್ಜಲೀಕರಣದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ಈ ದ್ರಾವಣ ಬಳಸಲಾಗುತ್ತದೆ.

ನೀರು, ಗ್ಲೂಕೋಸ್, ಪೋಟ್ಯಾಷಿಯಂ, ಸೋಡಿಯಂ ಮತ್ತು ಕ್ಲೋರೈಡ್ ನಂತಹ ಎಲೆಕ್ಟೋಲೈಟ್ಗಳು ದ್ರಾವಣದಲ್ಲಿರುತ್ತವೆ. ಸದ್ಯ ಐವಿ ಫ್ಲ್ಯೂಯೆಡ್ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಬಳಕೆ ನಿಷೇಧಿಸಲಾಗಿದೆ.

ವರದಿ ಮುಚ್ಚಿಟ್ಟ ಸರ್ಕಾರ; ಆರೋಪ

ಬಾಣಂತಿಯರ ಸಾವಿರ ಕುರಿತ ತನಿಖೆಗೆ ಸರ್ಕಾರ ಸಮಿತಿ ರಚಿಸಿತ್ತು. ಸಮಿತಿಯು ತನಿಖೆರ ನಡೆಸಿ ವರದಿ ಸಲ್ಲಿಸಿದೆ. ಆದರೆ, ಸರ್ಕಾರ ವರದಿ ಮುಚ್ಚಿಟ್ಟು, ಮತ್ತೊಂದು ಸಮಿತಿಯನ್ನು ನೇಮಿಸಲು ಹೊರಟಿದೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಣಂತಿಯರು ಮೃತಪಟ್ಟಿದ್ದಾರೆ, ಇದಕ್ಕೆ ಸರ್ಕಾರವೇ ನೇರ ಹೊಣೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಮಧ್ಯೆ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸಾರ್ವಜನಿಕರು ಗರಂ ಆಗಿದ್ದಾರೆ.

ನಾಲ್ವರು ಬಾಣಂತಿಯರ ಸಾವಾದರೂ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಬಾರದೇ ನಾಪತ್ತೆಯಾಗಿದ್ದಾರೆ. ಬಾಣಂತಿಯರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ನಿರ್ಲಜ್ಜೆಯಿಂದ ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Tags:    

Similar News