'ಎಸ್ಐಟಿ ರಚಿಸಿದ್ದೇ ಸಿಎಂ ತಪ್ಪು; ಈ ಷಡ್ಯಂತ್ರದ ತನಿಖೆಗೆ ಹೊಸ ಎಸ್ಐಟಿ ರಚಿಸಿ': ಆರ್. ಅಶೋಕ
ಇದು ಲವ್ ಜಿಹಾದ್ನಂತೆಯೇ ಒಂದು 'ಮತಾಂತರದ ಜಿಹಾದ್' ಆಗಿದೆ. ಇದರ ಹಿಂದೆ ಯಾವ ದೇಶದ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಪಕ್ಕದ ತಮಿಳುನಾಡಿನಲ್ಲಿ ಹಿಂದೂ ದೇವರ ಫೋಟೋ ಸುಡುತ್ತಿದ್ದಾರೆ ಎಂದರು.;
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್
ಧರ್ಮಸ್ಥಳ ಪ್ರಕರಣದ ಬಗ್ಗೆ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೂರುದಾರರ ಹಿನ್ನೆಲೆಯನ್ನು ಪರಿಶೀಲಿಸದೆ ವಿಶೇಷ ತನಿಖಾ ತಂಡ (SIT) ರಚಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೊಡ್ಡ ತಪ್ಪು ಎಂದು ಅವರು ಆರೋಪಿಸಿದ್ದಾರೆ. ಜೊತೆಗೆ, ಈ ಇಡೀ ಷಡ್ಯಂತ್ರದ ಹಿಂದಿರುವ ನಿಜವಾದ ಸೂತ್ರಧಾರರನ್ನು ಬಯಲಿಗೆಳೆಯಲು ಸರ್ಕಾರ ಮತ್ತೊಂದು ಎಸ್ಐಟಿ ರಚಿಸಬೇಕು ಎಂದು ಅವರು ಆಗ್ರಹಿಸಿದರು.
'ಮತಾಂತರದ ಜಿಹಾದ್' – ಎನ್ಐಎ ತನಿಖೆಗೆ ಒತ್ತಾಯ
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ ಅವರು, ಈ ಪ್ರಕರಣದಲ್ಲಿ ಮುಸುಕುಧಾರಿಯನ್ನು ಬಂಧಿಸುವುದಕ್ಕಿಂತಲೂ, ಆತನ ಹಿಂದಿರುವ ಶಕ್ತಿಗಳನ್ನು ಪತ್ತೆ ಮಾಡುವುದು ಮುಖ್ಯ ಎಂದರು. "ಈ ಷಡ್ಯಂತ್ರಕ್ಕೆ ವಿದೇಶದಿಂದ ಹಣ ಬಂದಿರುವ ಸಾಧ್ಯತೆ ಇದೆ. ಹಾಗಾಗಿ, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಗೆ ವಹಿಸುವುದೇ ಸೂಕ್ತ," ಎಂದು ಅವರು ಒತ್ತಾಯಿಸಿದರು.
"ಇದು ಲವ್ ಜಿಹಾದ್ನಂತೆಯೇ ಒಂದು 'ಮತಾಂತರದ ಜಿಹಾದ್' ಆಗಿದೆ. ಇದರ ಹಿಂದೆ ಯಾವ ದೇಶದ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಪಕ್ಕದ ತಮಿಳುನಾಡಿನಲ್ಲಿ ಹಿಂದೂ ದೇವರ ಫೋಟೋ ಸುಡುತ್ತಾರೆ, ಕೇರಳದಲ್ಲಿ ಹಿಂದೂ ವಿರೋಧಿ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಅಲ್ಲಿರುವವರೇ ಇಲ್ಲಿಯೂ ಸೇರಿಕೊಂಡಿರಬಹುದು," ಎಂದು ಅವರು ಗಂಭೀರ ಆರೋಪ ಮಾಡಿದರು.
ಯೂಟ್ಯೂಬರ್ ಸಮೀರ್ನನ್ನು ಮೊದಲು ಬಂಧಿಸಿ
ಈ ಎಲ್ಲಾ ಅಪಪ್ರಚಾರದ ಹಿಂದೆ ಸಮೀರ್ ಎಂಬ ಯೂಟ್ಯೂಬರ್ ಇದ್ದಾನೆ. ಆತನೇ ಈ ಮುಸುಕುಧಾರಿಯನ್ನು ಮುಂದೆ ಬಿಟ್ಟಿದ್ದಾನೆ ಎಂದು ಅಶೋಕ ಆರೋಪಿಸಿದರು. "ಒಬ್ಬ ಮುಸ್ಲಿಂ ಯುವಕನಾದ ಆತನಿಗೆ ಹಿಂದೂ ಧರ್ಮದ ವಿಚಾರದಲ್ಲಿ ಏಕೆ ಇಷ್ಟೊಂದು ಆಸಕ್ತಿ? ಆತನನ್ನು ಪೊಲೀಸರು ಮೊದಲು ಬಂಧಿಸಬೇಕು. ಆತ ಜಾಮೀನು ಪಡೆದಿರುವುದರಿಂದ, ಪೊಲೀಸರು ತಕ್ಷಣ ಮೇಲ್ಮನವಿ ಸಲ್ಲಿಸಿ, ಆತನನ್ನು ಬಂಧಿಸಲು ಅವಕಾಶ ಪಡೆಯಬೇಕು," ಎಂದು ಅಶೋಕ ಆಗ್ರಹಿಸಿದರು.
ಸರ್ಕಾರದ ತಪ್ಪಿಗೆ ಕೋಟ್ಯಂತರ ರೂಪಾಯಿ ನಷ್ಟ
"ಧರ್ಮಸ್ಥಳ ಪ್ರಕರಣದಲ್ಲಿ ಆರಂಭದಿಂದಲೂ ಷಡ್ಯಂತ್ರವಿದೆ ಎಂದು ನಾವು ಹೇಳುತ್ತಲೇ ಬಂದಿದ್ದೆವು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ಪ್ರಗತಿಪರರ ಮಾತನ್ನು ಕೇಳಿಕೊಂಡು, ಯಾವುದೇ ಹಿನ್ನೆಲೆ ಪರಿಶೀಲಿಸದೆ ಎಸ್ಐಟಿ ರಚಿಸಿ, ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣವನ್ನು ನಷ್ಟ ಮಾಡಿದ್ದಾರೆ," ಎಂದು ಅವರು ಹೇಳಿದರು.
"ಈ ಪ್ರಹಸನದಿಂದ ಲಕ್ಷಾಂತರ ಭಕ್ತರು ಅನುಭವಿಸಿದ ಮಾನಸಿಕ ನೋವನ್ನು ಶಮನಗೊಳಿಸಲು ಸಾಧ್ಯವಿಲ್ಲ. ಸುಜಾತಾ ಭಟ್ ಎಂಬ ಮಹಿಳೆ ದೂರು ನೀಡಿದಾಗಲೇ ಅವರ ಹಿನ್ನೆಲೆ ಪರಿಶೀಲಿಸಿದ್ದರೆ ಈ ಸತ್ಯ ಮೊದಲೇ ಗೊತ್ತಾಗುತ್ತಿತ್ತು," ಎಂದು ಅಶೋಕ ಹೇಳಿದರು.
"ಈ ಎಲ್ಲಾ ಅವಾಂತರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೇರ ಹೊಣೆ. ಪೊಲೀಸರು ತಮ್ಮ ನಿತ್ಯದ ಕೆಲಸ ಬಿಟ್ಟು ಈ ಪ್ರಕರಣದಲ್ಲಿ ಸಮಯ ವ್ಯರ್ಥ ಮಾಡಿದ್ದರಿಂದ ಆದ ಹಣದ ನಷ್ಟವನ್ನು ಕಾಂಗ್ರೆಸ್ ಪಕ್ಷವೇ ಭರಿಸಬೇಕು. ಬಿಜೆಪಿ ಬೀದಿಗಿಳಿದು ಹೋರಾಟ ಮಾಡಿರದಿದ್ದರೆ, ಇವರು ಯಾವುದೋ ಬುರುಡೆ ತಂದು ಜನರನ್ನು ವಂಚಿಸುತ್ತಿದ್ದರು," ಎಂದು ಅವರು ಟೀಕಿಸಿದರು.