ಕನ್ನಡ ಮಾತನಾಡದ ಬ್ಯಾಂಕ್‌ ವ್ಯವಸ್ಥಾಪಕಿ; ಆಕ್ರೋಶದ ಬಳಿಕ ಕ್ಷಮಾಪಣೆ, ಬೇರೆಡೆ ವರ್ಗಾವಣೆ

ಎಸ್‌ಬಿಐ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದನ್ನು ಪ್ರಶಂಸಿಸುತ್ತೇವೆ. ಈ ವಿಷಯ ಈಗ ಮುಕ್ತಾಯವಾಗಿದೆ ಎಂದು ಭಾವಿಸಿದ್ದೇವೆ. ಆದಾಗ್ಯೂ ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸಬಾರದು ಎಂದು ಸಿಎಂ ಸಿದ್ದರಾಮಯ್ಯ ಅವರು ಬ್ಯಾಂಕ್‌ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.;

Update: 2025-05-21 09:02 GMT

ಎಸ್‌ಬಿಐ ವ್ಯವಸ್ಥಾಪಕಿ ನಡೆಗೆ ಸಿಎಂ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಮಾತನಾಡುವುದೇ ಇಲ್ಲ ಎಂದು ಜೋರು ದನಿಯಲ್ಲಿ ಗ್ರಾಹಕರನ್ನು ನಿಂದಿಸಿದ ಪ್ರಕರಣದಲ್ಲಿ ಕನ್ನಡ ಪರ ಸಂಘಟನೆಗಳ ಆಕ್ರೋಶದ ಹಿನ್ನೆಲೆಯಲ್ಲಿ ಬ್ಯಾಂಕ್‌ ವ್ಯವಸ್ಥಾಪಕಿ ತಮ್ಮ ವರ್ತನೆಗೆ ಕ್ಷಮೆಯಾಚಿಸಿದ್ದಾರೆ. ಇನ್ನು ಬ್ಯಾಂಕ್‌ ವ್ಯವಸ್ಥಾಪಕಿಯ ಉದ್ದಟತನದ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಬ್ಯಾಂಕ್‌ ಹಿರಿಯ ಅಧಿಕಾರಿಗಳು ಅವರನ್ನು ಬೇರೆಡೆ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.

ಬುಧವಾರ ಆನೇಕಲ್‌ನ ಸೂರ್ಯ ನಗರ ಎಸ್‌ಬಿಐ ಕಚೇರಿಗೆ ಬಂದ ಕೇಂದ್ರ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಹರೀಶ್‌ ಹಾಗೂ ಕೋರಮಂಗಲ ಶಾಖೆಯ ಮುಖ್ಯ ವ್ಯವಸ್ಥಾಪಕರು ಕನ್ನಡ ಪರ ಸಂಘಟನೆಗಳ ಮುಖಂಡದ ಎದುರು ಕ್ಷಮೆ ಕೇಳಿಸಿದರು. ʼನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ. ಇನ್ನು ಮುಂದೆ ಕನ್ನಡದಲ್ಲೇ ವ್ಯವಹರಿಸಲು ಪ್ರಯತ್ನಿಸುತ್ತೇನೆʼ ಎಂದು ಹೇಳಿದರು.  

ಕಠಿಣ ಕ್ರಮಕ್ಕೆ ಸಿಎಂ ಒತ್ತಾಯ

ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮಾತನಾಡುವುದೇ ಇಲ್ಲ ಎಂದು ಉದ್ದಟತನದಿಂದ ವರ್ತಿಸಿದ ಆನೇಕಲ್‌ನ ಸೂರ್ಯನಗರದ ಎಸ್‌ಬಿಐ ಬ್ಯಾಂಕ್‌ ವ್ಯವಸ್ಥಾಪಕಿ ವರ್ತನೆ ಖಂಡನೀಯ. ಆ ಅಧಿಕಾರಿಯನ್ನು ತ್ವರಿತವಾಗಿ ವರ್ಗಾವಣೆ ಮಾಡಿರುವ ಎಸ್‌ಬಿಐ ಕ್ರಮ ಪ್ರಶಂಸನೀಯ. ಸದ್ಯ ಈ ವಿಷಯ ಇಲ್ಲಿಗೆ ಮುಕ್ತಾಯವಾಗಿದೆ ಎಂದು ಭಾವಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ. 

ಬ್ಯಾಂಕುಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಎಲ್ಲಾ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನು ಘನತೆಯಿಂದ ನಡೆಸಿಕೊಳ್ಳಬೇಕು. ಜೊತೆಗೆ ಸ್ಥಳೀಯ ಭಾಷೆಯಲ್ಲಿ ಮಾತನಾಡುವ ಪ್ರಯತ್ನಗಳನ್ನು ಮಾಡಬೇಕು. ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಸಂಸ್ಕೃತಿ ಹಾಗೂ ಭಾಷಾ ಸಂವೇದನಾ ತರಬೇತಿ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಆಯೋಜಿಸಬೇಕು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಒತ್ತಾಯಿಸಿದ್ದಾರೆ.

ಏನಿದು ಪ್ರಕರಣ?

ಆನೇಕಲ್‌ ತಾಲೂಕಿನ ಸೂರ್ಯನಗರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಗ್ರಾಹಕರೊಬ್ಬರು ಮಂಗಳವಾರ(ಮೇ20) ಬೆಳಗ್ಗೆ 10.30ಕ್ಕೆ ತೆರಳಿದ್ದರು. ಆದರೆ ಕೌಂಟರ್‌ನಲ್ಲಿ ಯಾರು ಹಾಜರಿರಲಿಲ್ಲ. ಈ ಕುರಿತು ಗ್ರಾಹಕ ವ್ಯವಸ್ಥಾಪಕರ ಬಳಿ ವಿಚಾರಿಸಲು ಹೋದಾಗ ವ್ಯವಸ್ಥಾಪಕಿ ನನಗೆ ಕನ್ನಡ ಬರೋದಿಲ್ಲ ಕೇವಲ ಹಿಂದಿಯಲ್ಲಿ ಮಾತನಾಡುವಂತೆ ತಿಳಿಸಿದ್ದಾರೆ. ಆಗ ಗ್ರಾಹಕ ನನಗೆ ಕನ್ನಡ ಬಿಟ್ಟರೆ ಇಂಗ್ಲೀಷ್‌ ಅಥವಾ ಹಿಂದಿ ಬರುವುದಿಲ್ಲ. ಕನ್ನಡದಲ್ಲೇ ವ್ಯವಹರಿಸುವಂತೆ ಮನವಿ ಮಾಡಿದ್ದಾರೆ. 

ಇದರಿಂದ ಕೋಪಗೊಂಡ ವ್ಯವಸ್ಥಾಪಕಿ, ಇದು ಭಾರತ. ನಾನೇಕೆ ಕನ್ನಡದಲ್ಲಿ ಮಾತನಾಡಲಿ, ಕನ್ನಡದಲ್ಲೇ ಮಾತನಾಡಬೇಕೆಂಬ ನಿಯಮವಿಲ್ಲ, ನನಗೆ ಕೆಲಸ ನೀಡಿರುವುದು ನೀವಲ್ಲ, ಏನೂ ಬೇಕಾದರು ಮಾಡಿಕೊಳ್ಳಿ ಎಂದು ದರ್ಪದಿಂದ ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪುರುಶೋತ್ತಮ ಬಿಳಿಮಲೆ ಸೇರಿದಂತೆ ರಾಜ್ಯಾದ್ಯಂತ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.  

ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅಪಾಯ ಎದುರಾಗುತ್ತಿದ್ದು, ಬೆಂಗಳೂರಿನಲ್ಲಿ ಭಾಷಾ ಸಂಘರ್ಷಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಕೋರಮಂಗಲದ ಹೋಟೆಲ್‌ನ ಡಿಜಿಟಲ್‌ ಬೋರ್ಡ್‌ನಲ್ಲಿ ಕನ್ನಡಿಗರನ್ನು ನಿಂದಿಸಿರುವ ಬರಹ ವೈರಲ್‌ ಆಗಿತ್ತು. ಬಿಬಿಎಂಪಿ ಅಧಿಕಾರಿಗಳು  ಹೋಟೆಲ್‌ ಪರವಾನಗಿಯನ್ನೇ ರದ್ದುಪಡಿಸಿದ್ದರು. 

Tags:    

Similar News