Congress Infight | ಸಿಎಂ ಬದಲಾವಣೆ ಪ್ರಸ್ತಾಪ ; ಡಿಕೆಶಿಗೆ ರಾಹುಲ್ ಗಾಂಧಿ ವಾರ್ನಿಂಗ್?
ಡಿ.ಕೆ ಶಿವಕುಮಾರ್ ಅವರು ಇನ್ನು ಮುಂದೆ ಯಾವುದೇ ಬಹಿರಂಗ ಹೇಳಿಕೆ ನೀಡಬಾರದು ಎಂದು ರಾಹುಲ್ ಗಾಂಧಿ ಖಡಕ್ ಸಂದೇಶ ರವಾನೆ ಮಾಡಿದ್ದಾರೆ ಎನ್ನಲಾಗಿದೆ.;
ಸಿಎಂ ಬದಲಾವಣೆ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಶೀತಲ ಸಮರ ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ ಅವರನ್ನು ಕೆರಳಿಸಿದೆ.
ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಅಸಮಾಧಾನ ಹೊರಹಾಕಿರುವ ರಾಹುಲ್ ಗಾಂಧಿ ಅವರು ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ಕಾರಣಕ್ಕೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಭೇಟಿಗೆ ರಾಹುಲ್ ಗಾಂಧಿ ಅವಕಾಶ ನೀಡಿರಲಿಲ್ಲ.
'ಐದು ವರ್ಷ ನಾನೇ ಸಿಎಂ' ಎಂದು ಸಿದ್ದರಾಮಯ್ಯ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ಡಿ.ಕೆ.ಶಿವಕುಮಾರ್ ಅವರು ಬಹಿರಂಗವಾಗಿ ಹೇಳಿಕೆ ನೀಡದೇ ಇದ್ದರೂ ಆಂತರಿಕವಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು.
ಶನಿವಾರ ಶಿರಡಿಯ ಸಾಯಿಬಾಬಾ ದೇವಸ್ಥಾನಕ್ಕೆ ಕುಟುಂಬ ಸಮೇತ ತೆರಳಿದ್ದ ಡಿ.ಕೆ.ಶಿವಕುಮಾರ್ ಅವರು ಅಲ್ಲಿಂದಲೇ ದೆಹಲಿಗೆ ಪ್ರಯಾಣ ಬೆಳೆಸಿ ಹೈಕಮಾಂಡ್ ಭೇಟಿಗೆ ದುಂಬಾಲು ಬಿದ್ದಿದ್ದರು. ಇದು ರಾಹುಲ್ ಗಾಂಧಿ ಅವರಿಗೆ ಸಿಟ್ಟು ಬರುವಂತೆ ಮಾಡಿದೆ ಎಂದು ಹೇಳಲಾಗಿದೆ.
ಸಿಎಂ ಬದಲಾವಣೆ ವಿಚಾರ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಬಣದಲ್ಲಿ ಪರಸ್ಪರ ಮಾತಿನ ಯುದ್ಧಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕರ ಈ ಕಚ್ಚಾಟಕ್ಕೆ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಗೇಲಿಯ ಮಾತುಗಳು ಕೇಳಿಬಂದಿದ್ದವು. ಇದರಿಂದ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟಾಗಿದ್ದು ಕೂಡ ರಾಹುಲ್ ಗಾಂಧಿ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಹೈಕಮಾಂಡ್ ಗೆ ಸಿಎಂ ಸಮರ್ಥನೆ
ಡಿಕೆಶಿ ಬೆಂಬಲಿಗ ಶಾಸಕರಿಂದಲೇ ಮೊದಲು ಸಿಎಂ ಬದಲಾವಣೆ ಹೇಳಿಕೆಗಳು ಕೇಳಿಬಂದಿದ್ದವು. ಇದು ಆಡಳಿತದ ಮೇಲೆ ಪರಿಣಾಮ ಬೀರತೊಡಗಿದ ಹಿನ್ನಲೆಯಲ್ಲಿ ನಾನು ಮಧ್ಯಪ್ರವೇಶ ಮಾಡಬೇಕಾಯಿತು ಎಂದು ಸಿದ್ದರಾಮಯ್ಯ ಅವರು ಹೈಕಮಾಂಡ್ ಸಮರ್ಥನೆ ನೀಡಿದ್ದರು ಎಂದು ತಿಳಿದುಬಂದಿದೆ.
ಸಿಎಂ ಸ್ಥಾನ ಬದಲಾವಣೆ ವಿಚಾರ ಪ್ರಸ್ತಾಪಿಸಿದ್ದ ಡಿಕೆ ಶಿವಕುಮಾರ್ ಅವರು ಅಧಿಕಾರ ಒಪ್ಪಂದ ಬಗ್ಗೆ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದರು. ಇದರಿಂದ ಕಾಂಗ್ರೆಸ್ ಪಕ್ಷದ ಇತರ ನಾಯಕರ ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಯಿತು ಎಂದು ಸಿದ್ದರಾಮಯ್ಯ ಅವರು ಹೈಕಮಾಂಡ್ ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಬಹಿರಂಗ ಹೇಳಿಕೆ ನೀಡದಂತೆ ತಾಕೀತು
ಡಿಕೆ ಶಿವಕುಮಾರ್ ಅವರು ಇನ್ನು ಮುಂದೆ ಯಾವುದೇ ಬಹಿರಂಗ ಹೇಳಿಕೆ ನೀಡಬಾರದು ಎಂದು ರಾಹುಲ್ ಗಾಂಧಿ ಖಡಕ್ ಸಂದೇಶ ರವಾನೆ ಮಾಡಿದ್ದಾರೆ. ಇದರ ಬಿಸಿ ಮುಟ್ಟಿಸುವ ಸಲುವಾಗಿ ರಾಹುಲ್ ಗಾಂಧಿ ದೆಹಲಿಯಲ್ಲಿ ಡಿಕೆ ಶಿವಕುಮಾರ್ ಭೇಟಿಗೆ ಅವಕಾಶ ನೀಡಲಿಲ್ಲ ಎನ್ನಲಾಗಿದೆ.
ಪಕ್ಷದ ವರ್ಚಸ್ಸಿಗೆ ಧಕ್ಕೆ
ಸಿ.ಎಂ.ಬದಲಾವಣೆ ವಿಚಾರದಲ್ಲಿ ಪಕ್ಷದಲ್ಲೇ ಎರಡು ಬಣಗಳು ಸೃಷ್ಟಿಯಾಗಿದ್ದವು. ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದ ಸಿಎಂ ಸಿದ್ದರಾಮಯ್ಯ ಬಣದ ಆಪ್ತ ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಎಚ್.ಸಿ.ಮಹದೇವಪ್ಪ ಇತರರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಅಲ್ಲದೇ ಡಿಸಿಎಂ ಡಿ.ಕೆ.ಶಿವಕುಮಾರ್ ವರ್ತನೆಯ ಬಗ್ಗೆ ನೇರವಾಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದರು.
ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡಬಾರದು. ಆದರೆ, ಕಾಂಗ್ರೆಸ್ಸಿನ ನಿರ್ಣಯದಂತೆ ಒಬ್ಬ ವ್ಯಕ್ತಿಗೆ ಎರಡು ಹುದ್ದೆ ನೀಡುವಂತಿಲ್ಲ.ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿದ್ದಾರೆ. ಅಲ್ಲದೇ ಅವರ ಅಧ್ಯಕ್ಷಾವಧಿ ಮುಗಿದಿದ್ದು, ಕೂಡಲೇ ಬದಲಾಯಿಸಬೇಕು ಎಂದು ಒತ್ತಾಯಿಸಿದ್ದರು.
ಸಿಎಂ ಪರಮಾಪ್ತ ಸಚಿವ ಸತೀಶ್ ಜಾರಕಿಹೊಳಿ ಒಂದು ಹೆಜ್ಜೆ ಮುಂದೆ ಹೋಗಿ ತಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳುವುದಲ್ಲದೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದರು.
ಡಿಕೆಶಿ ವಿರುದ್ಧ ಅಸಮಾಧಾನಕ್ಕೆ ಕಾರಣವೇನು?
ಡಿ.ಕೆ.ಶಿವಕುಮಾರ್ ಅವರ ಹಲವು ನಿರ್ಧಾರಗಳ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಮುಜುಗರ ತಂದಿದ್ದವು. ಮೊದಲು ಸಿಎಂ ಬದಲಾವಣೆ ಕುರಿತು ಬಹಿರಂಗವಾಗಿ ಪ್ರಸ್ತಾಪಿಸಿದ ಅವರ ನಡೆ ಹೈಕಮಾಂಡ್ ನಾಯಕರನ್ನ ಕೆರಳಿಸಿತ್ತು. ತಮ್ಮ ವಿರುದ್ಧ ಬಹಿರಂಗ ಹೇಳಿಕೆ ನೀಡಿದವರನ್ನು ಹಣಿಯಲು ಹನಿಟ್ರ್ಯಾಪ್ ಮಾಡಿಸುತ್ತಿದ್ದಾರೆ ಎನ್ನಲಾದ ಆರೋಪ ಕೂಡ ಕಾಂಗ್ರೆಸ್ ನಾಯಕರಿಗೆ ಮುಜುಗರ ತಂದಿತ್ತು. ಇತ್ತೀಚೆಗೆ ಆರ್ ಸಿಬಿ ವಿಜಯೋತ್ಸವದಲ್ಲಿ ಏಕಪಕ್ಷೀಯ ವಾಗಿ ನಿರ್ಣಯಗಳನ್ನು ಕೈಗೊಂಡ ಕಾರಣ ಕಾಲ್ತುಳಿತ ದುರಂತ ಸಂಭವಿಸಿತ್ತು. ಇದೂ ಕೂಡ ಡಿಕೆ ಶಿವಕುಮಾರ್ ಅವರ ಆತುರದ ನಿರ್ಧಾರಗಳು ಎಂಬ ಬಗ್ಗೆ ಪಕ್ಷದಲ್ಲೇ ಅಪಸ್ವರಗಳು ಕೇಳಿಬಂದಿದ್ದವು.
ಈ ಎಲ್ಲಾ ಬೆಳವಣಿಗೆಗಳ ಮಾಹಿತಿ ಪಡೆದಿದ್ದ ರಾಹುಲ್ ಗಾಂಧಿ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಈ ಮಧ್ಯೆ, ಸಿಎಂ ವೈಯಕ್ತಿಕ ಹಾಗೂ ಸಾಮೂಹಿಕ ವರ್ಚಸ್ಸು ಅರಿತಿರುವ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಬಹಿರಂಗ ಹೇಳಿಕೆಗಳಿಗೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.