ಪ್ರಜ್ವಲ್‌ "ರೇವಣ್ಣ" ಲೈಂಗಿಕ ಹಗರಣ| ಅಪ್ಪ ಮಗನ ವಿರುದ್ಧ ಸಿಐಡಿ ಚಾರ್ಜ್‌ಶೀಟ್‌

ನಾನು ಸಂಸದನಾಗಿದ್ದು, ಯಾರೂ ಏನೂ ಮಾಡಲು ಆಗುವುದಿಲ್ಲ. ಬಾಯಿ ಬಿಟ್ಟರೆ ಸಾಯಿಸುತ್ತೇನೆ ಎಂದು ಪ್ರಜ್ವಲ್‌ ರೇವಣ್ಣ ಬೆದರಿಕೆ ಹಾಕಿದ್ದ ಎಂದು ಉಲ್ಲೇಖಿಸಲಾಗಿದೆ. ಅದೂ ಅಲ್ಲದೆ ಸಂತ್ರಸ್ತೆಯ ಪುತ್ರಿಗೂ ವಾಟ್ಸಾಪ್‌ ವಿಡಿಯೋ ಕರೆ ಮಾಡಿ ಬಟ್ಟೆ ಬಿಚ್ಚುವಂತೆ ಹೇಳಿ ಸ್ಕ್ರೀನ್‌ಶಾಟ್‌ ತೆಗೆದುಕೊಂಡು ಬೆದರಿಕೆ ಒಡ್ಡಿದ್ದ ಎಂದು ಹೇಳಲಾಗಿದೆ.;

Update: 2024-08-24 02:54 GMT

ಹಲವಾರು ಮಹಿಳೆಯರಿಗೆ ಅತ್ಯಾಚಾರ ನಡೆಸಿರುವ ಮತ್ತು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡಿ  ಚಿತ್ರೀಕರಣ ನಡೆಸಿರುವ ಆರೋಪಲ್ಲಿ ಜೈಲುಪಾಲಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನ ಮೇಲೆ ಹಾಸನದ ಹೊಳೆನರಸೀಪುರದಲ್ಲಿ ದಾಖಲಾಗಿದ್ದ ಮೊದಲ ಪ್ರಕರಣದ ಸಂಬಂಧ ಸಿಐಡಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ. ಹಾಗೆಯೇ ಆತನ ತಂದೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್‌.ಡಿ. ರೇವಣ್ಣ  ಆ ಪ್ರಕರಣದ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಸಂಬಂಧವೂ  ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ.

ಸಿಐಡಿ ಎಸ್‌ಐಟಿ ತನಿಖಾಧಿಕಾರಿ ಬಿ.ಸುಮಾರಾಣಿ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೊಳೆನರಸೀಪುರ ಪ್ರಕರಣ ಸಂಬಂಧ ಅಪ್ಪ-ಮಗನ ಮೇಲಿರುವ ಆರೋಪದ ಮೇಲೆ ತನಿಖೆ ನಡೆಸಿ ಒಟ್ಟು 2,144 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ. 123 ಸಾಕ್ಷ್ಯಗಳನ್ನು ಸಂಗ್ರಹಿಸಿ ಮಾಡಲಾಗಿದೆ ಎನ್ನಲಾಗಿದೆ.

‘ಪ್ರಜ್ವಲ್‌ ಲೈಂಗಿಕ ದೌರ್ಜನ್ಯ ಎಸಗಿ, ಸಂತ್ರಸ್ತೆಯ ವಿಡಿಯೋ ಚಿತ್ರೀಕರಣ ಮಾಡಿದ್ದೇ ಅಲ್ಲದೆ ಅದನ್ನು ಸಾಮಾಜಿಕ ಜಾಲತಾಣ ಹಾಗೂ ದೃಶ್ಯ ಮಾಧ್ಯಮದಲ್ಲಿಹರಿದಾಡಲು ಪ್ರಜ್ವಲ್‌ ಕಾರಣಕರ್ತನಾಗಿದ್ದಾನೆ ಎಂದೂ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಬೆಂಗಳೂರಿನ ಬಸವನಗುಡಿಯ ಮನೆಯ ಸ್ವಚ್ಛತೆಗಾಗಿ ಭವಾನಿ ರೇವಣ್ಣ ಅವರು ಅದೇ ಸಂತ್ರಸ್ತೆಯನ್ನು ಒಮ್ಮೆ ಕರೆ ತಂದಿದ್ದರು. ಭವಾನಿ ಅವರು ಖರೀದಿಗೆಂದು ಹೊರಕ್ಕೆ ತೆರಳಿದ್ದ ವೇಳೆ, ಪ್ರಜ್ವಲ್‌ ಏಕಾಏಕಿ ಮೊಬೈಲ್‌ ಹಿಡಿದು ಕೊಠಡಿಯ ಒಳಕ್ಕೆ ಪ್ರವೇಶಿಸಿದ್ದರು. ಆಗ ಸಂತ್ರಸ್ತೆ ಹೊರಕ್ಕೆ ಬರಲು ಪ್ರಯತ್ನಿಸಿದ್ದರು," ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಬಿಟ್ಟುಬಿಡಿ ಎಂದರೂ ಅತ್ಯಾಚಾರ

"ಇಷ್ಟು ದಿನ ನನ್ನಿಂದ ತಪ್ಪಿಸಿಕೊಂಡು ಓಡಾಟ ನಡೆಸಿದ್ದೀಯಾ. ಎಣ್ಣೆ ಹಚ್ಚಲು ಬಾ ಎಂದರೆ ಸಬೂಬು ಹೇಳುತ್ತೀಯಾ. ಈಗ ಒಂಟಿಯಾಗಿ ಸಿಕ್ಕಿದ್ದೀಯಾ ಎಂದು ಹೇಳಿ ಬಟ್ಟೆ ಬಿಚ್ಚಲು ಪ್ರಯತ್ನಿಸಿದ್ದರು. ಸಂತ್ರಸ್ತೆ ಬೇಡ ಅಣ್ಣ, ತಪ್ಪಾಯ್ತು ಬಿಟ್ಟುಬಿಡಿ, ಏನೂ ಮಾಡಬೇಡಿ ಎಂದು ಅಂಗಲಾಚಿದ್ದರು. ಆದರೂ ಆಕೆಯ ಸೀರೆ ಹರಿದು ಅತ್ಯಾಚಾರ ಎಸಗಿ  ಅದನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದ. ವಿಷಯನ್ನು ಬಹಿರಂಗ ಪಡಿಸಿದರೆ ನಿನ್ನ ಪತಿಯನ್ನು ಜೈಲು ಪಾಲು ಮಾಡುತ್ತೇನೆ. ನಿನ್ನ ಪುತ್ರಿಗೂ ಇದೇ ಗತಿ ಮಾಡುತ್ತೇನೆ. ಏನೇ ಕೆಲಸ ಮಾಡಿದರೂ ಪ್ರಕರಣ ಮುಚ್ಚಿ ಹಾಕಲು ನನಗೆ ಗೊತ್ತಿದೆ. ನಾನು ಸಂಸದನಾಗಿದ್ದು, ಯಾರೂ ಏನೂ ಮಾಡಲು ಆಗುವುದಿಲ್ಲ. ಬಾಯಿ ಬಿಟ್ಟರೆ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂಬುದು ಸಾಬೀತಾಗಿದೆ’ ಎಂದು ದೋಷಾರೋಪ ಪಟ್ಟಿ ವಿವರಿಸಿದೆ. ಅದೂ ಅಲ್ಲದೆ ಸಂತ್ರಸ್ತೆಯ ಪುತ್ರಿಗೂ ವಾಟ್ಸಾಪ್‌ ವಿಡಿಯೋ ಕರೆ ಮಾಡಿ ಬಟ್ಟೆ ಬಿಚ್ಚುವಂತೆ ಹೇಳಿ ಸ್ಕ್ರೀನ್‌ಶಾಟ್‌ ತೆಗೆದುಕೊಂಡು ಬೆದರಿಕೆ ಒಡ್ಡಿದ್ದ ಎಂದು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ಪೊಲೀಸ್‌ ಪ್ರಕರಣ ದಾಖಲಾದ ಬಳಿಕ ಬಂಧನ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಪಲಾಯನ ಮಾಡಿದ್ದಾನೆ. ಅಲ್ಲದೇ ಮೊಬೈಲ್‌ ಚಿತ್ರೀಕರಣದ ಸಾಕ್ಷ್ಯ ನಾಶ ಮಾಡುವ ಕಾರಣಕ್ಕೆ ಆ ಮೊಬೈಲ್‌ ನಾಶ ಮಾಡಿದ್ದಾನೆ ಎಂಬುದು ತನಿಖೆ ವೇಳೆ ಖಚಿವಾಗಿದೆ.

ರೇವಣ್ಣ ಮಾಡಿದ್ದೇನು?

‘ಪ್ರಜ್ವಲ್‌ ರೇವಣ್ಣನ ಅಪ್ಪ, ಎಚ್.ಡಿ.ರೇವಣ್ಣ ಸಂತ್ರಸ್ತ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಕೈಹಿಡಿದು ಎಳೆದು, ಅವರ ಮೈ–ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವುದು ಸಾಬೀತಾಗಿದೆ’ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

‘ಹೊಳೆನರಸೀಪುರದಲ್ಲಿ ರೇವಣ್ಣ ಅವರಿಗೆ ಸೇರಿದ ಮನೆಯಿದ್ದು, ಅವರ ಪತ್ನಿ ಭವಾನಿ ರೇವಣ್ಣ ಅವರ ಅನುಮತಿ ಮೇರೆಗೆ ಹಾಸ್ಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು (2019ರಿಂದ 2020ರ ವರೆಗೆ). ಭವಾನಿ ಅವರು ಮನೆಯಲ್ಲಿ ಇಲ್ಲದಿರುವಾಗ ಸಂತ್ರಸ್ತೆಯನ್ನು ಕೊಠಡಿಗೆ ಬಾ, ಏಕೆ ಕೆಳಗೆ ಹೋಗುತ್ತೀಯಾ, ನಾನೇನು ಮಾಡಲ್ಲ’ ಎಂದು ಆಗಾಗ್ಗೆ ಕರೆಯುತ್ತಿದ್ದರು. ಅಲ್ಲದೇ ಅವರ ಮನೆಯ ಮೊದಲ ಮಹಡಿಯಲ್ಲಿದ್ದ ವಸ್ತುಗಳನ್ನು ಇಡುವ ಕೊಠಡಿಗೆ ಎಲ್ಲ ಕಾರ್ಮಿಕರನ್ನು ಕರೆಸಿಕೊಂಡು ಎಲ್ಲರಿಗೂ ಹಣ್ಣು ವಿತರಣೆ ಮಾಡುತ್ತಿದ್ದರು. ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಕೊನೆಯಲ್ಲಿ ಹಣ್ಣು ಕೊಡಲು ಕೊಠಡಿಯಲ್ಲೇ ಇರಿಸಿಕೊಳ್ಳುತ್ತಿದ್ದರು. ಇತರೆ ಕೆಲಸಗಾರರು ಹಣ್ಣು ಪಡೆದು ತೆರಳಿದ ನಂತರ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

 

Tags:    

Similar News