ಬಾಲ್ಯ ವಿವಾಹ, ನಿಶ್ಚಿತಾರ್ಥ ಮಾಡಿದ ಪೂಜಾರಿಯೂ ಆರೋಪಿ

ರಾಜ್ಯದಲ್ಲಿ ವರದಿಯಾಗುತ್ತಿರುವ ಆತಂಕಕಾರಿ ಅಂಕಿಅಂಶಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಈ ಕಠಿಣ ಕಾನೂನನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.;

Update: 2025-07-24 15:49 GMT

ರಾಜ್ಯದಲ್ಲಿ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು, ರಾಜ್ಯ ಸಚಿವ ಸಂಪುಟವು ಐತಿಹಾಸಿಕವಾಗಿ ಕಠಿಣವಾದ ಕಾನೂನು ತಿದ್ದುಪಡಿಗೆ ಒಪ್ಪಿಗೆ ನೀಡಿದೆ. ಈ ಹೊಸ ಕಾನೂನಿನ ಪ್ರಕಾರ, ಬಾಲ್ಯ ವಿವಾಹ ನಡೆಸುವ ಪೋಷಕರು ಮಾತ್ರವಲ್ಲದೆ, ಮದುವೆ ನಿಶ್ಚಿತಾರ್ಥದ ಮಾತುಕತೆಯಲ್ಲಿ ಭಾಗಿಯಾದವರು, ಮದುವೆ ಮಾಡಿಸಿದ ಪೂಜಾರಿಗಳು ಮತ್ತು 'ತೊಟ್ಟಿಲು ಮದುವೆ'ಯಂತಹ ಪದ್ಧತಿಗಳನ್ನು ಆಚರಿಸಿದವರೂ ಸಹ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ.

ಈ ಅಪರಾಧಕ್ಕೆ ಸಹಕರಿಸಿದ ಯಾರಿಗೇ ಆದರೂ ಕನಿಷ್ಠ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿವರೆಗೆ ದಂಡ, ಅಥವಾ ಎರಡನ್ನೂ ವಿಧಿಸಲು ತಿದ್ದುಪಡಿ ಮಾಡಲಾದ 'ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025'ರಲ್ಲಿ ಅವಕಾಶ ಕಲ್ಪಿಸಲಾಗಿದೆ.

ರಾಜ್ಯದಲ್ಲಿ ವರದಿಯಾಗುತ್ತಿರುವ ಆತಂಕಕಾರಿ ಅಂಕಿಅಂಶಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಈ ಕಠಿಣ ಕಾನೂನನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. 2024-25ನೇ ಸಾಲಿನಲ್ಲೇ ರಾಜ್ಯದಲ್ಲಿ 700 ಬಾಲ್ಯ ವಿವಾಹಗಳು ವರದಿಯಾಗಿದ್ದು, 3,489 ಪೋಕ್ಸೊ ಪ್ರಕರಣಗಳಲ್ಲಿ 685 ಬಾಲಕಿಯರು ಅಪ್ರಾಪ್ತ ವಯಸ್ಸಿನಲ್ಲೇ ಗರ್ಭಿಣಿಯರಾಗಿದ್ದಾರೆ. ವಿಶೇಷವಾಗಿ ಶಿವಮೊಗ್ಗ, ಬೆಳಗಾವಿ, ಚಿತ್ರದುರ್ಗ, ಬಾಗಲಕೋಟೆ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಪ್ರಾಪ್ತ ಗರ್ಭಿಣಿಯರ ಪ್ರಕರಣಗಳು ದಾಖಲಾಗಿವೆ.

ಸಂಬಂಧಪಟ್ಟ ಇಲಾಖೆಯು 2,349 ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದರೂ, ಇನ್ನೂ ನಡೆಯುತ್ತಿರುವ ಪ್ರಕರಣಗಳು ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತಿದ್ದು, ಈ ಕಾರಣದಿಂದಾಗಿಯೇ ಸರ್ಕಾರವು ಬಾಲ್ಯ ವಿವಾಹವನ್ನು ಅದರ ಮೂಲದಿಂದಲೇ ಕಿತ್ತೊಗೆಯಲು ಈ ದಿಟ್ಟ ಹೆಜ್ಜೆಯಿಟ್ಟಿದೆ. 

Tags:    

Similar News