ಏಲಕ್ಕಿ ನಾಡು ಹಾವೇರಿಯಲ್ಲಿ ಕಡಿಮೆಯಾಗುತ್ತಿದೆಯಾ ಏಲಕ್ಕಿ ಘಮ?

ಏಲಕ್ಕಿ ನಾಡು ಎಂದೇ ಖ್ಯಾತಿ ಪಡೆದಿರುವ ಹಾವೇರಿಯಲ್ಲಿ ಈಗ ಏಲಕ್ಕಿ ಘಮ ಕಡಿಮೆಯಾಗುತ್ತಿದೆ.;

Update: 2025-01-16 15:51 GMT
ಹಾವೇರಿಯಲ್ಲಿ ತಯಾರಿಸಲಾದ ಏಲಕ್ಕಿ ಮಾಲೆ

ಹಾವೇರಿ ಅಂದಾಕ್ಷಣ ಥಟ್ಟನೆ ನೆನಪಾಗುವುದುʼಏಲಕ್ಕಿ. ಹಾಗೆಂದು ಇಲ್ಲಿ ಏಲಕ್ಕಿ ಬೆಳೆಯುವುದಿಲ್ಲ. ಆದರೆ ಒಂದು ಕಾಲದಲ್ಲಿ ಏಲಕ್ಕಿ ವ್ಯಾಪಾರಕ್ಕೆ ಹಾಗೂ ಏಲಕ್ಕಿ ಮಾಲೆಗೆ ಈ ನಾಡು ಪ್ರಸಿದ್ಧಿ ಪಡೆದಿತ್ತು. ಏಲಕ್ಕಿ ಓಣಿ ಎಂದೇ ಇಲ್ಲಿನ ಒಂದು ಬೀದಿಗೆ ಇಲ್ಲಿ ಹೆಸರಿದೆ. ಇಲ್ಲೀಗ ಏಲಕ್ಕಿ ವ್ಯಾಪಾರಸ್ಥರ ಸಂಖ್ಯೆ ತೀರಾ ಕಡಿಮೆ ಆಗಿದೆ. ರಾಜ್ಯದಲ್ಲಿ ಏಲಕ್ಕಿ ಬೆಳೆಯುವವರ ಸಂಖ್ಯೆಯೂ ಕಡಿಮೆ ಆಗಿದ್ದರಿಂದ ಇಲ್ಲಿಯೂ ಅದರ ಕಂಪು ಕಡಿಮೆಯಾಗಿದೆ.


Full View

ಹಿಂದೆ ಹಾವೇರಿ ನಗರದೆಲ್ಲೆಡೆ ಏಲಕ್ಕಿ ಕಂಪು ಸೂಸುತ್ತಿತ್ತಂತೆ. ಸುಮಾರು 200 ವ್ಯಾಪಾರಸ್ಥರು ಏಲಕ್ಕಿ ವ್ಯಾಪಾರ ಮಾಡುತ್ತಿದ್ದರು. ಶಿರಸಿ, ಅರಸೀಕೆರೆ, ಮೂಡಿಗೆರೆ, ಮಡಿಕೇರಿ ಸೇರಿದಂತೆ ರಾಜ್ಯದಲ್ಲಿ ಹಲವೆಡೆ ರೈತರು ತಾವು ಬೆಳೆಯುತ್ತಿದ್ದ ಏಲಕ್ಕಿಯನ್ನು ತಂದು ಸಂಸ್ಕರಿಸಿ, ವಿವಿಧ ಗ್ರೇಡ್​ಗಳನ್ನಾಗಿ ವಿಂಗಡಿಸಿ ಇಲ್ಲಿ ಮಾರಾಟ ಮಾಡುತ್ತಿದ್ದರು. ಈಗ ರಾಜ್ಯದಲ್ಲಿ ಏಲಕ್ಕಿ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಏಲಕ್ಕಿ ಬೆಳೆಯುತ್ತಿದ್ದ ಬಹುತೇಕ ರೈತರು ಲಾಭದಾಯಕ ಕಾಫಿ ಮತ್ತು ಮೆಣಸು ಕೃಷಿಯತ್ತ ಹೊರಳಿದ್ದಾರೆ. ಹೀಗಾಗಿ ಕೇರಳ ರಾಜ್ಯದಲ್ಲಿ ಬೆಳೆಯುವ ರೈತರು ಮಾತ್ರ ಹಾವೇರಿಗೆ ತಂದು ಮಾರಾಟ ಮಾಡುತ್ತಾರೆ.

'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡಿದ ಹಾವೇರಿಯ ಏಲಕ್ಕಿ ವ್ಯಾಪಾರಸ್ಥ ಮಲ್ಲಿಕಾರ್ಜುನ್ ಗುಂಜೆಟ್ಟಿ, 'ಪ್ರತಿ ದಿನ ಇಲ್ಲಿಗೆ 10ರಿಂದ 15 ಟನ್ ಏಲಕ್ಕಿ ಬರುತ್ತದೆ. ಅಷ್ಟೇ ಪ್ರಮಾಣದ ಏಲಕ್ಕಿಯನ್ನು ಸಂಸ್ಕರಿಸಿ ನಾವು ಉತ್ತರ ಭಾರತದ ಪ್ರದೇಶಗಳಿಗೆ ಕಳುಹಿಸುತ್ತೇವೆ ಮಾಡುತ್ತೇವೆ. ಹಾವೇರಿಯಲ್ಲಿ ಏಲಕ್ಕಿ ವ್ಯಾಪಾರ ಸುಮಾರು 150 ವರ್ಷಗಳಿಂದ ನಡೆಯುತ್ತಿದೆ. ಮೊದಲು ಸಕಲೇಶಪುರದಿಂದ ನೇರವಾಗಿ ಇಲ್ಲಿಗೆ ಏಲಕ್ಕಿ ಬರುತ್ತಿತ್ತು. ಈಗ ನಮ್ಮ ರಾಜ್ಯದಲ್ಲಿ ಏಲಕ್ಕಿ ಬೆಳೆಗಾರರು ಕಡಿಮೆ ಆಗಿದ್ದಾರೆ. ಹೀಗಾಗಿ ಕೇರಳದಿಂದ ಈಗಲೂ ಪ್ರತಿದಿನ ಏಲಕ್ಕಿ ಬರುತ್ತಿದೆ. ಪ್ರತಿ ಕೆ.ಜಿ.ಗೆ 2,900 ರೂಪಾಯಿಗಳಿಂದ 3500 ರೂಪಾಯಿಗಳವರೆಗೆ ಏಲಕ್ಕಿಯನ್ನು ನಾವು ಖರೀದಿಸುತ್ತೇವೆ. ಸಂಸ್ಕರಸಿದ ಬಳಿಕ ಗ್ರೇಡಿಂಗ್ ಮಾಡಿದ ಏಲಕ್ಕಿಯನ್ನು ಗುಣಮಟ್ಟಕ್ಕೆ ತಕ್ಕಂತೆ ಪ್ರತಿ ಕೆ.ಜಿಗೆ 3,000 ರೂ. ರಿಂದ 3,500 ರೂ.ಗಳ ವರೆಗೆ ಬೆಲೆ ನಿಗದಿ ಮಾಡುತ್ತೇವೆ,'' ಎಂದು ಈಗಿನ ಏಲಕ್ಕಿ ವ್ಯಾಪಾರದ ಕುರಿತು ಮಾಹಿತಿ ನೀಡಿದರು.

ಮೂರು ದಶಕಗಳ ಹಿಂದೆ ಏಲಕ್ಕಿ ವ್ಯಾಪಾರಕ್ಕೆ ಪ್ರಸಿದ್ಧವಾಗಿದ್ದ ಹಾವೇರಿ ಇತ್ತೀಚೆಗೆ ಏಲಕ್ಕಿ ಮಾಲೆ ತಯಾರಿಕೆಯಲ್ಲಿ ಮಾತ್ರ ಪ್ರಸಿದ್ಧಿ ಪಡೆದಿದೆ. ಹಾವೇರಿಯಲ್ಲಿ ತಯಾರಾಗುವ ಏಲಕ್ಕಿ ಮಾಲೆಗೆ ದೇಶ-ವಿದೇಶಗಳಲ್ಲಿ ಭಾರಿ ಬೇಡಿಕೆಯಿದೆ. ಇಲ್ಲಿನ ಉಸ್ಮಾನ್ ಸಾಹೇಬ್ ಪಟವೇಗಾರ್ ಕುಟುಂಬ ಏಲಕ್ಕಿ ಮಾಲೆ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಇವರ ಹಿರಿಯರು ತಯಾರಿಸಿದ ಏಲಕ್ಕಿ ಮಾಲೆಯನ್ನು ಹಾವೇರಿಯ ಅಂದಿನ ಸಂಸದ ದಿ. ಹೊಸಮನಿ ಸಿದ್ದಪ್ಪನವರು ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾ ದ್‌ ಹಾಗೂ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ತೆಗೆದುಕೊಂಡು ಹೋಗಿ ಸನ್ಮಾಸಿದ್ದರಂತೆ. ಅಲ್ಲಿಂದ ಇಲ್ಲಿಯವರೆಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿ ಆಗಿರುವ ಎಲ್ಲರಿಗೂ ಹಾವೇರಿಯಿಂದ ಏಲಕ್ಕಿ ಮಾಲೆಯನ್ನು ನಾವು ಕಳಿಸಿದ್ದೇವೆ ಎಂದು ಉಸ್ಮಾನ್ ಸಾಹೇಬ್ ಪಟವೇಗಾರ್ ನೆನಪಿಸಿಕೊಳ್ಳುತ್ತಾರೆ.

ಹಾವೇರಿ ಈಗ ಏಲಕ್ಕಿ ಮಾಲೆಗೆ ಪ್ರಸಿದ್ಧಿಯನ್ನು ಪಡೆದಿದೆ. ಹಾವೇರಿಯಲ್ಲಿ ಈಗಲೂ ಕೂಡ ಸುಮಾರು 15-20 ಕುಟುಂಬಗಳು ಏಲಕ್ಕಿ ವ್ಯಾಪಾರವನ್ನು ಮುಂದುವರಿಸಿಕೊಂಡು ಹೋಗುತ್ತಿವೆ.  

Tags:    

Similar News