Karnataka By-Election | ಚನ್ನಪಟ್ಟಣ, ಸಂಡೂರಿನಲ್ಲಿ ಕಾಂಗ್ರೆಸ್, ಶಿಗ್ಗಾವಿಯಲ್ಲಿ ಬಿಜೆಪಿ ಮುನ್ನಡೆ
ಶಿಗ್ಗಾವಿಯಲ್ಲಿಯೂ ಬೊಮ್ಮಾಯಿಯವರ ಕುಟುಂಬದ ಮೂರನೇ ತಲೆಮಾರು ಭರತ್ ಬೊಮ್ಮಾಯಿ ಅದೃಷ್ಠ ಪರೀಕ್ಷೆಗಿಳಿದಿದ್ದು, ಈ ಚುನಾವಣೆಯಲ್ಲಿ ಭರತ್ ಬೊಮ್ಮಾಯಿಗಿಂತ ಅವರ ತಂದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪ್ರತಿಷ್ಠೆ ಮುಖ್ಯವಾಗಿದೆ.
ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ನಡೆಯುತ್ತಿದ್ದು ಆರಂಭಿಕ ಹಂತದಲ್ಲಿ ಕಾಂಗ್ರೆಸ್‌ಗೆ ಲಾಭ ಕಂಡು ಬರುತ್ತಿದೆ. ಬೆಳಗ್ಗೆ 10 ಗಂಟೆ ವೇಳೆಗೆ ಸಂಡೂರಿನಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಮ ಅವರು ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚನ್ನ ಪಟ್ಟಣದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಿದ್ದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಹಿನ್ನಡೆ ಉಂಟಾಗಿದೆ. ಏಳನೇ ಸುತ್ತಿನ ಎಣಿಕೆ ಮುಗಿದ ಬಳಿಕ ಯೋಗೇಶ್ವರ್ 3000 ಕ್ಕಿಂತಲೂ ಅಧಿಕ ಮುನ್ನಡೆಗಳಿಸಿದ್ದಾರೆ. ಇನ್ನು ಶಿಗ್ಗಾವಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ 8 ನೇ ಸುತ್ತಿನ ಬಳಿಕ ಉತ್ತಮ ಮುನ್ನಡೆ ಪಡೆದುಕೊಂಡಿದ್ದಾರೆ.
ಮತ ಎಣಿಕೆ ಆರಂಭಗೊಂಡು ಒಂದು ಗಂಟೆಯ ಬಳಿಕ ಅಂದರೆ ೯ ಗಂಟೆಯ ವೇಳೆಗೆ ಮೂರು ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದವು. ಈ ವೇಳೆ ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು ಸತತವಾಗಿ ಮುನ್ನಡೆಕೊಂಡು ಸಾಗಿದರೆ, ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ ಅವರು ನಿರಂತರ ಮುನ್ನಡ ಪಡೆದುಕೊಂಡು ಸಾಗಿದ್ದಾರೆ. ಆದರೆ, ಚನ್ನಪಟ್ಟಣದಲ್ಲಿ ಮಾತ್ರ ತೀಪ್ರ ಪೈಪೋಟಿಯಿದೆ. ಯೋಗೇಶ್ವರ್ ಅವರು ಬೆರಳೆಣಿಕೆಯ ಮತಗಳಿಂದ ಮಾತ್ರ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಈ ಮೂರು ಕ್ಷೇತ್ರಗಳಿಗೆ ನವೆಂಬರ್ 13ರಂದು ಚುನಾವಣೆ ನಡೆದಿತ್ತು. ಈ ಮೂರು ಕ್ಷೇತ್ರಗಳು ಮೂರು ಪಕ್ಷಗಳಿಗೆ ಪ್ರತಿಷ್ಠೆಯಾಗಿತ್ತು. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಫೈಟ್ ಆಗಿದ್ದರೆ ಶಿಗ್ಗಾವಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪೈಪೋಟಿಗೆ ಇಳಿದಿದ್ದವು. ಇನ್ನು ಸಂಡೂರಿನಲ್ಲಿ ಬಿಜಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿಯಿದೆ.
ಈ ಹಿಂದೆ ಆಯಾ ಕ್ಷೇತ್ರದಲ್ಲಿ ಇದ್ದ ಪಕ್ಷಗಳ ಅಭ್ಯರ್ಥಿಗಳೆ ಗೆಲುವು ಸಾಧಿಸಲಿದ್ದಾರೆ ಎಂದು ಚುನಾವಣಾ ಸಮೀಕ್ಷೆಗಳು ಅಂದಾಜು ಮಾಡಿದ್ದವು. ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ಸೇರಿ ಮೂರು ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ತೆರವು ಮಾಡಿದ ನಾಯಕರ ಕುಟುಂಬಸ್ಥರೇ ಸ್ಪರ್ಧಿಸಿದ್ದಾರೆ. ಆ ಮೂಲಕ ಆಯಾ ಕುಟುಂಬಗಳ ಪಾರುಪತ್ಯವನ್ನು ತಾವು ತೆರವು ಗೊಳಿಸಿದ ವಿಧಾನಸಭೆ ಕ್ಷೇತ್ರಗಳಲ್ಲಿ ಮುಂದುವರಿಕೆ ಮಾಡಲು ಆ ನಾಯಕರು ಪರದಾಟ ನಡೆಸಿದ್ದರು.
ಈ ಮೂರು ಕ್ಷೇತ್ರಗಳಿಗಿಂತ ಅವರ ಕುಟುಂಬದ ರಾಜಕಾರಣ ಹಾಗೂ ರಾಜ್ಯ ನಾಯಕರುಗಳ ಪ್ರತಿಷ್ಟೇಯೇ ಈ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾಗಿತ್ತು. ಅಭ್ಯರ್ಥಿಗಳ ಪ್ರಚಾರ, ಅವರ ಕಾರ್ಯವೈಖರಿ ಅವರ ಚುನಾವಣಾ ಕಾರ್ಯತಂತ್ರ, ಜನರೊಂದಿಗಿನ ಅವರ ನಡವಳಿಕೆ, ಅವರಲ್ಲಿರುವ ನಾಯಕತ್ವ ಗುಣ ಯಾವುದೂ ಅಷ್ಟೊಂದು ಮುನ್ನೆಲೆಗೆ ಬಂದಿರಲಿಲ್ಲ.
ಯಾರ ಪ್ರತಿಷ್ಠೆ?
ಚನ್ನಪಟ್ಟಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ನಡುವಿನ ಪ್ರತಿಷ್ಠೆ ಪಣಕ್ಕಿಟ್ಟಿದ್ದು, ಈ ಉಪ ಚುನಾವಣೆಯಲ್ಲಿ ಒಂದುವೇಳೆ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಿದರೆ, ಕುಮಾರಸ್ವಾಮಿ ಅವರಿಗೆ "ಕಡೆಗೂ ಮಗನನ್ನು ದಡಕ್ಕೆ ಸೇರಿಸಿದೆ," ಎಂದು ನಿಟ್ಟುಸಿರು ಬಿಡುವಂತಾಗುತ್ತದೆ. ಆ ಮೂಲಕ ತಮ್ಮ ಕುಟುಂಬದ ಕುಡಿಯನ್ನು ವಿಧಾನಸೌಧದ ಮೆಟ್ಟಿಲು ಹತ್ತಿಸುವ ಮೂಲಕ ಕುಟುಂಬ ರಾಜಕಾರಣದ ಪರಂಪರೆ ಯಶಸ್ವಿಯಾಗಿ ಮುಂದುವರೆಯುವಂತೆ ನೋಡಿಕೊಂಡಂತಾಗುತ್ತದೆ.
ಶಿಗ್ಗಾವಿಯಲ್ಲಿಯೂ ಬೊಮ್ಮಾಯಿಯವರ ಕುಟುಂಬದ ಮೂರನೇ ತಲೆಮಾರು ಭರತ್ ಬೊಮ್ಮಾಯಿ ಅದೃಷ್ಠ ಪರೀಕ್ಷೆಗಿಳಿದಿದ್ದು, ಈ ಚುನಾವಣೆಯಲ್ಲಿ ಭರತ್ ಬೊಮ್ಮಾಯಿಗಿಂತ ಅವರ ತಂದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪ್ರತಿಷ್ಠೆ ಮುಖ್ಯವಾಗಿದ್ದು, ಈ ಫಲಿತಾಂಶ ಪಕ್ಷ ಮತ್ತು ಬಿಜೆಪಿ ಪಕ್ಷದಲ್ಲಿ ಅವರ ನಾಯಕತ್ವದ ಭವಿಷ್ಯವನ್ನು ನಿರ್ಧರಿಸುತ್ತದೆ.
ಶಿಗ್ಗಾವಿ ಕ್ಷೇತ್ರದಲ್ಲಿ ಸ್ಥಳೀಯರ ಲೆಕ್ಕಾಚಾರ ಹಾಗೂ ಎಕ್ಸಿಟ್ ಪೋಲ್‌ಗಳ ಫಲಿತಾಂಶ ಬಸವರಾಜ ಬೊಮ್ಮಾಯಿಯವರು ಅಲ್ಪ ಕಾಲದ ನೆಮ್ಮದಿಯಾಗಿರುವಂತೆ ಮಾಡಿವೆ. ಆದರೂ, ಅಂತಿಮ ಫಲಿತಾಂಶ ಬರೂವವರೆಗೂ ಅಂತರಂಗದಲ್ಲಿ ಹೇಳಿಕೊಳ್ಳಲಾಗದ ಒಂದು ತಳಮಳ ಇದ್ದೇ ಇರುತ್ತದೆ. ನಿರೀಕ್ಷೆಯಂತೆ ಅವರ ಮಗನ ಗೆಲುವಾದರೆ, ಬೊಮ್ಮಾಯಿ ಕುಟುಂಬದ ಮೂರನೇ ತಲೆಮಾರು ಶಕ್ತಿ ಸೌಧಕ್ಕೆ ಲಗ್ಗೆ ಇಟ್ಟಂತಾಗುತ್ತದೆ.
ಸಂಡೂರಿನಲ್ಲಿ ಸಂಸದ ಇ. ತುಕಾರಾಮ್ ಅವರ ಪತ್ನಿ ಅನ್ನಪೂರ್ಣ ಸ್ಪರ್ಧಿಯಾಗಿದ್ದರೂ, ಈ ಕ್ಷೇತ್ರದಲ್ಲಿ ಮಾಜಿ ಸಚಿವ ಜೆ. ಜನಾರ್ದನ ರೆಡ್ಡಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ನಡುವಿನ ಪ್ರತಿಷ್ಠೆಯಾಗಿತ್ತು. ಅಲ್ಲಿಯೂ ಎಕ್ಸಿಟ್ ಪೋಲ್ ರಿಪೋರ್ಟ್ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸುತ್ತಾರೆ ಎಂದಿದ್ದು, ಈ ಮೂಲಕ ತುಕಾರಾಮ್ ಕುಟುಂಬದ ರಾಜಕಾರಣಕ್ಕೆ ಮುನ್ನುಡಿ ಬರೆದಂತಾಗಲಿದೆ.