ಚಾಲನೆ ವೇಳೆ ಮೊಬೈಲ್ ಬಳಸಿದರೆ ಶಿಕ್ಷೆ ಖಚಿತ; ಬಿಎಂಟಿಸಿ ಚಾಲಕರಿಗೆ ಎಚ್ಚರಿಕೆ
ಬಿಎಂಟಿಸಿ ಪ್ರಕಟಿಸಿರುವ ಹೊಸ ನಿಯಮಾವಳಿ ಪ್ರಕಾರ ಬಸ್ ಚಾಲನೆ ವೇಳೆ ಮೊಬೈಲ್ ಬಳಸಿದರೆ ತಕ್ಷಣವೇ ಅಮಾನತು ಹಾಗೂ ವರ್ಗಾವಣೆ ಕಡ್ಡಾಯ. ಜೊತೆಗೆ ಸಂಬಳದಲ್ಲೂ ಕಡಿತಗೊಳಿಸಲಾಗುವುದು ಎಂದು ಬಿಎಂಟಿಸಿ ಸಂಸ್ಥೆ ತನ್ನ ಚಾಲಕರಿಗೆ ಎಚ್ಚರಿಕೆ ನೀಡಿದೆ.
ಬಿಎಂಟಿಸಿ
ಬಸ್ ಚಾಲನೆ ಸಮಯದಲ್ಲಿ ಮೊಬೈಲ್ ಬಳಸುವ ಚಾಲಕರಿಗೆ ದಂಡಾಸ್ತ್ರದ ಜತೆಗೆ ಅಮಾನತು ಶಿಕ್ಷೆಯಂತಹ ಕಠಿಣ ಕ್ರಮಕ್ಕೆ ಬಿಎಂಟಿಸಿ ಮುಂದಾಗಿದೆ. ಬಸ್ ಚಾಲನೆ ವೇಳೆ ಮೊಬೈಲ್ ಬಳಸುವವರನ್ನು ಅಮಾನತು ಹಾಗೂ ವರ್ಗಾವಣೆ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಬಿಎಂಟಿಸಿ ಹೊರಡಿಸಿರುವ ಹೊಸ ನಿಯಮಾವಳಿಗಳಲ್ಲಿ ಸೂಚಿಸಿದೆ.
ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಅಪರಾಧವಾದರೂ ಯಾರೂ ಕೂಡ ನಿಯಮ ಪಾಲನೆ ಮಾಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಸಾರಿಗೆ ವಾಹನಗಳ ಚಾಲಕರು ಫೋನ್‌ನಲ್ಲಿ ಮಾತನಾಡುತ್ತಲೇ ಬಸ್ ಚಾಲನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಚಾಟ್ ಮಾಡುವುದು ಅಥವಾ ರೀಲ್ಸ್ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಸಾರ್ವಜನಿಕರ ಪ್ರಯಾಣದ ಹಿತದೃಷ್ಟಿಯಿಂದ ಮೊಬೈಲ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.
ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ಅಪಘಾತಗಳು ಹೆಚ್ಚುತ್ತಿರುವುದಕ್ಕೆ ಮೊಬೈಲ್ ಬಳಕೆಯೂ ಕಾರಣ ಎಂಬುದನ್ನು ಅಧಿಕಾರಿಗಳು ಮನಗಂಡು ಈ ಎಚ್ಚರಿಕೆ ನೀಡಿದ್ದಾರೆ. ಬಸ್ ಚಾಲನೆ ಸಂದರ್ಭದಲ್ಲಿ ಮೊಬೈಲ್ ಬಳಸುವ ಚಾಲಕರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಹಾಗೂ ವರ್ಗಾವಣೆ ಮಾಡಲಾಗುವುದು. ಜೊತೆಗೆ ವೇತನವನ್ನೂ ಕಡಿತ ಮಾಡಲಾಗುವುದು. ನಿಯಮ ಮೀರಿದರೆ ಪ್ರತಿ ಬಾರಿ ಶಿಕ್ಷೆಯ ತೀವ್ರತೆ ಹೆಚ್ಚಲಿದೆ ಎಂದು ಎಚ್ಚರಿಕೆ ನೀಡಿದೆ.
ಶಿಕ್ಷೆಯ ಪ್ರಮಾಣ ಏನು, ಎಷ್ಟು?
ಮೊದಲ ಬಾರಿಗೆ ಶಿಕ್ಷೆಗೆ ಒಳಗಾದ ಚಾಲಕರಿಗೆ 15 ದಿನಗಳ ಅಮಾನತು, ಶಿಸ್ತು ಕ್ರಮ (ನಿಯಮ-23) ಜರುಗಿಸಲಾಗುವುದು. ಅಮಾನತು ತೆರವಾದ ಬಳಿಕ ಬೇರೆ ಘಟಕಕ್ಕೆ ವರ್ಗಾವಣೆ ಮಾಡುವ ಜತೆಗೆ ವೇತನದಲ್ಲಿ 5 ಸಾವಿರ ರೂ.ಕಡಿತ ಮಾಡಲಾಗುವುದು.
ಎರಡನೇ ಬಾರಿ ತಪ್ಪು ಪುನರಾವರ್ತನೆಯಾದರೆ ಅಮಾನತು ಜೊತೆಗೆ ಬಡ್ತಿಗೆ 1 ವರ್ಷ ತಡೆ ನೀಡಲಾಗುವುದು ಅಥವಾ 5ಸಾವಿರ ರೂ.ಕಡಿತಗೊಳಿಸಲಾಗುವುದು.
ಮೂರನೇ ಬಾರಿಯೂ ಮೊಬೈಲ್ ಬಳಸಿ ಸಿಕ್ಕಿಬಿದ್ದರೆ ಬಡ್ತಿಗೆ 2 ವರ್ಷಗಳ ತಡೆ ಅಥವಾ 10 ಸಾವಿರ ರೂ. ಕಡಿತ ಶಿಕ್ಷೆ ಆಗಲಿದೆ. ನಾಲ್ಕನೇ ಬಾರಿಯೂ ಪುನರಾವರ್ತನೆಯಾದರೆ ಶಾಶ್ವತ ಬಡ್ತಿಗೆ ತಡೆ ಅಥವಾ 2 ವರ್ಷ ತಡೆ, 20 ಸಾವಿರ ರೂ.ಕಡಿತ ಮಾಡಲಾಗುವುದು.
ಐದನೇ ಬಾರಿ ಸಿಕ್ಕಿಬಿದ್ದರೆ ವಾರ್ಷಿಕ ಬಡ್ತಿಗೆ ಶಾಶ್ವತ ತಡೆ ಅಥವಾ 25,000 ರೂ. ಕಡಿತ ಇರಲಿದೆ. ಆರನೇ ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ತಪ್ಪು ಮಾಡಿದರೆ 2 ವರ್ಷದ ಬಡ್ತಿಗೆ ಶಾಶ್ವತ ತಡೆ ಅಥವಾ 30 ಸಾವಿರ ರೂ. ವೇತನ ಕಡಿತ ಮಾಡಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.
ಈ ನಿಯಮಗಳು 1971ರ ಬಿಎಂಟಿಸಿ ಶಿಸ್ತು ನಿಯಮಾವಳಿ, ನಿಯಮ 18(b) ಅಡಿ ಜಾರಿಗೆ ಬರಲಿದ್ದು, ಸಾರ್ವಜನಿಕರ ಸುರಕ್ಷತೆ ಖಾತ್ರಿಪಡಿಸುವುದೇ ಮುಖ್ಯ ಉದ್ದೇಶ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಹೆಚ್ಚುತ್ತಿರುವ ಬಿಎಂಟಿಸಿ ಬಸ್ ಅಪಘಾತ
ಇತ್ತೀಚೆಗೆ ಬಿಎಂಟಿಸಿ ಬಸ್ ಅಪಘಾತಗಳು ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರಿನ ರೂಪೇನಅಗ್ರಹಾರ ಬಳಿ ಆ.13ರ ಮಧ್ಯಾಹ್ನ 2.15ರ ಸುಮಾರಿಗೆ ಬಿಎಂಟಿಸಿ ಬಸ್ ಹರಿದು ಬೈಕ್ ಸವಾರ ಮೃತಪಟ್ಟಿದ್ದರು. ಆಟೊಗೆ ತಗುಲಿ ಕೆಳಕ್ಕೆ ಬಿದ್ದ ಬೈಕ್ ಸವಾರನ ಮೇಲೆ ಬಿಎಂಟಿಸಿ ಬಸ್ ಚಕ್ರ ಹರಿದಿತ್ತು.
ಬಿಎಂಟಿಸಿ ಬಸ್ ಹರಿದು ಟೆಕ್ಕಿ ರೋಷನ್ ಎಂಬುವರು ಸಂಜಯ್ ನಗರದಲ್ಲಿ ಮೃತಪಟ್ಟಿದ್ದರು. ಆ.20 ರಂದು ಬಿಎಂಟಿಸಿ ಬಸ್ ಹತ್ತಲು ಹೋದ ವ್ಯಕ್ತಿ ಅದೇ ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದ ಘಟನೆ ಬೆಂಗಳೂರಿನ ಜಯನಗರ ಬಸ್ ನಿಲ್ದಾಣದ ಬಳಿ ನಡೆದಿತ್ತು. ಹೀಗೆ ಸಾಲು ಸಾಲು ಅಪಘಾತಗಳು ಸಂಭವಿಸಿದ್ದು, ಬಿಎಂಟಿಸಿ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು.