
ಬಸ್ ಹತ್ತುತ್ತಿದ್ದವನ ತಲೆ ಮೇಲೆಯೇ ಹರಿದ ಬಿಎಂಟಿಸಿ; ಪ್ರಯಾಣಿಕ ಸಾವು
ಚಾಲಕನ ಅಜಾಗರೂಕತೆಯಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಬಿಎಂಟಿಸಿ ಬಸ್ ಹತ್ತಲು ಹೋದ ವ್ಯಕ್ತಿ ಅದೇ ಬಸ್‌ನ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಜಯನಗರ ಬಸ್ ನಿಲ್ದಾಣದ ಬಳಿ ನಡೆದಿದೆ.
ಮೃತನನ್ನು ಜಯನಗರ 4ನೇ ಬ್ಲಾಕ್ ನಿವಾಸಿ ಸಂಪಂಗಿ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕೆ.ಆರ್. ಮಾರ್ಕೆಟ್‌ನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಂಪಂಗಿ ಎಂಬ ವ್ಯಕ್ತಿ ಮಾರ್ಕೆಟ್‌ಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ರೂಟ್ ನಂ.25A ಬಸ್ ಹತ್ತುವಾಗ ಚಾಲಕ ಬಸ್ ಅನ್ನು ದಿಢೀರನೆ ಮುಂದಕ್ಕೆ ಚಲಾಯಿಸಿದ್ದರಿಂದ ಹಾಗೂ ಬಾಗಿಲನ್ನು ಮುಚ್ಚಿದ್ದರಿಂದ ಬಸ್ ಹತ್ತುತ್ತಿದ್ದ ಪ್ರಯಾಣಿಕ ಸಂಪಂಗಿ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಬಾಗಿಲ ಬಳಿ ಬಿದ್ದ ಪ್ರಯಾಣಿಕನ ಮೇಲೆ ಹಿಂಬದಿ ಚಕ್ರ ತಲೆ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಜಯನಗರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲಕನ ಅಜಾಗರೂಕತೆಯಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಒಂದೇ ವಾರದಲ್ಲಿ ಮೂರು ಅಪಘಾತ
ಕಳೆದ ಒಂದು ವಾರದಲ್ಲಿ ಬಿಎಂಟಿಸಿ ಬಸ್‌ಗಳು ಹರಿದು ಮೂವರು ಮೃತಪಟ್ಟಿದ್ದಾರೆ. ಬೆಂಗಳೂರಿನ ರೂಪೇನ ಅಗ್ರಹಾರ ಬಳಿ ಆ.13ರ ಮಧ್ಯಾಹ್ನ 2.15ರ ಸುಮಾರಿಗೆ ಬಿಎಂಟಿಸಿ ಬಸ್ ಹರಿದು ಬೈಕ್ ಸವಾರ ಮೃತಪಟ್ಟಿದ್ದರು. ಚಂದಾಪುರದಿಂದ ಬನಶಂಕರಿಗೆ ಬರುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿತ್ತು. ರಸ್ತೆಯಲ್ಲಿ ಬೈಕ್ ಸವಾರ ಹೋಗುವಾಗ ಪಕ್ಕದಲ್ಲಿ ಹೋಗುತ್ತಿದ್ದ ಆಟೋಗೆ ತಗಲಿ ಕೆಳಕ್ಕೆ ಬಿದ್ದ ವೇಳೆ ಬೈಕ್ ಸವಾರನ ಮೇಲೆ ಬಿಎಂಟಿಸಿ ಬಸ್‌ನ ಚಕ್ರ ಹರಿದಿದೆ. ಬಿಎಂಟಿಸಿ ಬಸ್ಸಿನ ಹಿಂಬದಿ ಚಕ್ರ ಬೈಕ್ ಸವಾರನ ಮೇಲೆ ಹರಿಯುತ್ತಿದ್ದಂತೆ, ಸವಾರ ಅಲ್ಲಿಯೇ ಮೃತಪಟ್ಟಿದ್ದರು.
ಬಿಎಂಟಿಸಿ ಬಸ್ ಹರಿದು ಟೆಕ್ಕಿ ರೋಷನ್ ಎನ್ನುವವರು ಮೃತಪಟ್ಟಿರುವ ಘಟನೆ ಸಂಜಯ್ ನಗರದಲ್ಲಿ ನಡೆದಿದೆ. ಬಿಎಂಟಿಸಿ ಬಸ್‌ನ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಂಜಯನಗರ ನಿವಾಸಿ ರೋಷನ್ ಮೃತಪಟ್ಟಿದ್ದರು. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ ಬಸ್ ಅನ್ನು ಬೈಕ್ ಸವಾರ ಓವರ್‌ಟೇಕ್ ಮಾಡಲು ಹೋಗಿ ಬಸ್ಸಿನ ಹಿಂಬದಿ ಚಕ್ರದಡಿ ಬಿದ್ದಿದ್ದಾನೆ. ಕೆಳಗೆ ಬಿದ್ದ ಸವಾರನ ಮೇಲೆ ಹರಿದ ಬಿಎಂಟಿಸಿ ಬಸ್‌ನ ಬಲಬದಿಯ ಚಕ್ರ ಹರಿದಿದೆ. ಬೈಕ್ ಸವಾರ ರೋಷನ್ ಮೃತಪಟ್ಟಿದ್ದಾನೆ.