ಮೆಟ್ರೋ ಪಿಲ್ಲರ್‌ಗೆ ಬಿಎಂಟಿಸಿ ಬಸ್ ಡಿಕ್ಕಿ: 11 ಪ್ರಯಾಣಿಕರಿಗೆ ಗಾಯ
ಮೈಲಸಂದ್ರದ ಬಳಿ ಏಕಾಏಕಿ ಸ್ಟೇರಿಂಗ್ ರಾಡ್ ಮುರಿದ ಪರಿಣಾಮ ಮೆಟ್ರೋ ಪಿಲ್ಲರ್‌ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.;
ಸಾಂದರ್ಭಿಕ ಚಿತ್ರ
ಸ್ಟೇರಿಂಗ್ ರಾಡ್ ಮುರಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಿಎಂಟಿಸಿ ಬಸ್ ಏಕಾಏಕಿ ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದ್ದು, ಚಾಲಕ ಸೇರಿ 11 ಮಂದಿ ಗಾಯಗೊಂಡಿರುವ ಘಟನೆ ಕೆಂಗೇರಿ ಸಮೀಪದ ಮೈಲಸಂದ್ರದ ಬಳಿ ನಡೆದಿದೆ.
ಶುಕ್ರವಾರ (ಜೂ.6) ರಾತ್ರಿ 9 ಗಂಟೆಗೆ ಬಿಎಂಟಿಸಿ ಬಸ್, ಕೆ.ಆರ್. ಮಾರ್ಕೆಟ್ ನಿಲ್ದಾಣದಿಂದ ಬಿಡದಿಗೆ ತೆರಳುತ್ತಿತ್ತು. ಈ ವೇಳೆ ಮೈಲಸಂದ್ರದ ಬಳಿ ಸ್ಟೇರಿಂಗ್ ರಾಡ್ ತುಂಡಾದ ಪರಿಣಾಮ ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ 11 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ಪರೀಶಿಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದಿಂದಾಗಿ ಬೆಂಗಳೂರು - ಮೈಸೂರು ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಬಸ್ ತೆರವುಗೊಳಿಸಿದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.