Bagappa Harijan: ಭೀಮಾತೀರದಲ್ಲಿ ಮತ್ತೆ ಚೆಲ್ಲಿತು ರಕ್ತ ; ಬಾಗಪ್ಪ ಹರಿಜನ ಹತ್ಯೆ

Bagappa Harijan: ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಾಗಪ್ಪ ಹರಿಜನನ​ ಮೇಲೆ ಈ ಹಿಂದೆಯೂ ಗುಂಡಿನ ದಾಳಿ ನಡೆದಿತ್ತು. ಆದರೆ, ಜೀವಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆದು ಎದ್ದು ಕುಳಿತು ಹಾವಳಿ ಮುಂದುವರಿಸಿದ್ದ.;

Update: 2025-02-11 18:57 GMT
ಬಾಗಪ್ಪ ಹರಿಜನ

ವಿಜಯಪುರ: ಭೀಮಾ ತೀರದ ರಕ್ತ ಸಿಕ್ತ ಅಧ್ಯಾಯಕ್ಕೆ ಮತ್ತೊಂದು ಕೊಲೆ ಕೇಸ್​ ಸೇರ್ಪಡೆಗೊಂಡಿದೆ. ಕುಖ್ಯಾತ ರೌಡಿ ಬಾಗಪ್ಪ ಹರಿಜನ (Bhagappa Harijan) ಮಂಗಳವಾರ ಕೊಲೆಯಾಗಿದ್ದಾನೆ. ಕುಖ್ಯಾತ ಹಂತಕ ಚಂದಪ್ಪ ಹರಿಜನ್​ ಸಹೋದರ ಸಂಬಂಧಿ ಹಾಗೂ ಖಾಸಾ ಶಿಷ್ಯನಾಗಿದ್ದ ಬಾಗಪ್ಪನನ್ನು ವಿಜಯಪುರ (Vijapaur) ನಗರದ ರೇಡಿಯೋ ಕೇಂದ್ರದ ಬಳಿಯ ಮನೆ ಮುಂದೆ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.

ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಾಗಪ್ಪ ಹರಿಜನನ​ ಮೇಲೆ ಈ ಹಿಂದೆಯೂ ಗುಂಡಿನ ದಾಳಿ ನಡೆದಿತ್ತು. ಆದರೆ, ಜೀವಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆದು ಎದ್ದು ಕುಳಿತು ಹಾವಳಿ ಮುಂದುವರಿಸಿದ್ದ. ಮಂಗಳವಾರ ರಾತ್ರಿ ಆತನ ಮನೆಗೆ ಬಂದ ಕೆಲವರು ಹೆಸರು ಹಿಡಿದು ಕರೆದಿದ್ದು ಆತ ಹೊರಗೆ ಬಂದ ತಕ್ಷಣ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಬಾಗಪ್ಪ ಹರಿಜನ ಭೀಮಾತೀರ ಕಂಡಿರುವ ಕುಖ್ಯಾತ ಹಂತಕ ಚಂದಪ್ಪ ಹರಿಜನನ ಶಿಷ್ಯ. ಶಾರ್ಪ್​ ಶೂಟರ್ ಎಂಬ ಖ್ಯಾತಿ ಹೊಂದಿದ್ದ ಆತ ಗ್ಯಾಂಗ್​ವಾರ್​ ಹಾಗೂ ಕೊಲೆ ಪ್ರಕರಣಗಳಲ್ಲಿ ಆರೋಪಿ. 2000ರಲ್ಲಿ ಚಂದಪ್ಪ ಹರಿಜನ ಹತ್ಯೆಯಾದ ಬಳಿಕ ಬಾಗಪ್ಪ ಭೀಮಾ ತೀರದಲ್ಲಿ ಪಾರಮ್ಯ ಸಾಧಿಸಲು ಆರಂಭಿಸಿದ್ದ .

ಆಸ್ತಿ ವಿಚಾರಕ್ಕೆ ವೈಷಮ್ಯ

ಚಂದಪ್ಪ ಹರಿಜನ ಹತ್ಯೆಯಾದ ಬಳಿಕ ಸ್ಥಳೀಯ ಪ್ರಭಾವ ಹಾಗೂ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಚಂದಪ್ಪನ ಸಹೋದರ ಯಲ್ಲಪ್ಪ ಹರಿಜನ​ಗೂ ಬಾಗಪ್ಪನಿಗೂ ವೈಷಮ್ಯ ಉಂಟಾಗಿತ್ತು., ಚಂದಪ್ಪ ಹರಿಜನನ ಸಂಬಂಧಿ ಬಸವರಾಜ್ ಹರಿಜನನ​ ಹತ್ಯೆ ಪ್ರಕರಣದಲ್ಲೂ ಬಾಗಪ್ಪ ಆರೋಪಿ. 

ಕೋರ್ಟ್​ ಆವರಣದಲ್ಲಿನಡೆದಿತ್ತು ಗುಂಡಿನ ದಾಳಿ

2018ರಲ್ಲಿ ವಿಜಯಪುರ ಕೋರ್ಟ್ ಆವರಣದಲ್ಲಿ ಬಾಗಪ್ಪನ ಮೇಲೆ ಎದುರಾಳಿ ಗ್ಯಾಂಗ್​ ಗುಂಡಿನ ದಾಳಿ ನಡೆಸಿತ್ತು. ಎಡ ಭುಜ, ಹೊಟ್ಟೆ ಸೇರಿದಂತೆ 4 ಗುಂಡುಗಳು ಹೊಕ್ಕಿದ್ದರೂ ಬದುಕುಳಿದ್ದ. ಚಿಕಿತ್ಸೆ ಪಡೆದು ಮತ್ತೆ ಬಂದ ಬಾಗಪ್ಪ ಇನ್ನು ಮುಂದೆ ನಾನು ಯಾರ ತಂಟೆಗೂ ಹೋಗಲ್ಲ. ನನ್ನ ತಂಟೆಗೆ ಬಂದ್ರೆ ಬಿಡೋದಿಲ್ಲ ಅಂತ ಭೀಮೆ ಮೇಲೆ ಆಣೆ ಮಾಡಿದ್ದು ಸುದ್ದಿಯಾಗಿತ್ತು.

ಕೊಲೆಗಾರರು ಯಾರು?

2018ರಲ್ಲಿ ಬಾಗಪ್ಪ ಹರಿಜನ್ ಮೇಲೆ ಗುಂಡು ಹಾರಿಸಿದ್ದು ಪೀರಪ್ಪ ಹಡಪದ. ಆತನಿಗೆ ಸುಪಾರಿ ಕೊಟ್ಟಿದ್ದು ಚಂದಪ್ಪ ಹರಿಜನ್ ಅಣ್ಣ ಯಲ್ಲಪ್ಪ ಹರಿಜನ್‌ನ ಮಕ್ಕಳು. ಆದರೆ, ಈಗ ಕೊಲೆ ಮಾಡಿದ್ದು ಯಾರು ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಾಗಿದೆ.

ಭೀಮಾ ತೀರದಲ್ಲಿ ಸಿನಿಮಾ

ಭೀಮಾ ತೀರದ ಈ ಗ್ಯಾಂಗ್​ವಾರ್​ ಕುರಿತು ಸ್ಯಾಂಡಲ್​ವುಡ್ ಸಿನಿಮಾವೂ ಆಗಿತ್ತು. ಚಂದಪ್ಪ ಹರಿಜನನ ಕುರಿತ 'ಭೀಮಾ ತೀರದಲ್ಲಿ ಎಂಬ ಹೆಸರಿನ ಸಿನಿಮಾವನ್ನು ಓಂ ಪ್ರಕಾಶ್​ ರಾವ್ ನಿರ್ದೇಶಿಸಿದ್ದರು. ದುನಿಯಾ ವಿಜಯ್​​, ಪ್ರಣಿತಾ ಸುಭಾಷ್​ ಪಾತ್ರ ವಹಿಸಿದ್ದರು. ಈ ಸಿನಿಮಾ ಶೀರ್ಷಿಕೆ ಮತ್ತು ಇನ್ನಿತರ ಕಾರಣಗಳಿಗೋಸ್ಕರ ವಿವಾದಕ್ಕೂ ಒಳಗಾಗಿತ್ತು. 

Tags:    

Similar News