ಸಂವಿಧಾನ ಹಿಡಿದು ಓಡಾಡುವುದು ನಿಮಗೆ ದೇಶದ್ರೋಹ, ನಮಗೆ ದೇಶಪ್ರೇಮ: ಜೋಶಿಗೆ ಹರಿಪ್ರಸಾದ್ ಟಾಂಗ್
ಕೈಯಲ್ಲಿ ಸಂವಿಧಾನ ಹಿಡಿದು ಓಡಾಡುವ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯೇ ದೇಶದ್ರೋಹದ ಕೃತ್ಯ ಎಂದು ಟೀಕಿಸಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಸಂವಿಧಾನವನ್ನು ಹಿಡಿದು ಓಡಾಡುವುದು ನಿಮಗೆ ದೇಶದ್ರೋಹವಾದರೆ, ನಮಗೆ ಅದು ದೇಶಪ್ರೇಮವಾಗಿದೆ ಎಂದು ಬಿ ಕೆ ಹರಿಪ್ರಸಾದ್, ಕೇಂದ್ರ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಗಾಂಧಿ ಭಾರತ ಕಾರ್ಯಕ್ರಮದ ಪ್ರಚಾರ ಪೋಸ್ಟರುಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಭಾಗವನ್ನು ಹೊರತುಪಡಿಸಿದ ಭಾರತ ನಕ್ಷೆ ಬಳಸಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದ ಜೋಶಿ ಅವರು, ಇದು ಕಾಂಗ್ರೆಸ್ ದೇಶದ್ರೋಹದ ಸಂಸ್ಕೃತಿಗೆ ಸಾಕ್ಷಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆ ಟೀಕೆಗೆ ಇದೀಗ ಪ್ರತಿಕ್ರಿಯಿಸಿರುವ ಬಿ ಕೆ ಹರಿಪ್ರಸಾದ್, ಸಂವಿಧಾನ ಹಿಡಿದು ಓಡಾಡುವುದು ನಿಮಗೆ ದೇಶದ್ರೋಹ, ಅದುವೇ ನಮಗೆ ದೇಶಪ್ರೇಮವಾಗಿದೆ. ಸಂವಿಧಾನದ ಮೇಲೆ ದ್ವೇಷ, ತಾತ್ಸಾರ- ಮನುಸ್ಮೃತಿಯ ಮೇಲೆ ಆಂತರ್ಯದ ಪ್ರೀತಿಯೇ? ನಾವು ಸಂವಿಧಾನ ಹಿಡಿದು ಓಡಾಡುತ್ತೇವೆ, ಧೈರ್ಯವಿದ್ದರೆ ನೀವು ಮನುಸ್ಮೃತಿ ಹಿಡಿದು ಓಡಾಡುತ್ತೀರಾ? ಎಂದು ಸವಾಲೆಸೆದಿದ್ದಾರೆ.
ಮಹಾತ್ಮ ಗಾಂಧಿ ಸಾರಥ್ಯದಲ್ಲಿ ನೂರು ವರ್ಷದ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನೆನಪಿಗಾಗಿ ನಡೆದ ಗಾಂಧಿ ಭಾರತ ಕಾರ್ಯಕ್ರಮ ಪೋಸ್ಟರುಗಳಲ್ಲಿ ಬಳಸಿದ ದೇಶದ ನಕ್ಷೆ ವಿವಾದಕ್ಕೀಡಾಗಿತ್ತು.
ಆ ಬಗ್ಗೆ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದ ಸಚಿವ ಜೋಶಿ, ಭಾರತದ ಮುಕುಟಮಣಿ, ಭಾರತದ ಹಮ್ಮೆ ಕಾಶ್ಮೀರದಲ್ಲಿ ಶಾಂತಿಯನ್ನು ಪಸರಿಸಿ, ಲಕ್ಷಾಂತರ ಜನ ಪ್ರವಾಸಿಗರ ಆಕರ್ಷಣೀಯ ಪ್ರದೇಶವನ್ನಾಗಿ ಪ್ರಧಾನಿ ನರೇಂದ್ರ ಮೋದಿಯವರು ಭವ್ಯ ಭಾರತ ಸೃಷ್ಟಿಸಿದ್ದಾರೆ. ಆದರೆ, ಗಾಂಧಿ ಭಾರತದ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ, ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶವನ್ನು ಪಾಕಿಸ್ತಾನಕ್ಕೆ ಧಾರೆ ಎರೆದು, ಭಾರತದ ನಕಾಶೆಯನ್ನು ತಿರುಚಿರುವುದು ದೇಶದ್ರೋಹ ಎಂದು ಕಿಡಿಕಾರಿದ್ದರು.
ಕೈಯಲ್ಲಿ ಸಂವಿಧಾನ ಹಿಡಿದು ಓಡಾಡುವ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯೇ ದೇಶದ್ರೋಹದ ಕೃತ್ಯ. ದೇಶದ ಜನ ಕಾಂಗ್ರೆಸ್ ಪಕ್ಷದ ಇಂತಹ ನಿಲುವುಗಳನ್ನು ಎಂದಿಂಗೂ ಸ್ವೀಕರಿಸುವುದಿಲ್ಲ. ನಾಚಿಕೆ ಲಜ್ಜೆಯನ್ನು ಬಿಟ್ಟ ಕಾಂಗ್ರೆಸ್ ಪಕ್ಷಕ್ಕೆ ಜನ ಉತ್ತರ ನೀಡುತ್ತಾರೆ ಎಂದು ಜೋಶಿ ವಾಗ್ದಾಳಿ ನಡೆಸಿದ್ದರು.