ಸಿಎಂ ಸಿದ್ದರಾಮಯ್ಯ- ಬಿ ಕೆ ಹರಿಪ್ರಸಾದ್‌ ಭೇಟಿ | ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ ಬೆಳವಣಿಗೆ

Update: 2024-08-08 08:31 GMT

ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದ ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ ದಿಢೀರಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಒಂದು ವರ್ಷದ ನಂತರ ಉಭಯ ನಾಯಕರು ಭೇಟಿಯಾಗಿ ಸಮಾಲೋಚನೆ ನಡೆಸಿರುವುದು ಕಾಂಗ್ರೆಸ್ ಪಾಳೆಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

ಕಳೆದ ವಾರವಷ್ಟೇ ಹರಿಪ್ರಸಾದ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆಗೆ ಸುದೀರ್ಘ ಮಾತುಕತೆ ನಡೆಸಿದ್ದರು. ಪಕ್ಷ ಹಾಗೂ ಸರ್ಕಾರದ ಪ್ರಮುಖ ಬೆಳವಣಿಗೆಗೆ ಸಂಬಂಧಪಟ್ಟಂತೆ ದೆಹಲಿಯಲ್ಲಿ ಕೆ ಸಿ ವೇಣುಗೋಪಾಲ್‌ ಹಾಗೂ ಪ್ರಮುಖ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆ ಬಳಿಕ ಎಐಸಿಸಿ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಎರಡು ದಿನಗಳ ಕಾಲ ಕಾಂಗ್ರೆಸ್‌ ಪ್ರಮುಖರು ಮತ್ತು ಶಾಸಕರೊಂದಿಗೆ ಸಮಾಲೋಚನೆ ನಡೆಸಿ ವಾಪಸ್ಸಾಗಿದ್ದರು. ಅದಾದ ಕೆಲವೇ ದಿನಗಳಲ್ಲಿ ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲೇ ಹರಿಪ್ರಸಾದ್ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ಉಭಯ ನಾಯಕರು ಸುದೀರ್ಘ ಚರ್ಚೆ ನಡೆಸಿದ್ದಾರೆ.

ವರ್ಷದ ಬಳಿಕ ಉಭಯ ನಾಯಕರು ಮುಖಾಮುಖಿಯಾಗಿ ಸುದೀರ್ಘ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಮೈಸೂರಿನಲ್ಲಿ ಶುಕ್ರವಾರ ನಡೆಯಲಿರುವ ಜನಾಂದೋಲನ ಸಮಾವೇಶದ ವಿಚಾರವಾಗಿಯೂ ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಶೀಘ್ರದಲ್ಲೇ ಸಚಿವ ಸಂಪುಟಕ್ಕೆ ಮೇಜರ್‌‌ ಸರ್ಜರಿಯಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಬಿಕೆ ಹರಿಪ್ರಸಾದ್‌ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಡಿಗ ಸಮುದಾಯದ ಹರಿಪ್ರಸಾದ್‌ ಅವರು ಸಮುದಾಯದ ಕೋಟಾದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದಾರೆ. ಒಂದುವೇಳೆ ಹರಿಪ್ರಸಾದ್‌ ಅವರಿಗೆ ಸಚಿವ ಸ್ಥಾನ ನೀಡಿದರೆ, ಸಮುದಾಯದ ಹಾಲಿ ಸಚಿವ ಮಧು ಬಂಗಾರಪ್ಪ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅಹಿಂದ ವಿಚಾರವಾಗಿ ಹರಿಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ ಸಿಎಂ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ದೊರೆಯದೇ ಇರುವ ಬಗ್ಗೆಯೂ ಹರಿಪ್ರಸಾದ್ ಆಗಾಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದರು.

ಹರಿಪ್ರಸಾದ್ ಭೇಟಿ ಹಾಗೂ ಮಾತುಕತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ʻʻಹರಿಪ್ರಸಾದ್​ ನಮ್ಮ ಪಕ್ಷದ ನಾಯಕ, ಅವರ ಭೇಟಿಯಲ್ಲಿ ವಿಶೇಷ ಏನೂ ಇಲ್ಲ. ಉಭಯ ಕುಶಲೊಪರಿ ಮಾತನಾಡಿದ್ದೇವೆ ಅಷ್ಟೇʼʼ ಎಂದು ಹೇಳಿದ್ದಾರೆ.

Tags:    

Similar News