ಬೇಲೆಕೇರಿ ಪ್ರಕರಣ | ಅದಾನಿ ವಿರುದ್ಧ ತನಿಖೆಗೆ ಬಿ.ಕೆ.ಹರಿಪ್ರಸಾದ್ ಆಗ್ರಹ

ನ್ಯಾಯಮೂರ್ತಿ ಎನ್.‌ ಸಂತೋಷ್‌ ಹೆಗ್ಡೆ ಅವರು ಸಲ್ಲಿಸಿರುವ ವರದಿ ಮತ್ತು ಅದಕ್ಕೆ ಪೂರಕವಾಗಿ ಐಎಫ್‌ಎಸ್‌ ಅಧಿಕಾರಿ ಡಾ.ಯು.ವಿ. ಸಿಂಗ್‌ ಸಲ್ಲಿಸಿರುವ ವರದಿಗಳೆಲ್ಲವೂ ರಾಜ್ಯ ಸರ್ಕಾರದ ಬಳಿಯೇ ಇವೆ. ಅದಾನಿ ವಿರುದ್ಧ ಕ್ರಮ ಜರುಗಿಸಲು ರಾಜ್ಯ ಸರ್ಕಾರ ಇನ್ನೂ ವಿಳಂಬ ಮಾಡಬಾರದು ಎಂದು ಹರಿಪ್ರಸಾದ್‌ ಆಗ್ರಹಿಸಿದ್ದಾರೆ.

Update: 2024-12-07 09:26 GMT
ಬಿ.ಕೆ.ಹರಿಪ್ರಸಾದ್
Click the Play button to listen to article

ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಅದಾನಿ ಗ್ರೂಪ್‌ ವಿರುದ್ಧ ಅಮೆರಿಕಾದ ನ್ಯಾಯಾಲಯ ಗಂಭೀರ ಆರೋಪ ಹೊರಿಸಿರುವ ಹಿನ್ನಲೆಯಲ್ಲಿ ಸಂಸತ್‌ ಅಧಿವೇಶನದಲ್ಲಿ ಪ್ರತಿಪಕ್ಷಗಳು ಚರ್ಚೆಗೆ ಪಟ್ಟುಹಿಡಿದಿವೆ. ಆದರೆ ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ನಡೆದಿರುವ ಬೇಲೆಕೇರಿ ಅದಿರು ಕಳವು ಪ್ರಕರಣದಲ್ಲೂ ಅದಾನಿ ಗ್ರೂಪ್‌ ಭಾಗಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ದಾಖಲೆ ಸಮೇತ ಗಂಭೀರ ಆರೋಪ ಮಾಡಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹರಿಪ್ರಸಾದ್, ಲೋಕಾಯುಕ್ತ ವರದಿಯನ್ನು ಉಲ್ಲೇಖಿಸಿ ಶನಿವಾರ ಮಾತನಾಡಿದರು.

ಬೇಲೆಕೇರಿ ಬಂದರಿನ ಮೂಲಕ 2006-07ರಿಂದ 2010ರ ಏಪ್ರಿಲ್-ಮೇ ಅವಧಿಯಲ್ಲಿ 2.30 ಕೋಟಿ ಟನ್‌ ಕಬ್ಬಿಣದ ಅದಿರನ್ನು ವಿದೇಶಗಳಿಗೆ ರಫ್ತು ಮಾಡಲಾಗಿತ್ತು. ಈ ಅವಧಿಯಲ್ಲಿ ಬೇಲೆಕೇರಿ ಬಂದರಿಗೆ 1.26 ಕೋಟಿ ಟನ್‌ ಕಬ್ಬಿಣದ ಅದಿರನ್ನು ಸಾಗಿಸಲು ಮಾತ್ರ ಪರವಾನಗಿ ನೀಡಲಾಗಿತ್ತು. 77.38 ಲಕ್ಷ ಟನ್‌ ಕಬ್ಬಿಣದ ಅದಿರನ್ನು ಬೇಲೆಕೇರಿ ಬಂದರಿಗೆ ಸಾಗಿಸಿ, ಕಳ್ಳಸಾಗಣೆ ಮಾಡಲಾಗಿತ್ತು ಎಂಬುದು ಲೋಕಾಯುಕ್ತ ನ್ಯಾಯಮೂರ್ತಿ ಎನ್.‌ ಸಂತೋಷ್‌ ಹೆಗ್ಡೆ ಅವರು ಸಲ್ಲಿಸಿರುವ ತನಿಖಾ ವರದಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಬೇಲೆಕೇರಿ ಬಂದರಿನ ಮೂಲಕ ಕಬ್ಬಿಣದ ಅದಿರಿನ ಕಳ್ಳಸಾಗಣೆ ನಡೆಯುತ್ತಿರುವ ಆರೋಪದ ಮೇಲೆ ಬಂದರಿನಲ್ಲಿ 2010ರ ಮಾರ್ಚ್‌ 20ರಂದು ಪರಿಶೀಲನೆ ನಡೆಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು 8,05,991.083 ಟನ್‌ ಅದಿರನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಮಲ್ಲಿಕಾರ್ಜುನ ಶಿಪ್ಪಿಂಗ್, ಅದಾನಿ ಎಂಟರ್ ಪ್ರೈಸಸ್, ಸಲ್ಗಾಂವಕರ್ ಮೈನಿಂಗ್ ಇಂಡಸ್ಟ್ರಿ ಮತ್ತು ರಾಜ್ ಮಹಲ್ ಕಂಪನಿಗಳು ಈ ಅದಿರನ್ನು ವಿದೇಶಕ್ಕೆ ಕಳ್ಳಸಾಗಾಣಿಕೆ ಮಾಡುತ್ತಿರುವುದನ್ನು ಲೋಕಾಯುಕ್ತ ತನಿಖೆಯಲ್ಲಿ ಪತ್ತೆಯಾಗಿತ್ತು. ಎಲ್ಲಾ ಕಂಪನಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆಯೂ ಲೋಕಾಯುಕ್ತ ಸಂಸ್ಥೆ ಶಿಫಾರಸು ಮಾಡಿತ್ತು ಎಂದು ಅವರು ವಿವರಿಸಿದರು.

ಆದರೆ ಅದಾನಿ ಕಂಪೆನಿ ಹೊರತುಪಡಿಸಿ ಉಳಿದ ಮೂರೂ ಕಂಪನಿಗಳ ವಿರುದ್ಧ ಸಿಬಿಐ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಜನಪ್ರತಿನಿಧಿಗಳ ಪ್ರಕರಣಗಳಿಗೆ ಸಂಬಂಧಿಸಿದ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡು, ಕಾರವಾರ ಶಾಸಕ ಸತೀಶ್‌ ಸೈಲ್‌ ಸೇರಿದಂತೆ ಹಲವರಿಗೆ ನ್ಯಾಯಾಲಯ ಜೈಲು ಶಿಕ್ಷೆ, ದಂಡ ವಿಧಿಸಿದೆ. ಸದ್ಯ ಶಿಕ್ಷೆಯನ್ನು ಹೈಕೋರ್ಟ್‌ ಅಮಾನತ್ತಿನಲ್ಲಿ ಇರಿಸಿದೆ ಎಂದ ಅವರು, ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ನ್ಯಾಯಮೂರ್ತಿ ಎನ್.‌ ಸಂತೋಷ್‌ ಹೆಗ್ಡೆ ಅವರು ರಾಜ್ಯ ಸರ್ಕಾರಕ್ಕೆ 2011ರ ಜುಲೈ 27ರಂದು ಬೃಹತ್‌ ವರದಿ ಸಲ್ಲಿಸಿದ್ದರು. ಆ ವರದಿ ಆಧರಿಸಿ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.‌ ಹಿರೇಮಠ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್‌ ಆದೇಶದಂತೆ ಹಲವರ ವಿರುದ್ಧ ಸಿಬಿಐ ತನಿಖೆ ನಡೆದರೆ, ಇನ್ನೂ ಹಲವರ ವಿರುದ್ಧ ಲೋಕಾಯುಕ್ತದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.

ಬೇಲೇಕೇರಿ ಬಂದರಿನ ಮೂಲಕ ಅದಿರು ಕಳ್ಳ ಸಾಗಣೆ ಹಾಗೂ ಅರಣ್ಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ಅದಿರು ಕಳವು ಮಾಡಿ, ರಫ್ತು ಮಾಡಿದ್ದ ಆರೋಪದಡಿ ಮೂರು ಕಂಪನಿಗಳ ವಿರುದ್ಧ ತನಿಖೆಯೂ ಮುಗಿದು, ಸಂಬಂಧಿಸಿದವರಿಗೆ ಶಿಕ್ಷೆಯೂ ಆಗಿದೆ. ಆದರೆ, ಆ ಮೂವರಿಗಿಂತಲೂ ಘೋರವಾದ ಆರೋಪಗಳನ್ನು ಎದುರಿಸುತ್ತಿರುವ ಅದಾನಿ ಎಂಟರ್‌ಪ್ರೈಸಸ್‌ ವಿರುದ್ಧ ಈವರೆಗೆ ಏಕೆ ಯಾವುದೇ ತನಿಖೆ ನಡೆದಿಲ್ಲ? ಅಕ್ರಮ ಚಟುವಟಿಕೆಗಳಿಗೆ ಸಹಕರಿಸುತ್ತಿದ್ದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪ್ರಭಾವಿ ವ್ಯಕ್ತಿಗಳಿಗೆ ಅದಾನಿ ಸಮೂಹ ಲಂಚ ನೀಡುತ್ತಿತ್ತು ಎಂಬುದಕ್ಕೆ ಪ್ರಬಲವಾದ, ನೇರ ಸಾಕ್ಷ್ಯಗಳಿದ್ದರೂ ಏಕೆ ತನಿಖೆ ನಡೆದಿಲ್ಲ? ಎಂದು ಹರಿಪ್ರಸಾದ್‌ ಪ್ರಶ್ನಿಸಿದ್ದಾರೆ. 

ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್‌ ಗಾಂಧಿಯವರು ಅದಾನಿ ಸಮೂಹದ ವಿರುದ್ಧ ಏನು ಹೇಳುತ್ತಿದ್ದಾರೋ ಅದಕ್ಕೆ ಲೋಕಾಯುಕ್ತರ ವರದಿಯಲ್ಲಿ ಸಾಕ್ಷ್ಯಗಳಿವೆ. ಈಗ ನಮ್ಮ ಪಕ್ಷದ ನೇತೃತ್ವದ ಸರ್ಕಾರವೇ ರಾಜ್ಯದಲ್ಲಿದೆ. 13 ವರ್ಷಗಳಿಂದಲೂ ತನಿಖೆಯಿಂದ ತಪ್ಪಿಸಿಕೊಂಡಿರುವ ಅದಾನಿ ಎಂಟರ್‌ಪ್ರೈಸಸ್‌ ವಿರುದ್ಧ ಲೋಕಾಯುಕ್ತ ವರದಿಯಲ್ಲಿರುವ ಆರೋಪಗಳ ಕುರಿತು ತಕ್ಷಣ ತನಿಖೆಗೆ ಆದೇಶಿಸುವಂತೆ ಮತ್ತು ಅದಕ್ಕಾಗಿ ವಿಶೇಷ ತನಿಖಾ ತಂಡವೊಂದನ್ನು ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.

ನ್ಯಾಯಮೂರ್ತಿ ಎನ್.‌ ಸಂತೋಷ್‌ ಹೆಗ್ಡೆ ಅವರು ಸಲ್ಲಿಸಿರುವ ವರದಿ ಮತ್ತು ಅದಕ್ಕೆ ಪೂರಕವಾಗಿ ಐಎಫ್‌ಎಸ್‌ ಅಧಿಕಾರಿ ಡಾ.ಯು.ವಿ. ಸಿಂಗ್‌ ಸಲ್ಲಿಸಿರುವ ವರದಿಗಳೆಲ್ಲವೂ ರಾಜ್ಯ ಸರ್ಕಾರದ ಬಳಿಯೇ ಇವೆ. ಅದಾನಿ ವಿರುದ್ಧ ಕ್ರಮ ಜರುಗಿಸಲು ರಾಜ್ಯ ಸರ್ಕಾರ ಇನ್ನೂ ವಿಳಂಬ ಮಾಡಬಾರದು ಎಂದು ಅವರು ಆಗ್ರಹಿಸಿದರು.

Tags:    

Similar News