BJP Infighting | ವಿಜಯೇಂದ್ರ, ನಡ್ಡಾ ಪ್ರತ್ಯೇಕ ಭೇಟಿ; ಕುತೂಹಲ ಮೂಡಿಸಿದ ಯತ್ನಾಳ್ ಪೋಸ್ಟ್

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ರಾಜ್ಯ ಪ್ರವಾಸದಲ್ಲಿದ್ದಾರೆ. ಈ ವೇಳೆ ಶಾಸಕ ಯತ್ನಾಳ್ ಫೇಸ್​ಬುಕ್​ನಲ್ಲಿ ಹಾಕಿರುವ ಪೋಸ್ಟ್ ಗಮನ ಸೆಳೆದಿದೆ. ಜೊತೆಗೆ ನಡ್ಡಾ- ವಿಜಯೇಂದ್ರ ಗೌಪ್ಯ ಮಾತುಕತೆ ಕುತೂಹಲ ಮೂಡಿಸಿದೆ;

Update: 2025-01-03 10:42 GMT
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ಮಾಡಿರುವುದು ಕುತೂಹಲ ಮೂಡಿಸಿದೆ.

ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿ. 2 ರಂದು ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಜೆ.ಪಿ. ನಡ್ಡಾ ಆಗಮಿಸಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ನಡ್ಡಾ ಅವರನ್ನು ಸ್ವಾಗತಿಸಿದ್ದಾರೆ. ನಂತರ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಬಿಜೆಪಿ ರಾಜ್ಯ ನಾಯಕರ ಜೊತೆ ಜೆ.ಪಿ. ನಡ್ಡಾ ಮಾತುಕತೆ ನಡೆಸಿದ್ದಾರೆ.

ಅದಾದ ನಂತರ ಉಳಿದ ನಾಯಕರಿಗೆ ಡಿ. 3ರ ಸಂಜೆ 6ಕ್ಕೆ ಕುಮಾರಕೃಪಾ ಗೆಸ್ಟ್​​ಹೌಸ್​ನಲ್ಲಿ ಭೇಟಿಯಾಗೋಣ ಎಂದು ಹೇಳಿ, ಅಲ್ಲಿಂದ ನಿಮ್ಹಾನ್ಸ್ ಅತಿಥಿಗೃಹಕ್ಕೆ ವಿಜಯೇಂದ್ರ ಒಬ್ಬರನ್ನೇ ಪ್ರತ್ಯೇಕವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು ಕೂತೂಹಲಕ್ಕೆ ಕಾರಣವಾಗಿದೆ.

ಬೆಂಬಿಡದ ಭಿನ್ನಮತ

ಬಿ.ವೈ. ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾದಂದಿನಿಂದ ಈವರೆಗೆ ಅವರಿಗೆ ಪಕ್ಷದ ಭಿನ್ನಮತೀಯರ ಕಾಟ ತಪ್ಪಿಲ್ಲ. ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಯಡಿಯೂರಪ್ಪ ವಿರೋಧಿ ಬಣದವರು ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಎಂದು ಒಪ್ಪಿಕೊಳ್ಳಲು ತಯಾರಿಲ್ಲ ಎಂಬಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ.‌ ರಾಜ್ಯಾಧ್ಯಕ್ಷರನ್ನು ಹೊರಗಿಟ್ಟು ಪಕ್ಷದ ಕಾರ್ಯಕ್ರಮ, ಜಾಥಾ, ಯಾತ್ರೆ, ಹೋರಾಟಗಳನ್ನು ಸಂಘಟಿಸುತ್ತಿದ್ದಾರೆ. ಅಲ್ಲದೆ, ರಾಜ್ಯಾಧ್ಯಕ್ಷರ ಬದಲಾವಣೆಗಾಗಿ ಬಹಿರಂಗ ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ಈ ಎಲ್ಲ ವಿಷಯಗಳ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರಿಗೆ ಸಹಪ್ರಯಾಣದ ವೇಳೆ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಡಿ.2ರ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಬೆಳವಣಿಗೆಗಳ ಕುರಿತು ಚರ್ಚೆ ಮಾಡಿದ್ದಾರೆ. ರಾಜ್ಯದ ಬಿಜೆಪಿ ಬೆಳವಣಿಗೆಗಳ ಕುರಿತು ವಿವರಿಸಿದ್ದಾರೆ. ಆಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆಯೂ ಚರ್ಚೆಯಾಗಿದೆ ಎಂಬ ಮಾಹಿತಿಯಿದೆ. ಶಾಸಕ ಯತ್ನಾಳ್ ಕೇವಲ ನನ್ನೊಬ್ಬನನ್ನೇ ವಿರೋಧಿಸುತ್ತಿಲ್ಲ. ಅವರು ಈ ಹಿಂದೆ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿಯೂ ಟೀಕಿಸಿದ್ದರು. ನಂತರ ಯಡಿಯೂರಪ್ಪ ಅವರನ್ನೂ ವಿರೋಧಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

 ಯತ್ನಾಳ್ ಹಿಂದಿರುವವರು ಯಾರು? ಮಾಹಿತಿ ಕೊಟ್ಟ ವಿಜಯೇಂದ್ರ?

ಜೊತೆಗೆ ಶಾಸಕ ಯತ್ನಾಳ್ ಅವರು ಹೀಗೆ ಮಾಡುತ್ತಿರುವುದರ ಹಿಂದೆ ಇಬ್ಬರು ಕೇಂದ್ರ ಸಚಿವರಿದ್ದಾರೆ ಎಂಬುದನ್ನು ವಿಜಯೇಂದ್ರ ಒತ್ತಿ ಹೇಳಿದ್ದಾರೆ ಎಂಬ ಮಾಹಿತಿಯಿದೆ.

ಯತ್ನಾಳ್ ಅವರನ್ನು ಕೆಲವರು ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಯತ್ನಾಳ್ ದಾಳದ ರೀತಿ ಬಳಕೆಯಾಗುತ್ತಿದ್ದಾರೆ. ಇಷ್ಟೆಲ್ಲಾ ಸವಾಲುಗಳ ಮಧ್ಯೆಯೂ ನಾವು ಸುಮ್ಮನೆ ಕುಳಿತಿಲ್ಲ. ಪಕ್ಷದ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುಂದುವರಿಸಿದ್ದೇವೆ ಎಂದು ಜೆಪಿ ನಡ್ಡಾಗೆ ವಿಜಯೇಂದ್ರ ವಿವರಿಸಿದ್ದಾರೆ.

 ವಿಜಯೇಂದ್ರಗೆ ನಡ್ಡಾ ಕೊಟ್ಟ ಭರವಸೆ

ವಿಜಯೇಂದ್ರರಿಂದ ಫಸ್ಟ್ ಹ್ಯಾಂಡ್ ಮಾಹಿತಿ ಪಡೆದುಕೊಂಡ ಬಳಿಕ ಜೆಪಿ ನಡ್ಡಾ ಭರವಸೆಯನ್ನು ಕೊಟ್ಟಿದ್ದಾರೆಂಬ ಮಾಹಿತಿಯಿದೆ. ಮುಂದಿನ ಎರಡು ವಾರಗಳ ಕಾಲ ರಾಜ್ಯದಲ್ಲಿನ ಪಕ್ಷದ ಬೆಳವಣಿಗೆ ಹೈಕಮಾಂಡ್ ಗಮನಿಸುತ್ತದೆ. ಪಕ್ಷದ ಸಂಘಟನೆಗೆ ಒತ್ತು ಕೊಡಿ. ಭಿನ್ನಮತ, ಅಸಮಧಾನವನ್ನು ಪಕ್ಷದ ವರಿಷ್ಠರು ನೋಡಿಕೊಳ್ಳುತ್ತೇವೆ. ಈಗಾಗಲೇ ಒಂದಿಷ್ಟು ಬೆಳವಣಿಗೆಗಳಾಗಿವೆ ಎಂದು ಭಿನ್ನಮತ ಶಮನ ಮಾಡುವುದರ ಕುರಿತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭರವಸೆ ನೀಡಿದ್ದಾರಂತೆ.

ಈ ನಡುವೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಭೇಟಿಯ ವಿಷಯದಲ್ಲಿ ಎದ್ದಿರುವ ಊಹಾಪೋಹಗಳ ಹಿನ್ನೆಲೆಯಲ್ಲಿ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಸಾಮಾಜಿಕ ಜಾಲತಾಣದ ಹೇಳಿಕೆ ಕುತೂಹಲ ಕೆರಳಿಸಿದೆ.

Full View

ಕುತೂಹಲ ಮೂಡಿಸಿದ ಯತ್ನಾಳ್ ಪೋಸ್ಟ್

ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ಮಾಡುತ್ತಾರಾ ಎಂಬ ಚರ್ಚೆಗಳ ನಡುವೆಯೇ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಯತ್ನಾಳ್‌, "ನಾವು ಅತೃಪ್ತರಲ್ಲ; ಹೀಗಾಗಿ ಚಾಡಿ ಹೇಳುವ ಪ್ರಶ್ನೆ ಬರುವುದಿಲ್ಲ. ಅತೃಪ್ತರು, ಬಂಡಾಯಗಾರರು ಚಾಡಿ ಹೇಳುತ್ತಾರೆ" ಎಂದು ಪೋಸ್ಟ್‌ ಮಾಡಿದ್ದಾರೆ.

ಈ ಪೋಸ್ಟ್ ಮೂಲಕ ಜೆಪಿ ನಡ್ಡಾರನ್ನು ತಾವು ಭೇಟಿ ಮಾಡುವುದಿಲ್ಲ ಎಂದು ಯತ್ನಾಳ್ ಹೇಳುತ್ತಿದ್ದಾರೆಯೇ ಎಂಬ ಪ್ರಶ್ನೆಯೂ ಎದುರಾಗಿದೆ. ತಮ್ಮ ಬಿಡುಬೀಸು ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಯತ್ನಾಳ್ಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯಿಂದ ನೋಟಿಸ್ ಬಂದಿತ್ತು. ನಂತರ ದೆಹಲಿಗೆ ತೆರಳಿ ಉತ್ತರ ಕೊಟ್ಟು ಬಂದಿದ್ದರು. ಅದಾದ ನಂತರ ಯತ್ನಾಳ್ ಸ್ವಲ್ಪ ಶಾಂತರಾಗಿರುವಂತೆ ಕಂಡು ಬರುತ್ತಿದೆ.

ಇದೇ ಸಂದರ್ಭದಲ್ಲಿ ಎರಡು ವಾರಗಳ ಕಾಲ ಕಾಯ್ದು ನೋಡಿರಿ ಎಂದು ಬಿ.ವೈ. ವಿಜಯೇಂದ್ರಗೆ ಜೆ.ಪಿ. ನಡ್ಡಾ ಭರವಸೆ ಕೊಟ್ಟಿರುವುದು ಕೂಡ ಚರ್ಚೆಗೆ ಕಾರಣವಾಗಿದೆ. ಎರಡು ವಾರಗಳ ನಂತರ ಬಿಜೆಪಿ ಭಿನ್ನಮತ ಶಮನವಾಗುತ್ತದೆಯಾ? ಅಥವಾ ಮತ್ತಷ್ಟು ಸ್ಪೋಟವಾಗುತ್ತದೆಯಾ? ಎಂಬುದು ರಾಜ್ಯ ಬಿಜೆಪಿ ಕಾರ್ಯಕರ್ತರನ್ನು, ಬೆಂಬಲಿಗರನ್ನು ಕಾಡುತ್ತಿರುವ ಪ್ರಶ್ನೆ!

Tags:    

Similar News