ಸರಣಿ ಅಪರಾಧ ಕೃತ್ಯ | ಕಾಂಗ್ರೆಸ್‌ಗೆ ಇಕ್ಕಟ್ಟು; ಬಿಜೆಪಿ ಬತ್ತಳಿಕೆಗೆ ಹೊಸ ಅಸ್ತ್ರ

ಗ್ಯಾರಂಟಿ ಯೋಜನೆಗಳ ಯಶಸ್ಸು ಮತ್ತು ಕೇಂದ್ರ ಸರ್ಕಾರದ ವೈಫಲ್ಯ ಮತ್ತು ಹಗರಣಗಳನ್ನು ಮುಂದಿಟ್ಟುಕೊಂಡು ಜನರೆದುರು ಹೋದ ಕಾಂಗ್ರೆಸ್‌ ಗೆ ಕರ್ನಾಟಕದಲ್ಲಿ ನಡೆದ ಸಾಲು ಸಾಲು ಅಹಿತಕರ ಘಟನೆಗಳು ಬಿಸಿತುಪ್ಪವಾಗಿ ಪರಿಣಮಿಸಿದೆ.;

Update: 2024-04-23 01:40 GMT

ಲೋಕಸಭಾ ಚುನಾವಣಾ ಕಾವು ತೀವ್ರವಾಗುತ್ತಿದ್ದಂತೆ ಕೋಮು ಧ್ರುವೀಕರಣದ ರಾಜಕಾರಣ ಮೇಲುಗೈ ಸಾಧಿಸುತ್ತಿದೆ. ನಿರ್ದಿಷ್ಟ ಸಮುದಾಯದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ದ್ವೇಷ ಭಾಷಣ ಮಾಡುತ್ತಿದ್ದಾರೆ ಎಂಬ ಆರೋಪದ ನಡುವೆಯೇ, ಲವ್‌ ಜಿಹಾದ್‌, ಪಾಕಿಸ್ತಾನ ಮೊದಲಾದ ಭಾವನಾತ್ಮಕ ವಿಚಾರ ಇಟ್ಟುಕೊಂಡು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ತನ್ನ ರಾಜಕೀಯ ದಾಳಿ ಆರಂಭಿಸಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ದಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಪೋಟ, ಪಾಕಿಸ್ತಾನ್‌ ಝಿಂದಾಬಾದ್‌ ವಿವಾದ, ನೇಹಾ ಹತ್ಯೆ ಪ್ರಕರಣ ಮೊದಲಾದ ಘಟನೆಗಳನ್ನು ಮುಂದಿಟ್ಟು ಬಿಜೆಪಿ, ಆಡಳಿತರೂಢ ಕಾಂಗ್ರೆಸ್‌ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. 

ಇದನ್ನೂ ಓದಿ: ಕರಾಮಾ ಕರಾಮತ್ತು | ಚುನಾವಣಾ ಕಣದಲ್ಲಿ ಬಿಜೆಪಿಗೆ ಭೂರಿ ಭೋಜನವಾಯ್ತೆ ನಟಿಯ ಪ್ರಕರಣ?

“ಈ‌ ದೇಶದ ಸಂಪತ್ತಿನ ಮೇಲೆ ಮೊದಲ ಹಕ್ಕು ಮುಸ್ಲಿಮರಿಗೆ ಸೇರಿದ್ದು ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಲೇ ಬಂದಿದೆ. ಇಂಥವರಿಗೆ ಮತ ನೀಡಿದರೆ ಹಿಂದೂಗಳ ಹಣ, ಆಸ್ತಿ ಯಾರ ಪಾಲಾಗಲಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದು, ಈ ಬಾರಿಯ ಚುನಾವಣೆಯನ್ನೂ ಧರ್ಮ ರಾಜಕಾರಣದ ಆಧಾರದಲ್ಲಿಯೇ ಎದುರಿಸುವ ಸ್ಪಷ್ಟ ಸಂದೇಶವನ್ನು ಬಿಜೆಪಿ ರವಾನಿಸಿದೆ.

ಚುನಾವಣಾ ವಾತಾವರಣ ಹೀಗಿರುವಾಗಲೇ, ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆದ ಅಹಿತಕರ, ಹಿಂಸಾತ್ಮಕ ಘಟನೆಗಳು ಕಾಂಗ್ರೆಸ್‌ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಮುಗಿಬೀಳಲು ಈ ಪ್ರಕರಣಗಳು ಬಿಜೆಪಿಗೆ ವರವಾಗಿ ಮಾರ್ಪಟ್ಟಿದೆ.

ಮೈಸೂರಿನಲ್ಲಿ ನರೇಂದ್ರ ಮೋದಿ ಅವರ ಕುರಿತ ಹಾಡು ಬರೆದಿದಕ್ಕೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ, ಚಿತ್ರದುರ್ಗದಲ್ಲಿ ನಡೆದ ನೈತಿಕ ಪೋಲಿಸ್‌ ಗಿರಿ, ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ, ರಾಮನವಮಿ ಆಚರಣೆ ವೇಳೆ ಬೆಂಗಳೂರಿನಲ್ಲಿ ನಡೆದ ಜಗಳ, ನಟಿ ಹರ್ಷಿಕಾ ಪೂಣಚ್ಚ ದಂಪತಿ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ಬಿಜೆಪಿ ರಾಜಕೀಯವಾಗಿ ಬಳಸುತ್ತಿದ್ದು, ಇದೀಗ ಅದಕ್ಕೆ ಮತ್ತೊಂದು ಪ್ರಕರಣವೂ ಸೇರಿಕೊಂಡಿದೆ.

ಯಾದಗಿರಿಯ ಶಗಾಪುರಪೇಟೆ ಬಡಾವಣೆಯಲ್ಲಿ ದಲಿತ ಯುವಕನನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ ನಾಲ್ವರು ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಈ ಪ್ರಕರಣವನ್ನೂ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬೀಳಲು ಬಳಸಿದ್ದು, ಸ್ಥಳೀಯ ಬಿಜೆಪಿ ಮುಖಂಡರು ಮೃತ ಯುವಕನ ಮನೆಗೆ ಭೇಟಿ ನೀಡಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

 

ಕಾಂಗ್ರೆಸ್‌ ಆಡಳಿತದಲ್ಲಿ ಮುಸ್ಲಿಂ ತುಷ್ಟೀಕರಣ ತೀವ್ರವಾಗುತ್ತಿದ್ದು, ರಾಜ್ಯದಲ್ಲಿ ಹಿಂದೂಗಳ ಮೇಲೆ ನಿರಂತರ ಹಿಂಸಾತ್ಮಕ ದಾಳಿಗಳಾಗುತ್ತಿವೆ ಎಂದು‌ ಬಿಜೆಪಿ ಆರೋಪಿಸಿದೆ. ವೈಯಕ್ತಿಕ ಕೊಲೆ ಪ್ರಕರಣಗಳನ್ನು ಬಿಜೆಪಿ ರಾಜಕೀಯಕ್ಕೆ ಬಳಸುತ್ತಿದೆ ಎಂದು ಕಾಂಗ್ರೆಸ್‌ ಆಕ್ರೋಶ ಹೊರ ಹಾಕಿದ್ದು, ಕಡೂರಿನಲ್ಲಿ ಮುಸ್ಲಿಂ ಯುವತಿಯನ್ನು ಆಕೆಯ ಗೆಳೆಯ ಪ್ರದೀಪ್‌ ಎಂಬಾತ ಹತ್ಯೆ ಮಾಡಿರುವ ಬಗ್ಗೆ ಬಿಜೆಪಿಗರು ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕರು ಪ್ರಶ್ನಿಸುತ್ತಿದ್ದಾರೆ.

ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ ತೆರಿಗೆ ಬಾಕಿ, ನೆರೆ-ಬರ ಪರಿಹಾರ, ಈಡೇರದ ಮೋದಿ ಆಶ್ವಾಸನೆಗಳನ್ನೆಲ್ಲಾ ಮುಂದಿಟ್ಟು ಕಾಂಗ್ರೆಸ್‌ ಪ್ರತಿ ದಾಳಿ ನಡೆಸುತ್ತಿದೆಯಾದರೂ, ಬಿಜೆಪಿಯ ಭಾವನಾತ್ಮಕ ದಾಳಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಕಾಂಗ್ರೆಸ್‌ ತಡವರಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

“ಮತಾಂಧರನ್ನು ತಮ್ಮ ಬ್ರದರ್ಸ್‌ ಎಂದು ಕಾಂಗ್ರೆಸ್‌ ಸಂಭಾಳಿಸುತ್ತಿರುವ ಕಾರಣ ಹಿಂದೂ ಯುವತಿಯರು, ಬಾಲಕಿಯರು ಬೀದಿಯಲ್ಲಿ ಹೆಣವಾಗಿ ಬೀಳುತ್ತಿದ್ದಾರೆ. ಕರ್ನಾಟಕದಲ್ಲಿ ಲವ್‌ ಜಿಹಾದ್‌ ಸದ್ದೇ ಇಲ್ಲದಾಗಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಹಾದಿ ಮತಾಂಧರಿಂದ ಅತ್ಯಾಚಾರ, ಕೊಲೆಗಳು ಲವ್‌ ಜಿಹಾದ್‌ ವಿಫಲಗೊಂಡಾಗ ಆಗುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಮತಾಂಧ ಶಕ್ತಿಗಳು ಹಿಂದೂಗಳನ್ನು ಕೊಲ್ಲಿಸುವುದಕ್ಕೆ ಎನ್ನುವ ಅನುಮಾನ ಹುಟ್ಟಿಕೊಂಡಿದೆ”‌ ಎಂದು ಬಿಜೆಪಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ನಡೆಸುತ್ತಿದೆ.

ಈ ನಡುವೆ, ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್‌ ಅಧಿಕಾರಿ ಕೆ ಅಣ್ಣಾಮಲೈ ಅವರು ಕೂಡಾ ಕಾಂಗ್ರೆಸ್‌ ಆಡಳಿತವಿರುವ ಕರ್ನಾಟಕ ರಾಜ್ಯವನ್ನು ಪಾಕಿಸ್ತಾನಕ್ಕೆ ಹೋಲಿಸಿ ಹೇಳಿಕೆ ನೀಡಿದ್ದಾರೆ.

ಬಿಜೆಪಿಯ ಆಂತರಿಕ ಭಿನ್ನಮತ ಮತ್ತು ಬಂಡಾಯಗಳಿಂದ ರಾಜ್ಯದಲ್ಲಿ ಈ ಬಾರಿ ಕ್ಷೀಣಿಸಿದ್ದ ಬಿಜೆಪಿಯ ʼವೈಭವʼ ಸಾಲು ಸಾಲು ಅಹಿತಕರ ಘಟನೆಗಳಿಂದ ಮತ್ತೆ ಪುಟಿದೆದ್ದಿದ್ದು, ಈ ಎಲ್ಲಾ ಬೆಳವಣಿಗೆಗಳು ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದ ವೈಫಲ್ಯ, ಎಲೆಕ್ಟಾರಲ್‌ ಬಾಂಡ್‌ ಹಗರಣ, ಮುಖ್ಯವಾಗಿ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟು ಜನರ ಎದುರು ಬಂದಿದ್ದ ಕಾಂಗ್ರೆಸ್‌, ಬಿಜೆಪಿಯ ಈ ಹೊಸ ಪಟ್ಟುಗಳಿಗೆ ಹೇಗೆ ಪ್ರತಿಪಟ್ಟು ಹಾಕಲಿದೆ ಎಂಬುದನ್ನು ಕಾದುನೋಡಬೇಕಿದೆ.

Tags:    

Similar News