ಕರಾಮಾ ಕರಾಮತ್ತು | ಚುನಾವಣಾ ಕಣದಲ್ಲಿ ಬಿಜೆಪಿಗೆ ಭೂರಿ ಭೋಜನವಾಯ್ತೆ ನಟಿಯ ಪ್ರಕರಣ?
x

ಕರಾಮಾ ಕರಾಮತ್ತು | ಚುನಾವಣಾ ಕಣದಲ್ಲಿ ಬಿಜೆಪಿಗೆ ಭೂರಿ ಭೋಜನವಾಯ್ತೆ ನಟಿಯ ಪ್ರಕರಣ?

ಬೆಂಗಳೂರಿನಲ್ಲಿ ಇತ್ತೀಚೆಗೆ ನಟಿ ಹರ್ಷಿಕಾ ದಂಪತಿಯ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ, ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದೆ.


ಲೋಕಸಭಾ ಚುನಾವಣೆಯಲ್ಲಿ ಆಂತರಿಕ ಭಿನ್ನಮತ ಹಾಗೂ ಸರ್ವಸಮ್ಮತ ನಾಯಕತ್ವದ ಕೊರತೆಯ ಕಾರಣಕ್ಕೆ ಏದುಸಿರುವ ಬಿಡುತ್ತಿರುವ ಬಿಜೆಪಿಗೆ, ರಾಜ್ಯದಲ್ಲಿ ನಡೆದ ಹಲವು ಅಹಿತಕರ ಘಟನೆಗಳು ರಾಜಕೀಯ ಟಾನಿಕ್‌ ಒದಗಿಬಂದಿದ್ದು, ಪಕ್ಷದ ಪರ ಭಾವನಾತ್ಮಕ ವಾತಾವರಣ ಸೃಷ್ಟಿಸುತ್ತಿವೆ.

ಕಾಂಗ್ರೆಸ್‌ ಗ್ಯಾರಂಟಿಗಳ ವಿರುದ್ಧ ಜನರ ಗಮನ ಸೆಳೆಯಲು ಬಿಜೆಪಿಗೆ ಕಳೆದ ಒಂದು ವಾರದಲ್ಲಿ ಹಲವು ಪ್ರಬಲ ಅಸ್ತ್ರಗಳು ದೊರೆತಿದ್ದು, ಕೊಲೆ, ದಾಳಿ, ಹಲ್ಲೆಯಂತಹ ಪ್ರಕರಣಗಳನ್ನು ಮುಂದಿಟ್ಟು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ದಾಳಿ ತೀವ್ರಗೊಳಿಸಿದೆ.

ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ, ನರೇಂದ್ರ ಮೋದಿ ಕುರಿತು ಹಾಡು ಬರೆದಿದಕ್ಕೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ, ಚಿತ್ರದುರ್ಗದಲ್ಲಿ ನಡೆದ ನೈತಿಕ ಪೋಲಿಸ್‌ ಗಿರಿ ಸೇರಿದಂತೆ ಹಲವು ಪ್ರಕರಣಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಹಿಂದೂಗಳ ವಿರುದ್ಧ ಹಿಂಸಾತ್ಮಕ ದಾಳಿಗಳಾಗುತ್ತಿವೆ ಎಂದು ಬಿಜೆಪಿ ಪ್ರಚಾರ ಮಾಡುತ್ತಿದ್ದು, ಬಿಜೆಪಿಗರ ಈ ಪಟ್ಟಿಗೆ ನಟಿ ಹರ್ಷಿಕಾ ಪೂಣಚ್ಚ ದಂಪತಿ ಮಾಡಿರುವ ಆರೋಪವೂ ಸೇರಿಕೊಂಡಿದೆ. ಸ್ಟಾರ್‌ ದಂಪತಿಗಳ ಮೇಲೆ ನಡೆದಿದೆ ಎನ್ನಲಾದ ಈ ದಾಳಿಯೂ ರಾಜಕೀಯ ತಿರುವು ಪಡೆದುಕೊಂಡಿದೆ.

ಪ್ರಕರಣವೇನು?

ಮೂಲತಃ ಕೊಡಗಿನವರಾದ ನಟಿ ಹರ್ಷಿಕಾ ಪೂಣಚ್ಚ ಮತ್ತು ಪತಿ ಭುವನ್‌ ಪೊನ್ನಣ್ಣ ಅವರು ಬೆಂಗಳೂರಿನ ಫ್ರೇಝರ್‌ ಟೌನ್‌ ನಲ್ಲಿರುವ ʼಕರಾಮಾʼ ರೆಸ್ಟೊರೆಂಟ್‌ ನಿಂದ ಮರಳುತ್ತಿರುವಾಗ ಪುಂಡರ ಗುಂಪೊಂದು ದಂಪತಿಯ ಕಾರನ್ನು ತಡೆದು, ಹಲ್ಲೆ ನಡೆಸಿದೆ. ಚಿನ್ನಾಭರಣ ದೋಚಲು ಪ್ರಯತ್ನಿಸಿದೆ. ಮತ್ತು ಕನ್ನಡ ಮಾತನಾಡಿದ್ದಕ್ಕೆ ದಬ್ಬಾಳಿಕೆ ನಡೆಸಿದೆ ಎಂದು ಸ್ಟಾರ್‌ ದಂಪತಿ ಆರೋಪಿಸಿದೆ.

“ಒಂದೆರಡು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ʼಕರಾಮಾʼ ಎಂಬ ರೆಸ್ಟೊರೆಂಟ್‌ನಲ್ಲಿ ಸಂಜೆ ಕುಟುಂಬದೊಂದಿಗೆ ಊಟ ಮಾಡಲು ತೆರಳಿದ್ದೆ. ಭೋಜನವನ್ನು ಮುಗಿಸಿದ ನಂತರ ನಾವು ವಾಲೆಟ್ ಪಾರ್ಕಿಂಗ್‌ನಿಂದ ನಮ್ಮ ವಾಹನವನ್ನು ಸ್ವೀಕರಿಸಿ ಹೊರಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಡ್ರೈವರ್ ಸೀಟ್ ಕಿಟಕಿಯ ಬಳಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡು ನಿಮ್ಮ ವಾಹನವು ತುಂಬಾ ದೊಡ್ಡದಾಗಿದೆ, ಇದ್ದಕ್ಕಿದ್ದಂತೆ ಗಾಡಿ ತೆಗೆದರೆ ನಮಗೆ ತಾಕುತ್ತದೆ ಎಂದು ಜಗಳವಾಡಲು ಆರಂಭಿಸಿದರು. ಈ ಇಬ್ಬರು ವ್ಯಕ್ತಿಗಳು ನಮ್ಮನ್ನು ಅವರ ಭಾಷೆಯಲ್ಲಿ ನಿಂದಿಸಲು ಪ್ರಾರಂಭಿಸಿದರು, ಈ ಲೋಕಲ್ ಕನ್ನಡಿಗರಿಗೆ ಪಾಠ ಕಲಿಸಬೇಕು ಎಂದು ಹೇಳಿ ನನ್ನ ಪತಿಯ ಮುಖಕ್ಕೆ ಹೊಡೆಯಲು ಸಹ ಪ್ರಯತ್ನಿಸಿದರು. 2-3 ನಿಮಿಷಗಳಲ್ಲಿ ಅದೇ ಗ್ಯಾಂಗ್‌ನ 20-30 ಸದಸ್ಯರ ಗುಂಪು ಜಮಾಯಿಸಿತು ಮತ್ತು ಅವರಲ್ಲಿ 2 ಜನರು ನನ್ನ ಗಂಡನ ಚಿನ್ನದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ತಕ್ಷಣವೇ ನಮ್ಮ ಬೆಲೆ ಬಾಳುವ ವಸ್ತುಗಳನ್ನು ಜೋಪಾನವಾಗಿಟ್ಟುಕೊಂಡೆವು. ಇದರಿಂದ ರೊಚ್ಚಿಗೆದ್ದ ತಂಡ ನನ್ನ ಗಂಡನ ಮುಖಕ್ಕೆ ಹೊಡೆಯಲು ಪ್ರಯತ್ನಿಸಿತು. ಅವರು ನಮ್ಮನ್ನು ದೋಚಲು ಬಂದ ಕಳ್ಳರು” ಎಂದು ನಟಿ ಹರ್ಷಿಕಾ ಆರೋಪಿಸಿದ್ದಾರೆ.

ನಾನು ಹುಟ್ಟಿ ಬೆಳೆದ ಬೆಂಗಳೂರಿನಲ್ಲಿಯೇ ಕನ್ನಡ ಮಾತನಾಡಿದಕ್ಕೆ ದಬ್ಬಾಳಿಕೆ ಆಗುತ್ತಿದೆ, ನಾವು ಕರ್ನಾಟಕದಲ್ಲಿ ಇದ್ದೇವಾ ಅಥವಾ ಪಾಕಿಸ್ತಾನದಲ್ಲಿ ಇದ್ದೇವೆಯೇ ಎಂಬ ಸಂದೇಹ ಆಗಿದೆ ನಮಗೆ ಎಂದು ಹರ್ಷಿಕಾ ಪೂಣಚ್ಚ ಅವರು ಈ ಪ್ರಕರಣಕ್ಕೆ ಭಾವನಾತ್ಮಕ ತಿರುವು ನೀಡಿದ್ದು, ಪ್ರಕರಣ ಇನ್ನಷ್ಟು ರೋಚಕತೆ ಪಡೆದುಕೊಂಡಿದೆ.

ರಾಜಕೀಯ ತಿರುವು

ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿ ಎಂದು ಹೇಳಿಕೊಂಡಿರುವ ನಟಿ ಹರ್ಷಿಕಾ ಪೂಣಚ್ಚ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹೀಗಾಗಿ, ಬಿಜೆಪಿ ನಾಯಕರೊಂದಿಗೆ ಸಂಪರ್ಕವನ್ನೂ ಹೊಂದಿದ್ದರು. ಸದ್ಯ, ಪ್ರಕರಣವನ್ನು ಬಿಜೆಪಿ ತನಗೆ ಪೂರಕವಾಗಿ ಪರಿವರ್ತಿಸಿಕೊಳ್ಳುತ್ತಿದೆ.

ವಿಪಕ್ಷ ನಾಯಕ ಆರ್‌ ಅಶೋಕ್‌ ಸೇರಿದಂತೆ ಹಲವು ಬಿಜೆಪಿ ನಾಯಕರು ಈ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ. ಬಿಜೆಪಿ ಪರವಾದ ಹಲವಾರು ಸಾಮಾಜಿಕ ಜಾಲತಾಣ ಖಾತೆಗಳಲ್ಲೂ ಹರ್ಷಿಕಾ ಪೂಣಚ್ಚರ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ವಿರುದ್ಧ ಟೀಕೆಗಳನ್ನು ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿ ನಡೆದ ಘಟನೆಯ ಬಗ್ಗೆ ನಟಿ ಹರ್ಷಿಕಾ ಅವರು ವಿವರಿಸಿದ ರೀತಿಯೂ ಘಟನೆ ಸೂಕ್ಷ್ಮ ಪ್ರಕರಣವಾಗುವಂತೆ ಮಾಡಿದೆ. ʼಅವರ ಭಾಷೆʼ, ʼಪಾಕಿಸ್ತಾನದಲ್ಲಿದ್ದೇವಾ?ʼ ಎಂಬಂತಹ ನಟಿಯ ಪದಬಳಕೆಯು ಪ್ರಕರಣಕ್ಕೆ ಕೋಮು-ರಾಜಕೀಯ ಆಯಾಮವನ್ನು ನೀಡಲು ಸುಲಭದ ದಾರಿ ಮಾಡಿ ಕೊಟ್ಟಿದೆ.

ಹರ್ಷಿಕಾ ಅವರು ಆರೋಪಿಸಿದ ಪ್ರಕಾರ, ಕಾರು ಪಾರ್ಕಿಂಗ್‌ ನಿಂದ ತೆಗೆಯುವಾಗ ತಮಗೆ ತಾಗಬಹುದು ಎಂದು ಇಬ್ಬರು ಜಗಳಕ್ಕೆ ನಿಂತಿದ್ದಾರೆ. ದಂಪತಿ ಅವರೊಡನೆ ವಾಗ್ವಾದಕ್ಕೆ ನಿಂತ ಬಳಿಕ ಕೆಲ ಹೊತ್ತಿನಲ್ಲಿ 20-30 ಮಂದಿ ಗುಂಪುಗೂಡಿದ್ದಾರೆ. ಅದರಲ್ಲಿ ಇಬ್ಬರು ಚಿನ್ನದ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ನಂತರ ಗುಂಪಿನಲ್ಲಿ ಇದ್ದವರು ಕನ್ನಡದಲ್ಲಿ ಮಾತನಾಡುವುದನ್ನು ನಿಲ್ಲಿಸಿ, ನಿಮಗೆ ಬೇಕಾದ ಭಾಷೆಯಲ್ಲಿ ಮಾತನಾಡಬಾರದೆಂದು ಬೆದರಿಸಿದ್ದಾರೆ.

ಹರ್ಷಿಕಾ ದಂಪತಿ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?

ಹರ್ಷಿಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎರಡೂ ಕಡೆಯವರು ಕನ್ನಡದಲ್ಲಿಯೇ ಮಾತನಾಡುವುದು ಕಂಡು ಬಂದಿದೆ. ಹರ್ಷಿಕಾ ಪತಿ ಭುವನ್‌, ʼಯಾರವನು? ಮಾತನಾಡೋದಕ್ಕೆ ಮುಂಚಿತವಾಗಿ ಗಲಾಟೆ ಮಾಡಲು ಬಂದಿದ್ದಾನೆ, ಯಾರವನು?ʼ ಎಂದು ಕನ್ನಡದಲ್ಲಿ ಕೇಳುವ ಪ್ರಶ್ನೆಗೆ ಅಲ್ಲಿದ್ದವರು, ʼಆತ ಯಾರೆಂದು ಗೊತ್ತಿಲ್ಲ, ನಿಮ್ಮ ಹಾಗೆಯೇ ಇಲ್ಲಿ ಊಟ ಮಾಡಲು ಬಂದವನುʼ ಎಂದು ಕನ್ನಡದಲ್ಲಿಯೇ ಉತ್ತರಿಸಿ, ದಂಪತಿಯನ್ನು ಸಮಾಧಾನ ಪಡಿಸಿ ಕಳುಹಿಸುವುದು ವಿಡಿಯೋದಲ್ಲಿ ಕಂಡು ಬಂದಿದೆ. ಜಗಳಕ್ಕೆ ನಿಂತವರು ತಮ್ಮೊಂದಿಗೆ ಇದ್ದ ಮಹಿಳೆಯರನ್ನು ಅವಮಾನಿಸಿದಕ್ಕಾಗಿ ಜಗಳ ಆಡಿದ್ದಾರೆ ಎಂದು ಅಲ್ಲಿದ್ದವರು ಹೇಳುತ್ತಿರುವುದೂ ವಿಡಿಯೋದಲ್ಲಿ ಸೆರೆಯಾಗಿದೆ. ಅದಕ್ಕೆ, ಹರ್ಷಿಕಾ, ನಾನು ಕೂಡಾ ಮಹಿಳೆಯಾಗಿದ್ದು, ಮಹಿಳೆಯನ್ನು ನಿಂದಿಸಿಲ್ಲ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಮತ್ತು, ಎಳೆದಾಟದಲ್ಲಿ ಚೈನ್‌ ತುಂಡಾದ ಬಗ್ಗೆ ಹರ್ಷಿಕಾ ಅವರು ಪ್ರಸ್ತಾಪಿಸಿರುವುದೂ ಕಂಡು ಬಂದಿದೆ.




ಪೊಲೀಸ್‌ ಮೂಲಗಳು ಹೇಳುವುದೇನು?

ಘಟನೆಯನ್ನು ಪೊಲೀಸರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿರುವ ನಟಿ ಹರ್ಷಿಕಾ ದಂಪತಿ, ಇಲಾಖೆ ವಿರುದ್ಧವೂ ಆಕ್ರೋಶ ಹೊರ ಹಾಕಿದ್ದರು.

ʼಕನ್ನಡ ಮಾತನಾಡಿದಕ್ಕಾಗಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪವನ್ನು ಸಾಬೀತುಪಡಿಸುವಂತಹ ಸಾಂದರ್ಭಿಕ ಸಾಕ್ಷ್ಯಗಳು ದೊರೆತಿಲ್ಲ. ಘಟನೆ ನಡೆದು ಹಲವಾರು ದಿನಗಳು ನಡೆದಿದೆ. ದೂರುದಾರರು ನೀಡಿರುವ ದೂರನ್ನು ಸ್ವೀಕರಿಸಿದ್ದೇವೆ. ತನಿಖೆ ನಡೆಯುತ್ತಿವೆʼ ಎಂದು ಪೊಲೀಸ್‌ ಮೂಲಗಳು ಹೇಳಿವೆ.

"ಘಟನೆ ನಡೆದು ಸುಮಾರು ಮೂರು ವಾರಗಳಾಗಿವೆ. ಕನ್ನಡ ಮಾತನಾಡಬೇಡಿ ಎಂದು ಹಲ್ಲೆ ನಡೆಸುವವರು ಕನ್ನಡದಲ್ಲಿ ಸಮಾಧಾನ ಪಡಿಸಿ ಕಳುಹಿಸುತ್ತಾರೆಯೇ? ಗುಂಪಿನಲ್ಲಿ ನೆರೆದಿದ್ದ ಯಾರಾದರೂ ʼಯೇ ವಾಲಾ ಲೋಕಲ್‌ ಕನ್ನಡವಾಲಾ ಹೇʼ (ಇವರು ಸ್ಥಳೀಯ ಕನ್ನಡಿಗರು) ಎಂದು ಹೇಳಿರಬಹುದು. ಇವರು ಹೊರಗಿನವರಲ್ಲ, ಸ್ಥಳೀಯರೇ, ಜಗಳ ಬೇಡ ಎಂದು ಹೇಳಿರುವ ಸಾಧ್ಯತೆ ಇದೆ. ವಿಡಿಯೋದಲ್ಲಿಯೂ, ದಂಪತಿಯನ್ನು ಸಮಾಧಾನಪಡಿಸಿ ಕಳುಹಿಸುತ್ತಿರುವುದು ಕಂಡು ಬಂದಿದೆ. ಆದರೆ, ಮೇಲ್ನೋಟಕ್ಕೆ ಕನ್ನಡದಲ್ಲಿ ಮಾತನಾಡಿದ್ದಕ್ಕಾಗಿಯೇ ಹಲ್ಲೆ ನಡೆಸಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ವಾಹನ ತೆಗೆಯುವ ವಿಚಾರದಲ್ಲಿ ಆರಂಭವಾದ ಜಗಳ ಎಂದು ದಂಪತಿಯೇ ತಿಳಿಸಿದ್ದಾರೆ. ಚುನಾವಣೆ ಹೊತ್ತಲ್ಲಿ ಭಾಷೆ, ಕೋಮು ತಿರುವು ಪಡೆದುಕೊಳ್ಳುತ್ತಿದೆ. ದರೋಡೆ ಪ್ರಯತ್ನದ ಬಗ್ಗೆ ಬಂದ ದೂರಿನ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ” ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.

ಒಟ್ಟಾರೆ, ಹರ್ಷಿಕಾ ಅವರು ತಮ್ಮ ವಿರುದ್ಧ ಹಲ್ಲೆ, ದರೋಡೆ ಪ್ರಯತ್ನ ನಡೆದಿದೆ ಎಂದು ಆರೋಪಿಸಿರುವುದು ಸದ್ಯ, ಕೋಮು ಆಯಾಮ ಪಡೆದುಕೊಂಡಿದೆ. ಹಿಂದೂಗಳ ಮೇಲೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಬಿಜೆಪಿ ಪ್ರಚಾರ ಕಟ್ಟಲು ಈ ಪ್ರಕರಣವನ್ನೂ ಬಳಸುತ್ತಿದೆ. ಆದರೆ, ಸಾಮಾನ್ಯ, ಬೀದಿ ಜಗಳವೊಂದನ್ನು ಬಿಜೆಪಿಗೆ ಪೂರಕವಾಗುವಂತೆ ಹರ್ಷಿಕಾ ದಂಪತಿ ಕೋಮು ಆಯಾಮ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಲಭ್ಯ ಮಾಹಿತಿಯ ಪ್ರಕಾರ ಈ ಘಟನೆ ಏ.2 ರಂದು ನಡೆದಿದ್ದು, ಇಷ್ಟು ತಡವಾಗಿ ದೂರನ್ನು ನೀಡಿರುವ ಬಗ್ಗೆಯೂ ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೆಗಳು ಎದ್ದಿವೆ.

Read More
Next Story