ಬಿಹಾರ ಚುನಾವಣೆ: ನಾಮಪತ್ರ ಸಲ್ಲಿಸಿದ ಕೂಡಲೇ ಆರ್ಜೆಡಿ ಅಭ್ಯರ್ಥಿ ಸತೇಂದ್ರ ಸಾಹ್ ಬಂಧನ
ಜಾರ್ಖಂಡ್‌ನ ಗಢವಾ ಜಿಲ್ಲೆಯ ಚಿರೂಂಜಿಯಾ ಮೋರ್‌ನಲ್ಲಿ 2004ರಲ್ಲಿ ನಡೆದಿದ್ದ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಸತೇಂದ್ರ ಸಾಹ್ ಆರೋಪಿಯಾಗಿದ್ದಾರೆ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಿಹಾರ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದಂತೆ, ನಾಟಕೀಯ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ಜನತಾ ದಳ (RJD) ಅಭ್ಯರ್ಥಿ ಸತೇಂದ್ರ ಸಾಹ್ ಅವರನ್ನು ನಾಮಪತ್ರ ಸಲ್ಲಿಸಿದ ತಕ್ಷಣವೇ ಬಂಧಿಸಲಾಗಿದೆ. ಸೋಮವಾರ ಸಸಾರಾಂ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ಈ ಘಟನೆ ನಡೆದಿದೆ.
ಸತೇಂದ್ರ ಸಾಹ್ ಅವರು ಸಸಾರಾಂನ ಚುನಾವಣಾಧಿಕಾರಿ ಕಚೇರಿಗೆ ನಾಮಪತ್ರ ಸಲ್ಲಿಸಲು ಆಗಮಿಸುತ್ತಿದ್ದಂತೆ, ಜಾರ್ಖಂಡ್ ಪೊಲೀಸರ ತಂಡ ಅಲ್ಲಿಗೆ ಆಗಮಿಸಿತ್ತು. ಅವರ ವಿರುದ್ಧ ಬಾಕಿ ಇದ್ದ ಜಾಮೀನು ರಹಿತ ವಾರಂಟ್ (NBW) ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸಲು ಅವರಿಗೆ ಅವಕಾಶ ನೀಡಿದ ಪೊಲೀಸರು, ಪ್ರಕ್ರಿಯೆ ಮುಗಿದ ತಕ್ಷಣವೇ ಅವರನ್ನು ವಶಕ್ಕೆ ಪಡೆದರು. ಈ ಹಠಾತ್ ಬೆಳವಣಿಗೆಯಿಂದ ಅವರ ಬೆಂಬಲಿಗರು ಗೊಂದಲಕ್ಕೀಡಾಗಿದ್ದರು.
20 ವರ್ಷಗಳ ಹಿಂದಿನ ಬ್ಯಾಂಕ್ ದರೋಡೆ ಕೇಸ್
ಜಾರ್ಖಂಡ್‌ನ ಗಢವಾ ಜಿಲ್ಲೆಯ ಚಿರೂಂಜಿಯಾ ಮೋರ್‌ನಲ್ಲಿ 2004ರಲ್ಲಿ ನಡೆದಿದ್ದ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಸತೇಂದ್ರ ಸಾಹ್ ಆರೋಪಿಯಾಗಿದ್ದಾರೆ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಅವರ ವಿರುದ್ಧ ಖಾಯಂ ವಾರಂಟ್ ಜಾರಿಗೊಳಿಸಲಾಗಿತ್ತು. ಇದಲ್ಲದೆ, ದರೋಡೆ, ಡಕಾಯಿತಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಉಲ್ಲಂಘನೆಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ಅವರ ವಿರುದ್ಧ ದಾಖಲಾಗಿವೆ ಎಂದು ಗಢವಾ ಸದರ್ ಪೊಲೀಸ್ ಠಾಣೆಯ ಅಧಿಕಾರಿ ಸುನಿಲ್ ತಿವಾರಿ ಮಾಹಿತಿ ನೀಡಿದ್ದಾರೆ.
'INDIA' ಮೈತ್ರಿಕೂಟದ ಮೂರನೇ ಅಭ್ಯರ್ಥಿ ಬಂಧನ
ಬಿಹಾರ ಚುನಾವಣೆಯಲ್ಲಿ 'INDIA' ಮೈತ್ರಿಕೂಟದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ನಂತರ ಬಂಧನಕ್ಕೊಳಗಾಗುತ್ತಿರುವ ಮೂರನೇ ಪ್ರಕರಣ ಇದಾಗಿದೆ. ಈ ಹಿಂದೆ, ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಅಭ್ಯರ್ಥಿಗಳಾದ ಜಿತೇಂದ್ರ ಪಾಸ್ವಾನ್ (ಭೋರೆ ಕ್ಷೇತ್ರ) ಮತ್ತು ಸತ್ಯದೇವ್ ರಾಮ್ (ದರೌಲಿ ಕ್ಷೇತ್ರ) ಅವರನ್ನೂ ಸಹ ನಾಮಪತ್ರ ಸಲ್ಲಿಸಿದ ಕೂಡಲೇ ಬಂಧಿಸಲಾಗಿತ್ತು.
ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ.