
ತೀವ್ರ ವಿರೋಧದ ನಡುವೆಯೂ, ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಡಿ. ರಾಜಾ ಪುನರಾಯ್ಕೆ
ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅಮರ್‌ಜೀತ್ ಕೌರ್ ಮತ್ತು ಬಿನೋಯ್ ವಿಶ್ವಂ ಅವರ ಹೆಸರುಗಳು ಚರ್ಚೆಯಲ್ಲಿದ್ದರೂ, ಅಂತಿಮವಾಗಿ ಡಿ. ರಾಜಾ ಅವರೇ ಮುಂದುವರಿಯಲು ಕಾರ್ಯಕಾರಿಣಿ ಸಭೆ ತೀರ್ಮಾನಿಸಿದೆ.
ತೀವ್ರ ಆಂತರಿಕ ವಿರೋಧ ಮತ್ತು ವಯೋಮಿತಿಯ ನಿಯಮಗಳ ಚರ್ಚೆಯ ನಡುವೆಯೂ, ಅನುಭವಿ ನಾಯಕ ಡಿ. ರಾಜಾ ಅವರು ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಪ್ರಧಾನ ಕಾರ್ಯದರ್ಶಿಯಾಗಿ ಮೂರನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಚಂಡೀಗಢದಲ್ಲಿ ಬುಧವಾರ ನಡೆದ ಪಕ್ಷದ ತ್ರೈವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅಮರ್‌ಜೀತ್ ಕೌರ್ ಮತ್ತು ಬಿನೋಯ್ ವಿಶ್ವಂ ಅವರ ಹೆಸರುಗಳು ಚರ್ಚೆಯಲ್ಲಿದ್ದರೂ, ಅಂತಿಮವಾಗಿ ಡಿ. ರಾಜಾ ಅವರೇ ಮುಂದುವರಿಯಲು ಕಾರ್ಯಕಾರಿಣಿ ಸಭೆ ತೀರ್ಮಾನಿಸಿದೆ. ಕಮ್ಯುನಿಸ್ಟ್ ಪಕ್ಷವೊಂದರ ಮುಖ್ಯಸ್ಥರಾದ ಮೊದಲ ದಲಿತ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಾಜಾ ಅವರು, 'ಇಂಡಿಯಾ' ಮೈತ್ರಿಕೂಟದ ಪಕ್ಷಗಳೊಂದಿಗೆ ತಮಗಿರುವ ಉತ್ತಮ ಬಾಂಧವ್ಯ ಮತ್ತು ಅನುಭವವನ್ನು ಉಲ್ಲೇಖಿಸಿ, ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡುವಂತೆ ಕೋರಿದ್ದರು ಎಂದು ತಿಳಿದುಬಂದಿದೆ.
ವಯೋಮಿತಿ ನಿಯಮ ಸಡಿಲಿಕೆ
ಸಿಪಿಐನಲ್ಲಿ 75 ವರ್ಷ ದಾಟಿದ ನಾಯಕರು ಉನ್ನತ ಹುದ್ದೆಗಳಲ್ಲಿ ಮುಂದುವರಿಯುವಂತಿಲ್ಲ ಎಂಬ ನಿಯಮವಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದ ಘಟಕಗಳು ಬಲವಾಗಿ ಒತ್ತಾಯಿಸಿದ್ದವು. ಆದರೆ, ಬಿಹಾರ ಸೇರಿದಂತೆ ಉತ್ತರ ಭಾರತದ ನಾಯಕರು ಡಿ. ರಾಜಾ ಅವರ ಪರವಾಗಿ ನಿಂತರು. ಅಂತಿಮವಾಗಿ, ರಾಜಾ ಅವರಿಗೆ ಮಾತ್ರ ವಯೋಮಿತಿ ನಿಯಮವನ್ನು ಸಡಿಲಗೊಳಿಸಿ, ಬೇರೆ ಯಾವುದೇ 75 ವರ್ಷ ದಾಟಿದ ನಾಯಕರನ್ನು ರಾಷ್ಟ್ರೀಯ ನಾಯಕತ್ವದಲ್ಲಿ ಮುಂದುವರಿಸದಿರಲು ನಿರ್ಧರಿಸಲಾಯಿತು.
ಕೆಲವು ಹಿರಿಯ ನಾಯಕರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂದು ಹೇಳಿದ್ದರೂ, ಪಕ್ಷದ ಹಿತದೃಷ್ಟಿಯಿಂದ ರಾಜಾ ಅವರ ನಾಯಕತ್ವವೇ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ. ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯ ನೇಮಕದ ಬಗ್ಗೆಯೂ ಚರ್ಚೆ ನಡೆದರೂ, ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ. 2019ರ ಜುಲೈ 21ರಂದು ಮೊದಲ ಬಾರಿಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ರಾಜಾ ಅವರು, ಇದೀಗ ಮತ್ತೊಂದು ಅವಧಿಗೆ ಪಕ್ಷವನ್ನು ಮುನ್ನಡೆಸಲಿದ್ದಾರೆ.