BIFFes 2025 | ಬೆಂಗಳೂರು ಚಲನಚಿತ್ರೋತ್ಸವ: ಸಾಲುಸಾಲು ಯಡವಟ್ಟಿಗೆ ಅಸಲಿ ಕಾರಣವೇನು?
ಹಿರಿಯ ಕಲಾವಿದರೂ, ಕ್ರಿಯಾಶೀಲ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರೂ ಆದ ಸಾಧು ಕೋಕಿಲಾ ಅವರು ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾದಾಗ ಚಿತ್ರರಂಗದ ಹಲವರಿಗೆ ಅವರ ಬಗ್ಗೆ ಭಾರೀ ನಿರೀಕ್ಷೆಗಳಿದ್ದವು.;
ಸಾಧು ಕೋಕಿಲಾ ಮತ್ತು ಡಿ ಕೆ ಶಿವಕುಮಾರ್
ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(BIFFes2025) ವಿವಾದಗಳು ಮುಂದುವರಿಯುತ್ತಲೇ ಇವೆ.
ನಟ್ಟು ಮತ್ತು ಬೋಲ್ಟು ಹೇಳಿಕೆಯಿಂದ ಆರಂಭವಾಗಿ ಉದ್ಘಾಟನಾ ಸಮಾರಂಭ, ಕಲಾವಿದರ ಗೈರು, ಸಿನಿಮಾ ಪ್ರದರ್ಶನ, ಪಾಸ್ ವಿತರಣೆ, ಚಲನಚಿತ್ರ ಅಕಾಡೆಮಿ ನೂತನ ಸದಸ್ಯರಿಗೆ ಅವಮಾನ, ಅಕಾಡೆಮಿ ಅಧ್ಯಕ್ಷರ ಹೇಳಿಕೆಗಳು, ಪ್ರೋಮೊ ವಿಡಿಯೋ ವಿವಾದ, ಚಿತ್ರೋತ್ಸವಕ್ಕೆ ಸಿನಿಮಾ ಆಯ್ಕೆ.. ಹೀಗೆ ಪ್ರತಿ ವಿಷಯದಲ್ಲೂ ಆರೋಪ- ಗೊಂದಲಗಳು ಮುಂದುವರಿದಿವೆ.
ಕಲಾವಿದರು ಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಲಿಲ್ಲ ಎಂಬ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಆಡಿದ 'ಬೋಲ್ಟ್ ನಟ್ ಟೈಟ್' ಮಾಡುವ ಎಚ್ಚರಿಕೆಯ ಮಾತು ಭಾರೀ ಪ್ರಮಾಣದ ಪರ- ವಿರೋಧದ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ನಟ ಸುದೀಪ್ ಸೇರಿದಂತೆ ಹಲವರ ಆಪ್ತ ವಲಯದಿಂದ ಆಹ್ವಾನ ಪತ್ರಿಕೆ ತಲುಪದೇ ಇರುವ ಸ್ಪಷ್ಟನೆಗಳು ಹೊರಬಿದ್ದಿವೆ. ಅದಕ್ಕೆ ಪ್ರತಿಯಾಗಿ ಅಕಾಡೆಮಿ ಕಡೆಯಿಂದ ಆಹ್ವಾನ ಪತ್ರಿಕೆ ನೀಡಲು ಪಟ್ಟಿ ಮಾಡಿಕೊಂಡಿದ್ದ ನಟ-ನಟಿಯರ ಹೆಸರುಗಳು, ಮತ್ತು ಆಹ್ವಾನ ಪತ್ರಿಕೆ ತಲುಪಿಸಿದ ಕುರಿತ ಸಹಿ ಸಹಿತ ಪಟ್ಟಿಯೂ ಹೊರಬಿದ್ದಿದೆ.
ಹೀಗೆ ಒಂದು ಕಡೆ ಅಕಾಡೆಮಿ, ಮತ್ತೊಂದು ಕಡೆ ಸಿನಿಮಾ ರಂಗದ ನಡುವೆ ನಡೆಯುತ್ತಿರುವ ಈ ಆರೋಪ- ಪ್ರತ್ಯಾರೋಪ, ಸ್ಪಷ್ಟನೆ, ದೂಷಣೆಗಳು ಸಹಜವಾಗೇ ಸಿನಿಮಾ ಅಭಿಮಾನಿಗಳಿಗೆ ಕಿರಿಕಿರಿ ತಂದಿವೆ. ಅತ್ಯುತ್ತಮ ಆಯೋಜನೆ, ನಿರ್ವಹಣೆ ಮತ್ತು ಗುಣಮಟ್ಟದ ಚಿತ್ರಗಳ ಪ್ರದರ್ಶನದ ಮೂಲಕ ಬೆಂಗಳೂರು ಮತ್ತು ಕನ್ನಡಿಗರ ಮಾನ ಕಾಯಬೇಕಾಗಿದ್ದ ಚಿತ್ರೋತ್ಸವ ಹೀಗೆ ನಗೆಪಾಟಲಿನ ಸಂಗತಿಯಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿರುವುದು ಕೇವಲ ಸಿನಿಮಾ ಅಭಿಮಾನಿಗಳಿಗೆ ಮಾತ್ರವಲ್ಲ; ಕನ್ನಡಿಗರೂ ನೋವಿನ ಸಂಗತಿಯೇ.
ಪ್ರೋಟೋಕಾಲ್ ಹೇಳಿಕೆ ಗೊಂದಲ
ಈ ನಡುವೆ ಸ್ಟಾರ್ ನಟ-ನಟಿಯರನ್ನು ಕರೆದಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸಾಧು ಕೋಕಿಲಾ ಅವರು, ಸ್ಟಾರ್ ನಟರು ಬಂದರೆ ಪ್ರೋಟೊಕಾಲ್ ಸಮಸ್ಯೆ ಎದುರಾಗುತ್ತದೆ. ಜನಜಂಗುಳಿಯ ನಡುವೆ ಅವರುಗಳ ಭದ್ರತೆಯ ಸಮಸ್ಯೆ ತಲೆದೋರಲಿದೆ ಎಂದೂ ಹೇಳಿದ್ದಾರೆ. ಆದರೆ, ಈ ಸೂಕ್ಷ್ಮತೆಯ ಅರಿವು ಉಪಮುಖ್ಯಮಂತ್ರಿಗಳಿಗೆ ಇರಲಿಲ್ಲವೇ? ಆ ಮಾಹಿತಿ ಇಲ್ಲದೆ ಅವರು ಏಕಾಏಕಿ ನಟ್ಟು ಬೋಲ್ಟಿನ ಮಾತನಾಡಿದರೇ? ಎಂಬ ಪ್ರಶ್ನೆ ಕೂಡ ಎದ್ದಿದೆ.
ಈ ಎಲ್ಲದರ ನಡುವೆ ಚಲನಚಿತ್ರೋತ್ಸವಕ್ಕೆ ಸಿನಿಮಾಗಳ ಆಯ್ಕೆ, ಚಿತ್ರೋದ್ಯಮದವರನ್ನು ಆಹ್ವಾನಿಸುವುದು, ಪಾಸ್ ವಿತರಣೆ, ಚಿತ್ರ ಪ್ರದರ್ಶನ ಮುಂತಾದ ಪ್ರತಿ ವಿಷಯದಲ್ಲೂ ಚಲನಚಿತ್ರ ಅಕಾಡೆಮಿ ಮತ್ತು ಚಿತ್ರೋತ್ಸವದ ಆಯೋಜಕರ ನಡುವೆ ಆರಂಭದಿಂದಲೂ ಹಗ್ಗಜಗ್ಗಾಟವೇ ನಡೆದಿದೆ. ಹಿಂದಿನ ಹದಿನೈದು ಉತ್ಸವಗಳಲ್ಲಿ ಮಾಡಿಕೊಂಡು ಬಂದಂತೆಯೇ ಈ ಬಾರಿಯೂ ಅಕಾಡೆಮಿ ಅಧ್ಯಕ್ಷರ ಮೇಲೆ ಹಿಡಿತ ಸಾಧಿಸಿ ತಾವು ಅಂದುಕೊಂಡಂತೆ, ತಮ್ಮ ಮೂಗಿನ ನೇರಕ್ಕೆ ಚಿತ್ರೋತ್ಸವ ನಡೆಸಲು ಕೆಲವರು ಪ್ರಯತ್ನಿಸಿದರು. ಆದರೆ ಅಂತಹ ಪ್ರಯತ್ನಗಳಿಗೆ ಅಕಾಡೆಮಿ ಅಧ್ಯಕ್ಷರು ಜಗ್ಗಲಿಲ್ಲ. ಜೊತೆಗೆ ಈ ಬಾರಿ ಅಕಾಡೆಮಿ ಸದಸ್ಯರ ನೇಮಕ ವಿಳಂಬದಿಂದಾಗಿ ಆಯೋಜಕರಿಗೆ ತಮಗೆ ಬೇಕಾದಂತೆ ಎಲ್ಲವನ್ನೂ ನಡೆಸಲು ಅನುಕೂಲಕರ ವಾತಾವರಣವಿತ್ತು.
ಅಲ್ಲದೆ, ಅಕಾಡೆಮಿಯ ಅಧಿಕಾರಿಗಳು ಕೂಡ ಸದಸ್ಯರ ಗೈರಿನ ಅನುಕೂಲ ಬಳಸಿಕೊಂಡು ಸಿನಿಮಾ ಆಯ್ಕೆಯಲ್ಲೂ ವ್ಯವಹಾರ ಕುದುರಿಸಲು ಮುಂದಾಗಿದ್ದರು. ಆದರೆ, ಚಿತ್ರೋತ್ಸವದ ಕೊನೇ ಹಂತದ ತಯಾರಿ ವೇಳೆ ಆಯ್ಕೆಯಾದ ಅಕಾಡೆಮಿಯ ಸದಸ್ಯರ ಪ್ರವೇಶದೊಂದಿಗೆ ಅಂತಹ ಅನುಕೂಲಗಳಿಗೆ ಕೊನೇ ಕ್ಷಣದಲ್ಲಿ ಅಡ್ಡಿ ಎದುರಾಯಿತು ಎಂಬ ಮಾತುಗಳು ಕೇಳಿಬಂದಿವೆ.
"ಒಂದು ಕಡೆ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ಒಮ್ಮತದ ವಾತಾವರಣ ಮೂಡಿಲ್ಲ. ಮತ್ತೊಂದು ಕಡೆ ಚಿತ್ರೋತ್ಸವದ ಆಯೋಜಕರು ಮತ್ತು ಅಕಾಡೆಮಿ ಅಧ್ಯಕ್ಷರ ನಡುವೆ ಕೂಡ ಹಲವು ವಿಷಯಗಳಲ್ಲಿ ಹಾವು ಏಣಿಯಾಟ ನಡೆಯಿತು. ಅಕಾಡೆಮಿಯ ನೂತನ ಸದಸ್ಯರನ್ನು ಕೂಡ ಆಯೋಜಕರು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವರನ್ನು ಸಂಪೂರ್ಣವಾಗಿ ಹೊರಗಿಟ್ಟು ತಮ್ಮದೇ ಮೂಗಿನ ನೇರಕ್ಕೆ ನಿರ್ಧಾರ ಕೈಗೊಳ್ಳುವುದನ್ನು ಮುಂದುವರಿಸಿದರು. ಈ ನಡುವೆ ಅಧಿಕಾರಿಗಳು ಕೂಡ ಅವಕಾಶ ಬಳಸಿಕೊಂಡು ಲಾಭ ಮಾಡಲು ಮುಂದಾದರು. ಒಟ್ಟಾರೆ, ಇಡೀ ಉತ್ಸವವನ್ನು ಉತ್ತಮವಾಗಿ ನಡೆಸುವ ಕಡೆಗೆ ಯಾರ ಗಮನವೂ ಇರದೆ, ಪ್ರತಿಯೊಬ್ಬರೂ ತಮ್ಮದೇ ಹಿತಾಸಕ್ತಿಗಳನ್ನು ಮುಂದೆ ಮಾಡಿ ತಮ್ಮದೇ ಆದ ಲಾಭ ಪಡೆಯಲು ಹವಣಿಸಿದರು. ಹಾಗಾಗಿ ಇಷ್ಟೆಲ್ಲಾ ಗೊಂದಲ, ವಿವಾದಗಳಿಗೆ ಬೆಂಗಳೂರು ಚಲನಚಿತ್ರೋತ್ಸವ ಆಹಾರವಾಯ್ತು" ಎನ್ನುತ್ತಾರೆ ಹಿರಿಯ ಸಿನಿಮಾ ವಿಮರ್ಶಕ(ಹೆಸರು ಉಲ್ಲೇಖಿಸದಂತೆ ಕೋರಿದ್ದಾರೆ).
ಅಕಾಡೆಮಿ ಅಧ್ಯಕ್ಷರಿಗೇ ನಿರಾಸಕ್ತಿ?
ಹಿರಿಯ ಕಲಾವಿದರೂ, ಕ್ರಿಯಾಶೀಲ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರೂ ಆದ ಸಾಧು ಕೋಕಿಲಾ ಅವರು ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾದಾಗ ಚಿತ್ರರಂಗದ ಹಲವರಿಗೆ ಅವರ ಬಗ್ಗೆ ಭಾರೀ ನಿರೀಕ್ಷೆಗಳಿದ್ದವು. ಹಲವು ವರ್ಷಗಳಿಂದ ಒಂದು ಸೀಮಿತ ಗುಂಪಿನ ಆಡುಂಬೊಲವಾಗಿದ್ದ ಅಕಾಡೆಮಿಯನ್ನು ಅವರು ನಿಜವಾಗಿಯೂ ನಿಷ್ಪಕ್ಷಪಾತ, ಪಾರದರ್ಶಕ ಸಂಸ್ಥೆಯಾಗಿ ರೂಪಿಸಬಹುದು ಎಂಬ ನಿರೀಕ್ಷೆಗಳಿದ್ದವು.
ಆದರೆ, “ಸ್ವತಃ ಅವರಿಗೇ ಆ ಸ್ಥಾನದ ಬಗ್ಗೆ ತೃಪ್ತಿ ಇರಲಿಲ್ಲ. ಅದಕ್ಕೂ ದೊಡ್ಡ ಸ್ಥಾನವನ್ನು ತಮ್ಮ ಪಕ್ಷದಿಂದ ನಿರೀಕ್ಷಿಸಿದ್ದ ಅವರಿಗೆ ಅಕಾಡೆಮಿ ಅಧ್ಯಕ್ಷ ಸ್ಥಾನ ಖುಷಿ ಕೊಟ್ಟಿರಲಿಲ್ಲ. ಹಾಗಾಗಿಯೇ ಅವರು ಆರಂಭದಿಂದಲೂ ಅಕಾಡೆಮಿಯ ಕೆಲಸ ಕಾರ್ಯಗಳಲ್ಲಿ ಆಸಕ್ತಿ ವಹಿಸಿದ್ದೇ ಕಡಿಮೆ. ಹಿತಾಸಕ್ತ ಗುಂಪನ್ನು ಹೊರಗಟ್ಟಿ ಯುವ ಕ್ರಿಯಾಶೀಲರನ್ನು ತೊಡಗಿಸಿಕೊಂಡು ಏನಾದರೂ ಭಿನ್ನವಾಗಿ ಮಾಡಬೇಕು, ವಾಡಿಕೆಯನ್ನು ಮುರಿದು ಉತ್ತಮ ಕೆಲಸ ಮಾಡಬೇಕು ಎಂಬ ಆಸಕ್ತಿಯೇ ಕಾಣುತ್ತಿಲ್ಲ. ಹಾಗಾಗಿಯೇ ಅಕಾಡೆಮಿ ಸದಸ್ಯರ ನೇಮಕಾತಿ ಕೂಡ ವಿಳಂಬವಾಯಿತು. ಇದೀಗ ಪೂರ್ಣ ಆಡಳಿತ ಮಂಡಳಿ ರಚನೆಯಾದ ಬಳಿಕವೂ ಅಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ರೀತಿ ಕಾಣಿಸುತ್ತಿಲ್ಲ. ಅವರ ಇಂತಹ ನಿರಾಸಕ್ತಿ ಮತ್ತು ಉದಾಸೀನ ಧೋರಣೆಯೂ ಈ ಬಾರಿಯ ಚಿತ್ರೋತ್ಸವ ಗೊಂದಲಗಳಿಗೆ ಒಂದು ಕಾರಣ. ಅವರು ತಮ್ಮ ಹೊಣೆಗಾರಿಕೆ ಅರಿತು ವಿಶ್ವಾಸದಿಂದ ಕೆಲಸ ಮಾಡಿದ್ದರೆ ಪಟ್ಟಭದ್ರರಿಂದ ಚಿತ್ರೋತ್ಸವವನ್ನು ಪಾರು ಮಾಡಿ ಅರ್ಥಪೂರ್ಣವಾಗಿ ನಡೆಸಬಹುದಿತ್ತು” ಎನ್ನುತ್ತಾರೆ ಆ ಹಿರಿಯ ಸಿನಿಮಾ ಪತ್ರಕರ್ತರು.
ಅಂದರೆ; ತಮ್ಮ ಪ್ರತಿಭೆ ಮತ್ತು ಅನುಭವನ್ನು ಗುರುತಿಸಿ ಸರ್ಕಾರ ನೀಡಿದ ಅಕಾಡೆಮಿಯ ಅಧ್ಯಕ್ಷ ಸ್ಥಾನವನ್ನೇ ಬಳಸಿಕೊಂಡು ಉತ್ತಮ ಚಿತ್ರೋತ್ಸವ ಆಯೋಜಿಸುವ ಅವಕಾಶವಿದ್ದರೂ ಅವರು ಅದನ್ನು ಬಳಸಿಕೊಳ್ಳಲಿಲ್ಲ. ಅದರಲ್ಲೂ ಪ್ರಯೋಗಶೀಲವಾಗಿ ಅಕಾಡೆಮಿಯನ್ನು ತೊಡಗಿಸುವ ಆಸಕ್ತಿ ಮತ್ತು ಸಾಮರ್ಥ್ಯವಿರುವ ಅಕಾಡೆಮಿ ಸದಸ್ಯರ ಬಲವಿದ್ದರೂ ಸಾಧು ಕೋಕಿಲಾ ಅವರು ಆ ನಿಟ್ಟಿನಲ್ಲಿ ಆಸಕ್ತಿ ತೋರುತ್ತಿಲ್ಲ. ಅವರ ಈ ನಿರಾಸಕ್ತಿಯೇ ಚಿತ್ರೋತ್ಸವದ ಆಯೋಜಕ ವಲಯದಲ್ಲಿರುವ ಕೆಲವು ಹಿತಾಸಕ್ತ ಗುಂಪಿಗಳಿಗೆ ಉತ್ಸವವನ್ನು ಗೊಂದಲದ ಗೂಡಾಗಿಸಲು ಅವಕಾಶ ಕಲ್ಪಿಸಿತು ಎಂದೂ ಅವರು ಅಭಿಪ್ರಾಯಪಟ್ಟರು.
ಆ ಹಿನ್ನೆಲೆಯಲ್ಲಿ ನೋಡಿದರೆ; ಈಗಾಗಲೇ ಚಿತ್ರರಂಗದ ಹಲವರು ಹೇಳಿದಂತೆ ಉಪ ಮುಖ್ಯಮಂತ್ರಿಗಳು ನಟ್ಟು ಬೋಲ್ಟು ಟೈಟ್ ಮಾಡಬೇಕಿರುವುದು ಸಿನಿಮಾ ರಂಗದವರದ್ದಲ್ಲ; ಅಸಲಿಗೆ ತಮ್ಮದೇ ಅಕಾಡೆಮಿಯದ್ದು. ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ಮೊದಲು ಹೊಂದಾಣಿಕೆ ಖಾತರಿಪಡಿಸಬೇಕಿದೆ. ಆ ಮೂಲಕ ಕನಿಷ್ಟ ಮುಂದಿನ ಚಿತ್ರೋತ್ಸವನ್ನಾದರೂ ಅರ್ಥಪೂರ್ಣವಾಗಿ ನಡೆಸಲು ಬುನಾದಿ ಹಾಕಬೇಕಿದೆ.