ಬೆಂಗಳೂರು|ತಪಾಸಣೆ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ವೈದ್ಯನ ಬಂಧನ
ಶನಿವಾರ ಸಂಜೆ ಯುವತಿ ಒಬ್ಬಳೇ ಕ್ಲಿನಿಕ್‌ಗೆ ಬಂದಿದ್ದ ವೇಳೆ, ವೈದ್ಯರು ತಪಾಸಣೆ ನೆಪದಲ್ಲಿ ಸುಮಾರು 30 ನಿಮಿಷಗಳ ಕಾಲ ಅನುಚಿತವಾಗಿ ಸ್ಪರ್ಶಿಸಿ ಕಿರುಕುಳ ನೀಡಿದರೆಂದು ಆರೋಪಿಸಲಾಗಿದೆ.
ಬೆಂಗಳೂರಿನ ಹೃದಯಭಾಗದಲ್ಲಿರುವ ತಮ್ಮ ಖಾಸಗಿ ಕ್ಲಿನಿಕ್‌ಗೆ ಸಮಾಲೋಚನೆಗಾಗಿ ಬಂದಿದ್ದ 21 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 56 ವರ್ಷದ ಚರ್ಮರೋಗ ತಜ್ಞ ಡಾ. ಪ್ರವೀಣ್ ಎಂಬುವರನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶನಿವಾರ ಸಂಜೆ ಯುವತಿ ಒಬ್ಬಳೇ ಕ್ಲಿನಿಕ್‌ಗೆ ಬಂದಿದ್ದ ವೇಳೆ, ವೈದ್ಯರು ತಪಾಸಣೆ ನೆಪದಲ್ಲಿ ಸುಮಾರು 30 ನಿಮಿಷಗಳ ಕಾಲ ಅನುಚಿತವಾಗಿ ಸ್ಪರ್ಶಿಸಿ ಕಿರುಕುಳ ನೀಡಿದರೆಂದು ಆರೋಪಿಸಲಾಗಿದೆ. ಯುವತಿ ವಿರೋಧಿಸಿದರೂ, ವೈದ್ಯರು ಹಲವಾರು ಬಾರಿ ಅಪ್ಪಿಕೊಂಡು ಮುತ್ತು ನೀಡಿದ್ದು, ಅಸಭ್ಯ ವರ್ತನೆ ತೋರಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪರೀಕ್ಷಿಸಲು ಬಟ್ಟೆ ಬಿಚ್ಚುವಂತೆಯೂ ಒತ್ತಾಯಿಸಿದ್ದಾರೆ. ತನ್ನೊಂದಿಗೆ ಖಾಸಗಿ ಸಮಯ ಕಳೆಯಲು ಹೋಟೆಲ್ ರೂಮ್ ಕಾಯ್ದಿರಿಸುವಂತೆ ಸಲಹೆ ನೀಡಿದರು ಎಂದು ಯುವತಿಯು ದೂರಿನಲ್ಲಿ ಆರೋಪಿಸಿದ್ದಾರೆ.
"ನಾನು ಸಾಮಾನ್ಯವಾಗಿ ತಂದೆಯೊಂದಿಗೆ ಕ್ಲಿನಿಕ್‌ಗೆ ಭೇಟಿ ನೀಡುತ್ತಿದ್ದೆ, ಆದರೆ, ಘಟನೆ ನಡೆದ ದಿನ ಅವರು ಬಂದಿರಲಿಲ್ಲ. ವೈದ್ಯರ ಅನುಚಿತ ವರ್ತನೆ ಬಗ್ಗೆ ಮನೆಯವರಿಗೆ ತಿಳಿಸಿದೆ ಎಂದು ಯುವತಿ ಹೇಳಿದ್ದಾರೆ. ಯುವತಿಯ ಕುಟುಂಬಸ್ಥರು ಮತ್ತು ಸ್ಥಳೀಯ ನಿವಾಸಿಗಳು ಕ್ಲಿನಿಕ್ ಮುಂದೆ ಪ್ರತಿಭಟನೆ ನಡೆಸಿದರು.
ಸ್ಥಳಕ್ಕಾಗಮಿಸಿದ ಪೊಲೀಸರು ಡಾ. ಪ್ರವೀಣ್ ಅವರನ್ನು ವಶಕ್ಕೆ ಪಡೆದರು. ಆದರೆ, ವೈದ್ಯರು ತಮ್ಮ ಮೇಲಿನ ಆರೋಪ ನಿರಾಕರಿಸಿದ್ದು, ಯುವತಿ ತಮ್ಮ ತಪಾಸಣೆಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ಸಂಬಂಧ ಡಾ. ಪ್ರವೀಣ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 75 (ಲೈಂಗಿಕ ಕಿರುಕುಳ) ಮತ್ತು ಸೆಕ್ಷನ್ 79 (ಮಹಿಳೆಯ ಘನತೆಗೆ ಕುಂದು ತರುವ ಉದ್ದೇಶದಿಂದ ಶಬ್ದ, ಸನ್ನೆ ಅಥವಾ ಕೃತ್ಯ) ಅಡಿ ಪ್ರಕರಣ ದಾಖಲಿಸಲಾಗಿದೆ.