Bangalore Rain : ಮನೆಯೊಳಗೆ ತುಂಬಿದ್ದ ನೀರು ಹೊರಹಾಕುವಾಗ ಕರೆಂಟ್ ಶಾಕ್ ಹೊಡೆದು ಇಬ್ಬರ ದುರ್ಮರಣ
ನೀರನ್ನು ಮೋಟರ್ ಬಳಸಿ ಹೊರಹಾಕಲು ಯತ್ನಿಸುತ್ತಿದ್ದಾಗ ಮನಮೋಹನ್ ಕಾಮತ್ (52) ಮತ್ತು ನೇಪಾಳ ಮೂಲದ ದಿನೇಶ್ (12) ಎಂಬುವರಿಗೆ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ.;
ನಗರದಲ್ಲಿ ಭಾರಿ ಮಳೆಯ ಅವಾಂತರ ಮುಂದುವರಿದಿದ್ದು, ಬಿಟಿಎಂ ಲೇಔಟ್‌ನಲ್ಲಿ ವಿದ್ಯುತ್ ತಗುಲಿ 12 ವರ್ಷದ ಬಾಲಕ ಸೇರಿ ಇಬ್ಬರು ದುರ್ಮರಣ ಹೊಂದಿದ್ದಾರೆ. ಈ ಘಟನೆಯು ವೈಟ್‌ಫೀಲ್ಡ್‌ನ ಚನ್ನಸಂದ್ರದಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ ಬೆನ್ನಲ್ಲೇ ಸಂಭವಿಸಿದೆ. ಈ ಮೂಲಕ ಬೆಂಗಳೂರಿನಲ್ಲಿ ಮಳೆಯಿಂದ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.
ಬಿಟಿಎಂ ಲೇಔಟ್‌ನ 2ನೇ ಹಂತದ ಎನ್. ಎಸ್. ಪಾಳ್ಯದಲ್ಲಿರುವ ಮಧುವನ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ನಲ್ಲಿ ನೀರು ತುಂಬಿಕೊಂಡಿತ್ತು. ಈ ನೀರನ್ನು ಮೋಟರ್ ಬಳಸಿ ಹೊರಹಾಕಲು ಯತ್ನಿಸುತ್ತಿದ್ದಾಗ ಮನಮೋಹನ್ ಕಾಮತ್ (52) ಮತ್ತು ನೇಪಾಳ ಮೂಲದ ದಿನೇಶ್ (12) ಎಂಬುವರಿಗೆ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ. ಸೋಮವಾರ ಸಂಜೆ 6:15ರ ಸುಮಾರಿಗೆ ಈ ದುರಂತ ಸಂಭವಿಸಿದೆ.
ಗೋಡೆ ಕುಸಿತದಿಂದ ಮಹಿಳೆ ಸಾವು, ಕುಟುಂಬಕ್ಕೆ 5 ಲಕ್ಷ ಪರಿಹಾರ
ವೈಟ್‌ಫೀಲ್ಡ್‌ನ ಚನ್ನಸಂದ್ರ ಸಮೀಪ ಕಟ್ಟಡದ ಗೋಡೆ ಕುಸಿದು ಮೃತಪಟ್ಟಿದ್ದ ಶಶಿಕಲಾ (35) ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ಪರಿಹಾರವನ್ನು ಬಿಬಿಎಂಪಿ ವತಿಯಿಂದ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಮಳೆ ಹಾನಿ ಪರಿಶೀಲನೆ ಮುಂದೂಡಿಕೆ, ಸಿಎಂ ಸಭೆ
ನಿರಂತರ ಮಳೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವ ಸಿಟಿ ರೌಂಡ್ ಅನ್ನು ರದ್ದುಗೊಳಿಸಿದರು. ಬದಲಾಗಿ, ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಕಂಟ್ರೋಲ್ ರೂಮ್‌ಗೆ ತೆರಳಿ ಅಧಿಕಾರಿಗಳಿಂದ ಮಳೆ ಹಾನಿ ಕುರಿತು ಮಾಹಿತಿ ಪಡೆದಿದ್ದಾರೆ.
ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಭಾರಿ ಮಳೆಯಿಂದಾಗಿ ಸಂಚಾರ ದಟ್ಟಣೆಯನ್ನು ತಪ್ಪಿಸಲು ಸಿಟಿ ರೌಂಡ್ ರದ್ದು ಮಾಡಲಾಗಿದೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ತಗ್ಗು ಪ್ರದೇಶಗಳನ್ನು ಗುರುತಿಸಲಾಗಿದ್ದು, ರಾಜಕಾಲುವೆಗಳ ಕೆಲಸ ಪ್ರಗತಿಯಲ್ಲಿದೆ. 166 ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕೆಲಸ ನಡೆಯುತ್ತಿದೆ ಎಂದರು. ಮುಂದಿನ ಬುಧವಾರ ಇಡೀ ದಿನ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿ, ಅನಾಹುತವಾಗಿರುವ ಎಲ್ಲ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಸೂಚನೆ ನೀಡಲಾಗುವುದು ಎಂದು ಸಿಎಂ ತಿಳಿಸಿದರು.
ಸಮಸ್ಯೆಗಳ ನಿವಾರಣೆಗೆ ಸರ್ಕಾರ ಬದ್ಧ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರಿನ ಸಮಸ್ಯೆಗಳು ಹೊಸದೇನಲ್ಲ, ವರ್ಷಗಳಿಂದ ನಿರ್ಲಕ್ಷಿಸಲ್ಪಟ್ಟಿವೆ, ಆದರೆ ಈಗ ಸರ್ಕಾರವು ಅವುಗಳನ್ನು ಶಾಶ್ವತ ಪರಿಹಾರಗಳೊಂದಿಗೆ ಸರಿಪಡಿಸಲು ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಮಳೆ ಹಾನಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ವ್ಯಾಪಕ ಪ್ರವಾಹ, ರಸ್ತೆಗಳು ಜಲಾವೃತಗೊಂಡಿರುವುದು, ಮತ್ತು ಬೋಟ್‌ಗಳಲ್ಲಿ ಜನರನ್ನು ಸ್ಥಳಾಂತರಿಸುವಂತಹ ವರದಿಗಳು ಬಂದಿವೆ. ನಗರದ ಹಲವು ಬಡಾವಣೆಗಳಿಗೆ ಜಲ ದಿಗ್ಬಂಧನ ಉಂಟಾಗಿದೆ. ಬಿಜೆಪಿ ಸಂಸದ ಪಿ.ಸಿ. ಮೋಹನ್ ಅವರು ಕಂಪನಿಗಳಿಗೆ ಎರಡು ದಿನಗಳ ಕಾಲ ವರ್ಕ್ ಫ್ರಮ್ ಹೋಮ್ ನೀಡುವಂತೆ ಮನವಿ ಮಾಡಿದ್ದಾರೆ.