ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಮತ್ತೆ 'ಮಹಾ' ಕ್ಯಾತೆ; ಸುಪ್ರೀಂಗೆ ಮೇಲ್ಮನವಿ

ಆಲಮಟ್ಟಿ ಅಣೆಕಟ್ಟು ಎತ್ತರಿಸುವ ಕರ್ನಾಟಕದ ಪ್ರಸ್ತಾವಕ್ಕೆ ಮತ್ತೆ ಮಹಾರಾಷ್ಟ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಸುಪ್ರೀಂಕೋರ್ಟ್‌ ಮೊರೆ ಹೋಗಲು ತಯಾರಿ ನಡೆಸಿದೆ.;

Update: 2025-03-12 00:30 GMT
ಆಲಮಟ್ಟಿ ಜಲಾಶಯ( ಸಂಗ್ರಹ ಚಿತ್ರ)

ಆಲಮಟ್ಟಿ ಜಲಾಶಯದ ಈಗಿರುವ (519.6 ಮೀ) ಎತ್ತರವನ್ನು 524.25 ಮೀಟರ್‌ಗೆ ಹೆಚ್ಚಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. 

ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ ತೀರ್ಪಿನಲ್ಲಿ ಕರ್ನಾಟಕಕ್ಕೆ ಹೆಚ್ಚುವರಿ 130 ಟಿಎಂಸಿ ಅಡಿ ಹಂಚಿಕೆಯಾಗಿದೆ. ಈ ನೀರನ್ನು ಸಂಗ್ರಹಿಸಿ 5.3ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅಣೆಕಟ್ಟು ಎತ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.

ನ್ಯಾಯಮಂಡಳಿ ತೀರ್ಪಿನ ಅಧಿಸೂಚನೆಗಾಗಿ ರಾಜ್ಯ ಸರ್ಕಾರ ಕಾಯುತ್ತಿತ್ತು. ಆದರೆ, ಈಗ ಮಹಾರಾಷ್ಟ್ರ ಸರ್ಕಾರವು ಅಣೆಕಟ್ಟು ಎತ್ತರಿಸುವ ರಾಜ್ಯ ಪ್ರಸ್ತಾವಕ್ಕೆ ಮತ್ತೆ ವಿರೋಧ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಮೊರೆ ಹೋಗಲು ತಯಾರಿ ನಡೆಸಿದೆ. ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ಮಂಗಳವಾರ ಈ ಕುರಿತು ಅಲ್ಲಿನ ಸರ್ಕಾರದ ಜಲಸಂಪನ್ಮೂಲ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ತಿಳಿಸಿದ್ದಾರೆ.

ಆಲಮಟ್ಟಿ ಅಣೆಕಟ್ಟೆ ಎತ್ತರಿಸುವ ಕರ್ನಾಟಕದ ಪ್ರಸ್ತಾವಕ್ಕೆ ಆಕ್ಷೇಪಣೆ ಸಲ್ಲಿಸಿರುವ ಕುರಿತಂತೆ ಎನ್‌ಸಿಪಿ ಸದಸ್ಯ ಅರುಣ್ ಲಾಡ್ ಎತ್ತಿದ ಪ್ರಶ್ನೆಗೆ ಪಾಟೀಲ್ ಈ ರೀತಿ ಉತ್ತರಿಸಿದ್ದಾರೆ.

ಅಣೆಕಟ್ಟು ಎತ್ತರಿಸುವ ಕರ್ನಾಟಕದ ಪ್ರಸ್ತಾವವನ್ನು ಮಹಾರಾಷ್ಟ್ರ ಸರ್ಕಾರ ಈ ಹಿಂದಿನಿಂದಲೂ ವಿರೋಧಿಸುತ್ತಿದೆ.  ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವ ಮುನ್ನ ರಾಜ್ಯದ ಕಳವಳವನ್ನು ತಿಳಿಸಲು ಮಧ್ಯಂತರ ಅರ್ಜಿ ಸಲ್ಲಿಸುತ್ತೇವೆ ಎಂದು ಪಾಟೀಲ್‌ ಹೇಳಿದ್ದಾರೆ.

ಇನ್ನು ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್ ನಿಂದ 524.25 ಮೀಟರ್‌ಗೆ ಎತ್ತರಿಸಲು ಶೀಘ್ರ ಅಧಿಸೂಚನೆ ಹೊರಡಿಸುವಂತೆ ಕಳೆದ ಒಂದು ವರ್ಷದಿಂದ ಕೇಂದ್ರ ಸರ್ಕಾರವನ್ನು ಸಿಎಂ ಸಿದ್ದರಾಮಯ್ಯ ಅವರು ಒತ್ತಾಯಿಸುತ್ತಿದ್ದರು. 

ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ ತೀರ್ಪಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸಭೆ ಕರೆದು ಚರ್ಚಿಸುವಂತೆ ಹಲವು ಬಾರಿ ಪ್ರಧಾನಿ ಅವರಿಗೆ ಪತ್ರ ಸಹ ಬರೆದಿದ್ದರು. 

ನ್ಯಾಯಮಂಡಳಿ ಎರಡನೇ ತೀರ್ಪಿನಲ್ಲಿ ಕರ್ನಾಟಕಕ್ಕೆ 130 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಲಾಗಿತ್ತು. ಈ ನೀರಿನ ಬಳಕೆಗಾಗಿ ಅಣೆಕಟ್ಟೆಯ ಎತ್ತರವನ್ನು 524.25 ಮೀಟರ್‌ಗೆ ಹೆಚ್ಚಿಸುವುದು ಅನಿವಾರ್ಯವಾಗಿತ್ತು. ಅದರಂತೆ ಯೋಜನೆ ಸಿದ್ಧಪಡಿಸಿದ್ದ ರಾಜ್ಯ ಸರ್ಕಾರವು ಭೂಸ್ವಾಧೀನ, ಪುನರ್ವಸತಿ ಕಾರ್ಯಗಳಿಗಾಗಿ ಸುಮಾರು ₹1 ಲಕ್ಷ ಕೋಟಿ ನಿಗದಿಪಡಿಸಿ, ವರ್ಷಕ್ಕೆ ₹20,000 ಕೋಟಿಯಂತೆ ಐದು ವರ್ಷಗಳಲ್ಲಿ ಹಣ ಖರ್ಚು ಮಾಡಲು ತೀರ್ಮಾನಿಸಿತ್ತು.

20 ಗ್ರಾಮಗಳು ಮುಳುಗಡೆ

ಜಲಾಶಯ ಎತ್ತರಿಸುವ ಯೋಜನೆಯಿಂದ 20 ಹಳ್ಳಿಗಳು ಹಾಗೂ 35 ಸಾವಿರ ಹೆಕ್ಟೇರ್ ಕೃಷಿ ಭೂಮಿ ಮುಳುಗಡೆ ಭೀತಿ ಎದುರಿಸುತ್ತಿದೆ. 2012 ರಲ್ಲಿ ಯೋಜನೆಯಿಂದ ಮುಳುಗಡೆಯಾಗುವ ಗ್ರಾಮಗಳ ಹೆಸರು ಹಾಗೂ ಕೃಷಿ ಭೂಮಿಯ ಸರ್ವೆ ನಂಬರ್ ಗುರುತಿಸಿ ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿತ್ತು. 

ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ, ಕಾತರಕಿ, ಆಲಗುಂಡಿ, ಬುದ್ದಿ, ಹಿರೇಸಂಶಿ, ಗೋವಿಂದಕೊಪ್ಪ, ಉದಗಟ್ಟಿ, ಬಂಟನೂರು, ಬಾವಲತ್ತಿ, ಕುಂದರಗಿ, ಕೊಪ್ಪ, ಅಂಕಲಗಿ, ಚಿಕ್ಕೂರ, ಮಾಚಕನೂರ, ಹಿರೇಪಡಸಲಗಿ, ಸನಾಳ, ಕುಂಬಾರಹಳ್ಳ ಹಾಗೂ ವಿಜಯಪುರ ಜಿಲ್ಲೆಯ ಚಿಕ್ಕಗಲಗಲಿ, ಶಿರಬೂರ, ವಂದಾಲ ಸೇರಿದಂತೆ ಮುಳುಗಡೆ ಆಗಲಿವೆ.

ಈ ಮಧ್ಯೆ 34 ಸಾವಿರ ಎಕರೆ ಭೂ ಸ್ವಾಧೀನಕ್ಕೆ ಸರ್ಕಾರ ನೀಡಿದ್ದ ನೋಟಿಸ್ ಹಾಗೂ ಪರಿಹಾರ ನಿಗದಿಯ ಕುರಿತು ಕೆಲವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಬೆಂಗಳೂರಿನಲ್ಲಿ ಭೂಮಿಗೆ ನೀಡುವ ಪರಿಹಾರವನ್ನೇ ಇಲ್ಲೂ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.

ಆದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದಕ್ಕೆ ಸುತಾರಂ ಒಪ್ಪಿಗೆ ನೀಡಿರಲಿಲ್ಲ. ಕೆಲವರು ಬೆಂಗಳೂರಿನ ಬೆಲೆಗಿಂತ ಹೆಚ್ಚು ಮೊತ್ತದ ಪರಿಹಾರವನ್ನು ಪಡೆಯಲು ನ್ಯಾಯಾಲಯದಿಂದ ಆದೇಶ ತಂದಿದ್ದಾರೆ. ಇದು ಅಸಾಧ್ಯ. ಕೂಡಲೇ ನ್ಯೂನ್ಯತೆಗಳನ್ನು ಸರಿಪಡಿಸಿ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ನಿಗದಿಪಡಿಸಿರುವ ದರದಂತೆ ಪರಿಹಾರ ಪಾವತಿಸಲಾಗುವುದು ಎಂದು ಹಠಕ್ಕೆ ಬಿದ್ದಿದ್ದರು.

Tags:    

Similar News