ನಿಲ್ಲದ ಬಾಣಂತಿ ಸಾವು ಸರಣಿ | ಬೆಳಗಾವಿಯ ಬಿಮ್ಸ್ನಲ್ಲಿ ಮತ್ತೊಬ್ಬ ಬಾಣಂತಿ ಸಾವು
ಹೆರಿಗೆ ಬಳಿಕ ಬಾಣಂತಿ ಮೃತಪಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಥರು ವೈದ್ಯರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.;
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ. ಬಿಮ್ಸ್ನಲ್ಲಿ ಸೋಮವಾರ ರಾತ್ರಿ ಸಿಜೇರಿಯನ್ ಮೂಲಕ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದ ಅಂಜಲಿ ಪಾಟೀಲ್ (31) ಮಂಗಳವಾರ ಮುಂಜಾನೆ ಸಾವಿಗೀಡಾಗಿದ್ದಾರೆ.
ಮದುವೆಯಾಗಿ 12 ವರ್ಷದ ಬಳಿಕ ಗರ್ಭಿಣಿಯಾಗಿದ್ದ ಅಂಜಲಿ ಪಾಟೀಲ್ ಮಗುವಿಗೆ ಜನ್ಮ ನೀಡಿದ ಬಳಿಕ ಮೃತರಾಗಿದ್ದಾರೆ.
ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ಅಂಜಲಿ ಪಾಟೀಲ್ ಅವರಿಗೆ ಹೆರಿಗೆ ದಿನಾಂಕ ನೀಡಲಾಗಿತ್ತು. ಹೆರಿಗೆ ನೋವು ಕಾಣಿಸದ ಹಿನ್ನೆಲೆ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ಬಳಿಕ ಬಾಣಂತಿ ಮೃತಪಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಥರು ವೈದ್ಯರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಕಳೆದ 12 ವರ್ಷಗಳ ಹಿಂದೆ ನಿಲಜಿ ಗ್ರಾಮದ ಪೇಂಟಿಂಗ್ ಕೆಲಸ ಮಾಡುತ್ತಿದ್ದ ನಿಂಗಾಣಿ ಪಾಟೀಲ ಜೊತೆಗೆ ಅಂಜಲಿ ಅವರೊಂದಿಗೆ ವಿವಾಹವಾಗಿತ್ತು. 12 ವರ್ಷಗಳ ಬಳಿಕ ಅಂಜಲಿ ಗರ್ಭಿಣಿ ಆಗಿದ್ದರು.
ಘಟನೆ ಕುರಿತು ಬಿಮ್ಸ್ ಹೆರಿಗೆ ವಿಭಾಗದ ಮುಖ್ಯಸ್ಥ ಡಾ. ವಸಂತ ಕಬ್ಬೂರ ಮಾತನಾಡಿ, ನಿನ್ನೆ ಸಂಜೆ ನಾಲ್ಕು ಗಂಟೆಗೆ ಅಂಜಲಿ ಪಾಟೀಲ ಒಪಿಡಿಗೆ ಬಂದಿದ್ದರು. ಜ.27ಕ್ಕೆ ಅಂಜಲಿ ಪಾಟೀಲ ಹೆರಿಗೆ ದಿನಾಂಕ ನೀಡಲಾಗಿತ್ತು. ಒಪಿಡಿಯಲ್ಲಿ ಪರಿಶೀಲನೆ ನಡೆಸಿದಾಗ ಮಗುವಿನ ಹಾರ್ಟ್ಬೀಟ್ ಕಡಿಮೆ ಆಗಿತ್ತು. ಈ ಕಾರಣಕ್ಕೆ ಸಿಜರಿನ್ ಮೂಲಕ ರಾತ್ರಿ 11.05ಕ್ಕೆ ಹೆರಿಗೆ ಮಾಡಿಸಲಾಯಿತು. ಬೆಳಗ್ಗೆ 5 ಗಂಟೆಗೆ ಅಂಜಲಿ ಪಾಟೀಲ ಸಾವನಪ್ಪಿದ್ದಾರೆ. ರಕ್ತ ಹೆಪ್ಪುಗಟ್ಟಿ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಅಂಜಲಿ ಸಾವಿಗೆ ಆಮ್ನಿಯೊಟೆಕ್ ಪ್ಲೂಯಿಡ್ ಎಂಬಾಲೀಸ್ ಕಾರಣ ಎಂಬುದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಬಸವರಾಜ್ ಬಿಮ್ಸ್ಗೆ ಭೇಟಿ ನೀಡಿ ಬಿಮ್ಸ್ ವೈದ್ಯರಿಂದ ಬಾಣಂತಿ ಸಾವಿನ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ ಮೇರೆಗೆ ಶವಾಗಾರಕ್ಕೆ ಬಂದು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.