Dengue Outbreak | ಬೆಂಗಳೂರಿನಲ್ಲಿ ಡೆಂಗ್ಯೂಗೆ ಮತ್ತೊಂದು ಬಲಿ
ಬೆಂಗಳೂರಿನಲ್ಲಿ ಡೆಂಗ್ಯೂಗೆ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಮೂಲಕ ಡೆಂಗ್ಯೂಯಿಂದ ಮಹಾನಗರದಲ್ಲಿ ಸಾವಿಗೀಡಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಶುಕ್ರವಾರ (ಜೂ.29) ರಂದು ಇಬ್ಬರು ಡೆಂಗ್ಯೂ ಸೋಂಕಿತರು ಮೃತಪಟ್ಟಿದ್ದರು. ಇದೀಗ ಕಗ್ಗದಾಸಪುರದ 27 ವರ್ಷದ ಯುವಕ ಮೃತಪಟ್ಟಿದ್ದಾನೆ ಬಿಬಿಎಂಪಿ ಮಾಹಿತಿ ನೀಡಿದೆ.
ಶುಕ್ರವಾರ ಮೃತಪಟ್ಟ 80 ವರ್ಷದ ವೃದ್ದೆಯ ಸಾವಿಗೆ ಡೆಂಗ್ಯೂ ಕಾರಣವಲ್ಲ, ಕ್ಯಾನ್ಸರ್ ಕಾರಣ ಅಂತ ಬಿಬಿಎಂಪಿ ಹೆಲ್ತ್ ಆಡಿಟ್ ಸರ್ಕಾರಕ್ಕೆ ಸಲ್ಲಿಸಿದ ವರದಿ ಹೇಳಿದೆ. ಹೊಸದಾಗಿ 213 ಡೆಂಗ್ಯೂ ಪ್ರಕರಣಗಳ ಪತ್ತೆಯಾಗಿದ್ದು, ಜೂನ್ ತಿಂಗಳಲ್ಲಿ 1742 ಜನರಿಗೆ ಡೆಂಗ್ಯೂ ಸೊಂಕು ದೃಢವಾಗಿದೆ.
ಡೆಂಗ್ಯೂ ಹರಡುವಿಕೆ ಮತ್ತು ಭೀತಿ ನಿಯಂತ್ರಣಕ್ಕಾಗಿ ಮತ್ತು ಸಾವಿನ ನಿಖರವಾದ ಕಾರಣವನ್ನು ಪತ್ತೆಹಚ್ಚಲು ಆರೋಗ್ಯ ಇಲಾಖೆಯು ಹೆಲ್ತ್ ಆಡಿಟ್ ನಡೆಸಿತು. ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಎರಡು ಸಾವುಗಳಿಗೆ ಡೆಂಗ್ಯೂ ಕಾರಣ ಎಂದು ಶಂಕಿಸಲಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ರಾಜ್ಯಾದ್ಯಂತ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಮಹಿಳೆಯರು ಮತ್ತು ಮಕ್ಕಳು ಡೆಂಗ್ಯೂ ಸೋಂಕಿಗೆ ಬೇಗ ತುತ್ತಾಗುತ್ತಿದ್ದಾರೆ. ಗರ್ಭಿಣಿಯರಿಗೆ ಬೇಗ ಡೆಂಗ್ಯೂ ಹರಡುತ್ತಿದ್ದು ಎಚ್ಚರವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯಾದ್ಯಂತ ಒಟ್ಟು 93,012 ಶಂಕಿತ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಜನವರಿಯಿಂದ ಇಲ್ಲಿಯವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 5,878 ಜನರಿಗೆ ಡೆಂಗ್ಯೂ ರೋಗ ಬಂದಿದೆ. ಬೆಂಗಳೂರು ನಗರ 310 ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ 467 ಜನರಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಆರೋಗ್ಯ ಇಲಾಖೆಯು ಒಳಾಂಗಣ ಮತ್ತು ಹೊರಾಂಗಣದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳಲ್ಲಿ ನಿಯಮಿತ ತಪಾಸಣೆ ನಡೆಸಿದೆ. ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ನಗರ ಮತ್ತು ಗ್ರಾಮೀಣ ವ್ಯವಸ್ಥೆಗಳಲ್ಲಿ ತಪಾಸಣೆ ನಡೆಸಿದ್ದಾರೆ.