ಆಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ಆರೋಪ: ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಎರಡು ದೂರು

Update: 2024-07-16 13:28 GMT

ಮುಡಾ ಹಗರಣ ವಿಚಾರವಾಗಿ ಮುಖ್ಯಮಂತ್ರಿ  ಸಿದ್ದರಾಮಯ್ಯ ವಿರುದ್ಧ  ಚುನಾವಣಾ ಆಯೋಗಕ್ಕೆ  ಮತ್ತೆ ಎರಡು ದೂರು ದಾಖಲಾಗಿವೆ. ಸಿದ್ದರಾಮಯ್ಯ ಅವರು 2018 ಮತ್ತು 2023ರ ವಿಧಾನಸಭಾ ಚುನಾವಣೆ ಆಫಿಡವಿಟ್‌ನಲ್ಲಿ ಆಸ್ತಿ ಬಗ್ಗೆ ತಪ್ಪು ಮಾಹಿತಿ ನೀಡಿರುವ ಹಿನ್ನೆಲೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ, ಕರ್ನಾಟಕ ಭ್ರಷ್ಟಾಚಾರ ವಿರೋಧಿ ಮತ್ತು ಪರಿಸರ ವೇದಿಕೆ ಅಧ್ಯಕ್ಷ ಟಿ.ಜೆ.ಅಬ್ರಹಾಂ ಅವರು ಚುನಾವಣಾ ಆಯೋಗಕ್ಕೆ ಎರಡು ಪ್ರತ್ಯೇಕ ದೂರು ನೀಡಿದ್ದಾರೆ.

ಆರೋಪ ಏನು?

2018ರ ವಿಧಾನಸಭೆ ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ನೀಡಿದ್ದ ಅಫಿಡವಿಟ್‌ನಲ್ಲಿ ಪತ್ನಿ ಪಾರ್ವತಿ ಹೆಸರಿನಲ್ಲಿ 3 ಎಕರೆ 16 ಗುಂಟೆ ಕೃಷಿ ಜಮೀನು ಇದ್ದು, ಇದರ ಮೌಲ್ಯ 25 ಲಕ್ಷ ರೂ. ಎಂದು ನಮೂದಿಸಿದ್ದಾರೆ. ಆದರೆ, 2005ರಲ್ಲೇ ಈ ಜಮೀನು ಪರಿವರ್ತನೆ ಮಾಡಿಸಿದ್ದ ದಾಖಲೆ ನೀಡಿ ದೂರು ಸಲ್ಲಿಸಿದ್ದಾರೆ.

ಇನ್ನು 2023ರ ಚುನಾವಣೆ ವೇಳೆ 14 ಮುಡಾ ಸೈಟುಗಳ ಮೌಲ್ಯ ಕೇವಲ 8,33,35,104 ರೂ. ಎಂದು ಅಫಿಡವಿಟ್‌ನಲ್ಲಿ ನಮೂದು ಮಾಡಲಾಗಿದೆ. ಆದರೆ, 14 ಸೈಟುಗಳ ಅಸಲಿ ಮಾರುಕಟ್ಟೆ ಮೌಲ್ಯ 33,48,00,450 ರೂ. ಆಗಿದ್ದು, ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಮಾಹಿತಿ ತಪ್ಪು ನೀಡಿದ್ದಾರೆ ಎಂದು ಎರಡನೇ ದೂರು ನೀಡಲಾಗಿದೆ.

ಸಿಎಂ ಪತ್ನಿ ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ 2010ರಲ್ಲಿ ಈ ಜಾಗವನ್ನು ಗಿಫ್ಟ್‌ ಡೀಡ್‌ ಆಗಿ ನೋಂದಣಿ ಮಾಡಿದ್ದಾರೆ. ಈ ಜಾಗದ ಮೂಲ ಮಾಲೀಕರು ದೇವರಾಜು ಮತ್ತು ಕುಟುಂಬಸ್ಥರು ಆಗಿದ್ದು. 2004ರ ಆಗಸ್ಟ್‌ 25ರಂದು ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಈ ಜಾಗವನ್ನು ಮಾರಾಟ ಮಾಡಿದ್ದಾರೆ. 2013ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದ ವಾರ್ಷಿಕ ರಿಟರ್ನ್‌ ಲೋಕಾಯುಕ್ತಕ್ಕೆ ಸಲ್ಲಿಸುವ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಪತ್ನಿ ಬಳಿ ಇದ್ದ ನಿವೇಶನದ ವಿವರವನ್ನು ಉಲ್ಲೇಖಿಸಿದ್ದಾರೆ. ಆದರೆ 2013ರ ಚುನಾವಣೆಯ ಅಫಿಡವಿಟ್‌ ಸಲ್ಲಿಸುವಾಗ ಈ ವಿಚಾರವನ್ನು ಉದ್ದೇಶಪೂರ್ವಕವಾಗಿ ಉಲ್ಲೇಖ ಮಾಡಿಲ್ಲ.

ಸಿದ್ದರಾಮಯ್ಯ ಅವರು ಕೃಷಿ ಭೂಮಿಯ ಬಗ್ಗೆಯ ಮಾಹಿತಿ ನೀಡದೇ ಸುಳ್ಳು ಅಫಿಡವಿಟ್ ಸಲ್ಲಿಸಿದ್ದು, ಜನಪ್ರತಿ ನಿಧಿ ಕಾಯ್ದೆ ಸೆಕ್ಷನ್ 125 ಎ ಮತ್ತು ಸೆಕ್ಷನ್ 8 ಉಲ್ಲಂಘನೆ, ಸುಳ್ಳು ದಾಖಲೆ ಸಲ್ಲಿಸಿದ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ 227, 229, 231, 236, 202 ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಟಿಜೆ ಅಬ್ರಹಾಂ ಮನವಿ ಮಾಡಿದ್ದಾರೆ.

Tags:    

Similar News