ಅಸಂಘಟಿತರ ಕಲ್ಯಾಣಕ್ಕಾಗಿ ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚುವರಿ ಸೆಸ್; ಸಂಪುಟ ಸಭೆಯಲ್ಲಿ ಅನುಮೋದನೆ ಸಾಧ್ಯತೆ
ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ಎಥೆನಾಲ್ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಗೆ 1 ರೂ. ಸೆಸ್ ವಿಧಿಸುವುದರಿಂದ ವರ್ಷಕ್ಕೆ ಸುಮಾರು 2,120 ಕೋಟಿ ರೂ. ಹಣ ಸಂಗ್ರಹವಾಗುವ ನಿರೀಕ್ಷೆಯಿದ್ದು, ಅದನ್ನು ನೇರವಾಗಿ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸುವ ಯೋಜನೆ ಇದೆ.
ರಾಜ್ಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಮಹತ್ವದ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ಕಾರ್ಮಿಕ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ಮೂಲಕ ಅಸಂಘಟಿತ ಕಾರ್ಮಿಕರಿಗೆ ಸವಲತ್ತು ಒದಗಿಸಲು ಪೆಟ್ರೋಲ್, ಡೀಸೆಲ್, ಎಥೆನಾಲ್ ಮೇಲೆ 1 ರೂಪಾಯಿ ಸೆಸ್ ವಿಧಿಸಲು ಚಿಂತನೆ ನಡೆಸಿದೆ.
ಈ ಸಂಬಂಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಹೆಚ್ಚುವರಿ ಸೆಸ್ ಸಂಗ್ರಹದ ಪ್ರಸ್ತಾವನೆ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ಎಥೆನಾಲ್ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಗೆ 1 ರೂ. ಸೆಸ್ ವಿಧಿಸುವುದರಿಂದ ವರ್ಷಕ್ಕೆ ಸುಮಾರು 2,120 ಕೋಟಿ ರೂ. ಹಣ ಸಂಗ್ರಹವಾಗುವ ನಿರೀಕ್ಷೆಯಿದ್ದು, ಅದನ್ನು ನೇರವಾಗಿ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸುವ ಯೋಜನೆ ಇದೆ.
ಮೂಲಗಳ ಪ್ರಕಾರ, ಈ ಮೊತ್ತದಲ್ಲಿ ಸುಮಾರು 1,772 ಕೋಟಿ ರೂಪಾಯಿಯನ್ನು 1.30 ಕೋಟಿ ಅಸಂಘಟಿತ ಕಾರ್ಮಿಕರ ಆರೋಗ್ಯ ಸೌಲಭ್ಯ, ಅಪಘಾತ ಪರಿಹಾರ ಹಾಗೂ ಶೈಕ್ಷಣಿಕ ಸಹಾಯಧನ ನೀಡಲು ಖರ್ಚು ಮಾಡಲು ಚಿಂತನೆ ನಡೆಸಿದೆ. ಸಚಿವ ಸಂಪುಟ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದರೆ ಕೋಟ್ಯಂತರ ಅಸಂಘಟಿತ ಕಾರ್ಮಿಕರಿಗೆ ಸಹಾಯವಾಗಲಿದೆ ಎಂದು ಕಾರ್ಮಿಕ ಇಲಾಖೆ ಮೂಲಗಳು ತಿಳಿಸಿವೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಈಗಾಗಲೇ ಪ್ರಸ್ತಾವನೆ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅನುಮೋದನೆಗಾಗಿ ಮನವಿ ಸಲ್ಲಿಸಿದ್ದಾರೆ. ಕೇವಲ ಒಂದು ರೂಪಾಯಿ ಹೆಚ್ಚುವರಿ ಸೆಸ್ ವಿಧಿಸುವುದರಿಂದ ರಾಜ್ಯದ 62 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ನೇರ ಪ್ರಯೋಜನ ಸಿಗಲಿದ್ದು, 1.30 ಕೋಟಿ ಅಸಂಘಟಿತ ಕಾರ್ಮಿಕರ ಜೀವನಮಟ್ಟ ಸುಧಾರಣೆಗೆ ನೆರವಾಗಲಿದೆ.
ಇದರೊಂದಿಗೆ ಕಾರ್ಮಿಕರು ಮೃತಪಟ್ಟರೆ ಅಂತ್ಯಕ್ರಿಯೆ ನೆರವಿಗೂ ಸರ್ಕಾರದಿಂದ ಹಣ ನೀಡುವ ಯೋಜನೆ ಸಿದ್ಧವಾಗಿದೆ ಎನ್ನಲಾಗಿದೆ.
ಯಾರೆಲ್ಲಾ ಅಸಂಘಟಿತ ಕಾರ್ಮಿಕರು?
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರ್ ಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರ್ಕಾರವು ಗುರುತಿಸಿರುವ ಸುಮಾರು 379 ವರ್ಗಗಳ ಕಾರ್ಮಿಕರು ಅಸಂಘಟಿತ ವಲಯದಲ್ಲಿ ಬರಲಿದ್ದಾರೆ.
ಅಸಂಘಟಿತ ವಲಯದ ಕಾರ್ಮಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಸುರಕ್ಷಿತ ಕೆಲಸದ ವಾತಾವರಣ, ಕಡಿಮೆ ಮತ್ತು ಅನಿಯಮಿತ ಆದಾಯ, ಸಾಮಾಜಿಕ ಭದ್ರತೆಯ ಕೊರತೆ, ಮತ್ತು ಆರೋಗ್ಯ ಸಮಸ್ಯೆಗಳು ಎದುರಿಸುತ್ತಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಭೀತಿ
ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ನಿರ್ದಿಷ್ಟ ಸೆಸ್ ಪ್ರಮಾಣವು ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಪ್ರಸ್ತುತ, ಮಾರಾಟ ತೆರಿಗೆಯನ್ನೂ ವಿಇಧಿಸಲಾಗುತ್ತಿದೆ. ಜೊತೆಗೆ ಇತರ ಸಣ್ಣ ಸೆಸ್‌ಗಳನ್ನು ಹಾಕಲಾಗುತ್ತಿದೆ. ಪ್ರಸ್ತುತ ಪೆಟ್ರೋಲ್ ಮೇಲೆ ಶೇ 29.84 ರಷ್ಟು ಮಾರಾಟ ತೆರಿಗೆ, ಡೀಸೆಲ್ ಮೇಲೆ ಶೇ 18.44 ರಷ್ಟು ಮಾರಾಟ ತೆರಿಗೆ ವಿಧಿಸಲಾಗುತ್ತಿದೆ. ಈಗ ಹೆಚ್ಚುವರಿ 1 ರೂ.ಸೆಸ್ ಹಾಕುವುದರಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಗ್ರಾಹಕರಿಗೆ ಹೊರೆಯಾಗಲಿದೆ.
ಈಗಾಗಲೇ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಕಸ ಸಂಗ್ರಹಣೆ, ನಿರ್ವಹಣೆ ಮೇಲೂ ಸೆಸ್ ವಿಧಿಸಿದೆ.