Actor Darshan Case | ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪಾತ್ರವೇನು?
ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಸಿದ್ದು, ಹಲ್ಲೆ ಮಾಡಿದ್ದು, ಕೊಲೆ ನಡೆದ ಬಳಿಕ ಅದನ್ನು ಮುಚ್ಚಿಹಾಕಲು ಹಣ ನೀಡಿದ್ದು ದರ್ಶನ್ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 3,991 ಪುಟಗಳ ಚಾರ್ಜಶೀಟ್ ಬುಧವಾರ ಕೋರ್ಟ್‌ಗೆ ಪೊಲೀಸರು ಸಲ್ಲಿಸಿದ್ದು, ಪ್ರಕರಣದಲ್ಲಿ ನಟ ದರ್ಶನ್ ಪಾತ್ರವೇನು? ಅವರು ಕೊಲೆಯಲ್ಲಿ ಹೇಗೆ ಭಾಗಿ ಆಗಿದ್ದಾರೆ? ಎಂಬುದರ ಸಂಪೂರ್ಣ ವಿವರವನ್ನು ದೋಷಾರೋಪ ಪಟ್ಟಿ ಹೊಂದಿದೆ.
ದರ್ಶನ್ ಗೆಳತಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜುಗಳನ್ನು ಮಾಡುತ್ತಿದ್ದ ಎಂಬ ಕಾರಣಕ್ಕೆ ದರ್ಶನ್ ಗ್ಯಾಂಗ್, ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತಂದು ಹಲ್ಲೆ ಮಾಡಿ ಕೊಲೆ ಮಾಡಿದ ಆರೋಪವಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿಯ ಕಿಡ್ನಾಪ್ ಮಾಡಿಸಿದ್ದು, ಹಲ್ಲೆ ಮಾಡಿದ್ದು, ಕೊಲೆ ನಡೆದ ಬಳಿಕ ಅದನ್ನು ಮುಚ್ಚಿಹಾಕಲು ಹಣ ನೀಡಿದ್ದು ದರ್ಶನ್ ಅನ್ನೋದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿದೆ. ದರ್ಶನ್ ಕೊಲೆ ನಡೆದ ಸ್ಥಳದಲ್ಲಿ ಇರುವುದು ಹಾಗೂ ಕೊಲೆ ಬಳಿಕ ಸ್ಥಳದಿಂದ ಪರಾರಿಯಾಗಿರುವ ದೃಶ್ಯ ಕೊಲೆ ನಡೆದ ಶೆಡ್ಡಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾ ಸ್ವಾಮಿ ರಕ್ತ ಇರುವುದು ಪತ್ತೆ ಆಗಿದೆ. ಅದಕ್ಕೆ ಸಾಕ್ಷ್ಯಗಳು ಕೂಡ ಸಿಕ್ಕಿವೆ. ದರ್ಶನ್ ಸ್ವತಃ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಮತ್ತು ಕೊಲೆಯಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ ಎಂದು ಚಾರ್ಜ್ಶೀಟ್ನಲ್ಲಿ ಹೇಳಲಾಗಿದೆ.
ಪವಿತ್ರಾ ಗೌಡ ಅವರು ಕೊಲೆ ಮಾಡಲು ಮೂಲ ಕಾರಣ ಅನ್ನೋದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆ ನಡೆಸುವ ಸ್ಥಳದಲ್ಲಿ ಹಾಜರಿದ್ದರು ಮತ್ತು ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿರೋದು ಅಧಿಕೃತವಾಗಿ ದಾಖಲಾಗಿದೆ. ಸಿಸಿಟಿವಿಯಲ್ಲಿ ಪವಿತ್ರಾ ಗೌಡ ಸೆರೆ ಆಗಿದ್ದಾರೆ. ಪವಿತ್ರಾ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆ್ಯಕ್ಟೀವ್ ಆಗಿತ್ತು. ಉಳಿದವರ ಪಾತ್ರದ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.