Actor Darshan Case | ಬಿಟ್ಟು ಬಿಡಿ ಅಂತ ಅಂಗಲಾಚುತ್ತಿರುವ ರೇಣುಕಾಸ್ವಾಮಿ ಫೋಟೋ ವೈರಲ್

ಪಟ್ಟಣಗೆರೆ ಶೆಡ್ಡಿನ ಲಾರಿ ಮುಂದೆ ರೇಣುಕಾಸ್ವಾಮಿಗೆ ಮಾರಣಾಂತಿಕವಾಗಿ ಹೊಡೆದು ಮಲಗಿಸಿರುವ ಹಾಗೂ ರೇಣುಕಾಸ್ವಾಮಿ ಕೈಮುಗಿದು ಪ್ರಾಣಭಿಕ್ಷೆಗೆ ಅಂಗಲಾಚುತ್ತಿರುವುದು ಎನ್ನಲಾಗುತ್ತಿರುವ ಫೋಟೋಗಳು ವೈರಲ್ ಆಗಿವೆ.

Update: 2024-09-05 08:20 GMT
ಸಾವಿನ ಭಯದಲ್ಲಿ ನಡುಗಿದ್ದ ರೇಣುಕಾಸ್ವಾಮಿಯ ಪೋಟೋ ವೈರಲ್‌
Click the Play button to listen to article

ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಮಾನುಷವಾಗಿ ಕೊಲೆಗೈದ ಆರೋಪ ದರ್ಶನ್ ಹಾಗೂ ಗ್ಯಾಂಗ್‌ನ ಮೇಲಿದೆ. ಈಗಾಗಲೇ ಈ ಪ್ರಕರಣದ ಕುರಿತು ಬುಧವಾರ ಕೋರ್ಟ್‌ಗೆ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿದೆ. ದರ್ಶನ್ ಸೇರಿ ಅನೇಕರ ವಿರುದ್ಧ ಪ್ರಬಲ ಸಾಕ್ಷ್ಯಗಳು ಸಿಕ್ಕಿದ್ದು, ದೋಷಾರೋಪ ಪಟ್ಟಿಯಲ್ಲಿ ವಿವರಣೆ ನೀಡಲಾಗಿದೆ. ಈ ಮಧ್ಯೆ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಗೆ ಮಾರಣಾಂತಿಕವಾಗಿ ಹೊಡೆದು ಮಲಗಿಸಿರುವ ಹಾಗೂ, ರೇಣುಕಾಸ್ವಾಮಿ ಕೈಮುಗಿದು ಪ್ರಾಣಭಿಕ್ಷೆಗೆ ಅಂಗಲಾಚುತ್ತಿರುವುದು ಎನ್ನಲಾಗುತ್ತಿರುವ ಫೋಟೋಗಳು ಭಾರೀ ವೈರಲ್ ಆಗುತ್ತಿವೆ.

ಬಿಟ್ಟು ಬಿಡಿ ಎಂದು ಅಂಗಲಾಚುತ್ತಿರುವ ರೇಣುಕಾಸ್ವಾಮಿ

ರೇಣುಕಾಸ್ವಾಮಿಯದ್ದು ಎನ್ನಲಾಗುತ್ತಿರುವ ಎರಡು ಪೋಟೋಗಳು ವೈರಲ್ ಆಗಿದ್ದು, ಲಾರಿ ಮುಂದೆ ಕುಳಿತು ಕಣ್ಣೀರಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಪರಿಪರಿಯಾಗಿ ದರ್ಶನ್ & ಗ್ಯಾಂಗ್‌ಗೆ ಬೇಡಿಕೊಂಡಿರುವ ಫೋಟೋ ಹಾಗೂ ರೇಣುಕಾಸ್ವಾಮಿ ನೆಲದ ಮೇಲೆ ಶವದಂತೆ ಬಿದ್ದಿರುವ ಫೋಟೋ ಕೂಡ ವೈರಲ್ ಆಗುತ್ತಿದೆ.

ರೇಣುಕಾಸ್ವಾಮಿ ಎದೆ ಮೇಲೆ ಕೈಯಿಟ್ಟು ಮಲಗಿರುವಂತಹ ಫೋಟೋ ವೈರಲ್ ಆಗಿದೆ. ಈ ಪೋಟೋಗಳನ್ನು ಆರೋಪಿಗಳ ಮೊಬೈಲ್‌ನಲ್ಲಿ ಸೆರೆಹಿಡಿದುಕೊಳ್ಳಲಾಗಿತ್ತು. ಆ ಬಳಿಕ ಇದನ್ನು ಡಿಲೀಟ್ ಮಾಡಿದ್ದರು. ಈಗ ಈ ಫೋಟೋಗಳನ್ನು ತನಿಖಾ ತಂಡ ರಿಟ್ರೀವ್ ಮಾಡಿದೆ. ಚಾರ್ಜ್‌ಶೀಟ್‌ನಲ್ಲಿ ಈ ಫೋಟೋಗಳನ್ನು ಲಗತ್ತಿಸಲಾಗಿದೆ. ಇದು ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಆಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ರೇಣುಕಾಸ್ವಾಮಿ ಎದೆ ಮೇಲೆ ಕೈಯಿಟ್ಟು ಮಲಗಿರುವಂತಹ ಫೋಟೋ ವೈರಲ್ ಆಗಿದೆ

 ನರಳಿ ನರಳಿ ಮೃತಪಟ್ಟ ನನ್ನ ಮಗನ ಪರಿಸ್ಥಿತಿ ಅವರಿಗೂ ಬರಬೇಕು

ಈ ವೈರಲ್ ಆದ ಚಿತ್ರಗಳ ಬಗ್ಗೆ ಪತ್ರಿಕ್ರಿಯೆ ನೀಡಿರುವ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ, ʻʻನನ್ನ ಮಗನ ಯಾತನೆಯನ್ನು ನೋಡಿ ತಡೆದುಕೊಳ್ಳಲಾಗುತ್ತಿಲ್ಲ. ನನ್ನ ಮಗನಿಗೆ ಈ ಪರಿಸ್ಥಿತಿ ಬರಬಾರದಾಗಿತ್ತು. ಕರುಣೆ ತೋರಿಸಿ ಬಿಟ್ಟು ಕಳುಹಿಸಬಹುದಿತ್ತು. ನಾವು ಅವನನ್ನು ಯಾವ ರೀತಿ ನೋಡ್ಕೋಬೇಕು ಹಾಗೆ ನೋಡಿಕೊಳ್ಳುತ್ತಿದ್ದೆವು, ಆದರೆ ಬೇಡಿಕೊಂಡರೂ ಬೀಡದೇ ಹೊಡೆದು ಸಾಯಿಸಿದ್ದಾರೆ. ಆ ಕ್ಷಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ನವರು ಯೋಚನೆ ಮಾಡಬೇಕಾಗಿತ್ತು. ಒಂದು ವೇಳೆ ಏನಾದರೂ ಅನಾಹುತವಾದರೆ ನಾಳೆ ನನ್ನ ಪರಿಸ್ಥಿತಿ ಏನಾಗುತ್ತದೆ ಅಂತ ಯೋಚನೆ ಮಾಡಬೇಕಾಗಿತ್ತು. ಕೇಳಿಕೊಂಡಾಗ ಬಿಟ್ಟು ಕಳುಹಿಸಬಹುದಿತ್ತು. ಇಲ್ಲ ಅಂದ್ರೆ ಒಂದೆರಡು ಏಟು ಹೊಡೆದು ಕಳಿಸಿಬಹುದಿತ್ತು. ಕಾನೂನಿನಲ್ಲಿ ಅವರಿಗೆ ಏನು ಶಿಕ್ಷೆ ಕೊಡಬೇಕು ಅದನ್ನು ಕೊಡಲಿ. ನನ್ನ ಮಗ ನರಳಿ ನರಳಿ ಮೃತಪಟ್ಟಿದ್ದಾನೆ. ಕಾನೂನು ಅದನ್ನು ನೋಡಿ ಅವರಿಗೆ ಶಿಕ್ಷೆ ನೀಡಬೇಕು. ಅದರಲ್ಲೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ನನ್ನ ಪುತ್ರನಿಗೆ ಆದ ಪರಿಸ್ಥಿತಿ ಆರೋಪಿಗಳಿಗೂ ಆಗಬೇಕು. ಅಲ್ಲಿದ್ದವರಲ್ಲಿ ಒಬ್ಬರಿಗಾದರೂ ಮನುಷ್ಯತ್ವ ಇಲ್ಲವೇ? ನಮ್ಮ ಆರೋಗ್ಯ ದಿನ ಕಳೆದಂತೆ ಕ್ಷೀಣಿಸುತ್ತಿದೆ" ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

ಕಣ್ಣೀರಿಟ್ಟ ರೇಣುಕಾಸ್ವಾಮಿ ತಾಯಿ

ʻʻಈ ಫೋಟೋ ನೋಡಿ ಏನ್‌ ಹೇಳ್ಬೇಕು ಅನ್ನೋದೇ ಗೊತ್ತಾಗ್ತಾ ಇಲ್ಲ. ಅಷ್ಟು ಪರಿಪರಿಯಾಗಿ ಬೇಡಿಕೊಂಡ್ರೂ ಅವರು ಬಿಟ್ಟಿಲ್ಲಾ ಅಂದ್ರೆ ಅವರಿಗೆ ಏನ್‌ ಹೇಳ್ಬೇಕು ಅಂತಾನೇ ಅರ್ಥ ಆಗ್ತಿಲ್ಲ. ಅವರು ಒಂದು ಸ್ವಲ್ಪ ದಯೆ ತೋರಿ ಬಿಟ್ಟಿದ್ರೆ ಇಂದು ಅವನು ಮನೆಯಲ್ಲಿ ಇರುತ್ತಿದ್ದ. ಅಷ್ಟು ಕೇಳಿಕೊಂಡಾಗಲಾದರೂ ಬಿಡಬಹುದಿತ್ತು. ಅಷ್ಟು ಕೇಳಿಕೊಂಡ ನಂತರ ಬಿಟ್ಟಿದ್ದರೆ, ಆತ ಮನೆಗೆ ಬರುತ್ತಿದ್ದ. ಅವನನ್ನು ಹೆಂಗಾದರೂ ನೋಡಿಕೊಳ್ಳುತ್ತಿದ್ದೆವುʼʼ ಎಂದು ತಾಯಿ ರತ್ನಪ್ರಭಾ ಕಣ್ಣೀರಿಟ್ಟಿದ್ದಾರೆ.

ಸ್ಟೋನಿ ಬ್ರೂಕ್​ನಲ್ಲಿ ಕುಳಿತಿದ್ದ ದರ್ಶನ್ ಪೋಟೋ ವೈರಲ್‌ 

ಕೊಲೆ ನಡೆದು, ದರ್ಶನ್ ಹಾಗೂ ಇತರೆ ಆರೋಪಿಗಳ ಬಂಧನ ಆದ ಬಳಿಕ, ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ಸ್ಥಳ ಮಹಜರು ಮಾಡುವಾಗಿನ ಚಿತ್ರವೊಂದು ಇದೀಗ ವೈರಲ್ ಆಗಿದೆ. ಚಿತ್ರದಲ್ಲಿ ನಟ ದರ್ಶನ್ ಮತ್ತು ಆತನ ಗ್ಯಾಂಗಿನ ವಿನಯ್, ಪ್ರದೋಶ್ ಮತ್ತಿತರರು ಸಹ ಇದ್ದಾರೆ. ಆರೋಪಿಗಳ ಜೊತೆಗೆ ನಟ ಚಿಕ್ಕಣ್ಣ ಸಹ ಚಿತ್ರದಲ್ಲಿದ್ದಾರೆ.

ಕೊಲೆ ಮಾಡುವ ಮುನ್ನ ಆರೋಪಿ ದರ್ಶನ್ ಸೇರಿ ಇನ್ನೂ ಕೆಲವರು ಬೆಂಗಳೂರಿನ ಸ್ಟೋನಿ ಬ್ರೂಕ್ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದರು. ಆ ಪಾರ್ಟಿಯಲ್ಲಿ ದರ್ಶನ್, ವಿನಯ್, ಪ್ರದೋಶ್ ಹಾಗೂ ಚಿಕ್ಕಣ್ಣ ಇನ್ನಿತರರು ಭಾಗಿಯಾಗಿದ್ದರು. ದರ್ಶನ್ ಅನ್ನು ಬಂಧಿಸಿದ ಬಳಿಕ ಸ್ಟೋನಿ ಬ್ರೂಕ್‌ಗೆ ಕರೆತಂದಿದ್ದ ಪೊಲೀಸರು, ಅಲ್ಲಿ ಪಾರ್ಟಿ ನಡೆದ ಸ್ಥಳದಲ್ಲಿಯೇ ಅನುಕ್ರಮದಲ್ಲಿ ಆರೋಪಿಗಳನ್ನು ಕೂರಿಸಿ ಸ್ಥಳ ಮಹಜರು ಮಾಡಿದ್ದರು.

ಸ್ಟೋನಿ ಬ್ರೂಕ್​ನಲ್ಲಿ ಮೌನವಾಗಿ ಕೂತ ದರ್ಶನ್

ಸ್ಟೋನಿ ಬ್ರೂಕ್‌ನಲ್ಲಿ ದರ್ಶನ್ ಹಾಗೂ ಗೆಳೆಯರು ಪಾರ್ಟಿ ಮಾಡಿದ್ದ ಜಾಗದಲ್ಲಿಯೇ ಅವರನ್ನೆಲ್ಲ ಕೂರಿಸಿ ಪೊಲೀಸ್ ಸಿಬ್ಬಂದಿಯೊಬ್ಬರು ಅವರ ಮುಂದೆ ಕೂತು ಲ್ಯಾಪ್ಟಾಪ್ನಲ್ಲಿ ಎಲ್ಲ ಅಂಶಗಳನ್ನು ನೋಟ್ ಮಾಡಿಕೊಳ್ಳುತ್ತಿರುವ ದೃಶ್ಯ ಚಿತ್ರದಲ್ಲಿ ಸೆರೆಯಾಗಿದೆ. ದರ್ಶನ್ ಸಪ್ಪಗೆ ಮುಖ ಮಾಡಿ ಕೂತಿರುವುದು ಚಿತ್ರದಲ್ಲಿ ಕಾಣುತ್ತಿದೆ. ಮಾತ್ರವಲ್ಲದೆ ಚಿತ್ರದಲ್ಲಿ ನಟ ಚಿಕ್ಕಣ್ಣ ಸಹ ದರ್ಶನ್‌ ಪಕ್ಕ ಕೂತಿದ್ದಾರೆ. ಸ್ಟೋನಿ ಬ್ರೂಕ್ ಮಾಲೀಕ ವಿನಯ್ ಸಹ ಚಿತ್ರದಲ್ಲಿದ್ದಾನೆ. ಇತರೆ ಕೆಲವು ಪೊಲೀಸ್ ಸಿಬ್ಬಂದಿ ಸಹ ಚಿತ್ರದಲ್ಲಿದ್ದಾರೆ.

ಪ್ರಕರಣದ ಆರೋಪಿಗಳಾದ ಎ 2 ದರ್ಶನ್, ಎ3 ಪವನ್, ಎ10 ವಿನಯ್, ಎ11 ನಾಗರಾಜ್, ಎ14 ಪ್ರದೋಷ್ ಅವರುಗಳನ್ನು ಸ್ಟೋನಿ ಬ್ರೂಕ್‌ಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು. ನಟ ಚಿಕ್ಕಣ್ಣ ಸಹ ಕೊಲೆ ನಡೆದ ದಿನ ಪಾರ್ಟಿಯಲ್ಲಿದ್ದ ಕಾರಣ ಅವರನ್ನೂ ಸಹ ಮಹಜರಿಗೆ ಕರೆಸಲಾಗಿತ್ತು. ಆದರೆ ಪ್ರಕರಣದಲ್ಲಿ ಚಿಕ್ಕಣ್ಣ ಹೇಳಿಕೆಯನ್ನಷ್ಟೆ ದಾಖಲಿಸಿದ್ದು, ಕೊಲೆ ಪ್ರಕರಣದಲ್ಲಿ ಅವರನ್ನು ಆರೋಪಿ ಮಾಡಲಾಗಿಲ್ಲ.

Tags:    

Similar News