Actor Darshan Case | ದರ್ಶನ್‌ಗೆ ಇಲ್ಲ ಮನೆ ಊಟ ಭಾಗ್ಯ: ಅರ್ಜಿ ವಜಾಗೊಳಿಸಿದ ಕೋರ್ಟ್
ಈ ಪ್ರಕರಣದ ಕುರಿತು ಬೆಂಗಳೂರಿನ 34ನೇ ಎಸಿಎಮ್‌ಎಮ್ ನ್ಯಾಯಾಲಯದ ನ್ಯಾಯಾಧೀಶರು ದರ್ಶನ್ ಅವರಿಗೆ ಮನೆಯಿಂದ ಊಟ ನೀಡಲು ಅವಕಾಶವಿಲ್ಲ ಎಂದಿದ್ದು, ಆ ಸಂಬಂಧ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.;
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ತನಗೆ ಜೈಲೂಟ ಹಿಡಿಸುತ್ತಿಲ್ಲ, ಮನೆ ಊಟ ತರಿಸಿಕೊಳ್ಳಲು ಅವಕಾಶ ಕೊಡಿ ಎಂದು ಕೋರಿ ಸಲ್ಲಿಸಿದ ರಿಟ್ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಈ ಪ್ರಕರಣದ ಕುರಿತು ಬೆಂಗಳೂರಿನ 34ನೇ ಎಸಿಎಮ್‌ಎಮ್ ನ್ಯಾಯಾಲಯದ ನ್ಯಾಯಾಧೀಶರು, ದರ್ಶನ್‌ಗೆ ಜೈಲೂಟದ ಬದಲಿಗೆ ಮನೆಯಿಂದ ಊಟ ತರಿಸಿಕೊಡಲು ಅವಕಾಶ ನಿರಾಕರಿಸಿದ್ದಾರೆ.
ಜೈಲೂಟದಿಂದ ಅಜೀರ್ಣ, ಅತಿಸಾರ ಆಗಿದೆ ಎಂದು ಕಾರಣ ನೀಡಿ ದರ್ಶನ್, ಮನೆಯ ಊಟ ತರಿಸಲು ಅನುಮತಿ ಕೇಳಿದ್ದರು. ಜೈಲು ಅಧಿನಿಯಮ ಉಲ್ಲೇಖಿಸಿ ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ಜೈಲೂಟದಿಂದ ದರ್ಶನ್‌ಗೆ ಯಾವುದೇ ಸಮಸ್ಯೆ ಆಗಿಲ್ಲ. ಶೂಟಿಂಗ್ ವೇಳೆ ಆದ ಗಾಯದ ನೋವಿನ ಬಗ್ಗೆ ಮಾತ್ರ ವೈದ್ಯರು ಸಲಹೆ ನೀಡಿದ್ದಾರೆ. ಜೈಲಿನ ನಿಯಮಾವಳಿಯಲ್ಲಿ ಕೊಲೆ ಆರೋಪಿಗಳಿಗೆ ಮನೆಯೂಟಕ್ಕೆ ಅವಕಾಶವಿಲ್ಲವೆಂದು ಆಕ್ಷೇಪಣೆ ಸಲ್ಲಿಸಲಾಗಿತ್ತು. ಎರಡೂ ಕಡೆ ವಾದ ಆಲಿಸಿರುವ ಜಡ್ಜ್ ವಿಶ್ವನಾಥ್ ಸಿ ಗೌಡರ್, ಕೊಲೆ ಆರೋಪದಡಿ ನಟ ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಅವರಿಗೆ ಮನೆಯೂಟ ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ತಮಗೆ ಜೈಲಿನ ಊಟ ಒಗ್ಗುತ್ತಿಲ್ಲವಾದ್ದರಿಂದ ತಮಗೆ ಮನೆಯೂಟ, ಹಾಸಿಗೆ ಹಾಗೂ ಪುಸ್ತಕ ಓದಲು ಅವಕಾಶ ಕೊಡಬೇಕೆಂದು ಕೋರಿ ದರ್ಶನ್ ಅವರು ತಮ್ಮ ಪರ ವಕೀಲ ಕೆ.ಎನ್ ಫಣೀಂದ್ರ ಅವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಇದೀಗ ಈ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನಲೆ
ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಆರೋಪಿಗಳಲ್ಲಿ ಒಬ್ಬನಾದ ರಾಘವೇಂದ್ರ ಎಂಬಾತ ರೇಣುಕಾ ಸ್ವಾಮಿಯನ್ನು ದರ್ಶನ್ ಭೇಟಿ ನೆಪದಲ್ಲಿ ಬೆಂಗಳೂರಿನ ಆರ್ ಆರ್ ನಗರದ ಶೆಡ್‌ಗೆ ಕರೆತಂದಿದ್ದ. ಇದೇ ಶೆಡ್‌ನಲ್ಲಿಯೇ ಜೂನ್ 8 ರಂದು ಆತನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು.
ನಂತರ ದರ್ಶನ್ ಸೂಚನೆ ಮೇರೆಗೆ ರೇಣುಕಾ ಸ್ವಾಮಿಯ ಶವವನ್ನು ಮೋರಿಗೆ ಎಸೆದು ಹೋಗಿದ್ದರು. ಮೋರಿಯಲ್ಲಿ ತೇಲುತ್ತಿದ್ದ ಶವವನ್ನು ಬೀದಿನಾಯಿಗಳು ಕಚ್ಚಿ ಎಳೆದು ತಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿರುವಾಗ ಈ ಕೊಲೆಯ ಹಿಂದಿನ ರೂವಾರಿ ದರ್ಶನ್ ಎಂದು ತಿಳಿದುಬಂದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.11 ರಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳನ್ನು ಬಂಧಿಸಲಾಗಿತ್ತು. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ.