Actor Darshan Case | ನಟ ದರ್ಶನ್ ಸೇರಿ 6 ಆರೋಪಿಗಳ ಬಟ್ಟೆ ಮೇಲೆ ರಕ್ತದ ಕಲೆ ಪತ್ತೆ
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ಕೈಸೇರಿದ್ದು, ದರ್ಶನ್ ಸೇರಿ ಆರು ಪ್ರಮುಖ ಆರೋಪಿಗಳ ಬಟ್ಟೆಗಳ ಮೇಲೆ ರೇಣುಕಾಸ್ವಾಮಿಯ ರಕ್ತದ ಕಲೆಗಳಿರುವುದು ದೃಢಪಟ್ಟಿದೆ
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ಬಂದಿದ್ದು, ವರದಿಯಲ್ಲಿ ದರ್ಶನ್ ಸೇರಿ ಆರು ಪ್ರಮುಖ ಆರೋಪಿಗಳ ಬಟ್ಟೆಗಳ ಮೇಲೆ ರೇಣುಕಾಸ್ವಾಮಿಯವರ ರಕ್ತದ ಕಲೆಗಳಿರುವುದು ದೃಢವಾಗಿದೆ.
ಹತ್ಯೆ ನಡೆದ ಸಮಯದಲ್ಲಿ ಆರು ಆರೋಪಿಗಳು ಧರಿಸಿದ್ದ ಬಟ್ಟೆ, ಪಾದರಕ್ಷೆಗಳು ಮತ್ತು ಚರ್ಮದ ವಸ್ತುಗಳನ್ನು ಅವರ ಬಂಧನದ ನಂತರ ಅವರ ಮನೆಗಳಿಂದ ವಶಪಡಿಸಿಕೊಳ್ಳಲಾಗಿತ್ತು. ಇವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ರವಾನಿಸಲಾಗಿತ್ತು. ಸೋಮವಾರ ಸಂಜೆ ವರದಿಯ ಇಮೇಲ್ ಪ್ರತಿಯನ್ನು ತನಿಖಾಧಿಕಾರಿಗಳಿಗೆ ಕಳುಹಿಸಲಾಗಿದ್ದು, ಸೋಮವಾರ ಸಂಜೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಆದರೆ, ಇದು ಅಂತಿಮ ಎಫ್‌ಎಸ್‌ಎಲ್ ವರದಿಯಲ್ಲ. ಕೇವಲ 70 ರಷ್ಟು ವರದಿಯಷ್ಟೇ. ಉಳಿದ 30 ಪ್ರತಿಶತ ವರದಿಯು ಹೈದರಾಬಾದ್‌ನ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಇನ್ನೂ ಬರಬೇಕಿದೆ ಎಂದು ಮೂಲಗಳು ತಿಳಿಸಿವೆ. ವಶಪಡಿಸಿಕೊಂಡ ಬಟ್ಟೆಗಳನ್ನು ತೊಳೆದು ಸ್ವಚ್ಛಗೊಳಿಸಲಾಗಿತ್ತು ಎನ್ನಲಾಗಿದ್ದು. ಇದರ ಹೊರತಾಗಿಯೂ, ಲುಮಿನಲ್ ಪರೀಕ್ಷೆಯ ಮೂಲಕ ಆರೋಪಿಗಳ ಬಟ್ಟೆ ಹಾಗೂ ಶೂಗಳ ಮೇಲೆ ರಕ್ತದ ಕಲೆಗಳಿರುವುದನ್ನು ಪತ್ತೆ ಮಾಡಲಾಗಿದೆ.
ಲುಮಿನಲ್ ಎಂಬುದು ಒಂದು ಕೆಮಿಕಲ್. ಬಟ್ಟೆಯನ್ನ ವಾಶ್ ಮಾಡಿದ್ದರೂ ಹೀಮೋಗ್ಲೋಬಿನ್ ಅಂಶ ಹೋಗಿರುವುದಿಲ್ಲ. ಯಾವ ಬಟ್ಟೆಯ ಮೇಲೆ ರಕ್ತ ಕಲೆ ಇರುತ್ತದೆಯೋ ಅದರ ಮೇಲೆ ಲುಮಿನಲ್ ಕೆಮಿಕಲ್ ಬಳಿಯಲಾಗುತ್ತದೆ. ಆಗ ಹೀಮೋಗ್ಲೋಬಿನ್ ಜೊತೆ ವರ್ತಿಸುವ ಲುಮಿನಲ್ ನೀಲಿ ಹಾಗೂ ಹಸಿರು ಬಣ್ಣದ ದ್ರಾವಣ ಉತ್ಪಾದಿಸುತ್ತದೆ. ಈ ದ್ರಾವಣವನ್ನ ಸಂಗ್ರಹಿಸಿ ಆದರಿಂದ ಡಿಎನ್ಎ ಸಂಗ್ರಹಿಸಲಾಗುತ್ತದೆ. ದರ್ಶನ್ ಅವರ ಪ್ರಕರಣದಲ್ಲೂ ಇದೇ ರೀತಿಯಲ್ಲಿ ಪರೀಕ್ಷೆ ಮಾಡಲಾಗಿದೆ. ದರ್ಶನ್ ಅವರ ಪ್ಯಾಂಟ್ ಮೇಲೆ ಲುಮಿನಲ್ ರಾಸಾಯನಿಕ ಬಳಕೆ ಮಾಡಲಾಗಿದೆ. ಅದರಿಂದ ಬಂದ ನೀಲಿ ಹಾಗೂ ಹಸಿರು ಬಣ್ಣದ ದ್ರಾವಣ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಈ ವೇಳೆ ದರ್ಶನ್ ಬಟ್ಟೆಯಲ್ಲಿ ರೇಣುಕಾಸ್ವಾಮಿ ರಕ್ತ ಇರೋದು ಖಚಿತ ಆಗಿದೆ.
ಪವಿತ್ರಾ ಗೌಡ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆ
ನಟಿಯ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿದೆ ಎಂದು ವರದಿಯಾಗಿದೆ. ಬಿಯರ್ ಬಾಟಲಿ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿದೆ ಎನ್ನಲಾಗಿದೆ. ಪವಿತ್ರಾಗೌಡ ಮನೆಯಲ್ಲಿ ಕೊಲೆ ದಿನ ಆಕೆ ಧರಿಸಿದ್ದ ಚಪ್ಪಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಚಪ್ಪಲಿ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಇರುವುದು ಪತ್ತೆಯಾಗಿದೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ಬಳಿಕ ಆರೋಪಿಗಳು ಅಲ್ಲೇ ಪಾರ್ಟಿ ಮಾಡಿ ಕುಷ್ಕ ತಿಂದಿದ್ದರು. ಇದರಲ್ಲಿ ಒಂದು ಬಿಯರ್ ಬಾಟಲಿ ಮೇಲೆ ರಕ್ತದ ಕಲೆ ಪತ್ತೆಯಾಗಿದೆ. ಆರೋಪಿಯೊಬ್ಬನ ಫಿಂಗರ್ ಪ್ರಿಂಟ್ ಕೂಡ ಇದ್ದು, ತನಿಖೆ ನಡೆಯುತ್ತಿದೆ. ಸದ್ಯ ಬಿಯರ್ ಬಾಟಲಿಯನ್ನು ಪ್ರಮುಖ ಸಾಕ್ಷಿಯಾಗಿ ಮಾಡಿರುವ ಪೊಲೀಸರು, ಇನ್ನೂ ಹೆಚ್ಚಿನ ಸಾಕ್ಷಿಗಳ ಹುಡುಕಾಟದಲ್ಲಿದ್ದಾರೆ.
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ತನಿಖೆಯನ್ನು ತೀವ್ರಗೊಳಿಸಿದ್ದು, ಈ ವರೆಗೂ 200 ಕ್ಕೂ ಹೆಚ್ಚು ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ, ಇದು ಪ್ರಕರಣವನ್ನು ಮತ್ತಷ್ಟು ಬಲಪಡಿಸಿದ್ದು, 17 ಆರೋಪಿಗಳಿಗೆ ಜಾಮೀನು ಸಿಗುವುದು ಕಷ್ಟಕರವಾಗಲಿದೆ ಎನ್ನಲಾಗುತ್ತಿದೆ.
ದರ್ಶನ್ ಮತ್ತು ಅವರ ಗ್ಯಾಂಗ್ ನಡೆಸಿದ್ದ ಹಲ್ಲೆಯಿಂದಾಗಿ ರೇಣುಕಾಸ್ವಾಮಿಯವರ ಎದೆಯ ಎಲುಬು ಮುರಿದು ಶ್ವಾಸಕೋಸಕ್ಕೆ ಮೂಳೆ ಚುಚ್ಚಿರುವುದು ತಿಳಿದುಬಂದಿದೆ. ತಲೆಗೆ ಗಂಭೀರ ಗಾಯ, ಮೆದಳಿನಲ್ಲಿ ತೀವ್ರವಾದ ರಕ್ತಸ್ರಾವ, ಸ್ಪೈನಲ್ ಕಾರ್ಡ್ ಮುರಿತ, ವೃಷಣ ಚೀಲದಲ್ಲಿ ರಕ್ತ ಸೋರಿಕೆ, ಮೊಣಕಾಲು ಮುರಿತ, ಬಲಗಣ್ಣಿನ ಮೇಲೆ ತೀವ್ರವಾದ ಪೆಟ್ಟು ಬಿದ್ದಿರುವುದು ಪತ್ತೆಯಾಗಿದೆ.