ಲೋಕಸಭಾ ಚುನಾವಣೆ | ಅಧಿಕಾರವಿದ್ದರೂ ಆರಕ್ಕೇರದ ಕಾಂಗ್ರೆಸ್‌; ಬಿಜೆಪಿ ಸಾಧನೆ ನಿರಂತರ

Update: 2024-06-06 01:00 GMT

ಕಳೆದ 25 ವರ್ಷಗಳಿಂದ ಅಂದರೆ 1999 ರಿಂದ ಕರ್ನಾಟಕದಲ್ಲಿ ನಡೆದ ಲೋಕಸಭೆ ಚುನಾವಣೆಗಳನ್ನು ಗಮನಿಸಿದರೆ, ಎಸ್‌.ಎಂ. ಕೃಷ್ಣ ಅವರ ನೇತೃತ್ವದ ಕಾಂಗ್ರೆಸ್‌ ಸರಕಾರವಿದ್ದಾಗ ಗಳಿಸಿದ ಚುನಾವಣಾ ಯಶಸ್ಸು ಕಾಂಗ್ರೆಸ್‌ ಮಟ್ಟಿಗೆ ಮತ್ತೆ ಮರುಕಳಿಸಿಲ್ಲ. ಅಂತಹುದೇ ಸಾಧನೆಯನ್ನು ಮಾಡುವ ಅವಕಾಶ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದ್ದರೂ, ಬಿಜೆಪಿ ತನ್ನದೇ ಕಾರ್ಯತಂತ್ರದಿಂದ ಕಾಂಗ್ರೆಸ್ಸನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

ಹಾಗೆ ನೋಡಿದರೆ, ಕಾಂಗ್ರೆಸ್‌ ಲೋಕಸಭಾ ಚುನಾವಣಾ ಗ್ರಾಫ್‌ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲಿದೆ. ಆದರೆ ಬಿಜೆಪಿ ತನ್ನ ಲೋಕಸಭಾ ಚುನಾವಣಾ ಗ್ರಾಫನ್ನು ಸುಧಾರಿಸುತ್ತಲೇ ಬಂದಿದೆ. 2019ರ ಚುನಾವಣೆಯಲ್ಲಿ ಬಿಜೆಪಿ  25 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಸಾಧನೆಯನ್ನು ಮಾಡಿತು. 1991 ರಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆಯಾದಾಗ ಸೃಷ್ಟಿಯಾದ ಅನುಕಂಪದ ಅಲೆಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕರ್ನಾಟಕದಲ್ಲಿ 23 ಕ್ಷೇತ್ರಗಳನ್ನು ವಶಕ್ಕೆ ಪಡೆದಿತ್ತು. ಆದರೆ, ಬಿಜೆಪಿ ಸಾಂಘಿಕ ಬಲದಿಂದ ಮತ್ತು ನರೇಂದ್ರ ಮೋದಿ ʼಮ್ಯಾಜಿಕ್‌ʼನಿಂದ 25 ಕ್ಷೇತ್ರಗಳಲ್ಲಿ ಗೆಲುವು ಸಂಪಾದಿಸಿತ್ತು.

ಆದರೆ, ಕಾಂಗ್ರೆಸ್‌ ಮಟ್ಟಿಗೆ ಹೇಳುವುದಾದರೆ ಕಳೆದ 25 ವರ್ಷಗಳಲ್ಲಿ ಎಸ್‌ಎಂ ಕೃಷ್ಣ ಅವರ ಅವಧಿಯಲ್ಲಿ ಸಾಧಿಸಿದ ಯಶಸ್ಸನ್ನು ಪುನರಾವರ್ತಿಸಲು 2024ರಲ್ಲೂ ಸಾಧಿಸಲು ಕಾಂಗ್ರೆಸ್ ಹೆಣಗಾಡಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ತನ್ನದೇ ಕಾರ್ಯತಂತ್ರಗಳನ್ನು ಹೆಣೆದು ತನ್ನ ಸಾಧನೆಯನ್ನು ಮುಂದುವರಿಸಿತು. ಜೆಡಿಎಸ್‌ ಜತೆಗೂಡಿ 19 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತು.

1999 ರಿಂದ 2004 ರವರೆಗೆ, ಲೋಕಸಭಾ ಚುನಾವಣೆಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಪ್ರಬಲವಾಗಿತ್ತು. ಆದಾಗ್ಯೂ, ಆಂತರಿಕ ಕಲಹ ಮತ್ತು ಮತದಾರರ ಮನಸ್ಸು ಗೆಲ್ಲಲಾರದೆ ಸ್ಥಿರತೆ ಕಾಪಾಡಿಕೊಳ್ಳಲು ಆಗಲಿಲ್ಲ. 2004 ರಿಂದ 2014ರ ಅವಧಿಯಲ್ಲಿ ಸಾಂದರ್ಭಿಕವಾಗಿ ಅಲ್ಪ ಚೇತರಿಕೆ ಕಂಡರೂ ಪ್ರಬಲವಾದ ಬಿಜೆಪಿ ನಾಯಕತ್ವ ಮತ್ತು ಅದರ ಪರಿಣಾಮಕಾರಿ ಪ್ರಚಾರದ ನಡುವೆ ಕಾಂಗ್ರೆಸ್‌ ಆತ್ಮವಿಶ್ವಾಸ ಕುಗ್ಗಿಹೋಯಿತು. 2019 ರ ಹೊತ್ತಿಗೆ, ಕಾಂಗ್ರೆಸ್ ತನ್ನಅತ್ಯಂತ ಕೆಟ್ಟ ಸೋಲನ್ನು ಕೇವಲ 1 ಸೀಟು ಗೆಲ್ಲುವ ಮೂಲಕ ಅನುಭವಿಸಿತು.

ಬಿಜೆಪಿ ಬೆಳವಣಿಗೆ

ಕರ್ನಾಟಕದಲ್ಲಿ ಬಿಜೆಪಿಯ ಪಯಣ ಸ್ಥಿರವಾದ ಬೆಳವಣಿಗೆಯಿಂದ ಇರುವಂತಾಗಲು ಅದರ ನಾಯಕತ್ವ ಮತ್ತು ಕಾರ್ಯತಂತ್ರ ಕಾರಣವಾಗಿದೆ. 1999ರ ಬಳಿಕ ನಿಧಾನವಾಗಿ ಬಿಜೆಪಿ ತನ್ನ ಪ್ರಭಾವವನ್ನು ಸ್ಥಿರವಾಗಿ ಹೆಚ್ಚಿಸಿಕೊಂಡಿತು ಮತ್ತು ಬಲವಾದ ನಾಯಕತ್ವ ಮತ್ತು ಪರಿಣಾಮಕಾರಿ ಸಾಂಸ್ಥಿಕ ರಚನೆಯಿಂದ ವಿಜಯದ ಪತಾಕೆ ಹಾರಿಸಲು ಆರಂಭಿಸಿತು. 2014, 2019, ಮತ್ತು 2024 ರ ಚುನಾವಣೆಗಳು ಕರ್ನಾಟಕದಲ್ಲಿ ಬಿಜೆಪಿ ಒಂದೊಂದೇ ಮೆಟ್ಟಿಲನ್ನು ಏರುವ ಮೂಲಕ ಯಶಸ್ಸು ಪಡೆಯಿತು. ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪನವರ ನಾಯಕತ್ವ ಮತ್ತು ರಾಷ್ಟ್ರಮಟ್ಟದಲ್ಲಿ ಲಾಲ್ ಕೃಷ್ಣ ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಸೇರಿದಂತೆ ಅದರ ರಾಷ್ಟ್ರೀಯ ನಾಯಕರ ಪ್ರಭಾವವೂ ಬಿಜೆಪಿ ಯಶಸ್ಸಿನ ಹಿಂದೆ ಭದ್ರವಾಗಿ ನಿಂತಿದೆ.

ಕುತೂಹಲಕಾರಿ ವಿಷಯವೆಂದರೆ, 2019 ರಲ್ಲಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಕೇವಲ 2 ಸ್ಥಾನಗಳನ್ನು (ಎರಡೂ ಪಕ್ಷಗಳಿಗೆ ತಲಾ 1 ಸ್ಥಾನ) ಗಳಿಸಿದವು. 2024 ರ ಚುನಾವಣೆಯಲ್ಲಿ, ಬಿಜೆಪಿ ಮತ್ತು ಜೆಡಿಎಸ್ (ಎಸ್) ಮೈತ್ರಿ 19 ಸ್ಥಾನಗಳನ್ನು (ಕ್ರಮವಾಗಿ 17 ಮತ್ತು 2 ಸ್ಥಾನಗಳು) ಗೆಲ್ಲುವಲ್ಲಿ ಯಶಸ್ವಿಯಾಗಿವೆ!

ಎಸ್‌ಎಂ ಕೃಷ್ಣ ಅವಧಿ

1999 ರಲ್ಲಿ, ಕಾಂಗ್ರೆಸ್ 28 ಲೋಕಸಭಾ ಕ್ಷೇತ್ರಗಳಲ್ಲಿ 18 ಅನ್ನು ಗೆದ್ದು, ಕರ್ನಾಟಕದಲ್ಲಿ ನಡೆದ 25 ವರ್ಷಗಳ ಈಚಿನ ಲೋಕಸಭಾ ಚುನಾವಣೆಗಳನ್ನು ಗಮನಿಸುವುದಾದರೆ ಅವರ ಮೊದಲ ಮತ್ತು ಕೊನೆಯ ಪ್ರಮುಖ ವಿಜಯವಾಗಿ ಗುರುತಿಸಿಕೊಂಡಿದೆ. ಅಂದಿನಿಂದ, 2024 ರ ಚುನಾವಣೆಯವರೆಗೂ ಕಾಂಗ್ರೆಸ್ ಎರಡಂಕಿಗಿಂತ ಮೇಲೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. 1999 ರಲ್ಲಿ, ಜನತಾ ದಳ (ಜಾತ್ಯತೀತ) ಮತ್ತು ಜನತಾ ದಳ (ಯುನೈಟೆಡ್) ವಿಭಜನೆಯಿಂದ ಕಾಂಗ್ರೆಸ್ ಲಾಭ ಪಡೆಯಿತು, ಇದು ಕಾಂಗ್ರೆಸ್ ವಿರೋಧಿ ಮತಗಳನ್ನು ವಿಭಜಿಸಿ ಅನುಕೂಲಕರ ವಾತಾವರಣ ಸೃಷ್ಟಿಸಿತು.

ಎಸ್‌ಎಂ ಕೃಷ್ಣ ಅವರ ಅಧಿಕಾರಾವಧಿಯ ನಂತರ, ಕರ್ನಾಟಕ ಕಾಂಗ್ರೆಸ್ ನಾಯಕರು ಲೋಕಸಭೆ ಚುನಾವಣೆಗೆ ಅಷ್ಟೇನೂ ಆದ್ಯತೆ ನೀಡದೆ ಕೇವಲ ವಿಧಾನಸಭೆ ಚುನಾವಣೆಗಳ ಮೇಲೆ ಕೇಂದ್ರೀಕರಿಸಿದರು. ಆದರೆ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ ಎಂಬ ಗ್ರಹಿಕೆ ಜನಮಾನಸದಲ್ಲಿ ತುಂಬಿದ್ದ ವೇಳೆ, ಅಹಿಂದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಮುಖ್ಯಸ್ಥ ಡಿ.ಕೆ.ಶಿವಕುಮಾರ್ ಅವರ ಭಿನ್ನಾಭಿಪ್ರಾಯಗಳ ನಡುವೆಯೂ ಇದ್ದ ನಾಯಕತ್ವದಿಂದ 2023ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಸಾಧಿಸಲು ಮತ್ತು ಸರ್ಕಾರ ರಚಿಸಲು ಸಾಧ್ಯವಾಯಿತು. ಆದರೆ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅವಕಾಶವಿದ್ದರೂ, ಅವರು ಎಸ್.ಎಂ.ಕೃಷ್ಣ ಅವರ ಯಶಸ್ಸನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ.

ಬಿಜೆಪಿ ಗೆಲುವಿನ ಓಟ

1999 ರ ಲೋಕಸಭಾ ಚುನಾವಣೆಯಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು 28 ರಲ್ಲಿ 18 ಸ್ಥಾನಗಳನ್ನು ಗೆದ್ದು ಬೀಗಿದ್ದರೂ, ಬಿಜೆಪಿ ಮಾತ್ರ ತನ್ನ ಗೆಲುವಿನ ಓಟವನ್ನು ಅದೇ ವರ್ಷದಿಂದ ಆರಂಭಿಸಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಕೇವಲ 7 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾದರೂ, ಮುಂದಿನ ಚುನಾವಣೆಗಳಲ್ಲಿ ಅದರ ಗೆಲುವಿನ ಓಟ ಮುಂದುವರಿಯುತ್ತಲೇ ಇರುವುದನ್ನು ಗಮನಿಸಬೇಕಾಗಿದೆ.

2004ರ ಚುನಾವಣೆಯು ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಮಹತ್ವದ ತಿರುವು ನೀಡಿತು. ಪಕ್ಷದ ಲೋಕಸಭಾ ಸ್ಥಾನಗಳ ಗೆಲುವಿನ ಸಂಖ್ಯೆ 18ರಿಂದ 8ಕ್ಕೆ ಕುಸಿಯಿತು. ಆಂತರಿಕ ಸಂಘರ್ಷಗಳು, ನಾಯಕತ್ವದ ಸಮಸ್ಯೆಗಳು ಮತ್ತು ಪಕ್ಷದ ಕೆಳಹಂತದ ಸಮಸ್ಯೆಗಳನ್ನು ಪರಿಹರಿಸುವಲ್ಲಿನ ವಿಫಲತೆಯು ಈ ಕುಸಿತಕ್ಕೆ ಕಾರಣವಾಗಿದೆ. ಏತನ್ಮಧ್ಯೆ, ಬಿಜೆಪಿ ಗಮನಾರ್ಹವಾದ ಬೆಳವಣಿಗೆ ಸಾಧಿಸಿ ಆ ಚುನಾವಣೆಯಲ್ಲಿ 18 ಸ್ಥಾನಗಳನ್ನು ಗೆದ್ದು ಅಸಾಧಾರಣ ಎದುರಾಳಿಯಾಗಿ ಗುರುತಿಸಿಕೊಳ್ಳಲು ಆರಂಭಿಸಿತು. ಕಾಂಗ್ರೆಸ್‌ ಎದುರಾಳಿಯಾಗಿದ್ದ ಜೆಡಿಎಸ್‌ ಅನ್ನು ಬದಿಗೆ ಸರಿಸಿ ತನ್ನ ಪ್ರಾಮುಖ್ಯತೆಯನ್ನು ತನ್ನ ಏರಿಕೆಯನ್ನು ಗುರುತಿಸಿತು ಬಿಜೆಪಿ.

2009 ರ ಚುನಾವಣೆಗಳಲ್ಲಿ ಕಾಂಗ್ರೆಸ್ 6 ಸ್ಥಾನಗಳನ್ನು ಗಳಿಸಿ ನಿರಾಸೆ ಅನುಭವಿಸಿತು. ಬಿಜೆಪಿ ಮತ್ತೆ 19 ಸ್ಥಾನಗಳನ್ನು ಗೆದ್ದು ತನ್ನ ಬಲವನ್ನು ಸಾಬೀತುಪಡಿಸಿತು. ಬಿಜೆಪಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುವುದರೊಂದಿಗೆ ಮತ್ತು ಕಾಂಗ್ರೆಸ್ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಹೆಣಗಾಡುವುದರೊಂದಿಗೆ ರಾಜ್ಯದ ರಾಜಕೀಯ ಕದನ ಮುಂದುವರಿಯುವಂತಾಯಿತು.

ನರೇಂದ್ರ ಮೋದಿ ಅಲೆಯ ಮೇಲೆ ಬಿಜೆಪಿ 2014 ರ ಚುನಾವಣೆಯಲ್ಲಿ 17 ಸ್ಥಾನಗಳನ್ನು ಗೆದ್ದು ಪ್ರಚಂಡ ಗೆಲುವು ಸಾಧಿಸಿಸಲು ಕಾರಣವಾಯಿತು. ಕಾಂಗ್ರೆಸ್ ಸಾಧನೆ ಮತ್ತಷ್ಟು ಕುಸಿದು ಕೇವಲ 9 ಸ್ಥಾನಗಳನ್ನು ಪಡೆದುಕೊಂಡಿತು. ಈ ಚುನಾವಣೆಯು ಬಿಜೆಪಿಯ ಹೆಚ್ಚುತ್ತಿರುವ ಪ್ರಭಾವವನ್ನು ಒತ್ತಿಹೇಳಿತು. 2019 ರ ಚುನಾವಣೆ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹೀನಾಯ ಘಟ್ಟವಾಗಿತ್ತು. ಪಕ್ಷವು ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿ ಎರಡು ದಶಕಗಳಲ್ಲಿ ಅತ್ಯಂತ ಕೆಟ್ಟ ಪ್ರದರ್ಶನವಾಗಿ ಇತಿಹಾಸದ ಪುಟಗಳಿಗೆ ಸೇರುವಂತಾಯಿತು. ಇದಕ್ಕೆ ತದ್ವಿರುದ್ಧವಾಗಿ, ಬಿಜೆಪಿ ತನ್ನ ಪ್ರಾಬಲ್ಯ ಮತ್ತು ಮತದಾರರ ಬೆಂಬಲವನ್ನು ಗಳಿಸುವ ಮೂಲಕ ಗಮನಾರ್ಹವಾದ 25 ಸ್ಥಾನಗಳನ್ನು ಪಡೆಯಿತು.

ಕರ್ನಾಟಕವು 2024 ರ ಲೋಕಸಭಾ ಚುನಾವಣೆಯಲ್ಲಿ ತನ್ನ ಕಳೆದುಹೋದ ನೆಲೆಯನ್ನು ಮರಳಿ ಪಡೆಯಲು ಪ್ರಯತ್ನಿಸಿತು ಮತ್ತು ಪ್ರಾದೇಶಿಕ ವಿಷಯಗಳ ಮೇಲೆ ಕೇಂದ್ರೀಕರಿಸಿತು. ಕೇಂದ್ರದ ಮೋದಿ ಸರ್ಕಾರವನ್ನು ಪರಿಣಾಮಕಾರಿಯಾಗಿ ಎದುರಿಸಿತು. ಆದರೂ 2014 ರ ಫಲಿತಾಂಶವನ್ನು 9 ಗೆಲುವು ಸಾಧಿಸುವ ಮೂಲಕ ಪುನರಾವರ್ತಿಸಿತೇ ಹೊರತು ಮಹತ್ವದ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಕ್ಷೀಣಿಸಿದ ಮತ್ತು ಆಂತರಿಕ ಕಿತ್ತಾಟಗಳಿಂದ ನಲುಗಿದ್ದ ಸಂದರ್ಭದಲ್ಲೂ ಬಿಜೆಪಿ 17 ಗೆಲುವು ಸಾಧಿಸುವ ಮೂಲಕ ತನ್ನ ಅಸ್ತಿತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ರಾಷ್ಟ್ರೀಯ ಮತ್ತು ಹಿಂದುತ್ವದ ವಿಷಯಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸುವ ಮೂಲಕ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿದೆ. ಸ್ವತಃ 17 ಸ್ಥಾನಗಳನ್ನು ಮತ್ತು ಜೆಡಿಎಸ್ (ಎಸ್) ನೊಂದಿಗೆ ಮೈತ್ರಿ ಮಾಡಿಕೊಂಡು ಒಟ್ಟು 19 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಅಸಾಧ್ಯ!

ಕಳೆದ 25 ವರ್ಷಗಳಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಐದು ಬಾರಿ ಅಧಿಕಾರದಲ್ಲಿದ್ದರೆ, ಬಿಜೆಪಿ ಒಮ್ಮೆ ಅಧಿಕಾರದಲ್ಲಿದ್ದು ಒಟ್ಟು ಆರು ಲೋಕಸಭಾ ಚುನಾವಣೆಗಳನ್ನು ಎದುರಿಸಿವೆ. ಎಸ್.ಎಂ.ಕೃಷ್ಣ ಅವರ ಅಧಿಕಾರಾವಧಿಯನ್ನು ಹೊರತುಪಡಿಸಿ, ಕಾಂಗ್ರೆಸ್ ಎಲ್ಲಾ ಸಂದರ್ಭಗಳಲ್ಲೂ ಕಡಿಮೆ ಸ್ಥಾನಗಳನ್ನು ಗಳಿಸಿತು. ಆದರೆ 2014 ರ ಚುನಾವಣೆಯಲ್ಲಿ ಗಮನಾರ್ಹ ಸಾಧನೆಯೊಂದಿಗೆ ಬಿಜೆಪಿ 25 ಗೆಲುವುಗಳನ್ನು ಗಳಿಸುವ ಮೂಲಕ ಸ್ಥಿರವಾದ ಗ್ರಾಫ್ ಅನ್ನು ಉಳಿಸಿಕೊಂಡಿದೆ.

1999ರ ಲೋಕಸಭಾ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣ ಅವರ ಕಾಂಗ್ರೆಸ್‌ ಸರ್ಕಾರವಿದ್ದಾಗ 18 ಕ್ಷೇತ್ರಗಳನ್ನು ಕಾಂಗ್ರೆಸ್‌ ಕೈವಶ ಮಾಡಿಕೊಂಡರೆ, 2004 ರ ಚುನಾವಣೆಯಲ್ಲಿ, ಕಾಂಗ್ರೆಸ್, ಅದರ ಸಮ್ಮಿಶ್ರ ಪಾಲುದಾರ ಜೆಡಿ (ಎಸ್) ನೊಂದಿಗೆ ಅಧಿಕಾರದಲ್ಲಿದ್ದು, ಕೇವಲ 8 ಸ್ಥಾನಗಳನ್ನು ಗೆದ್ದಿತು. ಆದರೆ ಬಿಜೆಪಿ 18 ಸ್ಥಾನಗಳನ್ನು ಗಳಿಸಿತು. 2009 ರಲ್ಲಿ, ಬಿ.ಎಸ್. ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರವಿದ್ದು ಕಾಂಗ್ರೆಸ್ ಕೇವಲ 6 ಸ್ಥಾನಗಳನ್ನು ಗಳಿಸಿತು ಮತ್ತು ಬಿಜೆಪಿ 19 ಸ್ಥಾನಗಳನ್ನು ಗೆದ್ದಿತು. 2014 ರಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಕಾಂಗ್ರೆಸ್‌ 9 ಸ್ಥಾನಗಳನ್ನು ಗೆದ್ದಿತಾದರೂ ಬಿಜೆಪಿ 17 ಕ್ಷೇತ್ರಗಳನ್ನು ತೆಕ್ಕೆಗೆ ಹಾಕಿಕೊಂಡಿತು.

2019 ರಲ್ಲಿ, ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅಡಿಯಲ್ಲಿ, ಒಟ್ಟಾಗಿ ಚುನಾವಣೆ ಎದುರಿಸಿದ್ದಾಗ ತಲಾ 1 ಸ್ಥಾನವನ್ನಷ್ಟೇ ಗಳಿಸಲು ಸಾಧ್ಯವಾಯಿತು. ಆದರೆ ಬಿಜೆಪಿ ರಾಜ್ಯದಲ್ಲಿ ದಾಖಲೆಯ 25 ಸ್ಥಾನಗಳನ್ನು ಗಳಿಸಿತು. 2024 ರಲ್ಲಿ, ಕಾಂಗ್ರೆಸ್ ಮತ್ತೆ ಅಧಿಕಾರದಲ್ಲಿದ್ದಾಗ, ಬಿಜೆಪಿ ತನ್ನ ಎರಡಂಕಿಯ ವಿಜಯವನ್ನು ಮುಂದುವರೆಸಿತು, ಅದರ ಮೈತ್ರಿ ಜೆಡಿ (ಎಸ್) ಜೊತೆಗೆ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು.

Tags:    

Similar News