ದೇವೇಗೌಡರ ಜೀವ ಬಲಿ ಪಡೆಯಲು ರಾಜ್ಯ ಕಾಂಗ್ರೆಸ್ ಸರಕಾರ ಸಂಚು ಎಂದ ಜೆಡಿಎಸ್‌

Update: 2024-05-20 08:04 GMT

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೀವ ಬಲಿ ಪಡೆಯಲು ರಾಜ್ಯ ಕಾಂಗ್ರೆಸ್ ಸರಕಾರ ಸಂಚು ರೂಪಿಸಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದ್ದು, ದೇವೆಗೌಡರ ಕುಟುಂಬವನ್ನು ಮುಗಿಸಲು ಕಾಂಗ್ರೆಸ್ ಸರ್ಕಾರ ವ್ಯವಸ್ಥಿತ ಹುನ್ನಾರ ನಡೆಸಿ ಯೋಜಿತವಾಗಿ ಟಾರ್ಗೆಟ್ ಮಾಡಿದೆ ಎಂಬ ಗಂಬೀರ ಆರೋಪ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಜೆಡಿಎಸ್‌ ವಕೀಲ ದೇವರಾಜೇಗೌಡರ ಜತೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ನಡೆಸಿರುವ ಮೊಬೈಲ್ ಸಂಭಾಷಣೆಯ ತುಣುಕುಗಳು ಮಾಧ್ಯಮಗಳಲ್ಲಿ ಬಹಿರಂಗವಾದ ಬೆನ್ನಲ್ಲಿಯೇ ಜೆಡಿಎಸ್ ಪಕ್ಷವು ತನ್ನ ಎಕ್ಸ್ ಖಾತೆಯಲ್ಲಿ ಡಿಸಿಎಂ ಡಿಕೆಶಿ ವಿರುದ್ಧ ನೇರ ವಾಗ್ದಾಳಿ ನಡೆಸಿದೆ.

"ಹೊಂಚು ಹಾಕಿ ಸಂಚು ಮಾಡುವ ಕಾಂಗ್ರೆಸ್ ಪಕ್ಷದ ಅಸಲಿ ಮುಖ ಕಳಚಿ ಕೆಳಕ್ಕೆ ಬಿದ್ದಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ... ಹೌದಲ್ಲವೇ ಕಾಂಗ್ರೆಸ್ಸಿಗರೇ? ಸತ್ಯ ನಿಮ್ಮ ಮುಂದೆಯೇ ಇದೆ. ನಿಮ್ಮ ಅಧ್ಯಕ್ಷರೇ ಪೆನ್ ಡ್ರೈವ್ ಫ್ಯಾಕ್ಟರಿಯ ಒರಿಜಿನಲ್ ಓನರ್. CDಶಿವಕುಮಾರ್ ಗ್ಯಾಂಗ್ ನಡೆಸಿದ ಪೆನ್ ಡ್ರೈವ್ ಹಂಚಿಕೆಯ ಹೇಯ ಕೃತ್ಯದ ಸಂಚುಗಳೇ ಅವೆಲ್ಲಾ. ದೇವರಾಜೇಗೌಡರ ಹೇಳಿಕೆಯ ನಂತರ ಹೊರಬಿದ್ದಿರುವ ಆಡಿಯೋ ಟೇಪುಗಳೇ ಮಹಾಸಂಚಿನ ಮಹಾಕಥೆಯನ್ನು ಬಿಚ್ಚಿಟ್ಟಿವೆ. ಈಗ ಹೇಳಿ, ಯಾರು ಮೆಂಟಲ್?" ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

ಡಿಕೆಶಿಯಿಂದ ನಾಲ್ಕು ಸಂಚು:

"CDಶಿವಕುಮಾರ್ ಗ್ಯಾಂಗಿನ" ಸಂಚುಗಳು ಹೀಗಿವೆ ಎಂದಿರುವ ಜೆಡಿಎಸ್, ಡಿ.ಕೆ.ಶಿವಕುಮಾರ್ ಹೂಡಿರುವ ಸಂಚುಗಳನ್ನು ಪಟ್ಟಿ ಮಾಡಿದೆ.   ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಖ್ಯಾತಿ ತರುವುದು;  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಾಯಕತ್ವ ಹಾಳು ಮಾಡುವುದು;  ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುರಿದು ಬೀಳುವಂತೆ ಮಾಡುವುದು. ಮತ್ತು   ಹೆಚ್.ಡಿ.ದೇವೆಗೌಡರ ಜೀವವನ್ನು ಬಲಿ ಪಡೆಯುವುದು. ಸಂಚಿನ ಭಾಗಗಳೆಂದು ಆರೋಪಿಸಿದೆ.

ಈ ಮಹಾಸಂಚು ಸಾಕಾರಕ್ಕೆ CDಶಿವಕುಮಾರ್ ಹೂಡಲಿದ್ದ ಬಂಡವಾಳ ಬರೋಬ್ಬರಿ ₹100 ಕೋಟಿ ವ್ಯಯ ಮಾಡಿದ್ದಾರೆ, ಹೆಚ್.ಡಿ.ಕುಮಾರಸ್ವಾಮಿ ಅವರೇ ಪೆನ್ ಡ್ರೈವ್ ಹಂಚಿದ್ದಾರೆ ಎಂದು ಹೇಳಲು ವಕೀಲ ದೇವರಾಜೇಗೌಡರಿಗೆ ₹100 ಕೋಟಿ ಆಫರ್ ನೀಡಲಾಗಿದೆ,  ಅಡ್ವಾನ್ಸ್ ಆಗಿ ₹5 ಕೋಟಿ ಹಣವನ್ನು ಬೌರಿಂಗ್ ಕ್ಲಬ್ಬಿನ ಕೊಠಡಿ ಸಂಖ್ಯೆ 110ಕ್ಕೆ ರವಾನೆ ಮಾಡಲಾಗಿತ್ತು,  ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ರೆಡಿ ಮಾಡಿದ್ದೇ ಡಿಕೆ ಶಿವಕುಮಾರ್ ಎಂದು ಆಪಾದಿಸಿರುವ ಜೆಡಿಎಸ್‌ ಮೋದಿ, ಕುಮಾರಸ್ವಾಮಿ ಅವರುಗಳ ವಿರುದ್ಧ ಅಪಪ್ರಚಾರ ನಡೆಸಲು, ಇಡೀ ಸಂಚು ಅನುಷ್ಠಾನಕ್ಕೆ ನಾಲ್ವರು ಪ್ರಮುಖ ಸಚಿವರ ಸಮಿತಿ ರಚಿಸಲಾಗಿತ್ತು ಎಂದು ಗಂಭೀರ ಆರೋಪ ಮಾಡಿದೆ. 

ದೇವೇಗೌಡರನ್ನು ಸಾವಿನ ದವಡೆಗೆ ನೂಕುವುದು ಟಾರ್ಗೆಟ್ ಎಂದಿರುವ ಜೆಡಿಎಸ್‌ ವಕೀಲರಾದ ದೇವೇರಾಜೇಗೌಡರೇ ಸ್ವತಃ ಬಿಚ್ಚಿಟ್ಟ ಈ ಸತ್ಯಗಳು ಹಾಗೂ ಆಡಿಯೋ ಟೇಪುಗಳು ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ ಮಾನವನ್ನು ಬೀದಿ ಬೀದಿಯಲ್ಲಿ ಹರಾಜು ಹಾಕಿವೆ. ಕಂಡವರ ಮನೆಯಲ್ಲಿ ಸಾವು ಬಯಸುವ ಕಾಂಗ್ರೆಸ್ಸಿಗೆ ಧಿಕ್ಕಾರ ಎಂದು ಕಿಡಿಕಾರಿದೆ.

Tags:    

Similar News