ಕರ್ನಾಟಕದ ಕರಾವಳಿಯ ರಕ್ಷಣೆಗೆ ವಿಶ್ವಬ್ಯಾಂಕ್ ನೆರವು : 1,770 ಕೋಟಿ ರೂಪಾಯಿ ಬಿಡುಗಡೆ
ಕರಾವಳಿ ಸ್ಥಿತಿಸ್ಥಾಪಕತ್ವ ಮತ್ತು ಆರ್ಥಿಕತೆಯ ಬಲವರ್ಧನೆ ಎಂಬ ಹೆಸರಿನ ಈ ಯೋಜನೆಯು, ಈ ಎರಡು ರಾಜ್ಯಗಳ ಕರಾವಳಿ ಭಾಗದಲ್ಲಿ ಸುಮಾರು ಒಂದು ಲಕ್ಷ ಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.;
ಕರ್ನಾಟಕ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಗಳ ಸಂರಕ್ಷಣೆ, ಸ್ಥಳೀಯ ಸಮುದಾಯಗಳ ಆರ್ಥಿಕ ಸಬಲೀಕರಣ ಮತ್ತು ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕಾಗಿ ವಿಶ್ವಬ್ಯಾಂಕ್ 212.64 ದಶಲಕ್ಷ ಡಾಲರ್ (ಅಂದಾಜು 1,770 ಕೋಟಿ ರೂಪಾಯಿ) ಮೊತ್ತದ ಬೃಹತ್ ಯೋಜನೆಗೆ ಅನುಮೋದನೆ ನೀಡಿದೆ.
ಕರಾವಳಿ ಸ್ಥಿತಿಸ್ಥಾಪಕತ್ವ ಮತ್ತು ಆರ್ಥಿಕತೆಯ ಬಲವರ್ಧನೆ ಎಂಬ ಹೆಸರಿನ ಈ ಯೋಜನೆಯು, ಈ ಎರಡು ರಾಜ್ಯಗಳ ಕರಾವಳಿ ಭಾಗದಲ್ಲಿ ಸುಮಾರು ಒಂದು ಲಕ್ಷ ಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.
ಭಾರತದ ವಿಶಾಲವಾದ ಕರಾವಳಿ ತೀರವು ಹವಾಮಾನ ಬದಲಾವಣೆ, ಸವೆತ ಮತ್ತು ಮಾಲಿನ್ಯದಿಂದ ತೀವ್ರ ಅಪಾಯದಲ್ಲಿದೆ. ಈ ಸವಾಲುಗಳನ್ನು ಎದುರಿಸಲು ವಿಶ್ವಬ್ಯಾಂಕ್ ಈ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕರ್ನಾಟಕವು 343 ಕಿ.ಮೀ ಮತ್ತು ತಮಿಳುನಾಡು 1,069 ಕಿ.ಮೀ ಉದ್ದದ ಕರಾವಳಿ ತೀರವನ್ನು ಹೊಂದಿದ್ದು, ಈ ಪ್ರದೇಶಗಳಲ್ಲಿನ ಲಕ್ಷಾಂತರ ಜನರು ತಮ್ಮ ಜೀವನೋಪಾಯಕ್ಕಾಗಿ ಕಡಲನ್ನು ಅವಲಂಬಿಸಿದ್ದಾರೆ. ಈ ಯೋಜನೆಯು ಕರಾವಳಿ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವುದರ ಜೊತೆಗೆ, ಸ್ಥಳೀಯ ಜನರ ಜೀವನ ಮಟ್ಟ ಸುಧಾರಿಸುವ ದ್ವಿಮುಖ ಉದ್ದೇಶ ಹೊಂದಿದೆ.
ಯೋಜನೆಯ ಪ್ರಮುಖ ಗುರಿಗಳು
ಈ ಯೋಜನೆಯ ಅಡಿಯಲ್ಲಿ, ಕರ್ನಾಟಕ ಮತ್ತು ತಮಿಳುನಾಡಿನ ಸುಮಾರು 30,000 ಎಕರೆ ಕಡಲತೀರ ಪ್ರದೇಶಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಲಾಗುತ್ತದೆ. ಇದರಲ್ಲಿ ಮ್ಯಾಂಗ್ರೋವ್ ಗಿಡಗಳನ್ನು ವ್ಯಾಪಕವಾಗಿ ನೆಡುವುದು, ಸಮುದ್ರ ಸವೆತದಿಂದ ಹಾಳಾಗಿರುವ ಮರಳಿನ ದಿಬ್ಬಗಳನ್ನು ಪುನಃಸ್ಥಾಪಿಸುವುದು, ಹವಳದ ದಿಬ್ಬಗಳ ರಕ್ಷಣೆ, ಮತ್ತು ಸಮುದ್ರ ಆಮೆಗಳಂತಹ ಅಳಿವಿನಂಚಿನಲ್ಲಿರುವ ಜಲಚರ ಪ್ರಭೇದಗಳ ಸಂರಕ್ಷಣೆಗೆ ವಿಶೇಷ ಒತ್ತು ಸಿಗಲಿದೆ.
ಸ್ಥಳೀಯ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕೆ ದೊಡ್ಡ ಹೆಜ್ಜೆ ಇದು. ಸುಮಾರು 70,000 ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ, ಸುಸ್ಥಿರ ಪ್ರವಾಸೋದ್ಯಮ, ಪರಿಸರ ಸ್ನೇಹಿ ಮೀನುಗಾರಿಕೆ ಮತ್ತು ಇತರ ಪರ್ಯಾಯ ಆದಾಯದ ಮೂಲಗಳ ಬಗ್ಗೆ ಕೌಶಲ್ಯ ತರಬೇತಿ ನೀಡಲಾಗುವುದು. ಪ್ಲಾಸ್ಟಿಕ್ ಮಾಲಿನ್ಯವನ್ನು ನಿಯಂತ್ರಿಸಲು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಖಾಸಗಿ ವಲಯದ ಸಹಭಾಗಿತ್ವದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಿ, ಪರಿಸರ ಸ್ನೇಹಿ ಕಡಲತೀರಗಳನ್ನು ನಿರ್ಮಿಸಲಾಗುತ್ತದೆ.
ಈ ಯೋಜನೆಯು ರಾಜ್ಯಗಳಿಗೆ ಖಾಸಗಿ ವಲಯದ ಸಹಭಾಗಿತ್ವದೊಂದಿಗೆ ಪ್ಲಾಸ್ಟಿಕ್ ಮಾಲಿನ್ಯದ ಪರಿಣಾಮಗಳನ್ನು ತಗ್ಗಿಸಲು ಮತ್ತು ಪರಿಸರ-ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ," ಎಂದು ವಿಶ್ವಬ್ಯಾಂಕ್‌ನ ಭಾರತದ ಹಂಗಾಮಿ ನಿರ್ದೇಶಕ ಪಾಲ್ ಪ್ರೊಸೀ ಅವರು ತಿಳಿಸಿದ್ದಾರೆ.